ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಫೆ. 29ರಂದು ಬೆಳಿಗ್ಗೆ 11ಗಂಟೆಗೆ ವಿವಿಯ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಐದನೆಯ ಘಟಿಕೋತ್ಸವ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ವಿವಿ ಕುಲಪತಿ ಡಾ.ಎಂ.ಕೆ. ನಾಯ್ಕ್, ಸ್ನಾತಕ ಪದವಿಯಲ್ಲಿ 245 ವಿದ್ಯಾರ್ಥಿಗಳಿಗೆ (ಬಿಎಸ್ಸಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯ), ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ 86 ಎಂಎಸ್ಸಿ ವಿದ್ಯಾರ್ಥಿಗಳಿಗೆ ಮತ್ತು 13 ಪಿಎಚ್’ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ 7 ಬಿಎಸ್ಸಿ ವಿದ್ಯಾರ್ಥಿಗಳಿಗೆ 13 ಚಿನ್ನದ ಪದಕಗಳನ್ನು, 8 ಎಂಎಸ್ಸಿ ವಿದ್ಯಾರ್ಥಿಗಳಿಗೆ 8 ಚಿನ್ನದ ಪದಕಗಳನ್ನು ಮತ್ತು 4 ಪಿಎಚ್’ಡಿ ವಿದ್ಯಾರ್ಥಿಗಳಿಗೆ 5 ಚಿನ್ನದ ಪದಕಗಳಂತೆ ಒಟ್ಟಾರೆ 26 ಚಿನ್ನದ ಪದಕಗಳನ್ನು 19 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವುದು ಎಂದರು.
ವಿಶ್ವವಿದ್ಯಾಲಯವು ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ ಐಸಿಎಆರ್ ಜೆಆರ್’ಎಫ್ ಸ್ಕಾಲರ್’ಶಿಫ್‌ಗಳಲ್ಲಿ ಅಖಿಲಭಾರತ ಮಟ್ಟದಲ್ಲಿ 2ನೇ ಸ್ಥಾನ ಪಡೆದುಕೊಂಡಿರುವುದು ಹರ್ಷದ ಸಂಗತಿ. ಅಖಿಲ ಭಾರತ ಐಸಿಎಆರ್-ರ್ಯಾಂಕಿಂಗ್ ಪಟ್ಟಿಯಲ್ಲಿ ರಾಷ್ಟ್ರಮಟ್ಟದಲ್ಲಿ 51ನೆಯ ರ್ಯಾಂಕಿನಿಂದ 21ನೇ ರ್ಯಾಂಕಿಗೆ ಮೇಲ್ದರ್ಜೆಗೆ ಏರಿರುವುದು ಹಾಗೂ ರಾಜ್ಯ ಮಟ್ಟದಲ್ಲಿ ಎರಡನೇ ರ್ಯಾಂಕ್ ಗಳಿಸಿರುವುದು ವಿಜ್ಞಾನಿಗಳಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ನೀಡಿದೆ ಅಲ್ಲದೇ KSURF ರೇಟಿಂಗ್’ನಲ್ಲಿ 4 ಸ್ಟಾರ್ ಪಡೆದಿದೆ ಎಂದರು.
ಪ್ರಸಕ್ತ 2019-20ರ ಸಾಲಿನಲ್ಲಿ ಸ್ನಾತಕ ಪದವಿ ಕಾರ್ಯಕ್ರಮಗಳಿಗೆ ಒಟ್ಟು 433 ವಿದ್ಯಾರ್ಥಿಗಳು, ಸ್ನಾತಕೋತ್ತರ ಕಾರ್ಯಕ್ರಮಗಳಿಗೆ 107 ವಿದ್ಯಾರ್ಥಿಗಳು, ಡಿಪ್ಲೊಮಾ (ಕೃಷಿ)ಗೆ 74 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ವಿಶ್ವವಿದ್ಯಾಲಯವು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದರಲ್ಲಿ 16 ಎಂಎಸ್ಸಿ ಹಾಗೂ 6 ಪಿಎಚ್’ಡಿ ಪದವಿ ಕಾರ್ಯಕ್ರಮಗಳಿದ್ದು, ಈ ವರ್ಷದಲ್ಲಿ ಒಟ್ಟು 90 ಎಂಎಸ್ಸಿ ವಿದ್ಯಾರ್ಥಿಗಳು ಮತ್ತು 17 ಪಿಎಚ್’ಡಿ ವಿದ್ಯಾರ್ಥಿಗಳು ವಿವಿಧ ಪದವಿ ಕಾರ್ಯಕ್ರಮಗಳಿಗೆ ದಾಖಲಾಗಿರುತ್ತಾರೆ ಎಂದರು.
ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯಲ್ಲಿ 2019-20 ನೇ ಶೈಕ್ಷಣಿಕ ಸಾಲಿನಿಂದ ಎಂಎಸ್ಸಿ ಅರಣ್ಯ ಶಾಸ್ತ್ರ (ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ) ಹಾಗೂ ಪಿಎಚ್’ಡಿ ಅರಣ್ಯ ಶಾಸ್ತ್ರ (ಮರಗಳ ವಿಜ್ಞಾನ ಮತ್ತು ಕೃಷಿ ಅರಣ್ಯ) ಎಂಬ ವಿಷಯದಲ್ಲಿ ಹೊಸ ಪದವಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದರು.
ವಿವಿಯ ಎಲ್ಲಾ ಗ್ರಂಥಾಲಯಗಳಿಗೂ ವಿದ್ಯುನ್ಮಾನ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು ಎಲ್ಲಾ ಗ್ರಂಥಾಲಯಗಳಿಗೂ ಅಂತರ್ಜಾಲದೊಂದಿಗೆ ನೇರ ಸಂಪರ್ಕವನ್ನು ಕಲ್ಪಿಸಲಾಗಿದೆ ಅಲ್ಲದೆ ಆರ್’ಎಫ್’ಐಡಿ ಮತ್ತು ಕೋಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದರು.
Get in Touch With Us info@kalpa.news Whatsapp: 9481252093
Discussion about this post