ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಹವ್ಯಕ ಸಂಸ್ಕøತಿ- ಸಂಪ್ರದಾಯ, ಆಹಾರ-ವಿಹಾರ, ಆಚಾರ-ವಿಚಾರಗಳನ್ನು ಬಿಂಬಿಸುವ ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲೋತ್ಸಕ್ಕೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಶುಕ್ರವಾರ ಅಶೋಕೆಯ ವಿದ್ಯಾನಂದ ಆವರಣದಲ್ಲಿ ಚಾಲನೆ ನೀಡಿದರು.
ಪುಟ್ಟ ಮಗುವಿಗೆ ಸಿಹಿ ತಿನಿಸುವ ಮೂಲಕ, ಹವ್ಯಕ ಆಹಾರ ವೈವಿಧ್ಯವನ್ನು ಬಿಂಬಿಸುವ ಆಹಾರೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು.
ಬಳಿಕ ಸಂಧ್ಯಾರಾಗ ಪರಿಕಲ್ಪನೆಯಡಿ ವಿದುಷಿ ಅನುಷಾ ಚೇಕೋಡ್ ಅವರ ಕರ್ನಾಟಕಿ ಸಂಗೀತ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿದುಷಿ ಸಿರಿ ಶರ್ಮಾ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ವಯಲಿನ್‍ನಲ್ಲಿ ಜ್ಯೋತಿಲಕ್ಷ್ಮಿ ಅಮೈ ಮತ್ತು ಮೃದಂಗದಲ್ಲಿ ತಮನ್ ಎಕ್ಕಡ್ಕ ಸಾಥ್ ನೀಡಿದರು.
ಬಳಿಕ ಕಾರ್ತೀಕ ಮಾಸದ ವಿಶೇಷ ಕಾರ್ಯಕ್ರಮವಾದ ದಾಮೋದರ ಆರತಿ ನಡೆಯಿತು. ಭಾಗವತದ 10ನೇ ಸ್ಕಂದದಲ್ಲಿ ಬರುವ ಶ್ರೀಕೃಷ್ಣನ ಬಾಲಲೀಲೆಗಳ ಕಥಾನಕವನ್ನು, ಗಲ್ಘ್ ದೇಶಗಳಲ್ಲಿ ಇಂಥ ನೂರಾರು ಭಕ್ತಿಪ್ರಧಾನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಸ್ವರ್ಣಗೌರಿ ಸಾಯ ವಿವಿವಿ ಮಕ್ಕಳಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಶ್ರೀಗಳು ದಾಮೋದರ ಆರತಿ ನೆರವೇರಿಸುವ ಮೂಲಕ ಈ ವಿಶೇಷ ಕಾರ್ಯಕ್ರಮ ಸಂಪನ್ನಗೊಂಡಿತು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷ ಜಿ.ಎಸ್.ಹೆಗಡೆ, ರುಕ್ಮಾವತಿ ಸಾಗರ, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಎಂ, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ, ವಿವಿಧ ಮಂಡಲಗಳ ಅಧ್ಯಕ್ಷರಾದ ಮಹೇಶ್ ಚಟ್ನಳ್ಳಿ, ಮುರಳಿ ಗೀಜಗಾರ್, ಆರ್.ಜಿ.ಹೆಗಡೆ ಹೊಸಾಕುಳಿ, ಪದಾಧಿಕಾರಿಗಳಾದ ರಮೇಶ್ ಭಟ್ ಸರವು, ಕೇಶವ ಕಿರಣ, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಅರವಿಂದ ಧರ್ಬೆ, ಲಲಿತಾ ಹೆಬ್ಬಾರ, ಪಾರ್ವತಿ ಹೆಬ್ಬಾರ, ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಮುಖಂಡರಾದ ಜಿ.ವಿ.ಹೆಗಡೆ, ಸ್ವಾತಿ ಭಾಗ್ವತ್, ಶ್ರೀಕಾರ್ಯದರ್ಶಿ ಮಧು ಜಿ.ಕೆ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಮತ್ತಿತರರು ಉಪಸ್ಥಿತರಿದ್ದರು.
