ಕಲ್ಪ ಮೀಡಿಯಾ ಹೌಸ್ | ಗದಗ |
ಇದೇ ಫೆ.10 ರಂದು ಆರಂಭಗೊಳ್ಳಲಿರುವ ಐತಿಹಾಸಿಕ ಲಕ್ಕುಂಡಿ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರು ಉದ್ಘಾಟಿಸಲಿದ್ದು ಉತ್ಸವದ ಯಶಸ್ವಿಗಾಗಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಲೋಕೊಪಯೋಗಿ ಇಲಾಖೆ ಸಚಿವರಾದ ಸಿ.ಸಿ. ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಇದೇ 10 ರಿಂದ 12ರ ವರೆಗೆ ಮೂರು ದಿನಗಳ ಕಾಲ ಜರುಗಲಿರುವ ಲಕ್ಕುಂಡಿ ಉತ್ಸವದ ಯಶಸ್ವಿಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಫೆ. 10 ರಂದು ಲಕ್ಕುಂಡಿ ಸರಕಾರಿ ಮಾದರಿ ಪ್ರೌಢ ಶಾಲೆಯಲ್ಲಿ ಮುಂಜಾನೆ 10 ಗಂಟೆಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಸ್ಥಳೀಯ ಕಲಾತಂಡಗಳಿಂದ 25ಕ್ಕೂ ಹೆಚ್ಚು ಕಲಾ ಪ್ರಕಾರಗಳ ಜಾನಪದ ಕಲಾವಾಹಿನಿಗಳ ಮೆರವಣಿಗೆ ಮೂಲಕ ಲಕ್ಕುಂಡಿ ಉತ್ಸವ ಪ್ರಾರಂಭವಾಗುವದು. ಅದೇ ದಿನ ಸಾಯಂಕಾಲ 6 ಗಂಟೆಗೆ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಧಾನ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು ಕಾರ್ಯಕ್ರಮವನ್ನು ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಉದ್ಘಾಟಿಸಲಿದ್ದಾರೆ ಎಂದರು.
ಉತ್ಸವದ ಅಂಗವಾಗಿ ಲಕ್ಕುಂಡಿಯ ಬಿ.ಎಚ್.ಪಾಟೀಲ ಪ್ರೌಢಶಾಲೆ ಆವರಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಕ್ರೀಡಾ ಸ್ಪರ್ಧೆಗಳಿಗೆ ಬೆ. 10 ಗಂಟೆಗೆ ಚಾಲನೆ ದೊರೆಯಲಿದೆ. ಕುಸ್ತಿ ಸ್ಪರ್ಧೆಗೆ ಲಕ್ಕುಂಡಿಯ ಅಂತರಾಷ್ಟ್ರೀಯ ಕುಸ್ತಿ ಪಟು ಕು. ಪ್ರೇಮಾ ಹುಚ್ಚಣ್ಣವರ, ಕಬಡ್ಡಿ ಸ್ಪರ್ಧೆಗೆ ಅರ್ಜುನ ಪ್ರಶಸ್ತಿ ಪುರಸ್ಕøತ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾ ಪಟು ಡಾ. ಸಿ.ಹೊನ್ನಪ್ಪಗೌಡ ಚಾಲನೆ ನೀಡುವರು. ಕ್ರೀಡಾ ಸ್ಪರ್ಧೆಗಳಲ್ಲಿ ಕುಸ್ತಿ, ಕಬಡ್ಡಿ, ಮಲ್ಲಕಂಬ, ಯೋಗ, ಚಿತ್ರಕಲಾ ಸ್ಪರ್ಧೆ, ಬೋಟಿಂಗ್, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ನೀರಗ್ನಿ ಅಡಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸಿರಿಧಾನ್ಯಗಳ ಮಹತ್ವ ಸಾರುವ ಸದುದ್ದೇಶದಿಂದ ಪಾರಂಪರಿಕ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ ಪ್ರಧಾನ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಮಂಗಲವಾದ್ಯ, ತತ್ವಪದ, ನೃತ್ಯ, ದೊಡ್ಡಾಟಪದ, ಹಿಂದೂಸ್ತಾನಿ ಸಮೂಹ ನೃತ್ಯ, ಡೊಳ್ಳಿನ ಪದ, ಜನಪದ ನೃತ್ಯ, ಶಾಸ್ತ್ರೀಯ ಸಂಗೀತ, ಮಲ್ಲಕಂಬ, ದೀಪನೃತ್ಯ, ಯಕ್ಷಗಾನ ಸೇರಿದಂತೆ ವಿವಿಧ ಕಲಾಪ್ರಕಾರಗಳ ಅನಾವರಣಗೊಳ್ಳಲಿದೆ. ಗದಗ ಜಿಲ್ಲೆಯ ಪ್ರಮುಖವಾಗಿ ಲಕ್ಕುಂಡಿಯ ಐತಿಹಾಸಿಕ ಹಾಗೂ ಪಾರಂಪರಿಕ ಹಿನ್ನೆಲೆಯನ್ನು ಗಮನದಲ್ಲಿರಿಸಿಕೊಂಡು ವಿಶೇಷ ಲೇಸರ್ ಶೋ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ವೀರ ರಾಣಿ ಕಿತ್ತೂರ ಚನ್ನಮ್ಮ ನಾಟಕ:
ಬಿ.ಎಚ್.ಪಾಟೀಲ ಪ್ರೌಢಶಾಲೆಯ ಆವರಣದಲ್ಲಿ ಫೆ.10 ರಂದು ರಾತ್ರಿ 9 ಗಂಟೆಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನ ನಡೆಯಲಿದೆ. ಧಾರವಾಡದ ರಂಗಾಯಣ ತಂಡದಿಂದ ರಚಿಸಲಾದ ಈ ನಾಟಕವು ರಾಣಿ ಚೆನ್ನಮ್ಮಳ ಸಾಹಸ ಯುದ್ಧ ಕಲೆ ಹಾಗೂ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ತೆರೆದಿಡಲಿದೆ. ಬ್ರೀಟೀಷರ ಸೊಕ್ಕಡಗಿಸಿ ಸ್ವತಂತ್ರ್ಯದ ಕಹಳೆ ಊದುವಲ್ಲಿ ಚೆನ್ನಮ್ಮನ ಸಾಹಸ ಗಾಥೆ ಬಿಂಬಿಸುವ ನಾಟಕ ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ಕಲಾವಿದರು ಸಜೀವ ಆನೆ, ಕುದುರೆ, ಒಂಟೆಗಳೊಂದಿಗೆ ನಾಟಕವು ಜನಮನ ರಂಜಿಸಲಿದೆ.
ಗೋಷ್ಠಿಗಳು:
ಐತಿಹಾಸಿಕ ಲಕ್ಕುಂಡಿ ಉತ್ಸವದಲ್ಲಿ ಪ್ರಮುಖವಾಗಿ ನಾಲ್ಕು ಗೋಷ್ಟಿಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.11 ರಂದು ಬೆ 10 ಗಂಟೆಗೆ ಲಕ್ಕುಂಡಿಯ ಇತಿಹಾಸ ಕುರಿತು ವಿಚಾರ ಗೋಷ್ಟಿ ಜರುಗಲಿದೆ. ಕನ್ನಡ ಪ್ರಭ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಮಲ್ಲಿಕಾರ್ಜುನ ಸಿದ್ಧಣ್ಣವರ ಗೋಷ್ಟಿ ಉದ್ಘಾಟಿಸಿ ಆಶಯ ನುಡಿಗಳನ್ನಾಡಲಿದ್ದಾರೆ. ಡಾ. ಎಸ್.ವೈ.ಸೋಮಶೇಖರ, ಡಾ. ಅಪ್ಪಣ್ಣ ಹಂಜೆ ವಿಷಯ ಮಂಡಿಸಲಿದ್ದಾರೆ. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ವಿ. ಬಡಿಗೇರ ಕವಿಗೋಷ್ಟಿಯ ಆಶಯ ನುಡಿಗಳನ್ನಾಡುವರು. ಹಿರಿಯ ವಿಮರ್ಶಕ ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸುವ ಈ ಗೋಷ್ಠಿಯಲ್ಲಿ ಜಿಲ್ಲೆಯ 15 ಕ್ಕೂ ಅಧಿಕ ಕವಿಗಳು ಗೋಷ್ಟಿಯಲ್ಲಿ ಪಾಲ್ಗೊಳ್ಳುವರು. ಫೆ.12 ರಂದು ಬೆ.10 ಗಂಟೆಗೆ ಕೃಷಿ ಗೋಷ್ಠಿ ಜರುಗಲಿದ್ದು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಅಶೋಕ ಆಲೂರ ಆಶಯನುಡಿಗಳನ್ನಾಡುವರು. ಕೃಷಿ ಪಂಡಿತ ಪ್ರಶಸ್ತಿ ಪುರಸ್ಕøತ ಈಶ್ವರಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸುವರು. ಕೃಷಿ ಸಾಧಕಿ ಕವಿತಾ ಮಿಶ್ರಾ, ಪ್ರಗತಿ ಪರ ಕೃಷಿಕ ನಾಗರಾಜ ಕುಲಕರ್ಣಿ ವಿಷಯ ಮಂಡಿಸಲಿದ್ದಾರೆ. ಮ. 12 ಗಂಟೆಗೆ ಖ್ಯಾತ ಹೃದ್ರೋಗ ತಜ್ಞೆ ವಿಜಯಲಕ್ಷ್ಮೀ ಬಾಳೇಕುಂದ್ರಿ ಆಶಯ ನುಡಿಗಳನ್ನಾಡುವರು. ಲಕ್ಕುಂಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಗದಗಿನ ಅಧ್ಯಕ್ಷತೆ ವಹಿಸುವರು. ಸಂಶೋಧಕಿ ಡಾ. ಸಂಧ್ಯಾ ವಿ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಪಾಟೀಲ ಉಪನ್ಯಾಸ ನೀಡುವರು. ನಗರಸಭೆ ಅಧ್ಯಕ್ಷೆ ಉಷಾ ದಾಸರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
Also read: ಟರ್ಕಿಯಲ್ಲಿ ಮತ್ತೆ ಪ್ರಬಲ ಭೂಕಂಪನ: ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ
ಸಾಂಸಕೃತಿಕ ಕಾರ್ಯಕ್ರಮಗಳು:
ಫೆ.11 ರಂದು ರಾತ್ರಿ 10 ಗಂಟೆಗೆ ಸೋಜಿಗದ ಸೂಜಿ ಮಲ್ಲಿಗೆ, ಕಾಂತಾರದ ಶೃಂಗಾರ ಸಿರಿ ಹಾಡಿಗೆ ಧ್ವನಿ ನೀಡಿದ ಖ್ಯಾತ ಗಾಯಕಿ ಕು.ಅನನ್ಯ ಭಟ್ ಮತ್ತು ತಂಡದವರಿಂದ ರಸಮಂಜರಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ನಲ್ಲಿ ಮೆಚ್ಚುಗೆಗೆ ಪಾತ್ರವಾದ ಗದುಗಿನ ಕಾ.ವೆಂ.ಶ್ರೀ ತಂಡದಿಂದ ಯಕ್ಷಗಾನ, ಭಗವದ್ಗೀತೆ ರೂಪಕ ಮೂಡಿಬರಲಿದೆ. ಅತ್ತಿಮಬ್ಬೆ ನಾಟಕ, ಸರಿಗಮಪ ತಂಡದ ಜ್ಞಾನೇಶ, ಮೆಹಬೂಬ ಸಾಬ ಅವರಿಂದ ಜುಗಲ್ ಬಂದಿ, ಮಿಮಿಕ್ರಿ ಗೋಪಿ ಹಾಗೂ ಕಾರ್ತಿಕ ಪತ್ತಾರ ಅವರಿಂದ ಹಾಸ್ಯ ಕಾರ್ಯಕ್ರಮ, ಕ್ಲಾಸಿಕಲ್ ಇವೆಂಟ್, ದೀಪನೃತ್ಯ, ಜನಮನ ಸೆಳೆಯಲಿವೆ. ಫೆ.12 ರಂದು ಸಂಜೆ 4 ರಿಂದ ವಿವಿಧ ಕಲಾ ಪ್ರಕಾರಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಹಲವು ಕನ್ನಡ ಪ್ರಸಿದ್ಧ ಗಾಯನಗಳ ಮುಖಾಂತರ ಖ್ಯಾತಿಗೊಂಡ ಮುಂಬೈನ್ ಪ್ರಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಅವರಿಂದ ಅದ್ಭುತ ರಸಮಂಜರಿ ಕಾರ್ಯಕ್ರಮ ಮೂಡಿಬರಲಿದೆ. ಉಮೇಶ ಕಿನ್ನಾಳ ಹಾಗೂ ತಂಡದಿಂದ ಹಾಸ್ಯ ಕಾರ್ಯಕ್ರಮ, ಪದ್ಮಶ್ರೀ ವೆಂಕಟೇಶ ಕುಮಾರ್ ಅವರಿಂದ ಹಿಂದೂಸ್ತಾನಿ ಸಂಗೀತ, ಕನ್ನಡದ ಪುಟಾಣಿ ಕೋಗಿಲೆ ಮಹನ್ಯಾ ಪಾಟೀಲ ಅವರಿಂದ ರಸಮಂಜರಿ ಕಾರ್ಯಕ್ರಮ, ಪ್ರಭಾತ ಕಲಾತಂಡದಿಂದ ನೃತ್ಯ ರೂಪಕ ನೆರೆದ ಜನರನ್ನು ಮನರಂಜಿಸಲಿವೆ. ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗುವುದು. ಕೃಷಿ, ಮಹಿಳಾ, ಕೈಮಗ್ಗ, ನೈರ್ಮಲ್ಯ ಇಲಾಖೆಗಳ ಮಳಿಗೆಗಳು ಕಾರ್ಯನಿರ್ವಹಿಸಲಿವೆ.
ಸಮಾರೋಪ :
ಫೆ.12 ರ ಸಂಜೆ 5.30 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಘನ ಉಪಸ್ಥಿತಿ ವಹಿಸುವರು. ಸಚಿವರುಗಳಾದ ಬಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಬೈರತಿ ಬಸವರಾಜ ಗೌರವ ಉಪಸ್ಥಿತಿ ವಹಿಸುವರು. ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಸಮಾರೋಪ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಪ್ರಮುಖ ಅಧಿಕಾರಿಗಳು ಹಾಜರಿರುವರು.
ಉಚಿತ ಸಾರಿಗೆ ವ್ಯವಸ್ಥೆ ಗದಗ ನಗರದಿಂದ ಲಕ್ಕುಂಡಿ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರೆಲ್ಲರಿಗೂ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕೆ.ಎಸ್.ಆರ್.ಟಿ.ಸಿಯ 10 ಬಸ್ ಗಳು ಗದಗ ಹೊಸ ಹಾಗೂ ಹಳೆಯ ಬಸ ನಿಲ್ದಾಣಗಳಿಂದ ನಿರಂತರವಾಗಿ ಸಂಚರಿಸಲಿದ್ದು ಉತ್ಸವಕ್ಕೆ ಆಗಮಿಸುವ ಕಲಾವಿದರು, ಅತಿಥಿಗಳು ಹಾಗೂ ಸಾರ್ವಜನಿಕರೆಲ್ಲರಿಗೂ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಾರ್ವಜನಿಕರು ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಸಚಿವ ಸಿ.ಸಿ. ಪಾಟೀಲ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪಂಚಾಯತ ಸಿ.ಇ.ಓ. ಡಾ.ಸುಶೀಲಾ ಬಿ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post