ಕಲ್ಪ ಮೀಡಿಯಾ ಹೌಸ್
ಗೋಕರ್ಣ: ಶ್ರೀಮಹಾಬಲೇಶ್ವರ ದೇವಸ್ಥಾನ ನಮಗೆ ಸೇವೆಯ ಸಾಧನವಾಗಿತ್ತೇ ವಿನಃ ದೇಗುಲದಿಂದ ಯಾವ ಪ್ರತಿಫಲಾಪೇಕ್ಷೆಯೂ ಇರಲಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪಿನಿಂದ ಆಘಾತ ಅಥವಾ ವ್ಯಥೆಯಾಗುವ ಪ್ರಶ್ನೆಯೇ ಇಲ್ಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವಭಾರತೀಮಹಾಸ್ವಾಮೀಜಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು ನೀಡಿ ಮಹಾಬಲೇಶ್ವರ ದೇವಾಲಯದ ನಿರ್ವಹಣೆ ಹೊಣೆಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಕೃಷ್ಣ ನೇತೃತ್ವದ ಸಮಿತಿಗೆ ಒಪ್ಪಿಸಿದೆ. ಶ್ರೀಮಠ ಗೋಕರ್ಣ ವಿಚಾರದಲ್ಲಿ ದೇಗುಲ ಹಿತಕ್ಕಾಗಿ ಮತ್ತು ಸಮಾಜ ಹಿತಕ್ಕಾಗಿ ಕಾನೂನು ಹೋರಾಟ ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶ್ರೀಶಂಕರಾಚಾರ್ಯರ ಕಾಲದಿಂದಲೂ ಶ್ರೀರಾಮಚಂದ್ರಾಪುರಮಠ ಹಾಗೂ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಪಾರಂಪರಿಕ ಸಂಬಂಧವಿದ್ದು, 2008ರಲ್ಲಿ ಶ್ರೀಮಠಕ್ಕೆ ಪುನರ್ ಹಸ್ತಾಂತರವಾದ ನಂತರ “ದೇವಹಿತ – ಭಕ್ತಹಿತ – ಸೇವಕಹಿತ” ತತ್ವದಡಿ ದೇಗುಲ ಕೈಂಕರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಶ್ರೀಮಠಕ್ಕೆ ಗೋಕರ್ಣ ದೇಗುಲ ಸೇವೆಯ ಸಾಧನವಾಗಿತ್ತೇ ವಿನಃ ಎಂದೂ ಇದನ್ನು ಆದಾಯದ ಮೂಲ ಎಂಬ ದೃಷ್ಟಿಯಿಂದ ಶ್ರೀಮಠ ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಆದಿಗುರು ಶಂಕರಾಚಾರ್ಯರು ಶ್ರೀಕ್ಷೇತ್ರ ಗೋಕರ್ಣದಲ್ಲಿ 1300 ವರ್ಷಗಳ ಹಿಂದೆ ಶ್ರೀರಾಮಚಂದ್ರಾಪುರಮಠಕ್ಕೆ ಶ್ರೀಕಾರ ಹಾಕುವ ಜೊತೆಗೆ “ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೆ ಮಹಾಬಲಸ್ಯ ಚ ಲಿಂಗಂಚ ನಿತ್ಯಂ ವಿಧಿವದರ್ಚನಮ್” ಎಂದು ಶ್ರೀ ಮಹಾಬಲೇಶ್ವರ ದೇವಾಲಯದ ವ್ಯವಸ್ಥೆಯ ನಿರ್ವಹಣೆಯನ್ನು ಶ್ರೀಮಠಕ್ಕೆ ನೀಡಿದ್ದು, ಪರಂಪರಾಗತವಾಗಿ ಶ್ರೀಮಠ ಗೋಕರ್ಣದ ದೇವಾಲಯವನ್ನು ನಿರ್ವಹಿಸಿಕೊಂಡು ಬರುತ್ತಿದೆ. ಏತನ್ಮದ್ಯೆ, ಮಠಕ್ಕೆ ಸೇರಿದ ಮಹಾಬಲೇಶ್ವರ ದೇವಾಲಯ ಕಣ್ತಪ್ಪಿನಿಂದ ಮುಜರಾಯಿ ವ್ಯಾಪ್ತಿಗೆ ಸೇರಿತ್ತು. ಈ ತಪ್ಪನ್ನು 2008ರಲ್ಲಿ ಸರಿಪಡಿಸಿಕೊಂಡ ಸರ್ಕಾರ ದೇವಾಲಯವನ್ನು ಶ್ರೀಮಠಕ್ಕೆ ಪುನಃ ಹಸ್ತಾಂತರ ಮಾಡಿ, ಅವ್ಯವಸ್ಥೆಯ ಆಗರವಾಗಿದ್ದ ದೇವಾಲಯವನ್ನು ಸುವ್ಯವಸ್ಥೆಯೆಡೆಗೆ ಕೊಂಡೊಯ್ಯಲು ಅನುವು ಮಾಡಿಕೊಟ್ಟಿತ್ತು ಎಂದು ವಿವರಿಸಿದ್ದಾರೆ.
