ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ರೈತರು ಆಧುನಿಕ ತಾಂತ್ರಿಕತೆಯನ್ನು ಬೇಸಾಯದಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಉತ್ತಮ ಇಳುವರಿಯ ಬೆಳೆಯನ್ನು ಬೆಳೆದು ಕೃಷಿಯನ್ನು ಸಾರ್ಥಕ ಜೀವನವನ್ನು ಕಾಣಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪ ತಿಳಿಸಿದರು.
ತಾಲೂಕಿನ ಹಾಲಗಾನಹಳ್ಳಿಯಲ್ಲಿ 2019-20 ನೇ ಸಾಲಿನ ಭೂ ಸಮೃದ್ಧಿ ಯೋಜನೆಯಡಿಯಲ್ಲಿ ಆಯೋಜಿಸಿದ್ದ ಕಡಲೆ ಬೇಳೆ ಕ್ಷೇತ್ರೋತ್ಸವವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಬಯಲು ಸೀಮೆಯ ಈ ಭಾಗದ ರೈತರು ಇರುವ ಅತ್ಯಲ್ಪ ನೀರಿನಲ್ಲಿ ಇಲಾಖೆಯ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆದು ಮಾದರೀ ಕೃಷಿಯನ್ನು ಮಾಡಬೇಕಾಗಿದೆ. ಇದರಿಂದ ವಿವಿಧ ತಳಿಯ ಬೆಳೆಗಳನ್ನು ರೈತರ ಜಮೀನಿನಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ರಾಜ್ಯದ ಉತ್ತರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಕಡಲೆ ಬೆಳೆಯನ್ನು ಈ ಭಾಗದ ರೈತರು ಅಳವಡಿಸಿಕೊಂಡಿರುವುದು ಶ್ಲಾಘನೀಯವಾದುದು. ಹಿಂಗಾರಿನಲ್ಲಿ ರೈತರು ಆರ್ಥಿಕ ಸಬಲೀಕರಣಕ್ಕಾಗಿ ಈ ರೀತಿಯ ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದರು.
ಇಕ್ರಿಸ್ಯಾಟ್’ನ ವಿಜ್ಞಾನಿ ಡಾ.ಕೆ.ಎಚ್. ಅನಂತ್ ಮಾತನಾಡಿ, ರೈತರು ಮುಂಗಾರಿನಲ್ಲಿ ತಮ್ಮ ಭೂಮಿಯಲ್ಲಿ ಏಕ ವಿಧದ ಬೆಳೆಯನ್ನು ಬೆಳೆಯುವ ಜೊತೆಗೆ ಹಿಂಗಾರಿನಲ್ಲಿ ಇಲಾಖೆಯ ಮಾರ್ಗದರ್ಶನದಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಕಡಲೆಯನ್ನು ಬೆಳೆಯಬಹುದಾಗಿದೆ. ಇದರಿಂದ ಜಮೀನಿನ ಫಲವತ್ತತೆಯನ್ನು ಕಾಪಾಡುವ ಜೊತೆಗೆ ಕಡಿಮೆ ಅವಧಿಯಲ್ಲಿ ಉತ್ತಮ ಇಳುವರಿಯ ಬೆಳೆ ಬೆಳೆಯಬಹುದಾಗಿದೆ ಎಂದು ತಿಳಿಸಿದರು.
ಪ್ರಗತಿಪರ ರೈತ ರಾಜಶೇಖರರೆಡ್ಡಿ ಮಾತನಾಡಿ, ಕಡಿಮೆ ನೀರು ಅಥವಾ ಚಳಿಗಾಲದ ಹಿಬ್ಬನಿಯಲ್ಲಿ ಬೆಳೆಯುವ ಕಡಲೆ ಬೆಳೆಯು ರೈತರಿಗೆ ವರದಾನವಾಗಿದೆ. ಮಿತ ಖರ್ಚಿನಲ್ಲಿ ಹಿಂಗಾರಿನಲ್ಲಿ ಬೆಳೆಯುವ ಈ ಬೆಳೆಯು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಹಿಂಗಾರಿನಲ್ಲಿ ಕಡಲೆ ಬೆಳೆದ ಪ್ರಗತಿಪರ ರೈತರಿಗೆ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರೋತ್ಸವದಲ್ಲಿ ಕಡಲೆ ಬೆಳೆಯ ಬಗ್ಗೆ ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕರಾದ ಎಂ.ಅನುರೂಪ, ಸಹಾಯಕ ನಿರ್ದೇಶಕರಾದ ಎಸ್.ಎನ್. ಮಂಜುನಾಥ್, ಆತ್ಮಯೋಜನೆಯ ಸಲಹೆಗಾರರಾದ ಜಯಣ್ಣ, ಇಕ್ರಿಸ್ಯಾಟ್ ಸಂಸ್ಥೆಯ ವಿಜ್ಞಾನಿಗಳಾದ ಡಾ.ಕೌಶಲ್ ಗರ್ಗ್, ಯೋಗೀಶ್ ಕುಮಾರ್, ಲಕ್ಷ್ಮೀದೇವಿ, ಯಲ್ಲಪ್ಪ, ಸೋಮ್‌ಕುಮಾರ್, ರೈತರಾದ ಶಿವಶಂಕರರೆಡ್ಡಿ, ಶ್ರೀನಿವಾಸರೆಡ್ಡಿ, ಕಾಂತಮ್ಮ, ಮುಖಂಡರಾದ ತಿಮ್ಮಾರೆಡ್ಡಿ, ಶ್ರೀನಿವಾಸಬಾಬು, ನರೇಶ್ ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093






Discussion about this post