ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಗಗನವೇ ಗಡಿ ಎನ್ನುವುದು ಸನ್ಯಾಸ ಧರ್ಮದ ಭಾವ. ಇಹ ಬಂಧನಗಳಿಂದ ಶಿಷ್ಯರು ಮುಕ್ತರಾಗಬೇಕು. ಪ್ರತಿಯೊಬ್ಬರ ಜೀವನ ಸೀಮೋಲ್ಲಂಘನೆಯಲ್ಲಿ ಪರಿಸಮಾಪ್ತಿಯಾಗಲಿ. ಇದೇ ಸೀಮೋಲ್ಲಂಘನದ ಸ್ಪಷ್ಟ ಸಂದೇಶ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara Shri ನುಡಿದರು.
ಅನಾವರಣ ಚಾತುರ್ಮಾಸ್ಯ ಸೀಮೋಲ್ಲಂಘನೆಯ ಧರ್ಮಸಭೆಯಲ್ಲಿ ಶ್ರೀಗಳು ಆಶೀವರ್ಚನ ನೀಡಿದರು. ಭಕ್ತರೇ ಮಠಕ್ಕೆ ಶೋಭೆ. ಅಂತೆಯೇ ಚಾತುರ್ಮಾಸ್ಯಕ್ಕೆ ಶೋಭೆ ಬರುವಲ್ಲಿ ಗುರುಗಳಷ್ಟೇ ಶಿಷ್ಯರು ಕೂಡ ಮುಖ್ಯ ಎಂದು ವಿಶ್ಲೇಷಿಸಿದರು.
ಸಾಮಾನ್ಯರು ಅಸಾಮಾನ್ಯರಾಗಲು ನೆರವಾಗುವುದು ಸೀಮೋಲ್ಲಂಘನೆ. ಎಲ್ಲ ಬಂಧನಗಳಿಂದ ಶಿಷ್ಯರು ಮುಕ್ತರಾಗುವಂತಾಗಬೇಕು. ಅದೇ ಸೀಮೋಲ್ಲಂಘನದ ಸಂದೇಶ ಎಂದರು. ನಮ್ಮ ಕರ್ಮಗಳ ಬಂಧನದಲ್ಲಿ ನಾವಿದ್ದೇವೆ. ಅದರಿಂದ ಹೊರಬರುವುದೇ ಸೀಮೋಲ್ಲಂಘನೆ. ಸತ್ವ, ರಜೋ, ತಾಮಸಗುಣಗಳೇ ಸೀಮೆ. ಅವುಗಳನ್ನು ಮೀರಿ ನಾವು ಬೆಳೆಯಬೇಕು ಎಂದು ಆಶಿಸಿದರು.
Also read: ಗಮನಿಸಿ! ಸೆ.21ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಪ್ರದೇಶದಲ್ಲಿ ಕರೆಂಟ್ ಇರಲ್ಲ
ಕಾಲದ ಮಹತ್ವವನ್ನು ಎಲ್ಲರೂ ಅರಿತುಕೊಂಡು ಎಲ್ಲರ ಕಾಲ ಶುಭಕಾಲವಾಗಿ ಮುಂದುವರಿಯಲಿ ಎಂದು ಹಾರೈಸಿದರು. ದೇವರು ಮತ್ತು ಗುರು ನಮ್ಮ ಜೀವನದ ಲಕ್ಷ್ಯ ಮತ್ತು ಮಾರ್ಗ. ಸುಖದಲ್ಲಿರುವಾಗ ಯುಗವೂ ಕ್ಷಣವಾಗುತ್ತದೆ. ದುಃಖದಲ್ಲಿರುವಾಗ ಕ್ಷಣವೂ ಯುಗವಾಗುತ್ತದೆ. ಆದರೆ 60 ದಿನಗಳ ಈ ಹಬ್ಬ ಯಾರಿಗೂ ಧೀರ್ಘ ಅನಿಸಿಲ್ಲ. ಈ ಸಂಪ್ರದಾಯವನ್ನು ಸಾವಿರಾರು ಶಿಷ್ಯಭಕ್ತರು ಆಸ್ವಾದನೆ ಮಾಡಿದ್ದಾರೆ ಎಂದರು. ಅನಾವರಣ ಮತ್ತು ಕಾಲಪ್ರವಚನ ಸರಣಿ ಎರಡೂ ಚಾತುರ್ಮಾಸ್ಯದ ಬಳಿಕವೂ ಮುಂದುವರಿಯಲಿದೆ ಎಂದು ಹೇಳಿದರು. ಜೌತಿಷ ಮತ್ತು ಕಾಲ, ಆಯುರ್ವೇದ ಮತ್ತು ಕಾಲ ಹಾಗೂ ಧರ್ಮಶಾಸ್ತ್ರ ಮತ್ತು ಕಾಲದ ಸಂಬಂಧದ ಪ್ರವಚನ ಮುಂದುವರಿಯಲಿದೆ ಎಂದರು.
