ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ಪರಂಪರೆಯಲ್ಲಿ ಆಚರಣೆಯಲ್ಲಿರುವ ಬಹುತೇಕ ಸಂಗತಿಗಳಿಗೆ ಅಂತರಾರ್ಥಗಳಿರುತ್ತವೆ. ಗುರು ಪಾದುಕೆಗಳೂ ಪಾದರಕ್ಷೆಗಳೇ. ಆದರೆ ಗುರುಗಳು ಮೆಟ್ಟಿ ನೀಡುವ ಪಾದುಕೆಗಳಿಗೆ ನಮ್ಮಲ್ಲಿ ಪವಿತ್ರ ಸ್ಥಾನವಿದೆ. ಅವು ಗುರುವನ್ನೇ ಪ್ರತಿನಿಧಿಸುವ ಪ್ರತೀಕಗಳು. ಅವುಗಳನ್ನು ಪೂಜಿಸುವುದರ ಅರ್ಥ ಗುರುವನ್ನೇ ಪೂಜಿಸುವುದೆಂದು. ಅದರಿಂದ ಎಷ್ಟು ಫಲಗಳು ದೊರೆಯುವುದೆಂಬುದನ್ನು ಶಂಕರ ಭಗವತ್ಪಾದರ ‘ಗುರು ಪಾದುಕಾ ಸ್ತೋತ್ರ ಮತ್ತು ವೇದಾಂತ ದೇಶಿಕರ ‘ಪಾದುಕಾ ಸಹಸ್ರಮ್ ತಿಳಿಸುತ್ತವೆ.
‘ಗುರು ಎಂದರೆ ಕತ್ತಲೆಯನ್ನು ಓಡಿಸಿ, ಬೆಳಕನ್ನು ಒದಗಿಸುವವನು. ಅವನು ಇಲ್ಲದಿದ್ದರೆ ನಮ್ಮ ಬಾಳು ಸುಗಮವಾಗಿ ಸಾಗದು; ಬದುಕಿನ ದಾರಿ ನಮಗೆ ಕಾಣುವುದೇ ಅವನು ಕೊಡುವ ಬೆಳಕಿನಲ್ಲಿ. ನಮ್ಮ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ನಮ್ಮನ್ನು ಭವಸಾಗರದಿಂದ ಪಾರು ಮಾಡಿ ಮೋಕ್ಷ ಮಾರ್ಗಿಗಳನ್ನಾಗಿ ಮಾಡುವವನು ಗುರು ಒಬ್ಬನೇ ಎಂಬುದರಲ್ಲಿ ಲವಶೇಷವೂ ಸಂದೇಹವಿಲ್ಲ. ಸಹಸ್ರಾರು ವರ್ಷಗಳಿಂದ ನಮ್ಮ ಸಂಸ್ಕೃತಿ ಉಳಿದು ಬಂದಿರುವುದಕ್ಕೆ ನಮ್ಮ ವ್ಯವಸ್ಥೆಯಲ್ಲಿರುವ ಗುರು ಪರಂಪರೆಯೇ ಮುಖ್ಯ ಕಾರಣ. ಅನೇಕ ಶ್ಲೋಕಗಳಲ್ಲಿ, ಸ್ತೋತ್ರಗಳಲ್ಲಿ ಗುರುವಿನ ಮಹತ್ವ ಹಾಗೂ ಹಾತ್ಮೆಗಳನ್ನು ತಿಳಿಸಲಾಗಿದೆ.
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ಚಕ್ಷುರರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ॥
ಅಜ್ಞಾನವೆಂಬ ಕತ್ತಲಿನಿಂದ ಕುರುಡನಾಗಿರುವವನನ್ನು ಜ್ಞಾನದ ಅಂಜನವನ್ನು ಶಲಾಕೆಯಿಂದ ಹಚ್ಚಿ (ನಿರ್ಮೂಲ ಮಾಡುವ), ಮುಚ್ಚಿರುವ ಕಣ್ಣುಗಳನ್ನು ಯಾರು ತೆರೆಸುವನೋ ಅಂಥ ಗುರುವಿಗೆ ನಮಸ್ಕಾರ. ಅಂದರೆ ಕೇವಲ ಲೌಕಿಕ ವ್ಯವಹಾರದಲ್ಲಿ ಮುಳುಗಿ ಭಗವಂತನನ್ನು ಸೇರಲು ಅಥವಾ ಮೋಕ್ಷಮಾರ್ಗಿಯಾಗಲು ಬೇರೊಂದು ದಾರಿ ಇದೆಯೆಂಬ ಲವಲೇಶವೂ ಪರಿಜ್ಞಾನವಿಲ್ಲದಂಥ ದಡ್ಡರಿಗೆ ಕಣ್ಣು ತೆರೆಸಿ ಮೋಕ್ಷ ಮಾರ್ಗವನ್ನು ತೋರಿಸುವವನೇ ಗುರು. ಆದರೆ ನಿಜವಾದ ಗುರು ಮೋಕ್ಷ ಮಾರ್ಗವನ್ನು ತೋರಿದರೆ ಕಪಟ ವೇಷಧಾರಿ ಗುರುಗಳು ಏನು ಮಾಡುತ್ತಾರೆಂಬುದನ್ನು ಈ ಸುಭಾಷಿತ ತಿಳಿಸುತ್ತದೆ.
ಗುರುವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ
ದುಲರ್ಭಃ ಸ ಗುರುರ್ಲೋಕೇ ಶಿಷ್ಯ ಚಿತ್ತಾಪಹಾರಕಃ॥
ಲೋಕದಲ್ಲಿ ಶಿಷ್ಯರ ಹಣವನ್ನು ಅಪಹರಿಸುವ ಗುರುಗಳು ಬಹಳ. ಶಿಷ್ಯರ ಚಿತ್ತವನ್ನು ಸೆಳೆಯುವಂಥ ಗುರುಗಳು ಲೋಕದಲ್ಲಿ ದುರ್ಲಭರು. ನಮ್ಮ ಪರಂಪರೆಯಲ್ಲಿ ಬಂದಂಥ ಗುರುಗಳು ಬೇರಾವ ದೇಶದಲ್ಲಾಗಲೀ ಸಂಸ್ಕೃತಿಯಲ್ಲಾಗಲಿ ಕಂಡುಬರುವುದಿಲ್ಲ. ಇದಕ್ಕೆ ಕಾರಣ ನಮ್ಮ ವೇದ, ಉಪನಿಷತ್ತು, ಭಗವದ್ಗೀತೆ ಮುಂತಾದ ಶಾಸ್ತ್ರೀಯ ಗ್ರಂಥಗಳು ಈ ಪರಂಪರೆಗೆ ಭದ್ರವಾದ ಬುನಾದಿಯನ್ನು ಹಾಕಿರುವುದೇ ಆಗಿದೆ.
ಗುರುವಿನ ಪಾದುಕೆಗಳಿಗೆ ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ತ್ವ ನೀಡಲಾಗಿದೆ. ಶಂಕರ ಭಗವತ್ಪಾದರು ಎಂಟನೆಯ ಶತಮಾನದಲ್ಲಿ ರಚಿಸಿರುವ ಗುರು ಪಾದುಕಾ ಸ್ತೋತ್ರಗಳು ಗುರು ಪಾದುಕೆಗಳ ಮಹಿಮೆಯನ್ನು ತಿಳಿಸುತ್ತದೆ. ವಿಶಿಷ್ಟಾದ್ವೈತದ ಹಿರಿಯ ಆಚಾರ್ಯರಾದ ವೇದಾಂತ ದೇಶಿಕರು ‘ಪಾದುಕಾ ಸಹಸ್ರಮ್ ಎಂಬ ಒಂದು ಸಾವಿರ ಶ್ಲೋಕಗಳ ಮಹತ್ ಕೃತಿಯನ್ನು ಕೇವಲ ಒಂದು ರಾತ್ರಿಯ ಮೂರನೆಯ ಝಾಮದಲ್ಲಿ ರಚಿಸಿದರು.
ಶ್ರೀ ಶಂಕರ ಭಗವತ್ಪಾದರ ‘ಗುರು ಪಾದುಕಾ ಸ್ತೋತ್ರಮ್ ಹಾಗೂ ಶ್ರೀವೇದಾಂತ ದೇಶಿಕರ ‘ಪಾದುಕಾ ಸಹಸ್ರಮ್ ಎಂಬ ಈ ಎರಡು ಸ್ತೋತ್ರ ಮಾಲಿಕೆಗಳು ಸನಾತನ ಧರ್ಮಾನುಯಾಯಿಗಳ ಹೃದಯಗಳಲ್ಲಿ ಗುರು ಪಾದುಕೆಗಳ ಮಹಿಮೆಯನ್ನು ಅಚ್ಚೊತ್ತಿ ಜೀವನದಲ್ಲಿ ಅಳವಡಿಸಿಕೊಂಡು ಹೋಗಲು ಪ್ರೇರಣೆ ನೀಡುವಂತಹುದಾಗಿವೆ.
ಶ್ರೀ ಶಂಕರ ಭಗವತ್ಪಾದರ ಗುರು ಪಾದುಕಾ ಸ್ತೋತ್ರಮ್‌ನ ಒಂಬತ್ತು ಶ್ಲೋಕಗಳನ್ನು ಹೀಗೆ ಸಂಗ್ರಹಿಸಿ ಸಂಕ್ಷಿಪ್ತವಾಗಿ ಹೇಳಬಹುದು. ಪ್ರತಿ ಶ್ಲೋಕದ ಕೊನೆಯಲ್ಲಿ ‘ನಮೋ ನಮಃ ಶ್ರೀ ಗುರು ಪಾದುಕಾಭ್ಯಾಮ್; ಎಂದು ಹೇಳುತ್ತಾ ಪಾದುಕೆಗಳ ಮಹಾತ್ಮೆಯನ್ನು ಸಾರಲಾಗಿದೆ.
