ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕದಳದ ಸಮಾದೇಷ್ಟರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಇವರಿಗೆ 2018ನೆಯ ಸಾಲಿನಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿ ಹಾಗೂ 5000 ರೂ.ಗಳ ನಗದು ಬಹುಮಾನ ನೀಡಲಾಗಿದೆ.
ಇಲಾಖೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶಕ್ತಿ ಮೀರಿ ಶ್ರಮಿಸಿ, ತಮ್ಮ ಕರ್ತವ್ಯದಲ್ಲಿ ಯಾವುದೇ ಲೋಪದೋಷವಿಲ್ಲದಂತೆ ಜವಾಬ್ದಾರಿಯುತ್ತವಾಗಿ ಇವರು ಕಾರ್ಯನಿರ್ವಹಿಸಿದ್ದು, ಇವರ ಸಾಧನೆಗೆ ಗೌರವ ಅರಸಿ ಬಂದಿದೆ.
ಅಕಾಡೆಮಿಯಲ್ಲಿ ನಡೆದ ವಿವಿಧ ತರಬೇತಿಗಳಲ್ಲಿ ಶೇ.100 ರಷ್ಟು ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದು, ಕೇಂದ್ರ ಕಚೇರಿಯ ನಿರ್ದೇಶನದಂತೆ 18ಕ್ಕೂ ಹೆಚ್ಚು ತರಬೇತಿಗಳನ್ನು ಪಡೆದಿದ್ದಾರೆ. 2014ರಲ್ಲಿ ದೆಹಲಿಯ ಎನ್’ಇಡಿಎಂ ತರಬೇತಿ ಕೇಂದ್ರದ ಕಾರ್ಯಾಗಾರದಲ್ಲೂ ರಾಜ್ಯವನ್ನು ಪ್ರತಿನಿಧಿಸಿ ಮುಂಬೈ ಮತ್ತು ಉತ್ತರ ಪ್ರದೇಶ ವಿವೇಕಾನಂದ ವಿಶ್ವವಿದ್ಯಾನಿಲಯದಲ್ಲಿ ವಿಪತ್ತು ನಿರ್ವಹಣೆ ಕಾರ್ಯಾಗಾರದಲ್ಲೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ.
ಅಷ್ಟೇ ಅಲ್ಲದೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಹಾಗೂ ವಾರ್ತಾ ಇಲಾಖೆ ಸೇರಿದಂತೆ ರೆಡ್’ಕ್ರಾಸ್ ಮತ್ತು ರೋಟರಿ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆಯ ನಕ್ಸಲ್ ಪೀಡಿತ ತೀರ್ಥಹಳ್ಳಿ, ಆಗುಂಬೆ, ಮಾಸ್ತಿಕಟ್ಟೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಯುವಕರನ್ನು ಪರಿವರ್ತಿಸುವ ನಿಟ್ಟಿನಲ್ಲಿ ಅರಿವು ಮತ್ತು ಜಾಗೃತಿಯಂತಹ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ.
ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ ಹಾಗೂ ಮಹಾರಾಷ್ಟ್ರದ ಚುನಾವಣೆಗಳಲ್ಲಿ ಮುಂದಾಳತ್ವವನ್ನು ವಹಿಸಿ ರಾಜ್ಯಗಳ ಚುನಾವಣೆ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಲು ಸಹಕರಿಸಿರುತ್ತಾರೆ. ಜಿಲ್ಲೆಯಲ್ಲಿ 452ಕ್ಕೂ ಅಧಿಕ ಗೃಹರಕ್ಷಕ ಅವರೆಲ್ಲರಿಗೂ ಜೀವನಾಧರವನ್ನು ಒದಗಿಸಿಕೊಟ್ಟಿದ್ದು, ಇಂತಹ ಕಾರ್ಯವೈಖರಿಗಳ ಮೂಲಕ ವಿಭಿನ್ನವಾಗಿ ಗೃಹರಕ್ಷಕ ಇಲಾಖೆ ಮಾದರಿಯಾಗಿಸಲು ಶ್ರಮಿಸುತ್ತಿದ್ದಾರೆ.
ಇವರನ್ನು ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಈ ಸಂದರ್ಭದಲ್ಲಿ ಜಿಲ್ಲೆಯ ಗೃಹರಕ್ಷದಳ ಕಚೇರಿಯ ಸಿಬ್ಬಂದಿವರ್ಗ, ಘಟಕಾಧಿಕಾರಿಗಳು, ಗೃಹರಕ್ಷಕ/ಗೃಹರಕ್ಷಕಿಯರು ಅಭಿನಂದಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post