ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಉದ್ಯೋಗ ಭವನದ ಸಮೀಪದ ಕಾರ್ಮಿಕರ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಸುಮಾರು 200ಕ್ಕೂ ಹೆಚ್ಚು ಟಿನ್ ಶೆಡ್ ಮನೆಗಳು ಸುಟ್ಟು ಕರಕಲಾಗಿವೆ.
ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ವಿದ್ಯುತ್ ಪ್ಯಾನೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಲಭಿಸಿತು. ಬಳಿಕ ಬೆಂಕಿ ವೇಗವಾಗಿ ಹಬ್ಬಿ ಕಾರ್ಮಿಕರ ತಾತ್ಕಾಲಿಕ ವಸತಿ ಶೆಡ್‌ಗಳನ್ನು ಆವರಿಸಿತು. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ 20ಕ್ಕೂ ಹೆಚ್ಚು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ Central Vista Redevelopment Project ಕೆಲಸಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಅವಘಡ ಸಂಭವಿಸಿದೆ. 1950ರ ದಶಕದಲ್ಲಿ ನಿರ್ಮಾಣಗೊಂಡಿದ್ದ ಉದ್ಯೋಗ ಭವನವನ್ನು ಇತ್ತೀಚೆಗೆ ಧ್ವಂಸಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅಡುಗೆಗೆ ಬಳಸುವ ಸಣ್ಣ ಸಿಲಿಂಡರ್‌ಗಳಿದ್ದ ಹಿನ್ನೆಲೆ ಬೆಂಕಿ ವ್ಯಾಪಕವಾಗಿ ಹಬ್ಬಿದೆ ಎಂದು ಹೇಳಲಾಗಿದೆ.
Also read: ಶಿವಮೊಗ್ಗ ಕೋರ್ಟ್’ಗೆ ಬಾಂಬ್ ಬೆದರಿಕೆ | ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ | ಎಸ್’ಪಿ ಹೇಳಿದ್ದೇನು?
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ವಿದ್ಯುತ್ ಪ್ಯಾನೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿಯೇ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Comments 1