* ಸಂಸಾರವೆಂಬುದು ಅನಂತವಾದ ಸಾಗರದಂತಹುದು. ಅದನ್ನು ದಾಟಿಸುವ ನೌಕೆ ಗುರು ಪಾದುಕೆಗಳು. ಅವುಗಳನ್ನು ಅರ್ಚಿಸುವುದರಿಂದ ನಮಗೆ ವೈರಾಗ್ಯ ಸಾಮ್ರಾಜ್ಯ ಪ್ರಾಪ್ತಿಯಾಗುತ್ತದೆ.
* ಗುರು ಪಾದುಕೆಗಳು ಜ್ಞಾನ ಸಾಗರಕ್ಕೆ ಪೂರ್ಣಚಂದ್ರನಿದ್ದಂತೆ. ಅವು ದುರದೃಷ್ಟಗಳೆಂಬ ಅಗ್ನಿಯ ಪಾಲಿಗೆ ನೀರು ಇದ್ದಂತೆ. ಗುರು ಪಾದುಕೆಗಳಿಗೆ ಶರಣಾಗುವುದರಿಂದ ಅನೇಕ ಬಗೆಯ ವಿಪತ್ತುಗಳ ಸಮೂಹವನ್ನೇ ನಿವಾರಣೆ ಮಾಡಬಹುದು.
* ದಾರಿದ್ರ್ಯವೆಂಬ ಮಹಾಶಾಪದಿಂದ ಪೀಡಿತರಾಗಿರುವವರು ಪವಿತ್ರ ಗುರು ಪಾದುಕೆಗಳಿಗೆ ಶರಣಾಗುವುದರಿಂದ ಸ್ವಲ್ಪ ಸಮಯದಲ್ಲೇ ಹೆಚ್ಚಿನ ಸಂಪತ್ತಿನ ಒಡೆಯರಾಗಬಹುದು. ಅವುಗಳ ಪ್ರಭಾವ ಎಷ್ಟಿರುತ್ತದೆಂದರೆ ಹುಟ್ಟು ಮೂಕನೂ ಶ್ರೇಷ್ಠ ವಾಗ್ಮಿಯಾಗಬಹುದು.
* ಪದ್ಮಗಳಂಥ ಗುರು ಪಾದಗಳ ಕಡೆಗೆ ನಮ್ಮನ್ನು ಆಕರ್ಷಿಸುವಂಥ ಗುರು ಪಾದುಕೆಗಳಿಗೆ ಶರಣಾಗುವುದರಿಂದ ಅಜ್ಞಾನದಿಂದ ಹುಟ್ಟುವ ಆಸೆಗಳು ನಿವಾರಣೆಗೊಂಡು ಇತರ ಬಯಕೆಗಳು ಈಡೇರಲು ಸಹಾಯ ದೊರೆಯುತ್ತದೆ.
* ಮಹಾರಾಜನೊಬ್ಬನ ಕಿರೀಟದಲ್ಲಿನ ರತ್ನಗಳಂತೆ ಪ್ರಕಾಶಿಸುವ, ಮೊಸಳೆಗಳಿಂದ ಕೂಡಿರುವ ನದಿಯಲ್ಲಿ ಸುಂದರಿಯಾದ ತರುಣಿಯಂತೆ ಕಂಗೊಳಿಸುವಂತೆ, ಭಕ್ತರನ್ನು ರಾಜನ ಸ್ಥಾನಕ್ಕೇರುವಂತೆ ಮಾಡುವ ಗುರು ಪಾದುಕೆಗಳಿಗೆ ಅನೇಕಾನೇಕ ವಂದನೆಗಳು.
* ಅನಂತ ಪಾಪಗಳ ಅಂಧಕಾರಗಳ ಪರಂಪರೆಯನ್ನು ಹೊಡೆದೋಡಿಸುವ ಪ್ರಖರ ಸೂರ್ಯ ಪ್ರಭೆಯಂತೆ, ಸಾಂಸಾರಿಕ ವೇದನೆಗಳೆಂಬ ತಾಪತ್ರಯಗಳ ಕಾಳ ಸರ್ಪದ ಪಾಲಿನ ಗರುಡನಂತೆ, ಅಜ್ಞಾನವೆಂಬ ಸಾಗರವನ್ನು ಆವಿಯಾಗುವಂತೆ ಮಾಡಬಲ್ಲ ಅಗ್ನಿಯಂತಿರುವ ಗುರು ಪಾದುಕೆಗಳಿಗೆ ಅನಂತ ನಮನಗಳು.
