ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಷ್ಟ್ರದ ಉದ್ದಗಲಕ್ಕೆ ಸನಾತನ ಧರ್ಮ ಸಂಸ್ಕೃತಿಯನ್ನು ಘಾಸಿಗೊಳಿಸುವ ಶಕ್ತಿಗಳು ಹೆಚ್ಚುತ್ತಿವೆ. ಇದು ಹಿಂದಿನಿಂದಲೂ ಇದೆ. ಭಾರತಕ್ಕೆ ಇದು ಹೊಸತಲ್ಲವಾದರೂ, ಇದನ್ನು ತಡೆಯದಿದ್ದರೆ ಮುಂದಿನ ಪೀಳಿಗೆಯ ಮೇಲೆ ಇದು ಪರಿಣಾಮವನ್ನು ಬಿರುತ್ತದೆ.
-ವಿಶ್ವೇಶ್ವರ ಹೆಗಡೆ ಕಾಗೇರಿ
ಪುನರ್ಜನ್ಮ ಮತ್ತು ಕರ್ಮದ ಫಲದ ಮೇಲೆ ನಂಬಿಕೆ ಇದ್ದರೆ ಸಂಸ್ಕಾರಯುತ ಜೀವನ ಸಹಜವಾಗಿ ಬರುತ್ತದೆ. ಸನಾತನ ಸಂಸ್ಕೃತಿಯಲ್ಲಿ ಇದು ರಕ್ತಗತವಾಗಿ ಬೆಳೆದು ಬಂದಿದೆ. ಮುಂದಿನ ಜನಾಂಗಕ್ಕೂ ಸಂಸ್ಕಾರದ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಸಂಸ್ಕಾರೋತ್ಸವ ಮಾದರಿ ಕಾರ್ಯ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರಂನ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ಸಂಸ್ಕಾರೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ, ತೃತೀಯ ವಿಶ್ವಹವ್ಯಕ ಸಮ್ಮೇಳನದ ಸ್ಮರಣ ಸಂಚಿಕೆ ‘ಸಹಸ್ರಚಂದ್ರ’ ಬಿಡುಗಡೆ ಮಾಡಿ ಮಾತನಾಡಿದ ಕಾಗೇರಿಯವರು, ಹರಿದು ಹಂಚಿಹೋಗಿದ್ದ ಪುಟ್ಟ ದೇಶ ಇಸ್ರೇಲ್ ಮತ್ತೆ ಒಂದಾಗಿ ಇಂದು ಸಂಘಟನೆಗೊಂಡು ಜಗತ್ತಿನಲ್ಲಿ ಶಕ್ತಿಶಾಲಿಯಾಗಿ ಪುಟಿದ್ದೆದಿದೆ. ಅದೇ ರೀತಿ ಹವ್ಯಕರು ಎಲ್ಲೇ ಇದ್ದರೂ ಸಂಘಟನೆಯನ್ನು ಬೆಳೆಸಬೇಕು ಎಂದರು.
ಸಮಾಜದಲ್ಲಿ ಪ್ರಭಾವಿಯಾಗಿ ಗುರುತಿಸಿಕೊಳ್ಳಬೇಕು. ಜಗತ್ತು ಜ್ಞಾನಾಧಾರಿತವಾಗಿ ವೇಗವಾಗಿ ಬೆಳೆಯುತ್ತಿದೆ. ಹವ್ಯಕ ಸಮಾಜ ಜ್ಞಾನದ ಮೂಲಕವೇ ಸಮಾಜದಲ್ಲಿ ಗುರುತಿಸಿಕೊಂಡಿದ್ದು, ಈ ಸಮಾಜವು ಇನ್ನಷ್ಟು ಸಂಘಟನೆಯಾಗಬೇಕಿದೆ. ಡಾ.