ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿ, ಮೊದಲ ಹಂತದ ಮತದಾನ ಸಹಿನವಾಗುತ್ತಿರುವ ಬೆನ್ನಲ್ಲೇ ಚುನಾವಣಾ ಕಣದಲ್ಲಿರುವ ಕ್ರಿಮಿನಲ್ ಅಭ್ಯರ್ಥಿಗಳ ಸಂಖ್ಯೆ ಹೊರಬಿದ್ದಿದ್ದು, ಶಾಕ್ ನೀಡುವಂತಿದೆ.
ಮೊದಲ ಹಂತದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಒಟ್ಟು 213 ಮಂದಿ ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆಯುಳ್ಳವರಾಗಿದ್ದು, ಇದರಲ್ಲಿ ಕೊಲೆ, ಮಹಿಳೆಯರ ಮೇಲಿನ ಕಿರುಕುಳ, ಕಿರುಕುಳ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಚುನಾವಣಾ ವೀಕ್ಷಣೆ ಹಾಗೂ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಮಾಡಿದ್ದು, ಅಫಿಡವಿಟ್ ಸಲ್ಲಿಸಿರುವ 1279 ಅಭ್ಯರ್ಥಿಗಳಲ್ಲಿ 1266 ಅಭ್ಯರ್ಥಿಗಳು ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ಸರಿಯಾದ ರೀತಿಯಲ್ಲಿ ದಾಖಲೆ ಸಲ್ಲಿಸದ 13 ಅಭ್ಯರ್ಥಿಗಳ ಅರ್ಜಿ ಹಾಗೂ ಅಫಿಡವಿಟ್’ಗಳನ್ನು ಪರಿಶೀಲನೆ ನಡೆಸಲಾಗಿಲ್ಲ ಎನ್ನಲಾಗಿದೆ.
ಒಟ್ಟಾರೆ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ 25 ಅಭ್ಯರ್ಥಿಗಳು ಕೊಲೆ(ಐಪಿಸಿ ಸೆಕ್ಷನ್ 307) ಆರೋಪವನ್ನು ಹೊತ್ತಿದ್ದು, ನಾಲ್ವರು ಕಿಡ್ನಾಪ್ ಪ್ರಕರಣ, 16 ಅಭ್ಯರ್ಥಿಗಳು ಮಹಿಳೆಯರಿಗೆ ಕಿರುಕುಳ ನೀಡಿದ ಕ್ರಿಮಿನಲ್ ಪ್ರಕರಣ ಹಾಗೂ 12 ಮಂದಿ ಪ್ರಚೋದನಕಾರಿ ಭಾಷಣ/ಮಾತನಾಡಿರುವ ಪ್ರಕರಣವನ್ನು ಹೊಂದಿದ್ದಾರೆ.
91 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಎಪ್ರಿಲ್ 11ರಂದು ನಡೆಯಲಿದ್ದು, ಇದರಲ್ಲಿ ಮೂರಕ್ಕಿಂತಲೂ ಹೆಚ್ಚಿನ ಕ್ರಿಮಿನಲ್ ಅಭ್ಯರ್ಥಿಗಳನ್ನು ಹೊಂದಿರುವ 37 ಕ್ಷೇತ್ರಗಳನ್ನು ರೆಡ್ ಅಲರ್ಟ್ ಎಂದು ಘೋಷಿಸಲಾಗಿದೆ.
ಯಾವ ಪಕ್ಷದಲ್ಲಿ ಎಷ್ಟು ಕ್ರಿಮಿನಲ್ ಅಭ್ಯರ್ಥಿಗಳು:
- ಕಾಂಗ್ರೆಸ್: 83 ಅಭ್ಯರ್ಥಿಗಳಲ್ಲಿ 35
- ಬಿಜೆಪಿ: 83 ಅಭ್ಯರ್ಥಿಗಳಲ್ಲಿ 30
- ಬಿಎಸ್’ಪಿ: 32 ಅಭ್ಯರ್ಥಿಗಳಲ್ಲಿ 8
- ವೈಎಸ್’ಆರ್’ಸಿಪಿ: 25 ಅಭ್ಯರ್ಥಿಗಳಲ್ಲಿ 13
- ಟಿಡಿಪಿ: 25 ಅಭ್ಯರ್ಥಿಗಳಲ್ಲಿ 4
- ಟಿಆರ್’ಎಸ್: 17 ಅಭ್ಯರ್ಥಿಗಳಲ್ಲಿ 5
Discussion about this post