*ಶಮ ದಮಾದಿ ಆರು ಗುಣಗಳನ್ನು ಕರುಣಿಸುವಂಥ, ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿರುವ ಸಾಧಕರಿಗೆ ಸಮಾಧಿ ಸ್ಥಿತಿಯನ್ನು ತಲುಪಲು ಸಹಾಯ ಮಾಡಲು ದೀಕ್ಷಾಬದ್ಧವಾಗಿರುವಂಥ, ರಮಾವಲ್ಲಭನೆಂಬ ವಿಷ್ಣುವಿನ ಪಾದಗಳಿಗೆ ಶಾಶ್ವತ ಭಕ್ತಿಯನ್ನು ಪ್ರಸಾದಿಸುವಂಥ ಗುರು ಪಾದುಕೆಗಳಿಗೆ ಮತ್ತೆ ಮತ್ತೆ ವಂದನೆಗಳು.
* ಸೇವಾ ಪರಾಯಣ ಭಕ್ತ ಜನರ ಎಲ್ಲ ಆಶಯಗಳನ್ನೂ ಪೂರೈಸುವಂಥ, ಆತ್ಮಜ್ಞಾನವನ್ನು ಅರಸುವ ನಿಜ ಸಾಧಕರಿಗೆ ಆ ಸ್ಥಿತಿಯನ್ನು ಕರುಣಿಸುವಂಥ ಗುರು ಪಾದುಕೆಗಳಿಗೆ ಪುನಃ ಪುನಃ ನಮನಗಳು.
* ಕಾಮವೆಂಬ ಎಲ್ಲ ವಿಷಸರ್ಪಗಳನ್ನು ದೂರೀಕರಿಸುವ ಗರುಡನಂತೆ ಇರುವುದೂ ಜ್ಞಾನ ವೈರಾಗ್ಯಗಳ ಅಪೂರ್ವ ಸಂಪತ್ತು ದಯಪಾಲಿಸುವುದೂ ಜಗತ್ತಿನ ಜಂಜಾಟಗಳಿಂದ ಬಿಡುಗಡೆ ಮಾಡಿ ಶೀಘ್ರ ಮೋಕ್ಷ ನೀಡುವುದೂ ಆಗಿರುವ ಗುರು ಪಾದುಕೆಗಳಿಗೆ ಅನಂತಾನಂತ ನಮಸ್ಕಾರಗಳು.
‘‘ಗುರುವು ಈಶ್ವರನಿಗಿಂತ ದೊಡ್ಡವನು’’ ಎಂದು ಹೇಳುತ್ತಾರೆ. ಏಕೆ? ಯಾರೂ ಈಶ್ವರನನ್ನು ಕಂಡಿಲ್ಲ. ನಿರಂತರವಾಗಿ ಹೃದಯದಲ್ಲಿಯೂ ಮನಸ್ಸಿನಲ್ಲಿಯೂ ಶುದ್ಧನಾದವನು, ಜ್ಞಾನಿಯೂ ಕಳಂಕರಹಿತನೂ ಆದವನು, ಮನಸ್ಸಿನಲ್ಲಿ ಚಂಚಲತೆ ಇಲ್ಲದವನು, ಮೂರ್ತರೂಪದಲ್ಲಿ ನಮ್ಮೆದುರು ಗುರುವಿನ ರೂಪದಲ್ಲಿ ನಿಲ್ಲುತ್ತಾನೆ. ಅದೃಷ್ಟವಶಾತ್ ಇಂಥ ಲಕ್ಷಣಗಳುಳ್ಳ ವ್ಯಕ್ತಿಯು ನಮಗೆ ಗುರುವಾಗಿ ದೊರೆತರೆ, ಈಶ್ವರನಿಂದ ನಾವು ಬೇಡಿಕೊಳ್ಳುವ ಅದೇ ಶಾಂತಿಯನ್ನೂ ಆನಂದವನ್ನೂ ನಮಗೆ ಅವನು ಕರುಣಿಸುತ್ತಾನೆ. ಅದೇ ಈ ಪ್ರಶ್ನೆಗೆ ಉತ್ತರ.
ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ಈ ಶ್ಲೋಕದಲ್ಲಿ ಗುರುವಿಗೂ ಪರಮಾತ್ಮನಿಗೂ ನಡುವೆ ಯಾವ ಭೇದವನ್ನೂ ಕಲ್ಪಿಸಿಲ್ಲ ಎಂಬುದು ಮಹತ್ತ್ವಪೂರ್ಣವಾದುದು. ಪ್ರಾಸಂಗಿಕವಾಗಿ, ಈ ಶ್ಲೋಕದಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯವಾದ ಅಂಶವಿದೆ. ಇದರಲ್ಲಿ ಶಿವ ಮತ್ತು ವಿಷ್ಣು ಇಬ್ಬರ ಸ್ತುತಿಯೂ ಇದೆ; ಈ ಶ್ಲೋಕವನ್ನು ಹೇಳುತ್ತಾ ಗುರುವಿಗೆ ಪ್ರಣಾಮ ಮಾಡಿದರೆ, ಈ ಇಬ್ಬರು ದೇವತೆಗಳಲ್ಲೂ ಭೇದ ಮಾಡಬಾರದೆಂಬುದನ್ನು ಕಲಿಯುತ್ತೇವೆ.