ಗಿರಿಧರ ಕಜೆಯವರ ನಾಯಕತ್ವದಲ್ಲಿ ಹವ್ಯಕ ಸಂಘಟನೆಯು ಸಂಸ್ಕಾರಯುತವಾಗಿ ಇನ್ನಷ್ಟು ಗಟ್ಟಿಯಾಗಬೇಕು ಎಂದ ಅವರು, ಒಂದು ಸಮಾಜದ ಸಂಖ್ಯೆ ಕುಸಿಯುತ್ತಿರುವುದು ಅಪಾಯದ ಸಂಕೇತವಾಗಿದೆ. ತಾಂತ್ರಿಕವಾಗಿ ಮುಂದುವರಿದ ಈ ಕಾಲಘಟ್ಟದಲ್ಲಿ ಸಂಘಟನೆಯನ್ನು ಸಂಸ್ಕಾರಯುತವಾಗಿ ಬೆಳೆಸುವುದು ಸವಾಲಿನಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.ರಾಷ್ಟ್ರದ ಉದ್ದಗಲಕ್ಕೆ ಸನಾತನ ಧರ್ಮ ಸಂಸ್ಕೃತಿಯನ್ನು ಘಾಸಿಗೊಳಿಸುವ ಶಕ್ತಿಗಳು ಹೆಚ್ಚುತ್ತಿವೆ. ಇದು ಹಿಂದಿನಿಂದಲೂ ಇದೆ. ಭಾರತಕ್ಕೆ ಇದು ಹೊಸತಲ್ಲವಾದರೂ, ಇದನ್ನು ತಡೆಯದಿದ್ದರೆ ಮುಂದಿನ ಪೀಳಿಗೆಯ ಮೇಲೆ ಇದು ಪರಿಣಾಮವನ್ನು ಬಿರುತ್ತದೆ ಎಂದು ಎಚ್ಚರಿಸಿದ ಅವರು,
ಹವ್ಯಕ ಸಮಾಜದಲ್ಲಿ ಸಂಸ್ಕಾರಕ್ಕೆ ಕೊರತೆ ಇಲ್ಲ. ವೇದ,ಸಂಸ್ಕೃತದಿಂದ ಜ್ಞಾನ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಷೋಡಷ ಸಂಸ್ಕಾರ ನೀಡುವ ಸಂದರ್ಭದಲ್ಲಿ ವಿದ್ವಾಂಸರು ಶ್ಲೋಕ, ಮಂತ್ರದಲ್ಲಿನ ಸಾರವನ್ನು ತಿಳಿಸಿ ಹೇಳುವ ಕೆಲಸವನ್ನು ಮಾಡಬೇಕು. ಆಗ ಜನ ಸಾಮಾನ್ಯರು ಅಂಧಶ್ರದ್ಧೆಯ ಮೂಲಕ ಅನುಸರಿಸುವ ಪದ್ಧತಿ ತಪ್ಪುತ್ತದೆ. ಜನ ಸಾಮಾನ್ಯರು ಕೂಡ ವೇದ ಮಂತ್ರಗಳಲ್ಲಿನ ಜ್ನಾನವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಯಾವ ಸಮುದಾಯದ ಸಂಖ್ಯೆ ಎಷ್ಟು? ಎಂಬ ಚರ್ಚೆ ನಡೆದಿದೆ. ಹವ್ಯಕ ಸಮುದಾಯದ ಸಂಖ್ಯೆಯು ಕೆಲವೇ ಲಕ್ಷದಷ್ಟಿದೆ. ವನವಾಸಿ ಜನರಿಗಿಂತಲೂ ಕಡಿಮೆ ಜನಸಂಖ್ಯೆ ಹವ್ಯಕ ಸಮಾಜದ್ದು. ಹೀಗಾಗಿ ಅಲ್ಪಸಂಖ್ಯಾತರ ಸ್ಥಾನಮಾನ ನಿಜವಾಗಿಯೂ ಲಭಿಸಬೇಕಿರುವುದು ಹವ್ಯಕರಿಗೆ ಎಂದು ಪ್ರತಿಪಾದಿಸಿದರು.
ಅಭ್ಯಾಗತರಾದ ಪಂಡಿತ ವಿನಾಯಕ ತೊರವಿ ಮಾತನಾಡಿ, ಹವ್ಯಕ ಸಮಾಜದ ವ್ಯಕ್ತಿ ಮತ್ತು ಸಮಾಜದ ಸಂಸ್ಕಾರದ ಶಕ್ತಿ ಎಲ್ಲ ಸಮುದಾಯಕ್ಕೆ ಮಾದರಿಯಾಗಿದೆ. ಸಂಸ್ಕಾರೋತ್ಸವದ ಮೂಲಕ ಹವ್ಯಕರಲ್ಲಿನ ಸಂಸ್ಕಾರ ಪುನಶ್ಚೇತನಗೊಳಿಸುವ ಕೆಲಸ ಶ್ಲಾಘನೀಯ ಎಂದರು.
