ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರಿವೆಂನ್ಷನ್ ಈಸ್ ಬೆಟರ್ ದೆನ್ ಕ್ಯೂರ್ ಎಂಬುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೊಸ ಭಾಷ್ಯ ಬರೆಯಲು ಹೊರಟಿದ್ದು, ಇದು ದೇಶದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ.
ಹೌದು…ಕೊರೋನಾ ಸೋಂಕು ದೇಶದಾದ್ಯಂತ ತೀವ್ರ ಆತಂಕದ ಪರಿಸ್ಥಿತಿ ಸೃಷ್ಠಿಸಿರುವಂತೆಯೇ ತಮ್ಮ ಕ್ಷೇತ್ರದ ಜನತೆಯ ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಮಹತ್ವದ ಹೆಜ್ಜೆಯನ್ನಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪಾಲಿಕೆಯ 35 ವಾರ್ಡ್ ವ್ಯಾಪ್ತಿಯಲ್ಲಿನ 4 ಲಕ್ಷ ಜನರಿಗೆ ಆರ್ಯುವೇದಿಕ್ ಉಚಿತ ಕಿಟ್ ವಿತರಣೆ ಮಾಡಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ.
ಏನಿದು ಯೋಜನೆ?
ಒಂದೆಡೆ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ಇದಕ್ಕೆ ಔಷಧಿಯನ್ನು ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ನಿರತರಾಗಿದ್ದಾರೆ. ಹೀಗಿರುವಾಗ, ವೈರಸ್ ಹರಡುವುದನ್ನು ತಡೆಗಟ್ಟಬೇಕು ಎಂದರೆ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಪ್ರಮುಖ ಮಾರ್ಗ. ಹೀಗಾಗಿ, ಇಂತಹ ಒಂದು ಮಹತ್ವದ ಕಾರ್ಯಕ್ಕೆ ಸಚಿವರು ಕೈ ಹಾಕಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಮೊದಲು ಕೊರೋನಾ ವೈರಸ್ ಇಲ್ಲದೇ ನೆಮ್ಮದಿಯಾಗಿದ್ದೆವು. ಆದರೆ, ಆನಂತರ ದಿನಗಳಲ್ಲಿ ಕಾಣಿಸಿಕೊಂಡ ಕಾರಣ ಜನರು ಆತಂಕಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಆರೋಗ್ಯ ಕಾಪಾಡುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ನಮ್ಮ ಆದ್ಯತೆ ಎನಿಸಿತು. ಶಿವಮೊಗ್ಗ ಮೆಡಿಕಲ್ಸ್’ನ ವಿವೇಕಾನಂದ ಹಾಗೂ ಫಾರ್ಮಸಿ ಕಾಲೇಜು ಉಪನ್ಯಾಸಕ ಸತೀಶ್ ಶೆಟ್ಟಿ ಅವರು ಇಂತಹ ಒಂದು ವಿಚಾರವನ್ನು ಪ್ರಸ್ತಾಪಿಸಿದರು. ಇವರ ಸಲಹೆಯನ್ನು ಪರಿಗಣಿಸಿ, ಖ್ಯಾತ ಆರ್ಯುವೇದಿಕ್ ವೈದ್ಯ ಡಾ.ಗಿರಿಧರ್ ಕಜೆ ಅವರ ಸಲಹೆ ಹಾಗೂ ಮಾರ್ಗದರ್ಶನ ಪಡೆದುಕೊಂಡು ಆರ್ಯುವೇದಿಕ್ ಕಿಟ್ ಹಂಚುವ ನಿರ್ಧಾರಕ್ಕೆ ಬರಲಾಯಿತು. ಈ ಬೃಹತ್ ಕಾರ್ಯಕ್ಕೆ ನಮ್ಮೊಂದಿಗೆ ಪಕ್ಷ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸಾರ್ವಜನಿಕರು, ಸಂಘ ಸಂಸ್ಥೆಗಳು ಉದಾರವಾಗಿ ಸಹಕಾರ ನೀಡಿರುವುದು ಸಂತಸದ ವಿಚಾರ.
-ಕೆ.ಎಸ್. ಈಶ್ವರಪ್ಪ,
ಜಿಲ್ಲಾ ಉಸ್ತುವಾರಿ ಸಚಿವರು
ಶಿವಮೊಗ್ಗದ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಇದನ್ನು ಆಯೋಜಿಸಲಾಗಿದ್ದು, ದೇಶದಲ್ಲೇ ಅತೀ ಮಹತ್ವದ ಮೊದಲ ಕಾರ್ಯಕ್ರಮ ಇದಾಗಿದೆ. ಮೊದಲ ಹಂತವಾಗಿ ನಗರದ ಸುಮಾರು 85,000 ಕುಟುಂಬಗಳ 4 ಲಕ್ಷ ಜನರಿಗೆ ಆಯುರ್ವೇದೀಯ ಔಷಧಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿ ಕಿಟ್ ಸುಮಾರು 350 ರೂ. ಬೆಲೆಯುಳ್ಳದ್ದಾಗಿದ್ದು, ಈ ಔಷಧದ ಕಿಟ್‌ನಲ್ಲಿ ಸುಮಾರು 3 ರೀತಿಯ ಔಷಧಗಳಿರುತ್ತವೆ. ಅವುಗಳ ಬಳಕೆಯ ಕುರಿತು ವಿವರವಾದ ಮಾಹಿತಿಯನ್ನು ಕಿಟ್‌ನಲ್ಲಿ ನಮೂದಿಸಲಾಗಿರುತ್ತದೆ. ವಿಶೇಷವಾಗಿ ಈ ಕಿಟ್‌ನಲ್ಲಿ ಎರಡು ರೀತಿಯ ಗುಳಿಗೆಗಳು ಹಾಗೂ ಕಷಾಯ ಪುಡಿ ಇರಲಿದೆ.