ಈಶ್ವರನಿಗೆ ಬ್ರಹ್ಮಾಂಡವನ್ನು ‘ಸೃಷ್ಟಿಸುವ ಮತ್ತು ‘ಕಾಪಾಡುವ ಕೆಲಸಗಳೂ ಸೇರಿದಂತೆ ಬಹು ಕಾರ್ಯಗಳಿವೆ. ಈ ಕೆಲಸಗಳು ಗುರುವಿಗೆ ಇರುವುದಿಲ್ಲ. ಈಶ್ವರನಿಗೆ ‘ಕಛೇರಿ ಇದೆ, ಗುರುವಿಗೆ ಆದಾವುದೂ ಇಲ್ಲ. ಕಛೇರಿ ಇರುವ ಈಶ್ವರನನ್ನು ಕಾಡುವ ಬದಲು, ಕಛೇರಿ ಇಲ್ಲದ ಗುರುವನ್ನು ಬೇಡಿ ಸುಲಭವಾಗಿ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ಈಶ್ವರನಲ್ಲಿರುವ ಆ ಎಲ್ಲ ಉತ್ಕೃಷ್ಟ ಗುಣಗಳೂ ಗುರುವಿನಲ್ಲೂ ಇವೆ. ಗುರುವು ಪರಿಶುದ್ಧ, ಸತ್ಯನಿಷ್ಠ, ದಯಾಪರ ಮತ್ತು ಮಹಾಜ್ಞಾನಿ. ಜತೆಗೆ ಭಗವಂತನನ್ನು ನಾವು ಎದುರಿಗೆ ಕಾಣಲಾರೆವು, ಗುರುವನ್ನು ನಿಜಾಕಾರದಲ್ಲಿ ಎದುರಿಗೇ ಕಾಣುತ್ತೇವೆ. ಹಾಗಾಗಿ, ಈಶ್ವರನಿಗೆ ಅಚಲಭಕ್ತಿಯಿಂದ ಪ್ರಾರ್ಥಿಸಿದರೆ ಏನೆಲ್ಲ ಅನುಗ್ರಹವನ್ನು ಪಡೆಯುತ್ತೇವೆಯೋ, ಗುರುವಿನ ಪವಿತ್ರಪಾದಗಳನ್ನಪ್ಪಿ ಅವನಲ್ಲಿ ಶರಣಾದರೂ ಅವಕ್ಕೆಲ್ಲ ಪಾತ್ರರಾಗುತ್ತೇವೆ. ಆದ್ದರಿಂದಲೇ ‘ಗುರುಭಕ್ತಿಯನ್ನು ಕೊಂಡಾಡಲಾಗಿದೆ.
ಹೇಗಾದರೂ, ದೈವಭಕ್ತಿಯನ್ನು ಕಳೆದುಕೊಳ್ಳಬಾರದು. ಇಷ್ಟಕ್ಕೂ ಭಕ್ತರನ್ನೂ ಗುರುವನ್ನೂ ಒಂದೆಡೆ ತರುವವನೇ ದೇವರು. ದೇವರ ದಯೆಯಿಲ್ಲದೆ ಗುರುವು ಹೇಗೆ ತಾನೆ ನಮಗೆ ದೊರೆತಾನು?
ದುರ್ಲಭಂ ತ್ರಯಮೇವೈತತ್ ದೈವಾನುಗ್ರಹಹೇತುಕಮ್ ಮನುಷ್ಯತ್ವಂ ಮುಮುಕ್ಷತ್ವಂ ಮಹಾಪುರುಷಸಂಶ್ರಯಃ॥
‘‘ದೊಡ್ಡದಾದ ಮತ್ತು ಅಪರೂಪದ ಮೂರು ಅವಕಾಶಗಳು ಅಥವಾ ವರಗಳು ದೈವಕೃಪೆಯಿಂದ ಮಾತ್ರ ಒದಗುತ್ತವೆ: ಮೊದನೆಯದು ಮಾನವ ಜನ್ಮ, ಎರಡನೆಯದು ಸತ್ಯವನ್ನು ಅರಿಯುವ ಅಭಿಲಾಷೆ, ಮೂರನೆಯದು ಮಹಾಪುರುಷರನ್ನು ಗುರುವಾಗಿ ಹೊಂದುವುದು.’’ ವಿವೇಕಚೂಡಾಮಣಿಯ ಪ್ರಾರಂಭಿಕ ಪದ್ಯಗಳಲ್ಲಿ ಶಂಕರರು ಹೀಗೆ ಹೇಳಿದ್ದಾರೆ.
