ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಕೇವಲ ನಮ್ಮ ಶ್ವಾಸವನ್ನು ತಿಳಿದುಕೊಂಡು ಇಡೀ ನಮ್ಮ ಜೀವನದ ಭವಿಷ್ಯ ಹೇಳುವ ಅಪೂರ್ವ ಕೌಶಲ ನಮ್ಮದಾಗಿತ್ತು. ಆದರೆ ಪೂರ್ವಜರು ನೀಡಿದ ಇಂಥ ಮಹತ್ವದ ಶಾಸ್ತ್ರಗಳನ್ನು ನಾವು ಮರೆತಿರುವುದು ದುರದೃಷ್ಟಕರ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara Shri ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 58ನೇ ದಿನವಾದ ಸೋಮವಾರ ಕಾಲ ಸರಣಿಯ ಪ್ರವಚನ ಅನುಗ್ರಹಿಸಿದರು.
ಜೀವನಕ್ಕೆ ಶ್ವಾಸ ಎಷ್ಟು ಮುಖ್ಯವೋ ಜೌತಿಷಕ್ಕೂ ಅಷ್ಟೇ ಮುಖ್ಯ. ಆದರೆ ಇಂದು ಜೌತಿಷದಲ್ಲಿ ಶ್ವಾಸದ ಚಿಂತನೆ ಆಗುವುದಿಲ್ಲ. ಶ್ವಾಸವಿಜ್ಞಾನ ಬೆಳೆಯಬೇಕು. ಇದರ ಪ್ರಯೋಗ ಮಾಡುತ್ತಾ ಹೋದರೆ ನಾವೇ ದಿಕ್ಸೂಚಿಗಳಾಗಬಹುದು ಎಂದರು.
ಪ್ರಾಣ ಅಪಾನಗಳು ನಮ್ಮ ಇಡೀ ಜೀವನವನ್ನು ನಡೆಸುವ, ನಿಯಂತ್ರಿಸುವ ಶಕ್ತಿಗಳು. ಪ್ರಾಣವನ್ನು ಧೀರ್ಘ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಅಪಾನವನ್ನು ವೃದ್ಧಿಸುವುರಿಂದ ಸ್ಥೂಲವಾಗುತ್ತಾ ಹೋಗುತ್ತಾರೆ. ನಮ್ಮ ಪ್ರಾಣಾಪಾನದ ಮೂಲಕ ನಮ್ಮ ಭವಿಷ್ಯವನ್ನೂ ತಿಳಿದುಕೊಳ್ಳಬಹುದು ಎಂದರು.
ಭಾನುವಾರ ಶ್ವಾಸಾನುಕೂಲವಾಗದಿದ್ದರೆ ದೇಹದಲ್ಲಿ ವೇದನೆ, ಸೋಮವಾರ ಕಲಹ, ಮಂಗಳವಾರ ಮರಣ, ಬುಧವಾರ ದೂರಪ್ರಯಾಣ, ಗುರುವಾರ ಶ್ವಾಸಾನುಕೂ ಇಲ್ಲದಿದ್ದರೆ ರಾಜ್ಯಕ್ಕೆ ಆಪತ್ತು ಬರಬಹುದು. ಶುಕ್ರವಾರ ಕಾರ್ಯಹಾನಿ, ಶನಿವಾರ ಪರನಾಶ, ಕೃಷಿನಾಶ, ಭೂ ವಿವಾದಕ್ಕೆ ಕಾರಣವಾಗುತ್ತದೆ ಎಂದರು.
ಎಂಟು ಭಾನುವಾರ ಶ್ವಾಸ ಪ್ರತಿಕೂಲವಾದರೆ ಗುರುವಿಗೆ ಜೀವಕ್ಕೆ ಅಪಾಯ ಅಥವಾ ತನಗೆ ದೊಡ್ಡ ವ್ಯಾಧಿ ಬರುವ ಸೂಚನೆ. ಎಂಟು ಸೋಮವಾರ ಹೀಗಾದರೆ ಮಕ್ಕಳಿಗೆ ಆಪತ್ತು, ಮಂಗಳವಾರ ಬಂಧನಯೋಗ, ಬುಧವಾರದ ಶ್ವಾಸ ಪ್ರತಿಕೂಲ ಬಂದರೆ ಸಾವು ಎಂಬ ಅರ್ಥ, ಗುರುವಾರ ಗುರುವಿನ ನಿಶ್ಚಯ ಮೃತ್ಯು, ಶುಕ್ರವಾರ ಧನಕ್ಷಯ, ಶನಿವಾರ ಗೃಹಣಿ ಅಥವಾ ಗೃಹನಾಶ ಎಂದು ವಿಶ್ಲೇಷಿಸಿದರು.
