ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ವಿಶ್ವ ಜನಕ ಮತ್ತು ವಿಶ್ವ ಜನನಿಯ ಸ್ವರೂಪವಾಗಿ ತಂದೆ ಹಾಗೂ ತಾಯಿ ಇರುತ್ತಾರೆ. ತಂದೆ- ತಾಯಿ ಎಂದರೆ ಜೀವಚೈತನ್ಯದ ಸ್ವರೂಪ. ಅವರನ್ನು ಕಡೆಗಣಿಸಿದರೆ ಪರಮಾತ್ಮನ ಜತೆಗಿನ ಕೊಂಡಿ ಕಳಚುತ್ತದೆ. ಆದ್ದರಿಂದ ಮಾತಾಪಿತೃಗಳನ್ನು ದೈವಸಮಾನರಾಗಿ ಕಾಣಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara shri ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು ಹೊನ್ನಾವರ ಮಂಡಲದ ಕರ್ಕಿ, ಕಡ್ಲೆ, ಹೊನ್ನಾವರ, ಹೊಸಾಕುಳಿ ಮತ್ತು ಭವತಾರಿಣಿ ವಲಯಗಳ ಶಿಷ್ಯಭಕ್ತರ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ತಂದೆಗೆ ನಮ್ಮ ಸಂಸ್ಕøತಿಯಲ್ಲಿ ಮಹತ್ವದ ಸ್ಥಾನವಿದೆ. ತಂದೆ, ಅವರ ತಂದೆ ಹೀಗೆ ವಿಶ್ವದ ತಂದೆಯ ಜತೆ ನಮಗೆ ಸಂಪರ್ಕ ಬೆಸೆಯುವ ಜೀವಚೈತನ್ಯದ ಪ್ರವಾಹ ಅದು. ನಮಗೂ ಪರಮಾತ್ಮನಿಗೂ ತಂದೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ತಂದೆಯನ್ನು ನಿರ್ಲಕ್ಷಿಸಿದರೆ ನಮಗೂ ಪರಮಾತ್ಮನಿಗೂ ಇರುವ ಕೊಂಡಿ ತಪ್ಪಿದಂತಾಗುತ್ತದೆ. ಅಂತೆಯೇ ತಾಯಿ, ಆಕೆಯ ತಾಯಿ ಹೀಗೆ ಚೈತನ್ಯ ಪ್ರವಾಹ ವಿಶ್ವಜನನಿಯನ್ನು ಸೇರುತ್ತದೆ ಎಂದು ವಿಶ್ಲೇಷಿಸಿದರು.
Also read: ಭಾರೀ ಮಳೆ | ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ
ಗುರುಪರಂಪರೆ ಕೂಡಾ ಇದಕ್ಕೆ ಹೊರತಲ್ಲ. ನಮ್ಮ ಪ್ರಥಮಾಚಾರ್ಯರಾದ ವಿದ್ಯಾನಂದರ ಕೊಂಡಿ ಕಳಚಿದರೆ ನಮಗೂ, ಶಂಕರಾಚಾರ್ಯರಿಗೂ ಸಂಪರ್ಕವೇ ಇಲ್ಲದಂತಾಗುತ್ತದೆ. ಶಂಕರಾಚಾರ್ಯರ ಪ್ರತ್ಯಕ್ಷ ಶಿಷ್ಯರಾದ ವಿದ್ಯಾನಂದರ ಸಮಾಧಿಯ ಅನಾವರಣ ಇಂದು ನಡೆದಿದೆ. ಸಮಾಜದ ಶಿಷ್ಯರು ಅಲ್ಲಿಗೆ ತೆರಳಿ ಹೆಚ್ಚಿನ ಸೇವೆ ಸಲ್ಲಿಸಿ ಪ್ರಥಮಾಚಾರ್ಯರ ಆಶೀರ್ವಾದ ಪಡೆಯುವಂತಾಗಬೇಕು ಎಂದು ಆಶಿಸಿದರು.
