ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಸಮಾಜ ಸೇವೆ ಎಂಬುದು ಇಂದು ಅರ್ಥ ಕಳೆದುಕೊಂಡು ಶೇ.10 ಕೆಲಸಕ್ಕೆ ಶೇ.90 ಪ್ರಚಾರಕ್ಕೆಂದು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿ ಲೈಕ್ ಗಿಟ್ಟಿಸಲು ಮಾತ್ರ ಸೀಮಿತವಾಗುತ್ತಿರುವವರ ನಡುವೆ ಎಲೆಮರೆಯ ಕಾಯಿಗಳಂತೆ ಸದ್ದಿಲ್ಲದೇ ಅಗತ್ಯ ಸೇವೆಗಳನ್ನು ಪೂರೈಸುತ್ತಾ ಪ್ರಚಾರವನ್ನು ಬಯಸದೇ ‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ಮಾತಿಗೆ ಸಾಕ್ಷಿಯೆಂಬಂತೆ ಕಾರ್ಯನಿರ್ವಹಿಸುತ್ತ ಸಮಾಜಕ್ಕೆ ಹಾಗೂ ಯುವ ಜನತೆಗೆ ಮಾದರಿಯಾಗುತ್ತ ಮುನುಗ್ಗುತ್ತಿರುವ ಒಂದು ಹೆಮ್ಮೆಯ ಸಂಸ್ಥೆಯ ಪರಿಚಯ ಲೇಖನ ನಿಮಗಾಗಿ.
ಹೌದು ‘ರೌಂಡ್ ಟೇಬಲ್ ಇಂಡಿಯಾ’ ಎಂಬ ಹೆಸರು ಅಷ್ಟಾಗಿ ಯಾರೂ ಕೇಳಿರದ ಹೆಸರು. ಆದರೆ ಸಂಸ್ಥೆಯು ಮಾಡುತ್ತಿರುವ ಸಾಧನೆಗಳನ್ನು ನೋಡಿದರೆ ನೀವು ಹುಬ್ಬೇರಿಸುವುದು ಖಂಡಿತ. ಕೇವಲ 18 ರಿಂದ 40 ವಯೋಮಾನದ ಯುವ ಜನರಿಗೆ ಮಾತ್ರ ಇಲ್ಲಿ ಸದಸ್ಯತ್ವ. ಈ ಸಂಸ್ಥೆಯಲ್ಲಿ ಗರಿಷ್ಠ 21 ಸದಸ್ಯರಿಗೆ ಮಾತ್ರ ಅವಕಾಶ ಎಂಬುದು ಮತ್ತೊಂದು ವಿಶೇಷ. ಸದಸ್ಯರ ಸಂಖ್ಯೆ ಹೆಚ್ಚಾದರೆ ಸಂಸ್ಥೆಗೆ ಲಾಭ ಎಂದು ಯೋಚಿಸುವ ಇಂದಿನ ಕಾಲದಲ್ಲಿ ‘ರೌಂಡ್ ಟೇಬಲ್’ ಸಂಸ್ಥೆಯು 22ನೇ ಸದಸ್ಯನಿಗೆ ಅವಕಾಶವಿಲ್ಲ ಎಂದರೆ ವಿಚಿತ್ರವೆನಿಸದೇ ಇರದು. ಆದರೆ ಪ್ರತಿಯೊಬ್ಬರ ಅಧಿಕಾರಾವಧಿ ಕೇವಲ ಒಂದು ವರ್ಷವಷ್ಟೇ ಆದ್ದರಿಂದ ಈ ಕಡಿಮೆ ಅವಧಿಯಲ್ಲೇ ತಮ್ಮ ಸಾಧನೆಯ ಪ್ರಗತಿ ತೋರಲೇಬೇಕಿದೆ.

ಒಂದು ಸರ್ಕಾರ ಮಾಡಬಹುದಾದ ಕೆಲಸವನ್ನು ಸರಕಾರದ ಸಹಾಯವಿಲ್ಲದೆ, ಸರ್ಕಾರ ಕೈಗೊಳ್ಳುವ ಸಮಯಕ್ಕಿಂತ ಅತಿ ಕಡಿಮೆ ಸಮಯದಲ್ಲಿ ಸರ್ಕಾರದ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಸರ್ಕಾರ ನೀಡುವ ಗುಣಮಟ್ಟಕ್ಕಿಂತ ಅತ್ಯುತ್ತಮ ಗುಣಮಟ್ಟದಲ್ಲಿ, ಸರ್ಕಾರವೇ ಹುಬ್ಬೇರಿಸುವಂತೆ ಅತ್ಯದ್ಭುತವಾಗಿ ಯೋಜನೆಗಳನ್ನು ರೂಪಿಸಿ ನಿರ್ಧಿಷ್ಟ ಸಮಯದಲ್ಲಿ ಪೂರೈಸುವ ಚಾಕಚಕ್ಯತೆ ಪ್ರದರ್ಶಿಸುವಲ್ಲಿ ಯಶಸ್ಸಿ ಸಂಸ್ಥೆಯೆನಿಸಿದ ಹೆಗ್ಗಳಿಕೆ ರೌಂಡ್ ಟೇಬಲ್ ಸಂಸ್ಥೆಗೆ ಸಲ್ಲುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಜೂನ್ 24ರ ನಾಳೆ ಲೋಕಾರ್ಪಣೆಗೊಳ್ಳುತ್ತಿದೆ ದುರ್ಗಿಗುಡಿ ಆಂಗ್ಲಮಾಧ್ಯಮ ಶಾಲೆಯ “ರೌಂಡ್ ಟೇಬಲ್ ಬ್ಲಾಕ್” ಕಟ್ಟಡ.


ಯೋಜನೆಗಳಿಗೆ ಹಣದ ಕೊರತೆಯಾದಾಗ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ ಕಾರ್ಯಕ್ರಮಗಳ ಮೂಲಕ ಕೊರತೆ ನೀಗಿಸುವ ಪ್ರಯತ್ನ ಮಾಡಿರುವ ಉದಾಹರಣೆಗಳೂ ಇವೆ. ಶಿವಮೊಗ್ಗದಲ್ಲಿ ಇದುವರೆಗೆ ಒಟ್ಟಾರೆ 35 ಕ್ಲಾಸ್ ರೂಮ್ ಗಳು, ಆರು ಕಡೆ ಸ್ಮಾರ್ಟ್ ಕ್ಲಾಸ್ಗಳು, ವಿವಿಧ ಕಡೆ ಶಾಲಾಕೊಠಡಿಗಳಿಗೆ ಕಪ್ಪುಹಲಗೆ ಗಳು, ಶಾಲಾ ಮಕ್ಕಳಿಗೆ ಆಟದ ಸಾಮಗ್ರಿಗಳು, ಕೊಠಡಿಗಳಿಗೆ ಬೆಳಕಿನ ವ್ಯವಸ್ಥೆ, ಶೌಚಾಲಯದ ಬ್ಲಾಕ್ ಗಳು, ಇತ್ಯಾದಿ ಇತ್ಯಾದಿಗಳು ರೌಂಡ್ ಟೇಬಲ್ ಇಂಡಿಯಾದ ಶಿವಮೊಗ್ಗ ವಿಭಾಗದ ಸಾಧನೆಯಾಗಿದೆ.
ಶಿವಮೊಗ್ಗದ ಜನಪ್ರಿಯ ಎಸ್ಪಿ ಆಗಿದ್ದ ಶ್ರೀ ರವಿ ಡಿ ಚೆನ್ನಣ್ಣನವರ್ ಅವರ ಅವಧಿಯಲ್ಲಿ ಸುಮಾರು 10 ಪೊಲೀಸ್ ಠಾಣೆಗಳನ್ನು KNIGHTS IN KHAKI ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಗುರುತಿಸಿ ಸನ್ಮಾನಿಸಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಪ್ರತಿವರ್ಷ ‘ಆರ್ ಟಿ ಐ ಸಪ್ತಾಹ’ ಎಂಬ ಜನಪ್ರಿಯ ಕಾರ್ಯಕ್ರಮದಲ್ಲಿ ಏಳು ದಿನ ಏಳು ವಿವಿಧ ರೀತಿಯ ಅತ್ಯಗತ್ಯ ಸಮುದಾಯ ಸೇವೆಗಳನ್ನು ಕೈಗೊಳ್ಳುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಮಹತ್ವದ ಕೆಲಸ ಮಾಡುತ್ತಿರುವುದು ಸಂಸ್ಥೆಯ ಸೇವಾ ಭಾವವನ್ನು ತೋರುತ್ತದೆ.

ನಾಳೆಯ ಶಾಲಾ ಬ್ಲಾಕ್ ಉದ್ಘಾಟನೆಗೆ ದೂರದ ಚಂಡೀಗಢದಿಂದ ರೌಂಡ್ ಟೇಬಲ್ ಇಂಡಿಯಾ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ರಚಿತ್ ಬನ್ಸಾಲ್ ರವರು ಆಗಮಿಸುತ್ತಿದ್ದಾರೆ. ಅದ್ಭುತ ಕೆಲಸಗಳ ಮೂಲಕ ತೆರೆಮರೆಯಲ್ಲಿ ಸೇವಾ ನಿರತವಾಗಿರುವ ಇಂತಹ ಸಂಸ್ಥೆಯೊಂದು ನಮ್ಮ ಶಿವಮೊಗ್ಗದಲ್ಲಿ ಇರುವುದು ನಮಗೆ ಹೆಮ್ಮೆಯ ವಿಷಯವೇ ಹೌದಲ್ಲವೇ?









Discussion about this post