ಇಂದಿನ ಅನಾವರಣ ಎಲ್ಲ ಅನಾವರಣಗಳ ಮುಕುಟಮಣಿ. ಜಗತ್ತಿಗೆ ರಾಮನನ್ನು ಅನಾವರಣ ಮಾಡಿದವರು ಅಗಸ್ತ್ಯರು. ಅವರು ಅರ್ಚಿಸುತ್ತಿದ್ದ ಷಡ್ವಿಗ್ರಹಗಳನ್ನು ಪೂಜಿಸುತ್ತಿದ್ದರು. ಅವುಗಳನ್ನು ವರದಾಖ್ಯರಿಗೆ ಅವುಗಳನ್ನು ನೀಡಿದ್ದರು ಎನ್ನುವುದನ್ನು ಹವ್ಯಕ ಉತ್ಪತ್ತಿಯ ಇತಿಹಾಸ ಕೃತಿಯಲ್ಲಿ 33ನೇ ರಾಘವೇಶ್ವರರು ಉಲ್ಲೇಖಿಸಿದ್ದನ್ನು ಶ್ರೀಗಳು ವಿವರಿಸಿದರು.
ಕೆಕ್ಕಾರು ಹಾಗೂ ರಾಮಚಂದ್ರಾಪುರ ಮಠ ವಿಲೀನವಾದಾಗ ಮೂರು ವಿಗ್ರಹಗಳು ಕೆಕ್ಕಾರಿನಲ್ಲೇ ಉಳಿದವು. ಇವು ಅತ್ಯಾಕರ್ಷಕ. ಕೆಕ್ಕಾರುಮಠದ ರಾಮಮೂರ್ತಿಗೆ ಜ್ಞಾನಮುದ್ರೆ ಹೃದಯದಲ್ಲಿದೆ. ಪರಮಾತ್ಮನ ಜತೆಗೆ ಜೀವಾತ್ಮ ಸೇರಬೇಕು ಎನ್ನುವುದು ಜ್ಞಾನಮುದ್ರೆಯ ಸಂಕೇತ. ಇದು ಜೀವನದ ಧನ್ಯತೆ, ಪರಿಪೂರ್ಣತೆಯನ್ನು ಹೇಳುವಂಥದ್ದು. ಜೀವ- ದೇವ ಇರುವ ಹೃದಯದಲ್ಲಿ ಈ ಮುದ್ರೆ ಇದೆ.
ಲಕ್ಷ್ಮಣನ ಕೈಯಲ್ಲಿ ಚಾಮರವೂ ಇದೆ; ಧನಸ್ಸೂ ಇದೆ. ಲಕ್ಷ್ಮಣ ಇಲ್ಲಿ ಸೇವಕ ಹಾಗೂ ಸೈನಿಕ. ಇಂಥ ಅಪೂರ್ವ ವಿಗ್ರಹಗಳ ಅನಾವರಣ ಇಂದು ಆಗಿರುವುದು ಅರ್ಥಪೂರ್ಣ. ಶಿಷ್ಯರು ಆ ಭಾವದಿಂದ ಕೆಕ್ಕಾರು ಮಠದ ರಾಮನನ್ನು ನೋಡಬೇಕು ಎಂದು ಬಣ್ಣಿಸಿದರು.