ಶತಾವಧಾನಿ ಡಾ. ಆರ್. ಗಣೇಶ್ ಅವರು ‘ಸಂಸ್ಕಾರಗಳ ಮಹತ್ವ ಹಾಗೂ ಪ್ರಸ್ತುತತೆ’ ಕುರಿತಾಗಿ ಮಾತನಾಡಿ, ಸನಾತನ ಧರ್ಮದ ಕುರಿತಾದ ಶ್ರದ್ಧೆ ಹಾಗೂ ರಾಷ್ಟ್ರಭಕ್ತಿಯ ವಿಚಾರದಲ್ಲಿ ಹವ್ಯಕ ಸಮುದಾಯ ಬೇರೆಲ್ಲರಿಗಿಂತ ದೊಡ್ದಮಟ್ಟದಲ್ಲಿ ತೊಡಗಿಸಿಕೊಂಡಿದೆ. ಇದು ಅತಿಶಯೋಕ್ತಿಯಾಗಿರದೇ ವಾಸ್ತವವಾಗಿದೆ. ವೀಣೆಯನ್ನು ಎಷ್ಟೇ ಸರಿಯಾಗಿ ಶೃತಿಮಾಡಿದ್ದರೂ ಕಾಲ ಕಳೆದಂತೆ ಶೃತಿ ಬದಲಾಗುತ್ತದೆ. ಸಿಹಿ ಮೊಸರು ಕೆಲವು ಕಾಲದ ನಂತರ ಹುಳಿಯಾಗುತ್ತದೆ. ಕಾಲದ ಪ್ರಭಾವ ಎಲ್ಲರ ಮೇಲೂ ಇದ್ದು, ನಾವು ನಿಂತ ನೀರಾಗಿರದೇ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿಕೊಳ್ಳಬೇಕು ಎಂದರು.
ಚಿಂತಕ ಚಕ್ರವರ್ತಿ ಸೂಲಿಬೆಲೆ ‘ಜಪ ತಪಗಳೊಂದಿಗೆ ಆಧುನಿಕ ಜೀವನ’ ಕುರಿತಾಗಿ ಮಾತನಾಡಿ, ಇಂದು ನಮ್ಮ ಶ್ರದ್ಧಾಸ್ಥಾನಗಳ ಮೇಲೆ ಆಕ್ರಮಣಗಳು ನಡೆಯುತ್ತಿದ್ದು, ನಮ್ಮ ನಂಬಿಕನ್ನು ಅಳಿಸಿವ ಕೆಲಸಗಳು ನಡೆಯುತ್ತಿವೆ. ನಮ್ಮ ತಲೆಮಾರು, ನಮ್ಮ ತಂದೆಯ ತಲೆಮಾರಿನ ನಂಬಿಕೆಯನ್ನು ಅಳಿಸುವುದು ಸುಲಭವಲ್ಲ. ಆದರೆ ಮಕ್ಕಳ ಮನಸ್ಸಿನಲ್ಲಿ ನಮ್ಮ ಧರ್ಮದ ಶ್ರದ್ಧೆಯನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಿದ್ದು, ಈ ಬಗ್ಗೆ ಸಮಾಜ ಜಾಗೃತವಾಗಬೇಕು. ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮಕ್ಕಳಿಗೆ ಎಳವೆಯಲ್ಲಿಯೇ ಕಲಿಸಬೇಕು. ಒಂದು ಕ್ಷಣದ ಜಾಗೃತಿ ನಮ್ಮ ಸಾಧನೆಗೆ ಮೂಲ ತಳಹದಿಯಾಗಿದ್ದು, ಮಹಾಪುರುಷರು ಈ ವಿಧದ ಜಾಗೃತಿಯನ್ನು ಹೊಂದಿದ್ದರಿಂದ ಲೋಕಕ್ಕೆ ಅನೇಕ ಪ್ರಜೋಜನಗಳು ಆಗಿವೆ ಎಂದರು.
ಶ್ರೀಶ್ರೀ ನಿರ್ಭಯಾನಾಂದ ಸ್ವಾಮಿಜಿ ‘ಸಂಸ್ಕಾರಯುತ ಯುವ ನಡೆ ನುಡಿ ಕುರಿತಾಗಿ ಉಪನ್ಯಾಸ ನೀಡಿದರೆ, ಭಾಷಾ ಸಂಸ್ಕಾರದ ಬಗ್ಗೆ ಶ್ರೀ ದೇವೇಂದ್ರ ಬೆಳೆಯೂರು, ಉಪನಯನದ ಮಹತಿಯ ಬಗ್ಗೆ ವಿದ್ವಾನ್ ರಾಮಕೃಷ್ಣ ಭಟ್ಟ ಕೂಟೇಲು, ಶಂಕರ ತತ್ವಾಧಾರಿತ ಸಂಸ್ಕಾರದ ಬಗ್ಗೆ ವಿದ್ವಾನ್ ಜಗದೀಶ ಶರ್ಮಾ ಸಂಪ, ಮಾನವೀಯ ಸಂಬಂಧಗಳಲ್ಲಿ ಸಂಸ್ಕಾರದ ಕುರಿತಾಗಿ ಡಾ. ಭರತ್ ಚಂದ್ರ, ಸಂಧ್ಯಾವಂದನೆಯಿಂದ ಬದುಕಿನಲ್ಲಿ ಪವಾಡಗಳ ಕುರಿತಾಗಿ ವಿದ್ವಾನ್ ಕೆ.ಎಲ್ ಶ್ರೀನಿವಾಸನ್, ವಿವಾಹದ ಕುರಿತಾಗಿ ಶ್ರೀ ಮೋಹನ ಭಾಸ್ಕರ ಹೆಗಡೆ, ಸ್ತ್ರೀ ಸಂಸ್ಕ್ರಾರದ ಬಗ್ಗೆ ಶ್ರೀಮತಿ ರೂಪಾ ಗುರುರಾಜ್ ಹಾಗೂ ಸಂಸ್ಕಾರಗಳ ವೈಜ್ನಾನಿಕ ತಳಹದಿ ಕುರಿತಾಗಿ ಪ್ರೋ. ಶಲ್ವಪಿಳ್ಳೈ ಅಯ್ಯಂಗಾರ್ ಕುರಿತಾಗಿ ಉಪನ್ಯಾಸ ನೀಡಿದರು. ಶ್ರೀ ಕೂರ್ಗಿ ಶಂಕರನಾರಾಯಣ ಉಪಾಧ್ಯಾಯರು ಬ್ರಹ್ಮತೇಜೋ ಬಲಂ ಬಲಂ ಎಂಬ ವಾಚಿಕಾಭಿನಯ ಜನಮನ ಸೆಳೆಯಿತು.
ಇದಕ್ಕೂ ಮೊದಲು ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸ್ಮರಣಸಂಚಿಕೆ “ಸಹಸ್ರಚಂದ್ರ” ಲೋಕಾರ್ಪಿತವಾಯಿತು. ಕಲಾ ಸಂಸ್ಕಾರದ ಭಾಗವಾಗಿ ಯಕ್ಷ ಸಂಸ್ಕಾರ ಪ್ರದರ್ಶನ ಹಾಗೂ ವಿಶಿಷ್ಟವಾದ ಸಂಸ್ಕಾರ ಸ್ವರ ಚಿತ್ತಾರ ಕಾರ್ಯಕ್ರಮಗಳು ನಡೆದವು. ಇದಕ್ಕೂ ಪೂರ್ವದಲ್ಲಿ 108 ಮಾತೆಯರಿಂದ ಕುಂಕುಮಾರ್ಚನೆ, 108 ವೈದಿಕರಿಂದ ರುದ್ರಾಭಿಷೇಕ, ಶಂಕರ ಪಲ್ಲಕ್ಕಿ ಉತ್ಸವ, ಸಿದ್ದಿವಿನಾಯಕ ದೇವರಿಗೆ ರಂಗಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳೂ ನಡೆದವು.
ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಉಪಾಧ್ಯಕ್ಷರಾದ ಶ್ರೀಧರ್ ಭಟ್ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ ಭಟ್, ಆದಿತ್ಯ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ , ಕಾರ್ಯಕ್ರಮದ ಸಂಚಾಲಕ ಡಾ. ನರಸಿಂಹ ಕುಮಾರ್ ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post