ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಶ್ರೀರಾಮನಂಥ ಮಹಾಪುರುಷರು ಮಾತ್ರವೇ ಜೀವಯಾನವನ್ನು ದೇವಯಾನವಾಗಿ ಪರಿವರ್ತಿಸಬಲ್ಲರು. ರಾಮನನ್ನು ಆಶ್ರಯಿಸಿದ ಎಲ್ಲರೂ ಮೋಕ್ಷವನ್ನು ಪಡೆಯುತ್ತಾರೆ. ಬೇರೆಯವರಿಗೆ ಜೀವಯಾನ ಕ್ಲೇಶಕರವಾದರೆ, ಅನನ್ಯನಾಗಿ ರಾಮನನ್ನು ಆಶ್ರಯಿಸುವವರಿಗೆ ಮೋಕ್ಷ ಸಾಧನೆಯಾಗುತ್ತದೆ ಎಂದು ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara shri ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 23ನೇ ದಿನವಾದ ಸೋಮವಾರ ಜೀವಯಾನ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿ, ಜೀವಯಾನ ಒಂದರ್ಥದಲ್ಲಿ ದೇವಯಾನ; ಜೀವ-ದೇವ ಯಾನ. ರಾಮಾವತಾರದ ಕೊನೆಯ ಭಾಗದಲ್ಲಿ ಬರುವ ಶ್ರೀರಾಮನ ನಿರ್ಯಾಣದ ಪಯಣವನ್ನು ಬಣ್ಣಿಸಿದರು.

“ರಾಮಾವತಾರಕ್ಕೆ ಹನ್ನೊಂದು ಸಾವಿರ ವರ್ಷಗಳ ಅವಧಿಯನ್ನು ನೀನೇ ವಿಧಿಸಿಕೊಂಡಿದ್ದಿ. ನೀನು ಹೇಳಿದ ಅವಧಿ ಮುಗಿಯುತ್ತಾ ಬಂದಿದೆ. ಮನುಷ್ಯ ಅವತಾರದ ಅವಧಿ ಮುಗಿಯಿತು ಎನ್ನುವ ಸ್ಥಿತಿ ನಮ್ಮದಲ್ಲ; ರಾಮರಾಜ್ಯವನ್ನು ಮುನ್ನಡೆಸಲು ಭೂಮಿಯ ಮೇಲೆ ಇನ್ನೂ ಕೆಲ ಕಾಲ ಇರುವ ಇಚ್ಛೆ ನಿನಗಿದ್ದರೆ ಅದನ್ನು ಪಾಲಿಸುತ್ತೇವೆ” ಎಂಬ ಬ್ರಹ್ಮನ ಸಂದೇಶವನ್ನು ಕಾಲ ವಿವರಿಸುತ್ತಾನೆ ಎಂದರು.
ಮೂರು ಲೋಕಗಳ ಕಲ್ಯಾಣಕ್ಕಾಗಿ ನಾನು ಅವತಾರವೆತ್ತಿದ ಕಾರ್ಯ ಮುಗಿಯಿತು. ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಲು ರಾಮ ಸಮ್ಮತಿ ನೀಡುತ್ತಾನೆ. ಆ ಹಂತದಲ್ಲಿ ದೂರ್ವಾಸ ಮುನಿಗಳ ಆಗಮನವಾಗುತ್ತದೆ. ಜರೂರಾರಿ ರಾಮನ ಭೇಟಿಗೆ ಆಗ್ರಹಪಡಿಸಿದ್ದು, ಲಕ್ಷ್ಮಣನನ್ನು ಸಂದಿಗ್ಧತೆಗೆ ಸಿಲುಕಿಸುತ್ತದೆ. ರಾಮನ ಆಜ್ಞೆಯ ಅರಿವಿದ್ದರೂ, ಪರರ ಹಿತಕ್ಕಾಗಿ ತಾನು ಮೃತ್ಯುದಂಡ ಸ್ವೀಕರಿಸಲು ಸಿದ್ಧನಾಗಿ ರಾಮನ ಭೇಟಿಗೆ ತೆರಳುತ್ತಾನೆ. ತಕ್ಷಣವೇ ರಾಮ ದೂರ್ವಾಸರಲ್ಲಿಗೆ ಬಂದು ಪ್ರೀತಿಯಿಂದ ಉಪಚರಿಸುತ್ತಾನೆ ಎಂದು ಹೇಳಿದರು.

