ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಲಿವರ್ ಕ್ಯಾನ್ಸರ್’ನಿಂದ #LiverCancer ಬಳಲುತ್ತಿದ್ದ ರೋಗಿಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ (ಲಿವರ್ ಸರ್ಜರಿ) ಯ ಮೂಲಕ ಜೀವವನ್ನು ಉಳಿಸಿ ಇಲ್ಲಿನ ಎಸ್’ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್’ನ ವೈದ್ಯರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ.
ಅತ್ಯಂತ ವಿಶೇಷ ಎಂದರೆ ಈ ರೀತಿಯ ಸಂಕೀರ್ಣ ಶಸ್ತ್ರಚಿಕಿತ್ಸೆ ದಾವಣಗೆರೆಯಲ್ಲಿ ಇದೇ ಮೊದಲ ಬಾರಿ ನಡೆದಿದೆ ಎನ್ನುವುದು ಹೆಮ್ಮೆಯ ಸಂಗತಿ.
ಇಲ್ಲಿನ ವೈದ್ಯರು 72 ವರ್ಷದ ಹಿರಿಯರೊಬ್ಬರಿಗೆ ಪೋಸ್ಟೀರಿಯರ್ ಸೆಕ್ಷನೆಕ್ಟಮಿ (ಲಿವರ್’ಗೆ ಸಂಬಂಧಿಸಿದ) ಸಂಕೀರ್ಣ ಶಸ್ತ್ರಚಿಕಿತ್ಸೆ #ComplexSurgery ನಡೆಸಿ ಯಶಸ್ವಿಯಾಗಿದ್ದಾರೆ.
ಈ ಚಿಕಿತ್ಸೆಯಲ್ಲಿ ಲಿವರ್’ನ ರೋಗ ಪೀಡಿತ ಭಾಗವನ್ನು ಮಾತ್ರ ತೆಗೆದು, ಉಳಿದ ಆರೋಗ್ಯಯುತ ಭಾಗವನ್ನು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ.
ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಆರ್.ಕೆ. ಹನುಮಂತ್ ನಾಯ್ಕ್ ನೇತೃತ್ವದ ತಂಡ ಸುಮಾರು 7 ಗಂಟೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ರೋಗಿಗೆ ಜೀವದಾನ ಮಾಡಿದ್ದಾರೆ.
ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ಡಾ. ಹನುಮಂತ ನಾಯ್ಕ್ ಅವರು, ಹಲವು ದಿನಗಳಿಂದ ಹೊಟ್ಟೆ ನೋವು, ಹಸಿವಾಗದಿರುವುದು ಹಾಗೂ ತೂಕ ಕಳೆದುಕೊಳ್ಳುವ ಸಮಸ್ಯೆಯಿಂದ ಬಳಲುತ್ತಿದ್ದ 72 ವರ್ಷದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಪರೀಕ್ಷಿಸಿದಾಗ ಯಕೃತ್’ನಲ್ಲಿ 6 ಸೆಂಮೀ ಗಾತ್ರದ ಹೆಪಟೋಸೆಲ್ಯುಲರ್ ಕ್ಯಾನ್ಸರ್ ಗಡ್ಡೆಗಳು ಇರುವುದು ದೃಡಪಟ್ಟಿತು. ವೈದ್ಯಕೀಯ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು ಗ್ರೇಡ್ ಬಿ, ಎರಡನೇಯ ಹಂತದ ಕ್ಯಾನ್ಸರ್ ಎಂದು ಗುರುತಿಸಲಾಗುತ್ತದೆ ಎಂದರು.
ಪೋಸ್ಟೀರಿಯರ್ ಸೆಕ್ಷನೆಕ್ಟಮಿ ಶಸ್ತ್ರಚಿಕಿತ್ಸೆಯು ಅತ್ಯಂತ ಸವಾಲಿನದ್ದಾಗಿದೆ. ಏಕೆಂದರೆ ಯಕೃತ್ತಿನ ಹಾನಿಗೊಳಗಾದ ಭಾಗವು (ಸೆಗ್ಮೆಂಟ್ 6 ಮತ್ತು 7) ಪ್ರಮುಖ ರಕ್ತನಾಳಗಳ ಹತ್ತಿರ, ಬಲಭಾಗದ ಆಳದಲ್ಲಿದೆ. ಹೀಗಾಗಿ, ಈ ಭಾಗವನ್ನು ತೆಗೆದುಹಾಕುವಾಗ ಅತ್ಯಂತ ಎಚ್ಚರಿಕೆ ಅಗತ್ಯವಿರುತ್ತದೆ. ರೋಗ ಪೀಡಿತ ಭಾಗವನ್ನು ಮಾತ್ರ ಕತ್ತರಿಸಿ, ಉಳಿದ ಭಾಗವು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಈ ಶಸ್ತ್ರಚಿಕಿತ್ಸೆಗೆ ಪ್ರಾವೀಣ್ಯ ಮತ್ತು ನಿಖರತೆ ಅವಶ್ಯಕ ಎಂದರು.
ಈ ರೀತಿಯ ಶಸ್ತ್ರಚಿಕಿತ್ಸೆಯು ವೃದ್ಧ ರೋಗಿಗಳಲ್ಲಿ ಅಪಾಯಕಾರಿ. ಆದರೆ, ನಮ್ಮ ತಂಡ ಶಸ್ತçಚಿಕಿತ್ಸೆಯನ್ನು ಸುಗಮವಾಗಿ ನಡೆಸಿದೆ ಮತ್ತು ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದದಾರೆ ಎಂದು ಡಾ. ನಾಯ್ಕ್ ತಿಳಿಸಿದರು.
ಈ ಸಾಧನೆಯ ಕುರಿತು ಮಾತನಾಡಿದ ಎಸ್’ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್’ನ ವ್ಯವಸ್ಥಾಪಕ ನಿರ್ದೇಶಕರಾದ ಸುನಿಲ್ ಭಂಡಾರಿಗಲ್, ನಮ್ಮ ವೈದ್ಯರು ದಾವಣಗೆರೆಯಲ್ಲಿಯೇ ಮೊದಲ ಬಾರಿಗೆ ಈ ಸಂಕೀರ್ಣ ಯಕೃತ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿರುವುದು ನಮಗೆ ಸಂತಸ ತಂದಿದೆ ಎಂದರು.
ಇದು ನಮ್ಮ ಆಸ್ಪತ್ರೆ ಅತ್ಯುನ್ನತ ಗುಣಮಟ್ಟದ, ಹೊಸತನದಿಂದ ಕೂಡಿದ ಹಾಗೂ ರೋಗಿ ಕೇಂದ್ರಿತ ಆರೈಕೆ ನೀಡುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ನಾನು ಶಸ್ತ್ರಚಿಕಿತ್ಸಾ ತಂಡವನ್ನು ಅಭಿನಂದಿಸುತ್ತೇನೆ ಮತ್ತು ಮಧ್ಯ ಕರ್ನಾಟಕದ ಜನತೆಗೆ ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ಇನ್ನಷ್ಟು ಹತ್ತಿರ ತರಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















