ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಸ್ವಂತಿಕೆ, ಆತ್ಮಾಭಿಮಾನವನ್ನು ಮರೆತು ಸ್ವಭಾಷೆಯನ್ನು ನಿರ್ಲಕ್ಷಿಸುವುದು ನಮ್ಮ ಹೆತ್ತ ತಾಯಿಯನ್ನು ಅವಮಾನಿಸಿದಂತೆ ಎಂದು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 46ನೇ ದಿನವಾದ ಭಾನುವಾರ ಪುತ್ತೂರಿನ ದ್ವಾರಕಾ ಸಮೂಹದ ಮುಖ್ಯಸ್ಥ ಗೋಪಾಲಕೃಷ್ಣ ಭಟ್ ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.
ನಮ್ಮ ಸಂಸ್ಕøತಿಯಲ್ಲಿ ಮಾತೃಸ್ಥಾನ ಎಲ್ಲಕ್ಕಿಂತ ಪವಿತ್ರ; ಅಂತೆಯೇ ಭಾಷೆಯ ವಿಚಾರಕ್ಕೆ ಬಂದರೆ ಮಾತೃಭಾಷೆ ಅಥವಾ ಸ್ವಭಾಷೆಗೂ ಅದೇ ಮಹತ್ವ. ಆದ್ದರಿಂದ ಅಭಾರತೀಯ ಭಾಷೆಗಳ ಶಬ್ದಗಳನ್ನು ನಮ್ಮ ಭಾಷೆಯಿಂದ ಕಿತ್ತುಹಾಕಿ ನಮ್ಮ ಭಾಷೆ ಶುದ್ಧಗೊಳಿಸಲು ಸಮಾಜಕ್ಕೆ ಪ್ರೇರಣೆ ನೀಡುವುದೇ ಈ ಚಾತುರ್ಮಾಸ್ಯದ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ನಮ್ಮ ಭಾಷೆಯನ್ನು ಶುದ್ಧವಾಗಿ ಮಾತನಾಡಲು ಕೂಡಾ ಇಂದು ತಯಾರಿ ಬೇಕಾಗಿದೆ; ಅಂದರೆ ನಾವು ಸಹಜತೆಯಿಂದ ಬಹುದೂರ ಸಾಗಿದ್ದೇವೆ ಎಂಬ ಅರ್ಥ. ಭಾರತೀಯ ಭಾಷೆಗಳಿಗೆ ಇರುವ ಋಷಿದೃಷ್ಟಿ, ಅರ್ಥಗಾಂಭೀರ್ಯ, ವೈವಿಧ್ಯತೆ, ಸಮೃದ್ಧತೆ ಅನ್ಯಭಾಷೆಗಳಿಗೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ದೇಶಿ ಸೊಗಡಿನೊಂದಿಗೆ ಅನ್ಯಭಾಷೆಯ ಪದಗಳನ್ನು ಬಳಕೆ ಮಾಡುವ ಪ್ರವೃತ್ತಿಯ ಪರಿಣಾಮವಾಗಿ ಭಾರತೀಯ ಭಾಷೆಗಳ ಇರುವಿಕೆಗೇ ಧಕ್ಕೆ ಬಂದಿದೆ. ಈ ಹಂತದಲ್ಲಾದರೂ ಅನ್ಯಭಾಷೆಗಳ ಪದಗಳನ್ನು ತ್ಯಜಿಸುವ ಮೂಲಕ ಭಾಷೆಯ ಶುದ್ಧೀಕರಣಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯವಾಗಿ ಆಚರಿಸಿ, ಮಾತೃಭಾಷೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದರು.