ಮಹತ್ವದ ವಿಷಯಕ್ಕೆ ಹೊರಡುವಾಗ ನಾಡಿ ಎಡಕ್ಕಿರಬೇಕು. ಬಲಕ್ಕಿದ್ದರೆ ಅಶುಭ. ಪ್ರವೇಶ ಮಾಡುವಾಗ ನಾಡಿ ಬಲಕ್ಕಿದ್ದರೆ ಶುಭ. ಯೋಗಸಾಧನೆಗೆ ಮಧ್ಯನಾಡಿ ಪ್ರಶಸ್ತ. ಆತ್ಮಸಾಧನೆ, ಮುಕ್ತಿಗೆ ಪ್ರಯತ್ನ ಮಾಡಲು ಇದು ಅಗತ್ಯ ಎಂದರು.
ಶ್ವಾಸದಲ್ಲಿ ಪಂಚಭೂತಗಳ ವಿಷಯವಿದೆ. ಶ್ವಾಸ ಎಲ್ಲಿದೆ ಎನ್ನುವುದನ್ನು ತಿಳಿದುಕೊಂಡರೆ ಫಲವನ್ನು ತಿಳಿದುಕೊಳ್ಳಬಹುದು. 6 ಅಂಗುಲದ ಶ್ವಾಸ ಪೃಥ್ವಿ, 12 ಅಂಗುಲ ಜಲ, 8 ಅಂಗುಲವಿದ್ದರೆ ಅಗ್ನಿ, ಆರು ಅಂಗುಲ ಇದ್ದರೆ ವಾಯು, 3 ಅಂಗುಲ ಇದ್ದರೆ ಆಕಾಶ. 16 ಅಂಗುಲಕ್ಕಿಂತಲೂ ಹೆಚ್ಚು ಧೀರ್ಘ ಶ್ವಾಸ ಹೊಂದಿರುವರಿದ್ದಾರೆ ಎಂದು ವಿವರಿಸಿದರು.
ಗರ್ಗಾಚಾರ್ಯರು ಜ್ಯೌತಿಷದ ಮೇರುಶಿಖರ ಇದ್ದಂತೆ. ಯಾದವರ ಕುಲಗುರುಗಳು. ಸೂರ್ಯಚಂದ್ರರು 11ನೇ ಮನೆಯಲ್ಲಿ ಬಂದರೆ ಬದುಕಿನ ಕತ್ತಲನ್ನು ಕೂಡಾ ಬಗೆಹರಿಸುವ ಸಾಮಥ್ರ್ಯ ಇದೆ ಗರ್ಗಾಚಾರ್ಯರು ಹೇಳಿದ್ದರು.
ಇಂದಿನ ಅನಾವರಣ ಬಗ್ಗೆ ಪ್ರಸ್ತಾವಿಸಿ, ಅಷ್ಟಮ ರಾಘವೇಶ್ವರ ಭಾರತೀಸ್ವಾಮೀಜಿಯವರು ನಮ್ಮ ಪರಂಪರೆಯ 33ನೇ ಯತಿಗಳು. ತಮ್ಮ ಮುಕ್ತಿಯ ದಿನವನ್ನು ಮೊದಲೇ ಕಂಡುಕೊಂಡಿದ್ದು, ಶಿಷ್ಯರನ್ನು ಕರೆದು ಕೊನೆಯ ಮಂತ್ರಾಕ್ಷತೆಯನ್ನೂ ಅನುಗ್ರಹಿಸಿದ್ದರು. ಮುಕ್ತಿಗಾಗಿ ಕಾಶಿಗೆ ಹೋಗಲು ಸಮಯವಿಲ್ಲ. ದಕ್ಷಿಣ ಕಾಶಿ ಎನಿಸಿದ ಗೋಕರ್ಣಕ್ಕೆ ಹೋಗಲು ಮಾತ್ರ ಸಮಯಾವಕಾಶವಿದೆ ಎಂದು ತಿಳಿದುಕೊಂಡು, ಉತ್ತರಾಧಿಕಾರಿಗಳಿಗೆ ಅಧಿಕಾರ ವಹಿಸಿ, ರಾಮಮುದ್ರೆಯನ್ನು ನಂಬಿ ಬದುಕಿ ಎಂದು ಶಿಷ್ಯರಿಗೆ ಆಶೀರ್ವಾದ ಮಾಡಿ ಹೊರಟಾಗ ಇಡೀ ಮಠವೇ ಕತ್ತಲಾಯಿತು ಎಂದು ಮಠದ ದಿನಚರಿಯಲ್ಲಿ ಉಲ್ಲೇಖವಿದೆ.
