ಗೌರಿಬಿದನೂರು: ತೊಂಡೇಬಾವಿ ಭಾಗವನ್ನು ನೂತನ ತಾಲೂಕಿಗೆ ಸೇರ್ಪಡೆ ಮಾಡುವುದನ್ನು ಖಂಡಿಸಿ ಪ್ರತಿಭಟನಾ ಸಭೆ ನಡೆಸಿ ಚರ್ಚಿಸಲಾಯಿತು.
ಸಭೆಯ್ ನೇತೃತ್ವ ವಹಿಸಿದ್ದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ಪ್ರಸ್ತುತ ವಿದ್ಯಮಾನಗಳಲ್ಲಿ ಮಂಚೇನಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿಸಲು ಆ ಭಾಗದ ಜನತೆ ಆಶಿಸಿರುವ ಕಾರಣ ಸರ್ಕಾರವು ನೂತನ ತಾಲೂಕು ಕೇಂದ್ರವನ್ನಾಗಿಸಲು ಚಿಂತಿಸಿರುವುದು ನಮ್ಮದೇನು ಅಡ್ಡಿಯಿಲ್ಲ. ಆದರೆ ರಾಜಕೀಯ ದುರುದ್ಧೇಶದಿಂದ ಹಾಗೂ ಸ್ವಾರ್ಥಕ್ಕಾಗಿ ಅನರ್ಹ ಶಾಸಕ ಡಾ.ಕೆ. ಸುಧಾಕರ್ ಅವರು ವಿನಾ ಕಾರಣ ತೊಂಡೇಬಾವಿ ಹೋಬಳಿಯ ಹಲವು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹಳ್ಳಿಗಳನ್ನು ಹೊಸ ತಾಲೂಕಿಗೆ ಸೇರ್ಪಡೆ ಮಾಡಲು ಹುನ್ನಾರ ಮಾಡಿರುವುದು ಸರಿಯಲ್ಲ ಎಂದರು.
ಇಂತಹ ನಡೆಯನ್ನು ಸಹಿಸಲು ಈ ಭಾಗದ ಜನತೆ ಸಿದ್ಧರಿಲ್ಲ. ಕೇವಲ ಚುನಾವಣೆಯಲ್ಲಿ ಮತದಾರರನ್ನು ಓಲೈಸಿಕೊಳ್ಳುವ ಹಾಗೂ ಅಧಿಕಾರದ ದಾಹದಿಂದ ಈ ರೀತಿಯ ಅವೈಜ್ಞಾನಿಕ ನಿರ್ಧಾರಗಳಿಗೆ ಮುಂದಾಗಿರುವುದು ಸರಿಯಲ್ಲ. ಅತಂತ್ರ ಸ್ಥಿತಿಯಲ್ಲಿರುವ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿ ಈ ರೀತಿಯ ಕುತಂತ್ರಕ್ಕೆ ಮುಂದಾಗಿರುವುದು ಸರಿಯಲ್ಲ. ಕೂಡಲೇ ಈ ಪ್ರಸ್ತಾವನೆಯನ್ನು ಕೈ ಬಿಡದಿದ್ದಲ್ಲಿ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಸಮಸ್ಯೆ ಪರಿಹಾರವಾಗದಿದ್ದಲ್ಲಿ ಸಿಎಂ ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಬಿ.ಪಿ. ಅಶ್ವತ್ಥ ನಾರಾಯಣಗೌಡ ಮಾತನಾಡಿ, ಸುಮಾರು ನಾಲ್ಕಾರು ದಶಕಗಳಿಂದಲೂ ತೊಂಡೇಬಾವಿ ಹೋಬಳಿಯು ಗೌರಿಬಿದನೂರು ತಾಲೂಕಿನಲ್ಲಿ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇದರಿಂದ ಈ ಭಾಗದ ಜನತೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇದರ ನಡುವೆ ರಾಜಕೀಯ ವೈಮನಸ್ಸಿನಿಂದ ಇದನ್ನು ಬೇರ್ಪಡಿಸಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಮಂಚೇನಹಳ್ಳಿಯನ್ನು ಹೊಸ ತಾಲೂಕಾಗಿ ರಚನೆ ಮಾಡುವ ಬಗ್ಗೆ ಈ ಭಾಗದ ಜನತೆಯ ಯಾವುದೇ ಅಡ್ಡಿಯಿಲ್ಲ. ಆದರೆ ತೊಂಡೇಬಾವಿ ಹೋಬಳಿ ವ್ಯಾಪ್ತಿಯಲ್ಲಿನ ಯಾವುದೇ ಗ್ರಾಮವನ್ನು ನೂತನ ತಾಲೂಕಿಗೆ ಸೇರ್ಪಡೆ ಮಾಡಲು ತೀವ್ರ ವಿರೋಧವಿದ್ದು, ಇದಕ್ಕಾಗಿ ಪ್ರತಿಯೊಬ್ಬ ನಾಗರಿಕರೂ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ವಿ. ಮಂಜುನಾಥ್ ಮಾತನಾಡಿ, ಅವಿಭಜಿತ ಕುಟುಂಬದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ಕುಟುಂಬವನ್ನು ಹೊಡೆಯುವ ಹುನ್ನಾರಕ್ಕೆ ಕೈ ಹಾಕಿರುವ ಅನರ್ಹ ಶಾಸಕರ ಕಾರ್ಯ ನಿಜಕ್ಕೂ ಅವೈಜ್ಞಾನಿಕವಾಗಿದೆ. ಇದರಿಂದ ನೆಮ್ಮದಿಯ ಸಂಸಾರವನ್ನು ಹೊಡೆಯುವ ಕಾರ್ಯ ಮಾಡುತ್ತಿದ್ದಾರೆ. ನೂತನ ತಾಲೂಕು ಕೇಂದ್ರವಾದರೆ ಸ್ಥಳೀಯ ಜನತೆ ಅನುಭವಿಸುವ ಸಂಕಷ್ಟಗಳ ಹೆಚ್ಚಾಗುತ್ತವೆ. ಜನಸಾಮಾನ್ಯರು ಸಮಸ್ಯೆಗಳ ಸುಳಿಯಲ್ಲಿ ಒದ್ದಾಡಬೇಕಾಗುತ್ತದೆ. ಆದ್ದರಿಂದ ಪ್ರಸ್ತುತ ಗೌರಿಬಿದನೂರು ತಾಲೂಕು ವ್ಯಾಪ್ತಿಯಲ್ಲಿರುವ ತೊಂಡೇಬಾವಿಯನ್ನು ಮಂಚೇನಹಳ್ಳಿಗೆ ಸೇರಿಸುವ ಬಗ್ಗೆ ತೀವ್ರ ವಿರೋಧವಿದೆ ಎಂದರು.
ಇದೇ ಸಂದರ್ಭದಲ್ಲಿ ಎಲ್ಲಾ ಮುಖಂಡರುಗಳು ತಮ್ಮ ಮನವಿಯನ್ನು ತಹಸೀಲ್ದಾರ್ ಎಚ್. ಶ್ರೀನಿವಾಸ್ ಅವರಿಗೆ ನೀಡಿದರು.
ಸಭೆಯಲ್ಲಿ ಮುಖಂಡರಾದ ಜೆ. ಕಾಂತರಾಜು, ಹನುಮಂತರೆಡ್ಡಿ, ಎಚ್.ಎನ್. ಪ್ರಕಾಶರೆಡ್ಡಿ, ಕೆ.ಎನ್. ಕೇಶವರೆಡ್ಡಿ, ಪಿ.ಎನ್. ಶಿವಶಂಕರರೆಡ್ಡಿ, ಸಿದ್ಧೆಗೌಡ, ಕೃಷ್ಣಪ್ಪ, ನಾರೆಪ್ಪರೆಡ್ಡಿ, ಟಿ.ಕೆ. ಶ್ರೀನಿವಾಸಗೌಡ, ಚಿಕ್ಕಣ್ಣ, ಬಿ.ಆರ್. ಮಹದೇವ್, ಕರೀಂ, ನಾನಾ ಅಬ್ಬಾಸ್, ಸುಮನಾ, ರೇಣುಕಾ, ಗೋಪಾಲ್, ವೇಣು, ಅಶೋಕ್, ಎಂ.ಸಿ. ಗಂಗಪ್ಪ, ವೆಂಕಟೇಶ್, ನವೀನ್, ಅಜಯ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get In Touch With Us info@kalpa.news Whatsapp: 9481252093, 94487 22200
Discussion about this post