ಆರ್ಯುವೇದ ಶಾಸ್ತ್ರ ನಮ್ಮ ಭಾರತೀಯ ಪರಂಪರೆಯ ಹಾಸುಹೊಕ್ಕಾಗಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೋವಿಡ್19 ಸಮಸ್ಯೆ ಆರಂಭವಾದ ನಂತರ ಮತ್ತೆ ಮುಂಚೂಣಿಗೆ ಆರ್ಯುವೇದ ಬಂದಿದ್ದು, ವಿಶ್ವದಾದ್ಯಂತ ಮುಖ್ಯವಾಹಿನಗೆ ಬರುತ್ತಿದೆ. ಇದನ್ನು ಬಳಸಿಕೊಂಡು ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯ ಕಾಪಾಡುವುದು, ಆಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮ ಯೋಜನೆಯ ಉದ್ದೇಶ. ಇಡಿಯ ದೇಶದಲ್ಲೇ ಇದು ಮೊಟ್ಟಮೊದಲ ಪ್ರಯತ್ನವಾಗಿದ್ದು, ಹೊಸ ದಾಖಲೆ ಬರೆಯುವ ಜೊತೆಯಲ್ಲಿ ಮಾದರಿ ಹೆಜ್ಜೆಯಾಗಲಿದೆ.
-ಡಿ.ಎಸ್. ಅರುಣ್,
ಅಧ್ಯಕ್ಷರು, ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮ
ಆಧಾರ್ ಕಾರ್ಡ್ ಕಡ್ಡಾಯ
ಇನ್ನು, ಈ ಯೋಜನೆಯ ಅಡಿಯಲ್ಲಿ ಆರ್ಯುವೇದಿಕ್ ಕಿಟ್ ಪಡೆಯಲು ಬಯಸುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ತೋರಿಸಬೇಕು. ಒಂದು ವೇಳೆ ಯಾರಿಗಾದರೂ ಆಧಾರ್ ಕಾರ್ಡ್ ಇಲ್ಲದೇ ಇದ್ದರೆ ಅಂತಹವರಿಗೆ ಕಾರ್ಡ್ ಮಾಡಿಸಿ, ನಂಬರ್ ಬಂದ ನಂತರ ಕಿಟ್ ನೀಡಲಾಗುತ್ತದೆ.
ಒಬ್ಬರಿಗೆ ಒಂದು ಬಾರಿ ಮಾತ್ರ ಕಿಟ್
ಇನ್ನು, ಕಿಟ್ ಪಡೆಯುವ ವೇಳೆ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದ್ದು, ಇದನ್ನು ದಾಖಲು ಮಾಡಿಕೊಳ್ಳಲು ವಿಶೇಷ ಸಾಫ್ಟ್’ವೇರ್ ಸಿದ್ದಪಡಿಸಲಾಗಿದೆ. ಒಮ್ಮೆ ಇದರಲ್ಲಿ ನಮೂದಾದ ಆಧಾರ್ ನಂಬರ್’ಗೆ ಮತ್ತೆ ಎರಡನೆಯ ಬಾರಿ ವಿತರಣೆ ಮಾಡುವುದಿಲ್ಲ.
ಕೊರೋನಾದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯುವ ಉಪಕ್ರಮಗಳಲ್ಲಿ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದೂ ಸಹ ಅತ್ಯಂತ ಮುಖ್ಯವಾದುದು. ಈಗ ವಿತರಣೆ ಮಾಡಲಿರುವ ಔಷಧಿಯನ್ನು ನಮ್ಮ ಕುಟುಂಬಸ್ಥರು ಕಳೆದ ಒಂದು ತಿಂಗಳಿನಿಂದಲೂ ತೆಗೆದುಕೊಳ್ಳುತ್ತಿದ್ದೇವೆ. ಹೀಗಾಗಿ, ನಾವು ಜನರ ನಡುವೆಯೇ ಕಾರ್ಯ ನಿರ್ವಹಿಸುತ್ತಿದ್ದರೂ ನಮಗೆ ಯಾವುದೇ ವೈರಸ್ ತಗುಲಿಲ್ಲ ಎಂಬುದು ನಮ್ಮ ನಂಬಿಕೆ. ಕೊರೋನಾದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಈ ಔಷಧಿಯನ್ನು ನಗರದ ಜನರಿಗೆ ಉಚಿತವಾಗಿ ಹಂಚಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕಾಗಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಹಳಷ್ಟು ಸಹಕಾರ ನೀಡಿದ್ದು, ಸಂಘ ಸಂಸ್ಥೆಗಳೂ ಸಹ ಕೈ ಜೋಡಿಸಿವೆ.
-ಕೆ.ಇ. ಕಾಂತೇಶ್,
ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು
ಎಷ್ಟು ವೆಚ್ಚ?
ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳ 4 ಲಕ್ಷ ಜನರಿಗೆ ಈ ಆರ್ಯುವೇದಿಕ್ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಇದಕ್ಕೆ ಒಟ್ಟು 4 ಕೋಟಿ ರೂ. ಖರ್ಚು ಬರಲಿದೆ. ಇದಕ್ಕೆ ಸಾರ್ವಜನಿಕರು, ದಾನಿಗಳಿಂದ ನೆರವು ಸಂಗ್ರಹಿಸಲಾಗುತ್ತಿದ್ದು, ಈಶ್ವರಪ್ಪ ಹಾಗೂ ಕುಟುಂಬಸ್ಥರ ಸಹಕಾರ ದೊಡ್ಡದಿದೆ.

Get In Touch With Us info@kalpa.news Whatsapp: 9481252093









Discussion about this post