ಪಣಜಿ: ಈ ದೇಶ ಕಂಡ ಸಜ್ಜನ ರಾಜಕಾರಣಿ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್(63) ವಿಧಿವಶರಾಗಿದ್ದಾರೆ.
ಕ್ಯಾನ್ಸರ್’ನಿಂದ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ವಿಧಿವಶರಾಗಿದ್ದಾರೆ.
ಪರಿಕ್ಕರ್ ಅವರು ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ದೆಹಲಿಯ ಏಮ್ಸ್ ನಿಂದ ಚಿಕಿತ್ಸೆ ಪಡೆದು ವಾಪಸಾಗಿ ಸರ್ಕಾರ ನಡೆಸಿದ್ದರು. ನಿನ್ನೆ ದಿಢೀರ್ ಸುಸ್ತಾಗಿದ್ದರಿಂದ ಅವರಿಗೆ ಮತ್ತೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ದುರ್ದೈವ ವಿಧಿವಶರಾಗಿದ್ದಾರೆ.
ಸರಳ ಸಜ್ಜನ ರಾಜಕಾರಣಿ ಎನಿಸಿಕೊಂಡಿದ್ದ ಪರ್ರಿಕರ್ 1994 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2000 ನೇ ಇಸವಿಯಲ್ಲಿ ಗೋವಾ ಮುಖ್ಯಮಂತ್ರಿಯಾಗಿದ್ದರು. 2005 ರ ವರೆಗೆ ಸೇವೆ ಸಲ್ಲಿಸಿದ್ದರು. 2012 ರಿಂದ 2014 ರ ವರೆಗೆ ಮತ್ತೆ ಮುಖ್ಯಮಂತ್ರಿಯಾಗಿದ್ದರು. 2014 ರಿಂದ 2017 ರ ವರೆಗೆ ರಕ್ಷಣಾ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
ಮಾಪುಸಾದಲ್ಲಿ ಜನಿಸಿದ್ದ ಪರ್ರಿಕರ್ ಅವರು ಸಣ್ಣ ವಯಸ್ಸಿನಲ್ಲೇ ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿ ಬಳಿಕ ರಾಜಕಾರಣ ಆರಂಭಿಸಿದ್ದರು.
ಪರ್ರಿಕರ್ ಅವರ ಪತ್ನಿ ಮೇಧಾ 2001 ರಲ್ಲಿ ನಿಧನ ಹೊಂದಿದ್ದರು. ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ.
Discussion about this post