ಸ ಪೂರ್ವೇಷಾಮಪಿ ಗುರುಃ ಕಾಲೇನಾನ್ವಛೇದಾತ್ ನಮ್ಮ ಗುರು, ನಮ್ಮ ಗುರುವಿನ ಗುರು ಮತ್ತು ಮತ್ತು ಅವರ ಗುರು ಪೂರ್ಣಜ್ಞಾನವನ್ನು ಹೇಗೆ ಹೊಂದಿದರು? ಹೀಗೆ ನೀವು ಪೂರ್ವಪಥವನ್ನು ಹುಡುಕುತ್ತಾ ಹೋದರೆ, ಕೊನೆಗೆ, ಗುರುಗಳ ಈ ಸರಣಿಯಲ್ಲಿ ಮೊದಲ ಗುರುವಿಗೆ ಈಶ್ವರನಿಗೇ ಗುರುವಾಗಿ ಜ್ಞಾನದಾನ ಮಾಡಿರಬೇಕೆಂದು ಮನಗಾಣುತ್ತೀರಿ. ಆದ್ದರಿಂದಲೇ ದೇವರನ್ನು ಮರೆಯಲೇಬಾರದು ಎಂದು ಹೇಳುತ್ತಾರೆ.
ಇದೇ ಅಭಿಪ್ರಾಯವನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಗುರು ಮತ್ತು ಈಶ್ವರ ಎರಡು ಪ್ರತ್ಯೇಕ ಅಸ್ತಿತ್ವಗಳೆಂದು ಪರಿಗಣಿಸಲೇಬೇಡಿ, ಈಶ್ವರನೇ ನಮ್ಮ ಗುರುವಿನ ರೂಪದಲ್ಲಿ ನಮ್ಮ ಬಳಿ ಬಂದಿದ್ದಾನೆ ಎಂದು ನಂಬಿ, ಆಗ ಗುರು ಮತ್ತು ಈಶ್ವರನಿಗೆ ಪ್ರತ್ಯೆಕವಾಗಿ ಶರಣುಹೋಗಬೇಕಾಗಿ ಬರುವುದೇ ಇಲ್ಲ. ಗುರುವನ್ನು ಈಶ್ವರನೆಂದೇ ಕಾಣಿರಿ. ಗುರುವು ಈಶ್ವರಸ್ವರೂಪಿಯಾದ್ದರಿಂದ ಗುರುವೊಬ್ಬನಿಗೇ ಪೂರ್ಣವಾಗಿ ಶರಣು ಹೋಗಬಹುದು. ಈಶ್ವರನು ನಿತ್ಯಶುದ್ಧ, ಮಹತ್ತಿನಲ್ಲಿ ಮಹತ್ತಾದವನು; ಆದ್ದರಿಂದ, ಗುರುವು ಆದರ್ಶಪುರುಷನಲ್ಲದಿದ್ದಾಗಲೂ ಗುರುವಿನ ಮೂಲಕ ನಾವು ಪೂಜಿಸುವುದು ಈಶ್ವರನನ್ನೇ ಆದುದರಿಂದ ಅವನು ನಮ್ಮನ್ನು ಅನುಗ್ರಹಿಸುತ್ತಾನೆ. ಈ ಕಾರಣಕ್ಕಾಗಿಯೇ ಗುರುವನ್ನು ಪರಬ್ರಹ್ಮ ಎಂದು ವರ್ಣಿಸಲಾಗಿದೆ; ಬ್ರಹ್ಮ, ವಿಷ್ಣು ಮತ್ತು ಶಿವ ಈ ತ್ರಿಮೂರ್ತಿಗಳಿಗೆ ಮೂಲನಾದವನೇ ಪರಬ್ರಹ್ಮ.
ಗುರುವಿಗಿಂತ ದೊಡ್ಡವನು ಯಾರೂ ಇಲ್ಲ. ನಮಗೆ ಅವನಲ್ಲಿ ಪೂರ್ಣ ವಿಶ್ವಾಸವಿರಬೇಕು. ಈಶ್ವರನೇ ಗುರುವಾಗಿ ನಮಗೆ ದೊರಕಿದ್ದಾನೆ ಎಂಬ ನಿಜವಾದ ವಿಶ್ವಾಸ ನಮಗಿದ್ದರೆ, ಈಶ್ವರನನ್ನು ಬೇರೆಯಾಗಿ ಪೂಜಿಸಬೇಕಾದುದೇ ಇಲ್ಲ. ಅಂಥ ವಿಶ್ವಾಸವನ್ನು ಆಧರಿಸಿ ಬಂದ ಶ್ರದ್ಧೆಯಿಂದಲೇ, ಗುರುವಿನಲ್ಲಿರುವ ಅಂಥ ಭಕ್ತಿಯಿಂದಲೇ, ಸಂಸಾರಸಾಗರವನ್ನು ದಾಟಲು ಸಾಧ್ಯ (ಐಹಿಕತೆ, ಜನನ ಮರಣ ಚಕ್ರ: ‘‘ಪುನರ್ಜನ್ಮಗಳ ವರ್ತುಲ’’) ಈಶ್ವರನಿಗೆ ಅಪಚಾರ ಮಾಡಿದರೆ ಕ್ಷಮೆಗಾಗಿ ಅವನನ್ನು ಪ್ರಾರ್ಥಿಸುವ ಅಗತ್ಯವಿಲ್ಲ. ಆಚಾರ್ಯನು ನಮ್ಮನ್ನು ಕ್ಷಮಿಸಿದರೆ ಈಶ್ವರನೂ ಸಮಾಧಾನಗೊಳ್ಳುತ್ತಾನೆ. ಆದರೆ ಯಾವುದೇ ಸಂದರ್ಭದಲ್ಲಾದರೂ ಗುರುವಿನ ಮನಸ್ಸನ್ನು ನೋಯಿಸಿದ್ದಾದರೆ ವಿಮೋಚನೆಗಾಗಿ ಈಶ್ವರನ ಬಳಿಸಾರಿ ಪ್ರಯೋಜನವಿಲ್ಲ. ಕ್ಷಮೆಗಾಗಿ, ವಿಮೋಚನೆಗಾಗಿ ಗುರುವಿನ ಬಳಿಗೇ ಹೋಗಬೇಕು. ಹಾಗೆ ಮಾಡಲು ನಮಗೆ ಈಶ್ವರನೇ ಹೇಳುತ್ತಾನೆ. ಶಿಷ್ಯನ ಪರವಾಗಿ ಗುರುವು ಮಧ್ಯಸ್ಥಿಕೆ ವಹಿಸಿದರೆ ಪರಮಾತ್ಮನ ಕೋಪ ಮಾಯವಾಗುತ್ತದೆ ಮತ್ತು ಅವನು ಶಿಷ್ಯನನ್ನು ಅನುಗ್ರಹಿಸುತ್ತಾನೆ. ಆದರೆ ಗುರುವು ತಾನೇ ಶಿಷ್ಯನ ಮೇಲೆ ಮುನಿದರೆ ಮತ್ತಾರೂ ಅವನನ್ನು ರಕ್ಷಿಸಲಾರರು. ಇದು ಒಂದು ಪದ್ಯದಲ್ಲಿ ಬಂದಿದೆ.
ಗುರುಃ ಪಿತಾ ಗುರುರುತ್ಮಾ, ಗುರುರ್ದೈವಮ್ ಗುರುರ್ಗತಿಃ ಶಿವೇ ರುಷ್ಟೇ ಗುರುಸ್ತ್ರಾತಾ ಗುರೌ ರುಷ್ಟೇ ನ ಕಶ್ಚನ॥
(ಗುರುವು ತಂದೆ, ತಾಯಿ, ದೈವ ಮತ್ತು ಗುರುವೇ ಆಶ್ರಯದಾತ. ಶಿವನು ಮುನಿದರೆ ಗುರುವು ನಮ್ಮ ರಕ್ಷಣೆಗೆ ಬರುತ್ತಾನೆ. ಆದರೆ ಗುರುವು ಮುನಿದರೆ ನಮಗೆ ಯಾರೂ ನೆರವಾಗರು.)
ಈ ಕಾರಣಕ್ಕಾಗಿಯೇ ಶಾಸ್ತ್ರಗಳು ಗುರುಭಕ್ತಿಯ ಬಗ್ಗೆ ಅತಿಶಯವಾಗಿ ಹೊಗಳಿ ಹೇಳುತ್ತವೆ. ನಿನ್ನ ಗುರುವು ಮಹಾಗುಣಿಯಲ್ಲದಿದ್ದಾಗಲು ಅವನೊಬ್ಬ ಮಾರ್ಗದರ್ಶಿ ಎಂದು ಪರಿಗಣಿಸು, ಅದೇ ಹೊತ್ತಿಗೆ ಈಶ್ವರನಲ್ಲಿ ಭಕ್ತಿಯನ್ನಿಡು. ನಮ್ಮ ಭಕ್ತಿಯಿಂದ ಗುರುವಿಗಾಗಲಿ ಈಶ್ವರನಿಗಾಗಲಿ ಏನೂ ಆಗಬೇಕಾಗಿಲ್ಲ. ಪ್ರತಿಫಲ ಸಿಗುವುದು ನಮಗೇ. ಎಂಥ ಲಾಭ ಅಥವಾ ಎಂಥ ಪ್ರತಿಫಲ? ಈಗ ಹೇಳುತ್ತೇನೆ.
