ಗೌರಿಬಿದನೂರು: ದೇಶದ ಭವಿಷ್ಯ ಇಂದಿನ ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲೆ ನಿಂತಿದ್ದು, ಶಾಲೆಗಳಲ್ಲಿ ಗುಣಾತ್ಮಕವಾದ ಶಿಕ್ಷಣವನ್ನು ನೀಡಿದಲ್ಲಿ ರಾಷ್ಟ್ರದ ಪ್ರಗತಿಗೆ ಕೈಜೋಡಿಸಿದಂತಾಗುತ್ತದೆ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಎಚ್.ಎನ್. ಪ್ರಕಾಶರೆಡ್ಡಿ ತಿಳಿಸಿದರು.
ನಗರದ ಶ್ರೀಪ್ರಸನ್ನ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಶಾಲಾ ಹಂತದಲ್ಲಿ ಶಿಕ್ಷಣದ ಜೊತೆಯಲ್ಲಿ ಮಕ್ಕಳ ಭವಿಷ್ಯಕ್ಕೆ ಆಸರೆಯಾಗಬಲ್ಲ ಸಾಮರ್ಥ್ಯಗಳನ್ನು ಕಲಿಸುವ ಪ್ರಯತ್ನ ಮಾಡಬೇಕಾಗಿದೆ. ಇದರಿಂದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಸಾಧ್ಯವಾಗುತ್ತದೆ. ಶಾಲೆಯಲ್ಲಿ ಶಿಕ್ಷಕರು ಹಾಗೂ ಮನೆಯಲ್ಲಿ ಪೋಷಕರು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ಆಸಕ್ತಿ ವಹಿಸಿ ಅವರ ಕಲಿಕಾ ದಾಹಕ್ಕೆ ಅನುಗುಣವಾದ ವಾತಾವರಣವನ್ನು ನಿರ್ಮಿಸಬೇಕಾಗಿದೆ. ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಗುಣಮಟ್ಟದ ಮಾನವೀಯ ಗುಣಗಳನ್ನು ಕಲಿಸಬೇಕಾಗಿದೆ ಎಂದರು.
ಮುಖಂಡರಾದ ಬಿ.ಪಿ. ಅಶ್ವತ್ಥ ನಾರಾಯಣಗೌಡ ಮಾತನಾಡಿ, ಶಿಕ್ಷಣವು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಿ ಎಲ್ಲರನ್ನು ಸರಿದಾರಿಯಲ್ಲಿ ನಡೆಸಲು ಸಹಕಾರಿಯಾಗುತ್ತದೆ. ಶಾಲೆಯಲ್ಲಿ ಕಲಿಸುವ ಪ್ರತಿಯೊಂದು ಅಕ್ಷರವು ಮುಂದಿನ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ಸಮಾಜದಲ್ಲಿ ಜನ್ಮ ನೀಡಿದ ತಂದೆ ತಾಯಿ ಹಾಗೂ ಅಕ್ಷರ ಕಲಿಸಿದ ಗುರುಗಳಿಗೆ ಗೌರವವನ್ನು ನೀಡುವ ಮೂಲಕ ಸತ್ಪ್ರಜೆಗಳಾಗಿ ಬಾಳಬೇಕಾಗಿದೆ. ಶಿಕ್ಷಣದ ಜೊತೆಯಲ್ಲಿ ಸಂಸ್ಕಾರವನ್ನು ಕಲಿಯುವ ನಿಜವಾದ ದೇಗುಲವೇ ಶಾಲೆಗಳಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಕೃಷ್ಣಮೂರ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಎ. ಅರುಂಧತಿ, ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ರತ್ನಮ್ಮ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಎಚ್. ಜಗದೀಶ್, ಮುಖ್ಯಶಿಕ್ಷಕ ಆಂಜನೇಯಲು, ಸಿ.ಎಚ್. ದೇವರಾಜ್, ಆವಲಪ್ಪ, ದೈಹಿಕ ಶಿಕ್ಷಣಾಧಿಕಾರಿ ಹನುಮಂತರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಧುಸೂಧನ ರೆಡ್ಡಿ, ಸದಸ್ಯರಾದ ಬಿ.ಎನ್. ಮಂಜುನಾಥ್, ಎನ್.ಆರ್. ಮಂಜುನಾಥ್, ಸಿಂಹಾದ್ರಿ, ಶಿಕ್ಷಕರಾದ ಪಿ.ವಿ. ಸುವರ್ಣಮ್ಮ, ಚಾಂದ್ ಬಾಷಾ, ಬಾಲಪ್ಪ, ಚಿಕ್ಕನರಸಿಂಹಪ್ಪ, ವೈ.ಎನ್. ಅಂಬಿಕಾ ಇನ್ನಿತರರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post