ಉಂಡ್ಲಕಾಳು, ಹಲಸಿನ ಉಪ್ಪು ಸೊಳೆ ವಡೆ, ಮೈಸೂರುಪಾಕ್, ಸೆವೆನ್‍ಕಪ್, ಚಕ್ಕುಲಿ, ಖಾರಾ ಬೂಂದಿ, ಮನೋಹರಮ ತುಕ್ಕುಡಿ (ಶಂಕರಪೊಳೆ), ಬಾಳೆಕಾಯಿ ಚಿಪ್ಸ್, ಕಾರಕಡ್ಡಿ/ಸೇಮಿಗೆ, ಕಾಯಿವಡೆ, ಬೆಲ್ಲ + ತೆಂಗಿನಕಾಯಿ ಉಂಡೆ, ಅತಿರಸ, ಸುಕ್ಕಿನುಂಡೆ, ನೇಂದ್ರ ಚಿಪ್ಸ್, ಚಾಕೊಲೇಟ್ ಕಡಿ, ಸೋಂಪಾ ಪುಡಿ, ಕೋಡುಬಳೆ, ಖಾರಾ ಶೇವ್, ಪಪ್ಪಾಯಿ ಸಿಹಿ (ಹಲ್ವ), ನಿಪ್ಪಟ್ಟು, ಬಾಳೆ ಹಣ್ಣಿನ ಹಲ್ವ, ಬೂಂದಿ ಲಾಡು, ಅವಲಕ್ಕಿ ಚುಡುವಾ, ರವೆ ಉಂಡೆ, ಮಿಶ್ಚರ್, ಕಾಯಿ ಹೋಳಿಗೆ, ಗೋಡಂಬಿ ಚಿಕ್ಕಿ, ಕ್ಯಾರೆಟ್- ತೆಂಗಿನಕಾಯಿ ಬರ್ಫಿ, ಇದರ ಜತೆಗೆ ಬಿಸಿ ಬಿಸಿ ದೋಸೆ, ಜಿಲೇಬಿ, ಬಿಸ್ಕೆಟ್ ರೊಟ್ಟಿ, ಬೇಯಿಸಿದ ಶೇಂಗಾ, ಹಲಸಿನ ಎಲೆಯ ಕೊಟ್ಟೆ ಕಡುಬು ಹೀಗೆ ಹವ್ಯಕರ ಆಹಾರ ಪದ್ಧತಿಯ ವೈವಿಧ್ಯಮಯ ತಿಂಡಿ ತಿನಸುಗಳು ಈ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿವೆ.
Also read: ವ್ಯಾಸನಕೆರೆ ಪ್ರಭಂಜನಾಚಾರ್ಯರಿಗೆ ಪ್ರತಿಷ್ಠಿತ ಕನಕಶ್ರೀ ಪ್ರಶಸ್ತಿ
ಮಹಾಮಂಡಲೋತ್ಸವ
ಮಹಾಮಂಡಲ ವ್ಯಾಪ್ತಿಯ ಎಲ್ಲ 11 ಮಂಡಗಳಿಂದ ಆಗಮಿಸುವ ಐದು ಸಾವಿರಕ್ಕೂ ಹೆಚ್ಚು ಶಿಷ್ಯಭಕ್ತರು, ಯುವಕರು, ವಿದ್ಯಾರ್ಥಿಗಳು ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಲಯ ಮತ್ತು ಮಂಡಲ ಮಟ್ಟದಲ್ಲಿ ನಡೆದ ವಿವಿಧ ಬೌದ್ಧಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 1250ಕ್ಕೂ ಹೆಚ್ಚು ಮಂದಿ ಸ್ಪರ್ಧಾಳುಗಳು ಮಹಾಮಂಡಲ ಮಟ್ಟದ ಸ್ಪರ್ಧೆಗಾಗಿ ಆಗಮಿಸುತ್ತಿದ್ದು, ಸುಮಾರು 43 ಕ್ರೀಡಾ/ ಬೌದ್ಧಿಕ ಸ್ಪರ್ಧೆಗಳು 17 ಮತ್ತು 18ರಂದು ನಡೆಯಲಿವೆ. ಇದು ಹವ್ಯಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಾಮಂಡಲದ ವಿದ್ಯಾರ್ಥಿ ಹಾಗೂ ಯುವ ವಿಭಾಗದ ಮಹತ್ವದ ಕಾರ್ಯಕ್ರಮಗಳಲ್ಲೊಂದಾಗಿದೆ. ಈಗಾಗಲೇ ವಲಯ ಹಾಗೂ ಮಂಡಲ ಮಟ್ಟದ ಸ್ಪರ್ಧೆಗಳಲ್ಲಿ ಸುಮಾರು 15 ಸಾವಿರ ಮಂದಿ ಪಾಲ್ಗೊಂಡಿದ್ದು, ಅಲ್ಲಿ ವಿಜೇತರಾದವರು ಮಹಾಮಂಡಲ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಉದಯೋನ್ಮುಖ ಕಲಾವಿದರಿಂದ ಶಿಲ್ಪಕಲೋತ್ಸವ ಈ ಬಾರಿಯ ಮಹಾಮಂಡಲೋತ್ಸವದ ಮತ್ತೊಂದು ವಿಶೇಷ. ಪುರಾಣದ ಯುವ ಸಾಧಕರ ಶಿಲಾಶಿಲ್ಪಗಳನ್ನು ಪ್ರತಿಭಾವಂತ ಕಲಾವಿದರು ಇಲ್ಲೇ ನಿರ್ಮಿಸಿ, ಜೀವಕಳೆ ತುಂಬಿ ವಿವಿವಿಗೆ ಕೊಡುಗೆಯಾಗಿ ನೀಡಲಿದ್ದಾರೆ. ಅಂತೆಯೇ ಭಾವ ರಾಮಾಯಣದ ಆಯ್ದ ಸನ್ನಿವೇಶಗಳ ಚಿತ್ರಣ, ಯುವ ಸಾಧಕರ ಜೀವನ ಸಾಧನೆಯನ್ನು ಬಿಂಬಿಸುವ ಅಪೂರ್ವ ಚಿತ್ರಕಲೋತ್ಸವ ಕೂಡಾ ಸೇರಿದೆ.
ಯಕ್ಷೋತ್ಸವ, ನಾಟಕೋತ್ಸವ, ಎರಡು ದಿನಗಳ ಕಾಲ ಅಖಂಡ ಭಜನೋತ್ಸವ, ಚಿಣ್ಣರ ಉತ್ಸವಗಳು ವಿಶೇಷ ಮೆರುಗು ನೀಡಲಿವೆ. ಒಂದು ವರ್ಷದ ಒಳಗಿನ ಮಕ್ಕಳಿಗಾಗಿ ಆರೋಗ್ಯವಂತ ಶಿಶು ಸ್ಪರ್ಧೆ, ಮೂರು ವರ್ಷದ ಮಕ್ಕಳೊಂದಿಗೆ ತಾಯಂದಿರು ಸೆಲ್ಫಿ ಕ್ಲಿಕ್ಕಿಸುವ ಸ್ಪರ್ಧೆ, ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿ ಸ್ಪರ್ಧೆ ಹೀಗೆ ಹತ್ತು ಹಲವು ಸ್ಪರ್ಧೆಗಳೂ ಆಯೋಜನೆಗೊಂಡಿವೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ 20ಕ್ಕೂ ಹೆಚ್ಚು ಭಜನಾ ತಂಡಗಳು ಅಖಂಡವಾಗಿ ಕಾರ್ಯಕ್ರಮ ನಡೆಸಿಕೊಡುವರು.
18ರಂದು ಮಧ್ಯಾಹ್ನ ಮಹಾಮಂಡಲೋತ್ಸವ ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಘವೇಶ್ವರಭಾರತೀ ಸ್ವಾಮೀಜಿಯವರು ಮತ್ತು ಶ್ರೀಕ್ಷೇತ್ರ ಶಕಟಪುರದ ಶ್ರೀ ವಿದ್ಯಾಪೀಠಾಧೀಶ್ವರರಾದ ಬದರೀ ಶಂಕರಾಚಾರ್ಯ ಶ್ರೀ ತೋಟಕಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಉಭಯ ಶ್ರೀಗಳ ಆಶೀರ್ವಚನ, ಪ್ರಶಸ್ತಿ ವಿತರಣೆ, ಸಮಾರೋಪ ಸಮಾರಂಭದಲ್ಲಿ ಇರುತ್ತದೆ.
ಸಾಂಸ್ಕøತಿಕ ಕಾರ್ಯಕ್ರಮಗಳು ಸಂಜೆ 5 ರಿಂದ ರಾತ್ರಿ 10.30ರವರೆಗೆ ಇದ್ದು, ಆಹಾರೋತ್ಸವ 16ರಂದು ಮಧ್ಯಾಹ್ನದಿಂದ 18ರ ಸಂಜೆವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post