ವಿದ್ಯಾನಂದರ ಸಮಾಧಿ ಬಗ್ಗೆ ಇಂದಿಗೂ ಸಮಾಜಕ್ಕೆ ಕಲ್ಪನೆ ಇಲ್ಲ. ಗೋಕರ್ಣ ದೇವಾಲಯ ಹಸ್ತಾಂತರವಾದ ಬಳಿಕ ಕಾಕತಾಳೀಯ ಎಂಬಂತೆ ಅಜ್ಞಾತವಾಗಿದ್ದ ಅದು ಬೆಳಕಿಗೆ ಬಂದಿದೆ. ಅದರ ಜೀರ್ಣೋದ್ಧಾರ ಆ ಬಳಿಕ ಆಗಿದೆ. ಇಂದಿಗೂ ಮಹಾಬಲ ಉಪಾಧ್ಯಾಯರ ನೇತೃತ್ವದಲ್ಲೇ ಪೂಜೆ ಪುನಸ್ಕಾರಗಳು ಇಲ್ಲಿ ನಡೆಯುತ್ತಿವೆ. ಅವರ ಸೇವೆಯನ್ನು ಇಡೀ ಸಮಾಜ ಸ್ಮರಿಸಬೇಕು ಎಂದು ಸೂಚಿಸಿದರು.
ಮೂಲಗುರುವಿನ ಸ್ಮರಣೆ ಇರಬೇಕು. ಮೂಲಗುರುಗಳು ನಮ್ಮ ಪರಂಪರೆಯ ಪ್ರಥಮಾಂಕುರ. ಅವರ ಆಶೀರ್ವಾದ ಇಡೀ ಸಮಾಜಕ್ಕೆ ಸದಾ ದೊರಕಲಿ ಎಂದು ಆಶಿಸಿದರು. ಚಾತುರ್ಮಾಸ್ಯದಲ್ಲಿ ನಮ್ಮೊಳಗಿನ ಚೈತನ್ಯದ, ನಮ್ಮ ಶಕ್ತಿಯ ಅನಾವರಣವಾಗಬೇಕು. ಶುಭ ಪರಿವರ್ತನೆಗೆ ಇದು ಕಾರಣವಾಗಲಿ ಎಂದು ಹಾರೈಸಿದರು.
ಕಾಲ ಬಗೆಗಿನ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ಜ್ಯೋತಿಷ, ಆಯುರ್ವೇದ ಇವೆಲ್ಲವೂ ಅಪ್ಪಟ ವಿಜ್ಞಾನ; ಇದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. ಜಾತಕ ಎನ್ನುವುದು ಬ್ರಹ್ಮಾಂಡವಿದ್ದಂತೆ. ತಿಳಿದುಕೊಳ್ಳುವುದು ಬಹಳಷ್ಟಿದೆ. ನಮಗೆ ಗೊತ್ತಾದಷ್ಟನ್ನು ನಾವು ತಿಳಿಯುತ್ತೇವೆ. ದೈವಜ್ಞರು ಅದಕ್ಕೆ ದಾರಿ ತೋರಿಸುತ್ತಾರೆ ಎಂದು ಹೇಳಿದರು.
ಕೇವಲ ಪುಸ್ತಕದ ಜ್ಞಾನಕ್ಕೆ ನಾವು ಸೀಮಿತವಾಗದೇ, ಯುಕ್ತಿಯಿಂದ ಇದನ್ನು ಅನ್ವಯಿಸುವಂಥದ್ದು ಅಗತ್ಯ. ಅನೇಕ ಹೋರಗಳ ತತ್ವವನ್ನು ಬಲ್ಲವನಿಗೆ, ಪಂಚಸಿದ್ದಾಂತ ಕೋವಿದರಿಗೆ, ಊಹಾಪೋಹ ಪಟುವಿಗೆ, ಸಿದ್ಧಮಂತ್ರ ಜಾನಾತಿಗಳಿಗೆ ಜ್ಯೋತಿಷ ಸಿದ್ಧಿಸುತ್ತದೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ಮಹಾಬಲ ಉಪಾಧ್ಯಾಯ ವಿದ್ಯಾನಂದರ ಸಮಾಧಿಯ ಅನಾವರಣ ನೆರವೇರಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ ಹೊಸಾಕುಳಿ, ಕಾರ್ಯದರ್ಶಿ ಕೇಶವ ಕಿರಣ, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಎಸ್.ಜಿ.ಭಟ್ ಕಬ್ಬಿನಗದ್ದೆ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post