ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ, ರಾಜ್ಯದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ(95) ವಿಧಿವಶರಾಗಿದ್ದಾರೆ.
ವಯೋ ಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ 94 ವರ್ಷದ ಶಾಮನೂರು ಶಿವಶಂಕರಪ್ಪ, ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ಅವರು ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ರಾಜ್ಯದ ವಿವಿಧ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸುವ ಮೂಲಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ತೋಟಗಾರಿಕೆ ಸಚಿವರಾಗಿದ್ದು ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ ಸಂಸದರಾಗಿದ್ದಾರೆ.
ಭಾರತದ ಅತ್ಯಂತ ಹಿರಿಯ ಶಾಸಕರಾಗಿ ಎನಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರು ಜೂನ್ 16, 1931 ರಂದು ದಾವಣಗೆರೆಯಲ್ಲಿ ಜನಿಸಿದ್ದರು. ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯ, ಶಿಕ್ಷಣ, ಉದ್ಯಮ ಮತ್ತು ಸಮಾಜಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಶಾಮನೂರು ಶಿವಶಂಕರಪ್ಪರವರು ದಾವಣಗೆರೆಯ ಅಂಗವಿಕಲರ ಆಶಕಿರಣ ಟ್ರಸ್ಟ್, ದಾವಣಗೆರೆ ಕ್ರಿಕೆಟ್ ಕ್ಲಬ್ ಮತ್ತು ದಾವಣಗೆರೆ ಸ್ಪೋರ್ಟ್ಸ್ ಕ್ಲಬ್‍ನ ಅಧ್ಯಕ್ಷರು. ಅಖಿಲ ಭಾರತ ವೀರಶಿವ ಮಹಾಸಭೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಮತ್ತು ಹಲವಾರು ವೃತ್ತಿಪರ ಶಿಕ್ಷಣ ಸಂಸ್ಥೆಗಳು ಸೇರಿ ಸರಪಳಿಯಾಗಿರುವ, ಬಾಪುಜಿ ಎಂಜಿನಿಯರಿಂಗ್ ಅಸೋಸಿಯೇಷನ್‍ರ ಅಧ್ಯಕ್ಷರಾಗಿದ್ದಾರೆ. ಅವರು ಶಿಕ್ಷಣವಾದಿ ಮತ್ತು ಕೈಗಾರಿಕೋದ್ಯಮಿಯಾಗಿದ್ದು, ಸಕ್ಕರೆ ಮತ್ತು ಡಿಸ್ಟಿಲರೀಸ್‍ನ ವ್ಯಾಪಾರ ಮಾಡುವ ಶ್ಯಾಮನೂರ್ ಗ್ರೂಪ್ ಎಂಬ ಉದ್ಯಮದ ಹೊಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