ನ್ಯಾಯಾಂಗದ ಬಗ್ಗೆ ಶ್ರೀಮಠಕ್ಕೆ ಸದಾ ಗೌರವ ಇದೆ
ಹಿಂದಿನಿಂದಲೂ ನ್ಯಾಯಾಲಯ ನೀಡಿದ ತೀರ್ಪನ್ನು ಶ್ರೀಮಠ ಗೌರವಿಸುತ್ತಲೇ ಬಂದಿದೆ. ಸುಪ್ರೀಂಕೋರ್ಟ್ ಇದೀಗ ನೀಡಿರುವ ಮಧ್ಯಂತರ ತೀರ್ಪಿನಲ್ಲಿ ನಿರ್ವಹಣೆ ಹೊಣೆಯನ್ನು ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಗೆ ವಹಿಸಲಾಗಿದೆ. ಇದು ಅಂತಿಮ ತೀರ್ಪಲ್ಲ; ಕಾದುನೋಡೋಣ ಎಂದು ಹೇಳಿದ್ದಾರೆ.
2008ರಲ್ಲಿ ಮಹಾಬಲೇಶ್ವರ ದೇವಾಲಯ ಶ್ರೀಮಠಕ್ಕೆ ಪುನಃ ಹಸ್ತಾಂತರವಾದ ನಂತರ ಶ್ರೀಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯ ಮಹಾಪರ್ವವೇ ನಡೆದಿದ್ದು, ನಾಲ್ಕು ವರ್ಷಗಳ ಹಿಂದೆ ದೇವಾಲಯದ ಸುವ್ಯವಸ್ಥಿತ ಆಡಳಿತ, ಸಮರ್ಥ ನಿರ್ವಹಣೆ ಹಾಗೂ ಪಾರದರ್ಶಕತೆಯನ್ನು ಪ್ರಮಾಣೀಕರಿಸುವ ಐಎಸ್‌ಓ ಪ್ರಮಾಣಪತ್ರ ಸಿಕ್ಕಿರುವುದು ಶ್ರೀಮಠದ ಮಾದರಿ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಹಸ್ತಾಂತರಕ್ಕೂ ಮೊದಲು ಹಾಗೂ ಹಸ್ತಾಂತರದ ನಂತರದ ವ್ಯತ್ಯಾಸವನ್ನು ಗಮನಿಸಬಹುದಾಗಿದೆ:
2008ಕ್ಕೂ ಮೊದಲು ಲೆಕ್ಕ ಪತ್ರಗಳೇ ಇಲ್ಲದ ಸ್ಥಿತಿ ಇತ್ತು ಹಾಗೂ ಮಠದ ಆಡಳಿತದಲ್ಲಿ ಪ್ರತಿ ರೂಪಾಯಿಗೂ ಆಡಿಟೆಡ್ ಲೆಕ್ಕ ಪತ್ರ ಇದೆ. ಹಿಂದೆ ಭಕ್ತರ ಸುಲಿಗೆ ನಡೆಯುತ್ತಿದ್ದ ಕ್ಷೇತ್ರದಲ್ಲಿ ಇದೀಗ ಆಗಮಿಸುವ ಎಲ್ಲ ಭಕ್ತಾದಿಗಳಿಗೆ ಎರಡು ಹೊತ್ತು ಪ್ರಸಾದ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಚ್ಛತೆ ಸೌಕರ್ಯಗಳ ಬಗ್ಗೆ ಸರ್ಕಾರ ನೇಮಕ ಮಾಡಿದ ಸಮಿತಿಯೇ ಮೆಚ್ಚುಗೆ ವ್ಯಕ್ತಪಡಿರುವುದು ಉಲ್ಲೇಖಾರ್ಹ ಎಂದು ವಿವರಿಸಿದ್ದಾರೆ.
ದೇಗುಲದ ಹಿತಕ್ಕಾಗಿ, ಸಮಾಜದ ಹಿತಕ್ಕಾಗಿ ಶ್ರೀಮಠ, ಇಡೀ ಸಮಾಜದ ಜತೆಗೂಡಿ ಕಾನೂನು ಹೋರಾಟ ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪನ್ನು ನಾವು ಗೌರವಿಸುತ್ತೇವೆ. ಗೋಕರ್ಣದ ಮಹಾಬಲೇಶ್ವರ ದೇವಾಲಯದಿಂದ ಹಣ – ಅಧಿಕಾರ – ಪ್ರತಿಷ್ಠೆ ಇಂಥ ಯಾವ ಪ್ರತಿಫಲಾಪೇಕ್ಷೆಯೂ ನಮಗೆ ಇರಲಿಲ್ಲ. ಇದನ್ನು ಕೇವಲ ಸೇವೆಯ ಸಾಧನವಾಗಿ ನಾವು ಪರಿಣಿಸಿದ್ದೆವು. ಪರಂಪರೆಯ ಸಂಬಂಧ ಇರುವುದರಿಂದ ಮತ್ತು ಸಮಾಜ ಹಿತಕ್ಕಾಗಿ ಶ್ರೀಮಠ ಗೋಕರ್ಣ ದೇವಾಲಯದ ಕಾನೂನು ಹೋರಾಟ ಕೈಗೆತ್ತಿಕೊಂಡಿತ್ತು. ಇದನ್ನು ಮುಂದುವರಿಸಲಿದೆ.
– ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post