ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ರಾಮಚಂದ್ರಾಪುರ ಮಠ #Ramachandrapura Mutt (ಆದ್ಯ ರಘೂತ್ತಮ ಮಠ) ಹಾಗೂ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara Shri ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಗೋಕರ್ಣ ದೇವಾಲಯ ಮತ್ತು ಶ್ರೀಮಠದ ನಡುವಿನ ಸಂಬಂಧದ ಬಗೆಗಿನ ದಾಖಲೆಗಳ ಅನಾವರಣದ ಬಳಿಕ ಆಶೀರ್ವಚನ ನೀಡಿದರು.
ಗೋಕರ್ಣ ಮಂಡಲಾಚಾರ್ಯತ್ವ ಮತ್ತು ಮಹಾಬಲೇಶ್ವರನ ವಿಧಿವತ್ತಾದ ಅರ್ಚನೆಯ ಎರಡು ಅನುಜ್ಞೆಯನ್ನು ಶಂಕರರು ನಮ್ಮ ಮಠದ ಪ್ರಥಮಾಚಾರ್ಯರಾದ ವಿದ್ಯಾನಂದರಿಗೆ ನೀಡಿದರು. ಶ್ರೀಸಂಸ್ಥಾನ ಮಹಾಬಲೇಶ್ವರ ದೇವಸ್ಥಾನ ಎನ್ನಲಾಗುತ್ತದೆ. ಮಹಾಬಲೇಶ್ವರ ದೇವಸ್ಥಾನದ ಪಶ್ಚಿಮ ಪಡಸಾಲೆಯಲ್ಲಿ ಮಠ ಇತ್ತು. ದೇವಾಲಯ ನಿರ್ವಹಣೆಗಾಗಿಯೇ ಇತ್ತು. ಪೂರ್ವಾಚಾರ್ಯರ ಸಮಾಧಿಗಳೂ ಇಲ್ಲೇ ಇದ್ದವು. ಮಹಾಬಲೇಶ್ವರ ದೇವಾಲಯದ ವ್ಯವಸ್ಥೆಗಾಗಿಯೇ ಮಠದಲ್ಲಿ ಉತ್ತರಾಧಿಕಾರಿಗಳನ್ನು ನೇಮಕ ಮಾಡುವ ಪದ್ಧತಿ ಇತ್ತು. 33ನೇ ಯತಿಗಳು ಒಂದು ತಿಂಗಳು ಇಲ್ಲೇ ಇದ್ದು, ರಥವನ್ನು ದುರಸ್ತಿ ಮಾಡಿಸಿದ ನಿದರ್ಶನಗಳಿವೆ ಎಂದು ವಿವರಿಸಿದರು.
ಧನಮೂಲ ಅಲ್ಲ; ಪ್ರತಿಷ್ಠೆಗಾಗಿ ಅಲ್ಲ. ದೇವರ ಸೇವೆಗೆ ನಾವು ಇರುವವರು. ಅವನ ಇಚ್ಛೆಯಂತೆ ಆಗಲಿ. ನಿಶ್ಚಿಂತೆಯಿಂದ ಪ್ರತೀಕ್ಷೆ ಮಾಡೋಣ. ಪೂರ್ವಪರಂಪರೆಗೆ ಅನುಸಾರವಾಗಿ ಪೂಜೆ, ಉತ್ಸವಗಳು ನಡೆಯಬೇಕು. ದೇವಹಿತ, ಕಿಂಕರಹಿತ ಭಕ್ತಹಿತವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಇಂದು ಅನಾವರಣಗೊಂಡಿರುವ ಈ ದಾಖಲೆಗಳು ಪ್ರಶ್ನಾತೀತ ಎಂದು ಹೇಳಿದರು.
ಗುರಿಕ್ಕಾರರ ಸಮಾವೇಶದಲ್ಲಿ ಆಶೀರ್ವಚನದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಗುರಿಕ್ಕಾರರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು, ರಾಮದೇವರ ಪರವಾಗಿ ಸಂಸ್ಥಾನ. ಸಂಸ್ಥಾನದ ಪರವಾಗಿ ಇರುವವರು ಗುರಿಕ್ಕಾರರು. ಆಶೀರ್ವಾದ ಮಾತ್ರ ಅವರಿಗೆ ಸಲ್ಲುವ ಸಂಭಾವನೆ. ಅತ್ಯಂತ ನಿಷ್ಠೆ- ಶ್ರದ್ಧೆಯಿಂದ ಮುಪ್ಪನ್ನೂ ಮರೆತು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡುತ್ತಾರೆ. ಜೊಸ ತಲೆಮಾರಿನಲ್ಲಿ ಗುರಿಕ್ಕಾರರಾಗಲು ಹಿಂಜರಿಕೆ ಕಾಣುತ್ತಿದೆ. ಜಾಂಬವಂತರಿಗೆ ಹನುಮಂತನಂತೆ ಯುವಕರು ಈ ಕಾರ್ಯಕ್ಕೆ ಸಜ್ಜಾಗಬೇಕು ಎಂದು ಸೂಚಿಸಿದರು.
