ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಕಲಿಯುವ ಜೊತೆಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿತು ಜೀವನದಲ್ಲಿ ಉನ್ನತ ಮಟ್ಟಕ್ಕೇರಬೇಕಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಖ್ಯಾತ ವಿಜ್ಞಾನಿ ಪ್ರೊ.ಕೆ.ಪಿ.ಜೆ.ರೆಡ್ಡಿ ಕರೆ ನೀಡಿದರು.
ಶ್ರೀ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ’ವಿವೇಕೋತ್ಸವ – 2020’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಪ್ರತಿಭೆ ಅಡಗಿರುತ್ತದೆ. ಪೋಷಕರು ಅದನ್ನು ಗುರುತಿಸಿ ಉತ್ತಮ ಶಾಲೆಗೆ ಸೇರಿಸಿದಲ್ಲಿ ಅದಕ್ಕೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತು ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಹಂತದಲ್ಲಿಯೇ ಒಂದು ನಿರ್ಧಿಷ್ಟ ಗುರಿಯನ್ನು ಹೊಂದುವಂತೆ ಶಿಕ್ಷಕರು ಮತ್ತು ಪೋಷಕರು ಅವರಲ್ಲಿ ಆಸಕ್ತಿ ತುಂಬಬೇಕಾಗಿದೆ. ಪ್ರತಿಯೊಬ್ಬರೂ ಕೂಡ ಎಷ್ಟೆ ಎತ್ತರಕ್ಕೆ ಬೆಳೆದರೂ ಕೂಡ ಅಕ್ಷರ ಕಲಿತ ಶಾಲೆ ಮತ್ತು ಜೀವನ ರೂಪಿಸಿದ ಊರನ್ನು ಎಂದಿಗೂ ಮರೆಯಬಾರದು. ಅದರಂತೆ ನಾನು ವಿಶ್ವದಾದ್ಯಂತ ವಿವಿಧ ಸಂಶೋಧನೆಯಲ್ಲಿ ಖ್ಯಾತಿ ಪಡೆದರೂ ಕೂಡ ತಾಯ್ನಾಡಿಗೆ ಏನಾದರೂ ಕೊಡುಗೆ ಕೊಡಬೇಕು ಎಂಬ ಹಂಬಲವಿದೆ ಎಂದರು.

ನಗರ ಠಾಣೆಯ ಪಿಎಸ್‌ಐ ವಿ. ಅವಿನಾಶ್ ಮಾತನಾಡಿ, ಈ ಭೂಮಿಯ ಮೇಲೆ ಜನ್ಮ ಪಡೆದ ಪ್ರತಿಯೊಬ್ಬ ಮಗುವಿನಲ್ಲೂ ಒಂದೊಂದು ಪ್ರತಿಭೆ ಇದ್ದೇ ಇರುತ್ತೆ. ಅಕ್ಷರ ಕಲಿಕೆಯಲ್ಲಿ ಹಿಂದುಳಿದಿರಬಹುದು. ಆದರೆ ಅವರಲ್ಲಿನ ಪ್ರತಿಭೆಗೆ ಸೂಕ್ತ ವೇದಿಕೆ ದೊರೆತಲ್ಲಿ ಇಡೀ ವಿಶ್ವವನ್ನೇ ಜಯಿಸಲು ಮುಂದಾಗುತ್ತಾರೆ. ಆದ್ದರಿಂದ ಶಾಲೆಯಲ್ಲಿ ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸಮಾಜಕ್ಕೆ ಪೂರಕ ಶಕ್ತಿಗಳನ್ನು ರೂಪಿಸಬೇಕಾಗಿದೆ ಎಂದರು.

ಇದೇ ವೇಳೆ ಮಹಿಳಾ ಸಾಧಕಿ ಡಾ.ಸಿ. ಗಂಗಲಕ್ಷ್ಮಮ್ಮ, ಕೆಎಎಸ್ ಅಧಿಕಾರಿಣಿ ಸ್ಮಿತ ಹಾಗೂ ನಿವೃತ್ತ ಯೋಧ ಎಂ.ಎಲ್. ಶಾಂತಪ್ಪ ಅವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಆಡಳಿತಾಧಿಕಾರಿ ಟಿ.ಎನ್. ರಾಮಪ್ಪ, ಕಾರ್ಯದರ್ಶಿ ಸಿ.ಎನ್. ನಂಜೇಗೌಡ, ಮುಖ್ಯ ಶಿಕ್ಷಕಿ ರಾಧಮ್ಮ, ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲರಾದ ಕೆ.ವಿ. ಸತ್ಯನಾರಾಯಣ್, ಉಪನ್ಯಾಸಕರಾದ ರವಿಮೋಹನ್ ರೆಡ್ಡಿ, ಎ. ರಾಮಚಂದ್ರಪ್ಪ, ಸಂಕೇತ್ ಶ್ರೀರಾಮ್, ಮಧುಕರ್ ಸೂಡ, ಟಿ.ಸಿ. ದೊಡ್ಡೇಗೌಡ, ಬಿ. ಮಂಜುನಾಥ್, ನಿರ್ದೇಶಕರಾದ ವೇದಾವತಿ, ಉಮಾದೇವಿ, ಸಿ.ಎನ್.ಪ್ರಭಾಕರ್, ಶಿಕ್ಷಕರಾದ ಕೃಷ್ಣಕುಮಾರ್, ಧನಂಜಯ್, ನರಸಿಂಹಮೂರ್ತಿ, ಮುಖಂಡರಾದ ಬಸಪ್ಪರೆಡ್ಡಿ, ವರಲಕ್ಷ್ಮಿ, ಪ್ರಭಾರ್ಕ, ಹಂಪಸಂದ್ರ ದೇವು, ಜಗದೀಶ್, ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093





Discussion about this post