Also read: ಸ್ವಾತಂತ್ರೋತ್ಸವ ನಿಮಿತ್ತ ಈಸೂರಿಗೆ ಬೈಕ್ ರ‍್ಯಾಲಿ: ಜೆ.ಎಸ್. ಚಿದಾನಂದಗೌಡ
ಇದಾದ ಬಳಿಕ ರಾಮ ಭರತನನ್ನು ಕರೆದು, ತಾನೂ ಲಕ್ಷ್ಮಣನಿರುವಲ್ಲಿಗೆ ಹೋಗುತ್ತೇನೆ; ರಾಜ್ಯಾಧಿಕಾರವನ್ನು ಭರತನಿಗೆ ಒಪ್ಪಿಸಲು ಮುಂದಾದ. ಅದಕ್ಕೆ ನಿರಾಕರಿಸಿದ ಭರತ ತಾನೂ ರಾಮನೊಂದಿಗೆ ಬರುವ ಪ್ರತಿಜ್ಞೆ ಕೈಗೊಳ್ಳುತ್ತಾನೆ. ಲವ- ಕುಶರಿಗೆ ರಾಜ್ಯ ಒಪ್ಪಿಸುವಂತೆ ಸಲಹೆ ನೀಡುತ್ತಾನೆ. ಇಡೀ ಪ್ರಕೃತಿ ರಾಜನಿಗೆ ನಮಸ್ಕರಿಸುವಾಗ ವಸಿಷ್ಠರು ಎಲ್ಲ ಜನರ ಕೋರಿಕೆ ಈಡೇರಿಸುವಂತೆ ಸಲಹೆ ನೀಡಿದರು. ಎಲ್ಲರೂ ರಾಮನನ್ನು ಹಿಂಬಾಲಿಸುವ ನಿರ್ಧಾರಕ್ಕೆ ಬಂದ. ಅದಕ್ಕೂ ರಾಮ ಒಪ್ಪುತ್ತಾನೆ. ಲವ ಕುಶರಿಗೆ ಪಟ್ಟಾಧಿಕಾರ ನೀಡಿ ಸಲಹೆ ಸೂಚನೆಗಳನ್ನು ನೀಡಿ ಮಹಾನಿರ್ಯಾಣಕ್ಕೆ ಮುಂದಾಗುತ್ತಾನೆ ಎಂದರು.

ರಾಮನ ನಾಮಕರಣ, ವಿವಾಹ, ಪಟ್ಟಾಭಿಷೇಕ ವಿಧಿಗಳನ್ನು ನೆರವೇರಿಸಿದ್ದ ವಸಿಷ್ಠರು ಮಹಾಪ್ರಸ್ಥಾನದ ವಿಧಿಗಳನ್ನು ಪೂರೈಸಿದರು. ರಾಮ ಸೀತೆಯನ್ನು ತ್ಯಜಿಸಿರಲಿಲ್ಲ ಎನ್ನುವುದಕ್ಕೆ ಅಗ್ನಿಹೋತ್ರ ಸಾಕ್ಷಿಯಾಗಿ ನಿಲ್ಲುತ್ತದೆ. ಮಹಾಪ್ರಸ್ಥಾನದ ಜತೆಗೆ ವಾಜಪೇಯದ ಶ್ವೇತಛತ್ರ ಶೋಭೆಯಾಗಿ ಬೆಳಗುತ್ತಿರುವಾಗ ರಾಮ ಅರಮನೆಯಿಂದ ಹೊರಬರುತ್ತಾನೆ. ಕೈಯಲ್ಲಿ ದರ್ಭೆ ಹಿಡಿದು ಓಂಕಾರ ಪಠಿಸುತ್ತಾ ಬಂದಾಗ ಸೂರ್ಯತೇಜಸ್ಸಿನಿಂದ ಕಂಗೊಳಿಸಿದ ಎಂದರು.