ನಮ್ಮ ವ್ಯವಸ್ಥೆ ಅದನ್ನು ಅಷ್ಟು ಶದ್ಧಾಭಕ್ತಿಯಿಂದ ನಡೆಸಿಕೊಂಡು ಹೋಗಬೇಕು ಎನ್ನುವುದು ಇದರ ಆಶಯ. ಮುಂದೆ ಯಾವ ಸಂದರ್ಭ ಇದೆಯೋ ಎನ್ನುವುದನ್ನು ಶಂಕರರೇ ನಿರ್ಧರಿಸಬೇಕು. ತುಂಬು ಕಾಳಜಿ, ಮುತುವರ್ಜಿಯಿಂದ ಇದನ್ನು ನಿರ್ವಹಿಸಿಕೊಂಡು ಹೋಗಬೇಕು ಎಂದು ಸೂಚಿಸಿದರು. ಈ ನವರಾತ್ರಿಯಲ್ಲಿ ಪಟ್ಟಾಭಿರಾಮ ಹಾಗೂ ತಪೋಭಿರಾಮ ಪರಸ್ಪರ ಸಂಧಿಸಲಿದ್ದಾರೆ. ಅಲ್ಲಿ ದೊಡ್ಡ ಕೌತುಕ ಸಂಭವಿಸಬಹುದು ಎಂಬ ನಿರೀಕ್ಷೆ ಇದೆ ಎಂದರು. ಮುಕ್ತಿಸದೃಶ ಬದುಕು ಪಟ್ಟಾಭಿರಾಮನ ಸಂದೇಶ. ತಪೋಭಿರಾಮ ಮುಕ್ತಿಯ ಸಾಧನವನ್ನು ನೀಡುತ್ತಾನೆ ಎಂದು ಹೇಳಿದರು.
ಕಾಲ ಪ್ರವಚನ ಸರಣಿಗೆ ನಾವು ಕೇವಲ ಸಾಕ್ಷಿಗಳಷ್ಟೇ ಆಗಿದ್ದೆವು. ಭಗವತ್‍ಪ್ರೇರಣೆಯಿಂದ ಜೌತಿಷದ ಪಾಠ ನಡೆದಿದೆ. ಅದು ಜೀವನಕ್ಕೆ ಸಲ್ಲುವಂತದ್ದು. ಅತ್ಯಂತ ಆಪ್ಯಾಯಮಾನವಾದದ್ದು ಎಂದರು.
ಕೆಕ್ಕಾರು ರಾಮದೇವರ ಮಹತಿಯನ್ನು ಶ್ರೀಗಳು ಅನಾವರಣಗೊಳಿಸಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಪದಾಧಿಕಾರಿಗಳಾದ ಹೇರಂಭ ಶಾಸ್ತ್ರಿ, ಪ್ರಸನ್ನ ಉಡುಚೆ, ಜಿ.ಎಸ್.ಹೆಗಡೆ, ವಿವಿಧ ಮಂಡಲಗಳ ಅಧ್ಯಕ್ಷರಾದ ಸುಬ್ರಾಯ ಭಟ್ ಮುರೂರು, ಆರ್.ಜಿ.ಹೆಗಡೆ ಹೊಸಾಕುಳಿ, ಉದಯಶಂಕರ ನೀರ್ಪಾಜೆ, ಕೃಷ್ಣಮೂರ್ತಿ ಮಾಡಾವು, ಮುರಳಿ ಗೀಜಗಾರ್, ವಿವಿವಿ ಕೇಂದ್ರೀಯ ಸಮಿತಿ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಅಧ್ಯಕ್ಷ ಎಸ್.ಎಸ್.ಹೆಗಡೆ, ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಚಾತುರ್ಮಾಸ್ಯ ಸೇವಾಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಶ್ರೀಕಾರ್ಯದರ್ಶಿ ಮಧು ಜಿ.ಕೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಹೆಗಡೆ ಮತ್ತು ಬಿಂದು ಅವಧಾನಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post