ಗತ್ತುಗಾರಿಕೆಗೆ, ಒಣಪ್ರತಿಷ್ಠೆಗಾಗಿ ಅನ್ಯಭಾಷೆಯನ್ನು ಮಾತನಾಡುವ ಅಥವಾ ಅನ್ಯಭಾಷೆ ಪದಗಳನ್ನು ನಮ್ಮ ಭಾಷೆಯಲ್ಲಿ ಸೇರಿಸುವುದು ಬೇಡ; ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬೇರೆ ಭಾಷೆ ಮಾನಾಡೋಣ. ನಮ್ಮ ಮನೆಯಲ್ಲಿ ವ್ಯವಹಾರದಲ್ಲಿ ಸ್ವಭಾಷೆಯೇ ಪ್ರಧಾನವಾಗಲಿ ಎಂದು ಆಶಿಸಿದರು. ನಾವು ಊಟ ಮಾಡಲು ನಮ್ಮ ಕೈಯನ್ನು ಹೇಗೆ ಅವಲಂಬಿಸುತ್ತೇವೆಯೋ ಹಾಗೆ ಭಾಷೆ ವಿಷಯದಲ್ಲೂ ನಮ್ಮ ಸ್ವಭಾಷೆಯೇ ನಮಗೆ ಸಹಜ ಎಂದು ಮಾರ್ಮಿಕವಾಗಿ ನುಡಿದರು.
ಸಾಗರದ ಮಾಜಿ ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಶ್ರೀನಿವಾಸ ಹೆಗಡೆ, ಗಾಣಿಗ ಸಮಾಜದ ಮುಖಂಡರಾದ ಮಹೇಶ ಶೆಟ್ಟಿ, ಕುಮಟಾದ ದಾಮೋದರ ಶೆಟ್ಟಿ, ಭಟ್ಕಳದ ಮಾರುತಿ ಶೆಟ್ಟಿ, ಸುಭಾಷ್ ಶೆಟ್ಟಿ, ಹರಿಹರಪುರ ಮಠದ ಅಗಸ್ತ್ಯ ದಂಪತಿ ಭಾಗವಹಿಸಿದ್ದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಚಾತುರ್ಮಾಸ್ಯ ತಂಡದ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಸರ್ವಸಮಾಜ ಸಂಯೋಜಕ ಕೆ.ಎನ್.ಹೆಗಡೆ, ಅನುರಾಧಾ ಪಾರ್ವತಿ, ಎಂಜಿನಿಯರ್ ವಿಷ್ಣು ಬನಾರಿ, ಪಿಆರ್‍ಓ ಎಂ.ಎನ್.ಮಹೇಶ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.
ವಿದ್ವಾನ್ ದೀಪಕ್ ಶರ್ಮಾ ನೇತೃತ್ವದಲ್ಲಿ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಅಶೋಕೆಯ ಗೋವಿಶ್ವಕ್ಕೆ ಸೋಪಾನಮಾಲೆ ನಿರ್ಮಿಸುವ ಯೋಜನೆಯ ಪ್ರಾಯೋಜಕತ್ವದ ಸಂಪಕಲ್ಪವನ್ನು ದ್ವಾರಕಾ ಸಂಸ್ಥೆಯ ಮಾಲೀಕ ಗೋಪಾಲಕೃಷ್ಣ ಭಟ್ ಅವರು ಈ ಸಂದರ್ಭದಲ್ಲಿ ಕೈಗೊಂಡರು.
ವಿವಿವಿ ವಿದ್ಯಾರ್ಥಿಗಳಿಂದ ವಿಶಿಷ್ಟ ಮಾತೃವಂದನೆ ಕಾರ್ಯಕ್ರಮ ನಡೆದರೆ, ವಿವಿವಿ ವಿದ್ಯಾರ್ಥಿಗಳಿಗಾಗಿ ರಾಮಚಂದ್ರಾಪುರ ಮಂಡಲದ ಮಾತೆಯರಿಂದ ಛಾತ್ರಭಿಕ್ಷೆ ನೆರವೇರಿತು. ಗಾಣಿಗ ಸಮಾಜದ ವತಿಯಿಂದ ಸ್ವರ್ಣಪಾದುಕಾ ಸೇವೆ ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post