ಗೌರಿಬಿದನೂರು: ಬೇಸಾಯದಲ್ಲಿ ಆಧುನಿಕತೆಯನ್ನು ಬಳಸಿ ಸಹಜ ಕೃಷಿಯ ಜೊತೆಗೆ ಹೆಚ್ಚಿನ ಸಿರಿಧಾನ್ಯಗಳ ಉತ್ಪಾದನೆಯನ್ನು ಮಾಡುವ ಮೂಲಕ ರೈತರು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಮಾಜಿ ಕೃಷಿ ಸಚಿವರಾದ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ತಾಲೂಕಿನ ತೊಂಡೇಬಾವಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರೈತರು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಬೇಸಾಯ ಮಾಡುವ ಜೊತೆಗೆ ಜಲಮೂಲಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ಬದುಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಚೆಕ್ ಡ್ಯಾಂ ಸೇರಿದಂತೆ ಇನ್ನಿತರ ಸತ್ಕಾರ್ಯಗಳನ್ನು ಮಾಡಬೇಕಾಗಿದೆ. ಇದರಿಂದ ಮಳೆ ನೀರನ್ನು ಸಂಗ್ರಹಿಸಿ ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ಇದರ ಜೊತೆಗೆ ಕೃಷಿ ಆಧಾರಿತವಾದ ಸಾಮೆ, ಕೊರ್ಲೆ, ನವಣೆ, ಆರ್ಕ, ಸಜ್ಜೆ ಸೇರಿದಂತೆ ಇನ್ನಿತರ ಸಿರಿಧಾನ್ಯಗಳನ್ನು ಬೆಳೆಯಲು ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.
ರೈತರ ಅನುಕೂಲಕ್ಕಾಗಿ ಉತ್ತಮ ಮಾರುಕಟ್ಟೆ ಸೌಲಭ್ಯ ಹಾಗೂ ದಾಸ್ತಾನು ಸೌಲಭ್ಯಕ್ಕಾಗಿ ಸುಮಾರು 500 ಕೋಟಿ ಹಾಗೂ ಸಿರಿಧಾನ್ಯಗಳ ಸಂಸ್ಕರಣೆಗಾಗಿ 150 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ. ಪ್ರಸ್ತುತ ಸರ್ಕಾರವು ಅದನ್ನು ಯಾವ ರೀತಿ ಬಳಕೆ ಮಾಡಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ. ಮಂಜುನಾಥ್, ರಾಜ್ಯದ ಕೃಷಿ ಪದ್ಧತಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಹಾಗೂ ಇಸ್ರೆಲ್ ಮಾದರಿಯ ಕೃಷಿ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ರೈತರು ಸಮಗ್ರವಾಗಿ ಅಭಿವೃದ್ಧಿಯಾಗಬೇಕು ಎಂಬುದು ಮಾಜಿ ಕೃಷಿ ಸಚಿವರಾದ ಎನ್.ಎಚ್. ಶಿವಶಂಕರ ರೆಡ್ಡಿ ಯವರ ಆಶಯವಾಗಿದೆ. ಇದರಂತೆ ಕಳೆದ ಒಂದು ವರ್ಷದಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಕೃಷಿ ಪದ್ಧತಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದಲ್ಲದೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಳೆಯ ತೀವ್ರ ಅಭಾವದಿಂದ ಈ ಭಾಗದ ಅಂತರ್ಜಲದ ಮಟ್ಟ ಕುಸಿದಿದ್ದು, ಇದರಿಂದ ಕೃಷಿಯನ್ನಾಧರಿಸಿದ್ದ ರೈತರು ಕಂಗಾಲಾಗಿದ್ದಾರೆ. ಈ ಭಾಗಕ್ಕೆ ಶಾಶ್ವತವಾದ ನೀರಿನ ಸೌಲಭ್ಯ ದೊರೆತಲ್ಲಿ ಉತ್ತಮ ಬೇಸಾಯವನ್ನು ಮಾಡುವ ಮೂಲಕ ಗ್ರಾಮೀಣ ಭಾಗದ ಜನತೆ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ನಾಗರತ್ನಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಕಾರ್ಯಕ್ರಮದಲ್ಲಿ ಆತ್ಮಾ ಯೋಜನೆಯಡಿಯಲ್ಲಿ ವಿವಿಧ ಫಲಾನುಭವಿಗಳಿಗೆ ಸುತ್ತು ನಿಧಿಯನ್ನು ಹಾಗೂ ಸೌಲಭ್ಯಗಳನ್ನು ವಿತರಣೆ ಮಾಡಿದರು.