ಇದು ಮಹಾನಿರ್ಯಾಣದ ಕಾಲ. ಗೋಕರ್ಣದ ಸಮಾಧಿ ಇಂದಿಗೂ ಜಾಗೃತಸ್ಥಾನವಾಗಿ ಮುಂದುವರಿದಿದೆ. ಅವರ ಜೀವನದಲ್ಲಿ ಇಂಥ ಹಲವು ಘಟನೆಗಳು ನಡೆದವು. ಜಗತ್ತಿಗೆ ದಾರಿ ತೋರಿಸುವ ಗುರುಗಳಿಗೇ ಕಣ್ಣಿಲ್ಲ ಎಂದು ಯಾರೋ ಆಡಿಕೊಂಡದ್ದನ್ನು ಕೇಳಿ ಘೋರ ತಪಸ್ಸು ಮಾಡಿ ಕಣ್ಣನ್ನು ಮರಳಿ ಪಡೆದುಕೊಂಡಿದ್ದರು. ಕಣ್ಣಿಲ್ಲದೇ ಕಾಡಿನಲ್ಲಿ ಏಕಾಂಗಿಯಾಗಿ ತಪಸ್ಸು ಮಾಡಿ ಮೂರೇ ತಿಂಗಳಲ್ಲಿ ದೃಷ್ಟಿಯನ್ನು ಮರಳಿ ಪಡೆದವರು ಎಂದು ಬಣ್ಣಿಸಿದರು.
ಕೊಲ್ಲೂರಿನ ಪೂಜಾಪದ್ಧತಿ ಅವರಿಂದ ನಿರೂಪಿತವಾದದ್ದು. ಕೊಲ್ಲೂರು ಪೂಜಾಪದ್ಧತಿ ಅವರ ಅಪೂರ್ವ ಗ್ರಂಥ. ಕೇವಲ ಶಾಟಿಯಿಂದ ಆನೆಯನ್ನು ನಿಯಂತ್ರಿಸಿದ ಮಹಾತ್ಮ. ಅವರ ಬದುಕನ್ನು ನೋಡಿದರೆ, ದಾಖಲೆಗಳನ್ನು ಗಮನಿಸಿದರೆ, ಅವರೊಬ್ಬ ಅಸಾಧಾರಣ ತಪಃಸಿದ್ಧರು, ಮೋಕ್ಷಪರರು ಎನ್ನುವುದು ತಿಳಿಯುತ್ತದೆ ಎಂದು ವಿವರಿಸಿದರು.
ಮುಕ್ರಿ ಸಮಾಜ ಮತ್ತು ಸವಿತಾ ಸಮಾಜದ ವತಿಯಿಂದ ಸ್ವರ್ಣಪಾದುಕಾಪೂಜೆ ನೆರವೇರಿತು. ಶ್ರೀಮಠದ ಪರಂಪರೆಯ 33ನೇ ಗುರುಗಳಾದ ಅಷ್ಟಮ ರಾಘವೇಶ್ವರ ಭಾರತೀಸ್ವಾಮಿಗಳ ಜೀವನ- ಸಾಧನೆ, ಅವರ ಅಧ್ಯಯನ ಗ್ರಂಥಗಳು, ಪತ್ರಗಳು, ದಿನಚರಿಯ ಅನಾವರಣವನ್ನು ಚಂದ್ರಶೇಖರ ಬಡಗಣಿ ನೆರವೇರಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post