ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಕನ್ನಡ ಪದವನ್ನು ಹೆಚ್ಚು ಹೆಚ್ಚಾಗಿ ಬಳಸಿ ಕನ್ನಡ ಅಭಿಮಾನ ಮೆರೆಯೋಣ. ನಮ್ಮ ದೇಶ, ಭಾಷೆ, ಸಂಸ್ಕೃತಿಯ ಒಲವು ಬೆಳೆಸಿಕೊಂಡು ಸ್ವಾಭಿಮಾನ ಮೆರೆಯೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 33ನೇ ದಿನವಾದ ಸೋಮವಾರ ರಾಮಕೃಷ್ಣ ದಂಟಿನಮನೆ ಕುಟುಂಬದಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.
ದಿನಕ್ಕೊಂದು ಇಂಗ್ಲಿಷ್ ಪದ ತ್ಯಜಿಸುವ ಅಭಿಯಾನದಲ್ಲಿ ಫ್ಯಾನ್ ಶಬ್ದವನ್ನು ಬಿಡುವಂತೆ ಸಲಹೆ ಮಾಡಿದರು. ಕನ್ನಡದಲ್ಲಿ ಪಂಖ ಎಂಬ ಶಬ್ದವನ್ನು ಪರ್ಯಾಯವಾಗಿ ಬಳಸಬೇಕು. ಸಂಸ್ಕøತ ಮೂಲದ ಶಬ್ದ ಇದಾಗಿದ್ದು, ಇತ್ತೀಚಿನವರೆಗೂ ಬಳಕೆಯಲ್ಲಿತ್ತು. ಆದರೆ ಇಂದು ಬಳಕೆಯಿಂದ ಮರೆಯಾಗಿದೆ. ಈ ಶಬ್ದವೇ ಬಳಕೆಯಲ್ಲಿಲ್ಲ. ನಾವು ಶುದ್ಧ ಭಾಷೆಯಿಂದ ಬಹಳಷ್ಟು ದೂರ ಬಂದಿದ್ದೇವೆ. ಅಲ್ಲಿಂದ ನಾವು ಮೂಲಕ್ಕೆ ಮರಳಬೇಕಿದೆ ಎಂದರು.
ಸಂಸ್ಕøತದಲ್ಲಿ ಬಳಕೆಯಲ್ಲಿರುವ ವ್ಯಜನ ಶಬ್ದ ಕೂಡಾ ಬಳಕೆಯೋಗ್ಯ. ತಾಪವನ್ನು ಕಡಿಮೆ ಮಾಡಲು ಬಳಸುವ ಸಾಧನ. ಚಾಮರ, ಮಯೂರಿ, ತಾಲಬಂತ, ವೇತಸ ಹೀಗೆ ಹಲವು ಬಗೆಯ ವ್ಯಜನಗಳಿವೆ. ವ್ಯಜನಕ್ಕೆ ಕನ್ನಡದಲ್ಲಿ ಬೀಸಣಿಕೆ ಶಬ್ದವಿದೆ. ಆದ್ದರಿಂದ ಫ್ಯಾನ್‍ಗೆ ತಿರುಗು ಬೀಸಣಿಕೆ ಎಂದು ಬಳಸಬಹುದು ಎಂದು ಸಲಹೆ ಮಾಡಿದರು.
ಚಾತುರ್ಮಾಸ್ಯ ಎನ್ನುವುದು ಸನ್ಯಾಸಿಗಳ ಹಬ್ಬ; ಜನಸಾಮಾನ್ಯರಿಗೆ ಚೌತಿ, ದೀಪಾವಳಿ, ಯುಗಾದಿ ಹೀಗೆ ಹಲವು ಹಬ್ಬಗಳಿದ್ದರೆ ಸನ್ಯಾಸಿಗಳಿಗೆ ಇರುವ ಏಕೈಕ ಹಬ್ಬ ಅರುವತ್ತು ದಿನಗಳ ಕಾಲ ನಡೆಯುತ್ತಿದೆ. ಗುರು, ರಾಮನ ಆಶೀರ್ವಾದ ಪಡೆಯುತ್ತಿದ್ದು, ಜೀವನಕ್ಕೆ ಸರಿಯಾದ ದಾರಿ ಒದಗಿಬರಲಿ. ಸದಾಶಯ- ಸದಾಪೇಕ್ಷೆಗಳು ಫಲಿಸಲಿ ಎಂದು ಆಶೀರ್ವದಿಸಿದರು.
ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಎಂಜಿನಿಯರ್ ವಿಷ್ಣು ಬನಾರಿ, ಚಾತುರ್ಮಾಸ್ಯ ತಂಡದ ಅರವಿಂದ ಧರ್ಬೆ ಮತ್ತಿತರರು ಉಪಸ್ಥಿತರಿದ್ದರು. ಮಡಿವಾಳ ಮತ್ತು ಹಳ್ಳೇರಿ ಸಮಾಜದಿಂದ ಸ್ವರ್ಣಪಾದುಕಾ ಸೇವೆ ನೆರವೇರಿತು.
ಹೈಗುಂದ ದುರ್ಗಾಂಬಿಕಾ ದೇವಾಲಯ ವತಿಯಿಂದ ಪಾದುಕಾಪೂಜೆ ನಡೆಯಿತು. ಮಡಿವಾಳ ಸಮಾಜ ಇಡೀ ಸಮಾಜವನ್ನು ಶುದ್ಧಿ ಮಾಡುವಂಥದ್ದು. ಸಮಾಜ ಸದಾ ಬೆಳಗಲಿ ಎಂದರು. ಕಷ್ಟ ಕಾರ್ಪಣ್ಯದಿಂದ ಬಳಲುತ್ತಿರುವ ಹಳ್ಳೇರಿ ಸಮಾಜವನ್ನು ರಾಮದೇವರು ಸಮೃದ್ಧವನ್ನಾಗಿ ಮಾಡಲಿ ಎಂದು ಹರಸಿದರು.
ಗೋಕರ್ಣದ ಸಾಂಸ್ಕøತಿ ಪ್ರತಿಷ್ಠಾನ ಸಂಯೋಜನೆಯಲ್ಲಿ ಆಯೋಜಿಸಿದ್ದ ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ರಾಮಾಂಜನೇಯ ಯಕ್ಷಗಾನ ಪ್ರೇಕ್ಷಕರ ಮನ ಸೂರೆಗೊಂಡಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಸಂಜೀವ ಮಠಂದೂರು, ಸುನೀಲ್ ನಾಯ್ಕ, ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್.ಹೆಗಡೆ ಶ್ರೀಗಳಿಂದ ಆಶೀರ್ವಾದ ಪಡೆದರು.
ಹಿಮ್ಮೆಳದಲ್ಲಿ ಪರಮೇಶ್ವರ ಹೆಗಡೆ ಮೂರೂರು, ರಾಮಕೃಷ್ಣ ಹೆಗಡೆ ಹಿಲ್ಲೂರು, ಪರಮೇಶ್ವರ ಭಂಡಾರಿ ಕರ್ಕಿ, ಗಜಾನನ ಸಾಂತೂರು, ನಯನ ಕುಮಾರ್ ನಿಟ್ಟೂರು ಸಹಕರಿಸಿದರು. ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ಶ್ರೀರಾಮನಾಗಿ, ಅಶೋಕ ಭಟ್ಟ ಸಿದ್ದಾಪುರ ನಾರದನಾಗಿ, ಶ್ರೀಧರ ಹೆಗಡೆ ಚಪ್ಪರಮನೆ ವಿಶ್ವಾಮಿತ್ರನಾಗಿ, ಸುಬ್ರಹ್ಮಣ್ಯ ಮೂರೂರು ಶಕುಂತನಾಗಿ, ಗಣಪತಿ ಹೆಗಡೆ ತೋಟಿಮನೆ ಹನುಮಂತನಾಗಿ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಸೀತೆಯಾಗಿ, ಶಂಕರ ಹೆಗಡೆ ನೀಲ್ಕೋಡು ಅಂಜನಾದೇವಿಯಾಗಿ, ನಾಗೇಂದ್ರ ಮೂರೂರು ವನಪಾಲನಾಗಿ, ಪವನ್ ಕುಮಾರ್ ಸಾಣ್ಮನೆ ಅಂಗದನಾಗಿ, ಕೆ.ಸಿ.ಕಾರ್ತಿಕ ಸುಗ್ರೀವನಾಗಿ ಮಿಂಚಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post