ಮಠದ ಧರ್ಮಧ್ವಜವನ್ನು ಎತ್ತರಕ್ಕೆ ಎತ್ತಿಹಿಡಿಯುವವರು ಬೇಕು. ಸಮಾಜದ ಹೊಸ ತಲೆಮಾರಿನವರು ಇದಕ್ಕೆ ಸಜ್ಜಾಗಬೇಕು. ಗುರಿಕ್ಕಾರರ ವೈಯಕ್ತಿಕ ಶ್ರೇಯಸ್ಸಿಗಾಗಿ ಗಣಪತಿ ಹವನ, ಆಂಜನೇಯ ಹವನ, ನವಗ್ರಹ ಹವನ ನಡೆಸಲಾಗಿದೆ. ಹೆಚ್ಚು ಸೇವೆ ಮಾಡುವ ಶಕ್ತಿ ಬರುವಂತೆ ಹರಸಿ ಇದನ್ನು ನೆರವೇರಿಸಲಾಗುತ್ತಿದೆ ಎಂದರು.
Also read: ಈದ್ ಮಿಲಾದ್ | ಖಾಕಿ ಭದ್ರಕೋಟೆಯಾಗಿದೆ ನಾಗಮಂಗಲ | ಹೇಗಿದೆ ನೋಡಿ ಭದ್ರತೆ?
ಮಠದ ಶ್ರೀಮುದ್ರೆಯ ಸಾಠಿ, ಸಂಸ್ಥಾನದ ಹಸ್ತಾಕ್ಷರದ ಸನ್ನದು, ರಜತ ರಕ್ಷೆ ನಿಮ್ಮನ್ನು ಅಧಿಕರಿಸುವಂಥದ್ದು. ಶಕ್ತಿ ತುಂಬುವಂಥದ್ದು. ಸಮಾಜವನ್ನು ಮುನ್ನಡೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಮಾಜದಲ್ಲಿ ಶ್ರೀಸಂಸ್ಥಾನದವರ ಪರವಾಗಿ ಸ್ವರ್ಣಪಾದುಕೆ ಸಂಚಾರ ನಡೆಯುತ್ತಿದೆ. ಸ್ವರ್ಣಪಾದುಕೆಗೆ ನಿಗದಿಪಡಿಸಿದ್ದ ಕಾಣಿಕೆಯನ್ನು ಈ ಬಾರಿ ರದ್ದುಪಡಿಸಿ, ಐಚ್ಛಿಕವಾಗಿ ಕಾಣಿಗೆ ಸಮರ್ಪಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚು ಹೆಚ್ಚು ಜನರಿಗೆ ವಿವಿವಿ ಬಗ್ಗೆ ಮಾಹಿತಿ ಈ ಮೂಲಕ ತಲುಪಬೇಕು ಎಂದು ಆಶಿಸಿದರು.
ಅಷ್ಟಮಂಗಲ ಚಿಂತನೆ ಮುಂದುವರಿಸಿದ ಶ್ರೀಗಳು, ಪ್ರತಿಯೊಬ್ಬರೂ ಬೆಳಿಗ್ಗೆ ಶ್ವಾಸಪರೀಕ್ಷೆ ಮಾಡಿಕೊಂಡು ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ವಾಮನಾಡಿ, ಮಧ್ಯನಾಡಿ, ಕ್ಷಿಣ ನಾಡಿ, ಇಡಾ, ಇಂಗಳ, ಸುಷುನ್ಮಾ ಅಥವಾ ಸೋಮ, ಅಗ್ನಿ, ಸೂರ್ಯನಾಡಿಯಲ್ಲಿ ಶ್ವಾಸ ಇರಬಹುದು. ಇದರಿಂದ ನಮ್ಮ ಮರಣದ ವರೆಗಿನ ಪ್ರತಿ ಅಂಶಗಳನ್ನು ತಿಳಿದುಕೊಳ್ಳಬಹುದು. ಇದನ್ನು ದೈವಜ್ಞರು ಹೆಚ್ಚಾಗಿ ಬಳಕೆ ಮಾಡುತ್ತಿಲ್ಲ. ಇದರ ಬಳಕೆ ಹೆಚ್ಚಬೇಕು ಎಂದು ಆಶಿಸಿದರು.
