ಗೌರಿಬಿದನೂರು: ತೊಂಡೇಬಾವಿಯ ಜೆ.ಕಾಂತರಾಜು ಎರಡನೇ ಬಾರಿ ಕೋಚಿಮುಲ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇ 6 ರಂದು ತಾಲೂಕಿನಿಂದ ಕೋಚಿಮುಲ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂತರಾಜು ವಿರುದ್ಧ ಎದುರಾಳಿಯಾಗಿ ತಾಲೂಕಿನಿಂದ ಚಿಮಕಲಹಳ್ಳಿ ಶ್ರೀನಿವಾಸರೆಡ್ಡಿ, ಚರಕಮಟ್ಟೆನಹಳ್ಳಿಯ ಲಿಂಗಪ್ಪ, ಚಿಕ್ಕಕುರುಗೋಡಿನ ಲಂಕಪ್ಪ ನಾಮಪತ್ರ ಸಲ್ಲಿಸಿದ್ದರು.
ಈ ಮೂವರು ಕೋಲಾರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಮ್ಮ ನಾಮಪತ್ರದ ಉಮೇದುವಾರಿಕೆಯನ್ನು ವಾಪಸ್ಸು ಪಡೆದಿದ್ದಾರೆ. ಬಳಿಕ ಕೊನೆಯದಾಗಿ ಜೆ. ಕಾಂತರಾಜು ರವರ ನಾಮಪತ್ರ ಮಾತ್ರ ಅಂತಿಮವಾಗಿತ್ತು. ಉಪವಿಭಾಗಾಧಿಕಾರಿಗಳು ಗೌರಿಬಿದನೂರು ತಾಲೂಕಿನ ಕೋಚಿಮುಲ್ ನಿರ್ದೇಶಕರಾಗಿ ಜೆ. ಕಾಂತರಾಜು ಅವರನ್ನು ಅವಿರೋಧವಾಗಿ ಘೋಷಣೆ ಮಾಡಿದ್ದಾರೆ.
ಆಯ್ಕೆಯಾದ ಬಳಿಕ ಮಾತನಾಡಿರುವ ಕಾಂತರಾಜು, ಕಳೆದ ಅವಧಿಯಲ್ಲಿ ಕೋಚಿಮುಲ್ ಅಧ್ಯಕ್ಷರಾಗಿ ಅವಿಭಜಿತ ಜಿಲ್ಲೆಯಲ್ಲಿ ನಾವು ಮಾಡಿರುವ ಜನಪರ ಕಾರ್ಯಗಳು ಈ ದಿನ ಶ್ರೀರಕ್ಷೆಯಾಗಿವೆ. ತಾಲೂಕಿನಲ್ಲಿರುವ ಪ್ರತಿಯೊಂದು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅವಶ್ಯಕವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧನಾಗಿರುತ್ತೇನೆ. ಅಲ್ಲದೆ ರೈತರ ಹಾಗೂ ಹೈನುಗಾರಿಕೆದಾರರ ಹಿತಕ್ಕಾಗಿ ಹಾಲು ಒಕ್ಕೂಟವನ್ನು ಅಭಿವೃದ್ಧಿ ಪಡಿಸಲಾಗುವುದು ಎಂಳಿದರು.
ಇದೇ ಸಂದರ್ಭದಲ್ಲಿ ಅವಿರೋಧ ಆಯ್ಕೆಗಾಗಿ ಶ್ರಮಿಸಿದ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ನಿರ್ದೇಶಕರುಗಳಿಗೆ ಅಭಿನಂದಿಸಿದರು.
ತೊಂಡೇಬಾವಿ ರೈಲ್ವೆ ನಿಲ್ದಾಣದ ವೃತ್ತದಲ್ಲಿ ಕಾಂತರಾಜು ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡದರು.
ಮುಖಂಡರಾದ ಬಿ.ಪಿ. ಅಶ್ವತ್ಥ ನಾರಾಯಣಗೌಡ, ಪಿ.ಎನ್. ಶಿವಶಂಕರರೆಡ್ಡಿ, ಶ್ರೀನಿವಾಸರೆಡ್ಡಿ, ಉಮೇಶ್ ಬಾಬು, ಟಿ.ಕೆ. ಶ್ರೀನಿವಾಸಗೌಡ, ಸಿದ್ದೇಗೌಡ, ಆರ್.ಎನ್. ವೆಂಕಟೇಶ್ ರೆಡ್ಡಿ, ಶಿವಾರೆಡ್ಡಿ, ಹರಿಬಾಬು, ನಾಗರಾಜು, ನರಸರೆಡ್ಡಿ, ಇಬ್ರಾಹಿಂ, ಸೋಮು, ಆದೇಶ ಜೈನ್, ನವೀನ್, ಶಿವು, ಲೋಕೇಶ್ ಭಾಗವಹಿಸಿದ್ದರು.
(ವರದಿ: ಅಜಯ್ ಬಿ.ಎಂ., ಗೌರಿಬಿದನೂರು)
Discussion about this post