ಗೌರಿಬಿದನೂರು: ನಗರದಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ 36 ನೆಯ ಬ್ರಹ್ಮ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಕಳೆದ ಒಂದು ವಾರದಿಂದಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ದೇವಾಲಯದ ಒಳಗಡೆ ಹಾಗೂ ಹೊರಾಂಗಣದಲ್ಲಿ ಹೂವಿನಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜಾ ಕೈಂಕಾರ್ಯಗಳ ಜೊತೆಗೆ ದರ್ಶನಕ್ಕಾಗಿ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಬೆಂಗಳೂರಿನ ಶ್ರೀರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ನಿರ್ದೇಶಕರಾದ ಬೆಳಗೆರೆ ಗೌರಿಶಂಕರ್ ರವರ ನೇತೃತ್ವದಲ್ಲಿ ರಾಮಾಯಣ, ದಶಾವತಾರ ಹಾಗೂ ಶಿವತಾಂಡವ ನೃತ್ಯ ರೂಪಕಗಳನ್ನು ಅದ್ಭುತವಾಗಿ ಪ್ರದರ್ಶನ ಮಾಡಲಾಯಿತು. ಈ ನೃತ್ಯಗಳನ್ನು ಕಂಡ ಭಕ್ತಾಧಿಗಳು ಭಕ್ತಿಧಾರೆಯಲ್ಲಿ ಮಿಂದೆದ್ದರು.
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ನಿರ್ದೇಶಕರಾಗಿ ನಾಟ್ಯಕಲಾ ಸರಸ್ವತಿ ಶ್ರೀನಾಗಶ್ರೀ ರಾಘವೇಂದ್ರ ಭಾಗವಹಿಸಿದ್ದರು. 12 ಮಂದಿ ನೃತ್ಯ ಕಲಾವಿಧರಿದ್ದ ಈ ತಂಡದಲ್ಲಿ ಕೊಳಲು ವಾದಕರಾಗಿ ವರುಣಾ, ಮೃದಂಗ ಚರಣ್, ನಟರಂಗ ವಿಧೂಷಿ ನಿವೇದಿತಾ ಹಾಗೂ ಸಂಗೀತ ಅಕ್ಷತಾ ವಹಿಸಿದ್ದರು. ಈ ತಂಡವು ಇದುವರೆವಿಗೂ ಸುಮಾರು 3 ಸಾವಿರಕ್ಕೂ ಅಧಿಕ ನೃತ್ಯ ಪ್ರದರ್ಶನಗಳನ್ನು ನೀಡಲಾಗಿದೆ.
ಬಳಿಕ ಮಾತನಾಡಿದ ನಿರ್ದೇಶಕರಾದ ಬೆಳಗೆರೆ ಗೌರಿ ನಾಗರಾಜ್, ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ನೃತ್ಯಕಾರರೂ ಕೂಡ ಸಾಕಷ್ಟು ಪರಿಣಿತಿಯನ್ನು ಪಡೆದವರಾಗಿದ್ದು, ಇದುವರೆವಿಗೂ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಕಾರ್ಯಕ್ರಮವನ್ನು ನೀಡಲಾಗಿದೆ. ಇದರಿಂದ ಬರುವ ಸಂಭಾವನೆಯಲ್ಲಿ ಸುಮಾರು 5 ಕ್ಕೂ ಹೆಚ್ಚು ವಿಕಲಚೇತನ ಮಕ್ಕಳ ಜೀವನ ನಿರ್ವಹಣೆ ಮತ್ತು ಶಿಕ್ಷಣಕ್ಕೆ ವ್ಯಯಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post