ದೈವಜ್ಞರು ಕೂಡಾ ತಮ್ಮ ಶ್ವಾಸದ ಮೂಲಕ ತನ್ನ ಜೀವನದ ಆಗುಹೋಗುಗಳನ್ನು ತಿಳಿದುಕೊಳ್ಳಬೇಕು. ಶುಭವಾರಗಳಲ್ಲಿ ಉಸಿರು ಎಡಕ್ಕೆ ಇದ್ದರೆ ಶುಭ. ಸೋಮ, ಬುಧ, ಶುಕ್ರವಾರಗಳಂದು ಉಸಿರು ಬಲಕ್ಕೆ ಇದ್ದರೆ ಅಶುಭ. ಭಾನು, ಮಂಗಳ, ಶನಿವಾರದಂದು ಶ್ವಾಸ ಬಲಕ್ಕಿದ್ದರೆ ಶುಭ. ಶ್ವಾಸ ಸ್ವಸ್ಥವಾಗಿದ್ದರೆ ಆರೋಗ್ಯದ ಸೂಚಕ. ಲಾಭ, ಅನುಕೂಲಗಳನ್ನು, ಸುಭೋಜನವನ್ನು ಕೂಡಾ ಇದು ಸೂಚಿಸುತ್ತದೆ. ಜೀವನಕ್ಕೆ ಬೇಕಾದ ಎಲ್ಲವೂ ಸಾಧನೆಯಾಗುತ್ತದೆ ಎನ್ನುವುದಕ್ಕೆ ಇದು ಸೂಚನೆ. ಶ್ವಾಸ ಕೆಟ್ಟಿತು ಎಂದಾದರೆ ಊಟ ಕೆಡುತ್ತವೆ ಎಂಬ ಅರ್ಥ. ಕಲಹಗಳು ಏರ್ಪಡುತ್ತವೆ. ಒಳ್ಳೆಯ ನಿದ್ದೆ ಬರುವುದಿಲ್ಲ. ಶರೀರದಿಂದ ಕಶ್ಮಲಗಳು ಹೋಗುವುದಿಲ್ಲ ಎಂದು ವಿಶ್ಲೇಷಿಸಿದರು.
ಭಾನುವಾರ ಶ್ವಾಸಾನುಕೂಲವಾಗದಿದ್ದರೆ ದೇಹದಲ್ಲಿ ವೇದನೆ, ಸೋಮವಾರ ಕಲಹ, ಮಂಗಳವಾರ ಮರಣ, ಬುಧವಾರ ದೂರಪ್ರಯಾಣ, ಗುರುವಾರ ಶ್ವಾಸಾನುಕೂ ಇಲ್ಲದಿದ್ದರೆ ರಾಜ್ಯಕ್ಕೆ ಆಪತ್ತು ಬರಬಹುದು. ಶುಕ್ರವಾರ ಕಾರ್ಯಹಾನಿ, ಶನಿವಾರ ಪರನಾಶ, ಕೃಷಿನಾಶ, ಭೂ ವಿವಾದಕ್ಕೆ ಕಾರಣವಾಗುತ್ತದೆ ಎಂದರು.
ಎಂಟು ಭಾನುವಾರ ಶ್ವಾಸ ಪ್ರತಿಕೂಲವಾದರೆ ಗುರುವಿಗೆ ಜೀವಕ್ಕೆ ಅಪಾಯ ಅಥವಾ ತನಗೆ ದೊಡ್ಡ ವ್ಯಾಧಿ ಬರುವ ಸೂಚನೆ. ಎಂಟು ಸೋಮವಾರ ಹೀಗಾದರೆ ಮಕ್ಕಳಿಗೆ ಆಪತ್ತು, ಮಂಗಳವಾರ ಬಂಧನಯೋಗ, ಬುಧವಾರದ ಶ್ವಾಸ ಪ್ರತಿಕೂಲ ಬಂದರೆ ಸಾವು ಎಂಬ ಅರ್ಥ, ಗುರುವಾರ ಗುರುವಿನ ನಿಶ್ಚಯ ಮೃತ್ಯು, ಶುಕ್ರವಾರ ಧನಕ್ಷಯ, ಶನಿವಾರ ಗೃಹಣಿ ಅಥವಾ ಗೃಹನಾಶ ಎಂದು ವಿಶ್ಲೇಷಿಸಿದರು.
ಮಹತ್ವದ ವಿಷಯಕ್ಕೆ ಹೊರಡುವಾಗ ನಾಡಿ ಎಡಕ್ಕಿರಬೇಕು. ಬಲಕ್ಕಿದ್ದರೆ ಅಶುಭ. ಪ್ರವೇಶ ಮಾಡುವಾಗ ನಾಡಿ ಬಲಕ್ಕಿದ್ದರೆ ಶುಭ. ಯೋಗಸಾಧನೆಗೆ ಮಧ್ಯನಾಡಿ ಪ್ರಶಸ್ತ. ಆತ್ಮಸಾಧನೆ, ಮುಕ್ತಿಗೆ ಪ್ರಯತ್ನ ಮಾಡಲು ಇದು ಅಗತ್ಯ ಎಂದರು.
ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು ಶ್ರೀಗಳ ಆಶೀರ್ವಾದ ಪಡೆದರು. 34ನೇ ಗುರುಗಳ ಪೂರ್ವಾಶ್ರಮ ಪರಂಪರೆಯ ವಿನಾಯಕ ರಮಣಿ ಭಟ್ ಗೋಕರ್ಣದ ದಾಖಲೆಗಳನ್ನು ಅನಾವರಣಗೊಳಿಸಿದರು. ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಳ್ಳೇರಿಯಾ ಮಂಡಲದ ಪ್ರಧಾನ ಗುರಿಕ್ಕಾರರಾದ ಮೊಗ್ರ ಸತ್ಯನಾರಾಯಣ ಭಟ್ ಗುರಿಕ್ಕಾರರ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.
ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ್, ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post