ಆಗ ಪ್ರಕೃತಿ ಎರಡು ರೂಪದಿಂದ ಪ್ರಕಟವಾಗಿ ರಾಮನ ಇಕ್ಕೆಲಗಳಲ್ಲಿ ಶೋಭಿಸುತ್ತಾಳೆ. ಬಲಭಾಗದ ದೇವಿ ಮೋಕ್ಷವನ್ನೂ ಎಡಭಾಗದ ದೇವಿ ಶ್ರೇಯಸ್ಸನ್ನೂ ನೀಡುವಂಥದ್ದು. ರಾಮನ ಬಾಣಗಳು ಪುರುಷರೂಪದಿಂದ ನಿಂತವು. ರಾಮಧನಸ್ಸು ಕೂಡಾ ಪುರುಷರೂಪದಲ್ಲಿ ನಿಂತಿತು. ವೇದಗಳು ಬ್ರಾಹ್ಮಣರಾಗಿ, ವೇದಮಾತೆ ಗಾಯತ್ರಿಯೂ ಪ್ರಕಟಗೊಂಡರು ಎಂದು ಬಣ್ಣಿಸಿದರು.
ರಾಮ ಮಹಾಪ್ರಸ್ಥಾನದ ಬಳಿಕ ಅಯೋಧ್ಯೆಯಲ್ಲಿ ಜೀವ ಇರುವ ಯಾವುದೂ ಉಳಿಯಲಿಲ್ಲ. ಸಮಷ್ಟಿ ಚೈತನ್ಯ ಅಲ್ಲಿಗೆ ಹರಿದಿತ್ತು. ಅಯೋಧ್ಯ ಶೂನ್ಯವಾಯಿತು. ಅರ್ಧಯೋಜನ ಪಯಣದ ಬಳಿಕ ಸರಯೂ ನದಿಯ ದರ್ಶನ ಪಡೆದು ಅನುಸರಿಸಿ ಮಹಾನಿರ್ಯಾಣ ಸ್ಥಳಕ್ಕೆ ರಾಮ ಬಂದ. ಧರ್ಮದೇವ ಎಲ್ಲ ದೇವತೆಗಳ ಒಡಗೂಡಿ ಸ್ವಾಗತಕ್ಕೆ ಬರುತ್ತಾನೆ. ಆ ಮಂಗಲಮಯ ವಾತಾವರಣದಲ್ಲಿ ರಾಮ ಸರಯೂ ನದಿಯಲ್ಲಿ ಪಾದವಿಡುತ್ತಾನೆ. ಆಗ ವರುಣದೇವ ಸ್ವಾಗತಿಸಿ, ಮೂಲರೂಪವನ್ನು ತಾಳುವಂತೆ ಕೋರುತ್ತಾನೆ ಎಂದು ವಿವರಿಸಿದರು.
ರಾಮ ಮಹಾಪ್ರಸ್ಥಾನದ ವೇಳೆ ವಿಷ್ಣುರೂಪದಲ್ಲಿ ಐಕ್ಯನಾದ ಬಳಿಕವೂ ತನ್ನೊಂದಿಗೆ ಬಂದ ಎಲ್ಲರಿಗೂ ಅತ್ಯುತ್ತಮ ಗತಿಯನ್ನು ನೀಡುವಂತೆ ಬ್ರಹ್ಮದೇವನಿಗೆ ಸೂಚಿಸುತ್ತಾನೆ. ರಾಮನ ಜತೆಗೆ ಬಂದಿದ್ದ ಎಲ್ಲರೂ ಸರಯೂ ನದಿಯಲ್ಲಿ ಮುಕ್ತಿ ಪಡೆಯುತ್ತಾರೆ ಎಂದು ಕಥಾವಸ್ತುವನ್ನು ಪೂರ್ಣಗೊಳಿಸಿದರು.
ಸುಮಾರು 350 ವರ್ಷಗಳ ಪಂಚಾಂಗಗಳ ಸಂಗ್ರಹವನ್ನು ಜಯಾ ಪಂಡಿತ್ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್ ಹರಿಹರ, ಸುಧಾಕರ ಬಡಗಣಿ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್, ಪಿಯು ಪ್ರಾಚಾರ್ಯರಾದ ಶಶಿಕಲಾ ಕೂರ್ಸೆ, ಮುಖ್ಯಶಿಕ್ಷಕಿ ಸೌಭಾಗ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post