ಕಲ್ಪ ಮೀಡಿಯಾ ಹೌಸ್ | ಮೈಸೂರು | ಬರಹ: ಶಿವಮೊಗ್ಗ ರಘುರಾಮ |
ದಾಸ ಸಾಹಿತ್ಯದ ಆದ್ಯ ಪ್ರವರ್ತಕರೂ ಆಗಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಮುಳಬಾಗಿಲು ಶ್ರೀಪಾದರಾಜರ ಮಠದ ಪರಂಪರೆಯ 24ನೇ ಯತಿ ಶ್ರೀ ಗುಣನಿಧಿ ತೀರ್ಥರ ಆರಾಧನಾ ಮಹೋತ್ಸವ ಫೆಬ್ರವರಿ 8ರಂದು (ಮಾಘ ಬಹುಳ ಸಪ್ತಮಿ) ನೆರವೇರಲಿದೆ.
ತಿ. ನರಸೀಪುರ ತಾಲೂಕಿನ ತಾಯೂರು ಗ್ರಾಮದ ಕಪಿಲಾ ನದಿ ತೀರದಲ್ಲಿರುವ ಶ್ರೀಗಳ ಮೂಲ ವೃಂದಾವನ ಸನ್ನಿಧಾನದಲ್ಲಿ ಅಂದು ಬೆಳಗ್ಗೆ 8ಕ್ಕೆ ಮೂಲ ವೃಂದಾವನಕ್ಕೆ ಅಭಿಷೇಕ, ಪಂಚಾಮೃತ, ವಿಶೇಷ ಅಲಂಕಾರ ಆಯೋಜನೆಗೊಂಡಿದೆ.
ಮುಳಬಾಗಿಲು ಶ್ರೀಪಾದರಾಜರ ಮಹಾ ಸಂಸ್ಥಾನ ಮಠದ ಹಾಲಿ ಪೀಠಾಧಿಪತಿ ಶ್ರೀ ಸುಜಯನಿಧಿ ತೀರ್ಥರ ಸಾನ್ನಿಧ್ಯದಲ್ಲಿ ಬೆಳಗ್ಗೆ 10ಕ್ಕೆ ಸಂಸ್ಥಾನ ಪೂಜೆ ನಡೆಯಲಿದೆ.
ನಂತರ ಪಂಡಿತರಿಂದ ಪ್ರವಚನ, ಭಜನೆ, ಅಲಂಕಾರ ಪಂಕ್ತಿ, ತೀರ್ಥ ಪ್ರಸಾದ ವಿತರಣೆ ನೆರವೇರಲಿವೆ. ತಾಯೂರು ವಂಶಸ್ಥರಾದ ಟಿ.ಎನ್. ಮಾಧವ ಮೂರ್ತಿ, ವೇಣುಗೋಪಾಲ ಮತ್ತು ರಂಗನಾಥ ಅವರು ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಳ್ಳಲಿವೆ.
ಇದೇ ಸಂದರ್ಭ ಗ್ರಾಮದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವರು, ಜನಮೇಜಯ ಪ್ರತಿಷ್ಠಿತ ಪ್ರಾಣದೇವರು, ಶ್ರೀಪಾದರಾಜರ ಮೃತ್ತಿಕಾ ವೃಂದಾವನಗಳಿಗೂ ವಿಶೇಷ ಪೂಜಾದಿಗಳು ನಡೆಯಲಿವೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಮೈಸೂರು ಅರಸರಿಂದ ಗೌರವ ಪಡೆದಿದ್ದ ಶ್ರೀಗಳು:
-
ಜ್ಞಾನನಿಧಿ ಕರಾಬ್ಜೋತ್ತಂ -
ಸುವಿದ್ವನ್ಮಣಿವಿರಾಜಿತಂ -
ಸುಮೃಷ್ಟಾನ್ನಪ್ರದಾತಾರಂ -
ವಂದೇ ಗುಣನಿಧಿಂ ಮುನಿಂ
ಶ್ರೀಪಾದರಾಜರ ಮಠದ ಪರಂಪರೆಯಯಲ್ಲಿ 1798-1804ರವರೆಗೆ ಪೀಠದ ಅಧಿಪತಿಗಳಾಗಿದ್ದು, ವೇದಾಂತ ಸಾಮ್ರಾಜ್ಯವನ್ನು ಆಳಿದ ಶ್ರೀ ಗುಣನಿಧಿ ತೀರ್ಥರು ಅಪಾರ ಜ್ಞಾನಿಗಳಾಗಿದ್ದರು. ನೂರಾರು ವಿದ್ವಾಂಸರನ್ನು ಪ್ರೋತ್ಸಾಹಿಸಿ ಬೆಳೆಸಿದ್ದರು. ಪೂರ್ವಾಶ್ರಮದಲ್ಲಿ ಮೈಸೂರು ಆಸ್ಥಾನದಲ್ಲಿ ವಿದ್ವಾಂಸರಾಗಿ ಕೀರ್ತಿ ಗಳಿಸಿದ್ದರು.
ಸನ್ಯಾಸ ಸ್ವೀಕಾರ ನಂತರ ಮೈಸೂರು ಮಹಾರಾಜರಿಂದ ಗೌರವಾದರ ಪಡೆದ ಮಾಧ್ವಯತಿ ಗಳಾಗಿದ್ದರು. ಯುಗಾದಿ, ದೀಪಾವಳಿ, ಚಾತುರ್ಮಾಸ್ಯ ಮತ್ತು ಮಹಾಸಮಾರಾಧನೆ ಸಂದರ್ಭ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗುಣನಿಧಿ ತೀರ್ಥರ ಸನ್ನಿಧಿಗೆ ಶ್ರೀಗಂಧ, ಪೂಜಾ ಸಾಮಗ್ರಿ ಸಹಿತ ದತ್ತಿ, ದಾನ ಸಮರ್ಪಣೆ ಮಾಡುತ್ತಿದ್ದರು. ಪ್ರಜಾ ಪ್ರತಿನಿಧಿ ಸಭೆಗೆ ಶ್ರೀಗಳನ್ನು ವಿಶೇಷ ಆಹ್ವಾನಿತ ಸದಸ್ಯರನ್ನಾಗಿಸಿ ಗೌರವಾದರ ನೀಡಿದ್ದರು ಎಂಬ ಇತಿಹಾಸ ಇದೆ ಎನ್ನುತ್ತಾರೆ ಶ್ರೀಪಾದರಾಜರ ಮಹಾ ಸಂಸ್ಥಾನದ ಬಲಸೇವೆ ಎಚ್.ಎಸ್. ಶಾಮಾಚಾರ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















