ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಹಾಲು ಉತ್ಪಾದಕರು ಹಾಲು ಉತ್ಪಾದಕರ ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಸಹಕಾರ ಸಂಘಗಳನ್ನು ಉಳಿಸಿ ಬೆಳೆಸಬೇಕು ಎಂದು ಮಾಜಿ ಶಾಸಕಿ ಎನ್. ಜ್ಯೋತಿರೆಡ್ಡಿ ಹಾಲು ಉತ್ಪಾದಕರಿಗೆ ಕರೆ ನೀಡಿದರು.
ಅವರು ತಾಲೂಕಿನ ಬೇವಿನಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿನ ಕಂಬಾಲಹಳ್ಳಿ ಗ್ರಾಮದಲ್ಲಿನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಬಿಜೆಪಿ ಪಕ್ಷದ ಬೆಂಬಲಿತರಾದ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ನಿರ್ದೇಶಕಿಯರನ್ನು ಅಭಿನಂದಿಸಿ ಮಾತನಾಡುತ್ತಿದ್ದರು.
ತಾಲೂಕಿನಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಬಹುತೇಕ ರೈತರ ಕೊಳವೆ ಬಾವಿಗಳು ಬತ್ತಿ ಹೋಗಿವೆ ಬದುಕಿಗಾಗಿ ರೈತರು ಲಭ್ಯವಿರುವ ಅಲ್ಪ, ಸ್ವಲ್ಪ ನೀರಿನಲ್ಲಿ ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕು ಮತ್ತು ರೈತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರಲ್ಲದೆ ಸುಮಾರು 25 ವರ್ಷಗಳ ಹಿಂದೆ ನಾನು ಶಾಸಕಿಯಾಗಿದ್ದ ಸಂದರ್ಭದಲ್ಲಿ ಈ ಭಾಗದ ರೈತ ಮಹಿಳೆಯರ ಒತ್ತಾಸೆಯಿಂದ ಪ್ರಾರಂಭವಾದ ಕಂಬಾಲಹಳ್ಳಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಇಲ್ಲಿಯವರೆಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿರುವುದು ಶ್ಲಾಘನೀಯ ವಿಚಾರವೆಂದು ಮಾಜಿ ಶಾಸಕಿ ಜ್ಯೋತಿರೆಡ್ಡಿ ಹರ್ಷ ವ್ಯಕ್ತಪಡಿಸಿದರು.
ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿವಿ.ಗೋಪಿನಾಥ್ ಮಾತನಾಡಿ, ರೈತರು ಕಾಲಕಾಲಕ್ಕೆ ತಮ್ಮ ಜಾನುವಾರುಗಳನ್ನು ಪಶು ವೈದ್ಯರಿಂದ ಪಶುಗಳ ಆರೋಗ್ಯವನ್ನು ತಪಾಸಣೆ ಮಾಡಿಸಬೇಕು ಇದರಿಂದಾಗಿ ರಾಸುಗಳು ಕಾಲುಬಾಯಿ ಮತ್ತು ಇತರೆ ರೋಗಗಳಿಗೆ ತುತ್ತಾಗುವುದನ್ನು ತಡೆಗಟ್ಟಬಹುದು ಎಂದು ರೈತರಿಗೆ ಕಿವಿಮಾತು ಹೇಳಿದರು.
ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಯಲಕ್ಷ್ಮಮ್ಮ, ಉಪಾಧ್ಯಕ್ಷೆ ಲಕ್ಷ್ಮೀದೇವಮ್ಮ, ಸಂಘದ ನಿರ್ದೇಶಕಿಯರಾದ ಅರುಣಮ್ಮ, ಶೋಭಾ, ಪಾರ್ವತಮ್ಮ, ಲಕ್ಷ್ಮೀದೇವಿ, ರತ್ನಮ್ಮ, ಜಯಮ್ಮ, ಶಾರದಮ್ಮ, ಮುಖಂಡರಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಶೋಭ, ಶ್ರೀರಾಮಪ್ಪ, ನಾರಾಯಣಗೌಡ, ನಿಜಲಿಂಗಪ್ಪ, ಉಮಾಶಂಕರ್, ಸೋಮೇಶಪ್ಪ, ವಿಜಯ್ ಕುಮಾರ್, ಬಸವರಾಜು ಮುಂತಾದವರು ಉಪಸ್ಥಿತರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post