ಜಿಲ್ಲಾ ಸದಸ್ಯರಾದ ಸರಸ್ವತಮ್ಮ, ಎಪಿಎಂಸಿ ಅಧ್ಯಕ್ಷರಾದ ಪಿ.ಎನ್. ಶಿವಶಂಕರ ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹನುಮಂತರೆಡ್ಡಿ, ತಾಲೂಕು ಪಂಚಾಯ್ತಿ ಸದಸ್ಯರಾದ ಟಿ.ಕೆ. ಶ್ರೀನಿವಾಸಗೌಡ, ಇಒ ಎನ್. ಮುನಿರಾಜು, ಪಶು ಸಂಗೋಪನಾ ನಿರ್ದೇಶಕರಾದ ಎಸ್. ಮಾರುತಿ ರೆಡ್ಡಿ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮುರಳೀಧರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್, ಮೀನುಗಾರಿಕೆ ಇಲಾಖೆಯ ಮಾಧುರಿ, ಮುಖಂಡರಾದ ಎಂ.ಸಿ. ಗಂಗಪ್ಪ, ಯಶೋಧಮ್ಮ, ಬೊಮ್ಮಣ್ಣ, ಬಿ.ಪಿ. ಅಶ್ವತ್ಥ್ ನಾರಾಯಣಗೌಡ, ಬಸಪ್ಪ ರೆಡ್ಡಿ, ರಾಮಕೃಷ್ಣಾ ರೆಡ್ಡಿ, ಲಕ್ಷ್ಮೀ ನಾರಾಯಣಪ್ಪ, ಚಿಕ್ಕಣ್ಣ, ವಿಜ್ಞಾನಿಗಳಾದ ಗಾಯತ್ರಿ, ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಎನ್. ಮಂಜುನಾಥ್, ಪಿಡಿಒ ಶ್ರೀನಿವಾಸ್, ಇಲಾಖೆಯ ಅಧಿಕಾರಿಗಳು, ಪ್ರಗತಿಪರ ರೈತರು ಭಾಗವಹಿಸಿದ್ದರು.
ಬೆಳೆ ವಿಮೆ ರೈತರ ಖಾತೆಗೆ ಜಮಾ:
ಕೃಷಿ ಇಲಾಖೆಯಲ್ಲಿ ಕಳೆದ 2016-17 ಮತ್ತು 2017-18 ನೆಯ ಸಾಲಿನಲ್ಲಿ ರೈತರು ತಮ್ಮ ಬೆಳೆಗಳಿಗೆ ಮಾಡಿಸಿದ್ದ ವಿಮೆಗೆ ಸಂಬಂಧಿಸಿದಂತೆ ಹಣವು ತಾಂತ್ರಿಕ ದೋಷಗಳಿಂದ ಸಮಸ್ಯೆಯಾಗಿತ್ತು. ಶೀಘ್ರದಲ್ಲೇ ರೈತರ ಖಾತೆಗಳಿಗೆ ಬರುವಂತೆ ಮಾಡಲಾಗಿದೆ. ಜೊತೆಗೆ 2018-19 ನೆಯ ಸಾಲಿನಲ್ಲಿ ರಾಜ್ಯದಲ್ಲಿ ಸುಮಾರು 450 ಕೋಟಿ ವಿಮಾ ಹಣ ಬಿಡುಗಡೆಯಾಗಿದ್ದು, ಹಂತಹಂತವಾಗಿ ರೈತರ ಖಾತೆಗಳಿಗೆ ಜಮಾ ಆಗುತ್ತಿದೆ. ಪ್ರಸ್ತುತ ತಾಲೂಕಿನಲ್ಲಿ 12 ಕೋಟಿ ರೂ.ಗಳ ವಿಮಾ ಹಣ ಬಿಡುಗಡೆಯಾಗಿದೆ. ಇದರ ಬಗ್ಗೆ ರೈತರು ಯಾವುದೇ ಅನುಮಾನ ಪಡುವಂತಿಲ್ಲ.
-ಎನ್.ಎಚ್. ಶಿವಶಂಕರ ರೆಡ್ಡಿ
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)

