ನಮ್ಮಲ್ಲಿ ಕಶ್ಮಲ ತುಂಬಿದೆ, ಮನಸ್ಸು ಚಂಚಲವಾಗಿದೆ. ಒಂದು ಬಿಂದುವಿನ ಮೇಲೆ ಒಂದೇ ಕ್ಷಣವಾದರೂ ಮನಸ್ಸು ನೆಟ್ಟು ಇರಲಾರೆವು. ನಿತ್ಯಶುದ್ಧನೂ ಪರಮಜ್ಞಾನಿಯೂ ಅಚಲನೂ ದೃಢನೂ ಆದ ಪರಮಾತ್ಮನ ಧ್ಯಾನ ಮಾಡಿದಾಗ ಅವನಂತೆಯೇ ಸಮಸ್ಥಿತಿಯನ್ನೂ ನಿಶ್ಚಲತೆಯನ್ನೂ ಹೊಂದುತ್ತೇವೆ. ನಾವೇ ‘‘ಅವನು’’ ಆಗುತ್ತೇವೆ. (ಅವನೊಡನೆ ಅಭೇದ ಹೊಂದುತ್ತೇವೆ.) ಈಶ್ವರನೊಬ್ಬನನ್ನೇ ಹೀಗೆ ಧ್ಯಾನಿಸಬೇಕು ಎಂಬುದಲ್ಲ. ಆ ಲಕ್ಷಣಗಳನ್ನುಳ್ಳ ಮತ್ತಾವುದೇ ವಸ್ತು ಅಥವಾ ಮನುಷ್ಯ ಆಗಬಹುದು; ಅವನನ್ನೇ ಗುರು ಎಂದು ತಿಳಿದು ಭಕ್ತಿ ಹೊಂದಬೇಕು; ಆಗ ನಾವೇ ಆ ವಸ್ತುವೋ ಮನುಷ್ಯನೋ ಆಗಿಬಿಡುತ್ತೇವೆ. ಮನಸ್ಸು ನಿಶ್ಚವಾದಾಗ ಆತ್ಮವು ಪ್ರಕಾಶಿಸುತ್ತದೆ ಮತ್ತು ನಮಗೆ ಸಹಜಾನಂದ ಸ್ಥಿತಿ ದಕ್ಕುತ್ತದೆ. ಈಶ್ವರ ಭಕ್ತಿಗಾಗಲಿ ಗುರುಭಕ್ತಿಗಾಗಲಿ ಬೇಕಾದುದು ನಿಶ್ಚಲ ಮನಸ್ಸು; ಅದನ್ನೇ ಶಾಸ್ತ್ರಗಳು ಹೇಳುವುದು.
ಗುರುವಿನ ದಯೆಯಿಂದ ಮಾತ್ರ ಜ್ಞಾನವು ಲಭಿಸುತ್ತದೆ ಎಂದು ಛಾಂದೋಗ್ಯೋಪನಿಷತ್ತು ಘೋಷಿಸುತ್ತದೆ. ‘‘ಅಚಾರ್ಯವಾನ್ ಪುರುಷೋ ವೇದ’’… ಆಚಾರ್ಯನು ಯಾರಿಗುಂಟೋ ಅವನು ಮಾತ್ರ ಜ್ಞಾನವನ್ನು ಹೊಂದುತ್ತಾನೆ. ಈ ಸತ್ಯವನ್ನು ಒಂದು ಸಣ್ಣ ಕತೆಯಲ್ಲಿ ವಿವರಿಸಲಾಗಿದೆ. ಗಾಂಧಾರದೇಶದ (ಈಗಿನ ಕಂದಹಾರ್, ಅಫ್ಗಾನಿಸ್ತಾನದಲ್ಲಿದೆ). ಮನುಷ್ಯನೊಬ್ಬನಿಗೆ ಕಣ್ಣು ಕಟ್ಟಿ ಒಂದು ಮರಳುಗಾಡಿನಲ್ಲಿ ಬಿಡಲಾಗಿದೆ ಎನ್ನೋಣ. ಅವನು ಹೇಗೆ ಮನೆಗೆ ಮರಳುತ್ತಾನೆ? ಅವನು ನಿಸ್ಸಹಾಯಕನಾಗುವುದಿಲ್ಲವೆ? ನೆಲೆ ತಪ್ಪುವುದಿಲ್ಲವೆ? ಹಾಗೆಯೇ ನಮ್ಮನ್ನು ಮಾಯೆಯು ಕುರುಡಾಗಿಸಿ ತಂದು ಈ ಪ್ರಪಂಚದಲ್ಲಿ ಹಾಕಿದೆ.
ಕತೆಗೆ ಹಿಂತಿರುಗೋಣ: ಕಣ್ಣು ಕಟ್ಟಿದ್ದ ಆತನ ಬಳಿಗೆ ಒಬ್ಬಾತ ಬಂದು, ಕಣ್ಣು ಕಟ್ಟು ಬಿಚ್ಚಿ, ಗಾಂಧಾರಕ್ಕೆ ಹೋಗುವ ದಾರಿಯನ್ನು ತಿಳಿಸುತ್ತಾನೆ. ಅವನಿಗೀಗ ದುಃಖವಿಲ್ಲ, ಹೆದರಿಕೆ ಇಲ್ಲ. ಆ ಮನುಷ್ಯನ ನಿರ್ದೇಶನವನ್ನನುಸರಿಸಿ ಆತನು ತನ್ನ ಗುರಿಯನ್ನು ಸೇರುತ್ತಾನೆ. ಛಾಂದೋಗ್ಯೋಪನಿಷತ್ತು ಅದನ್ನೇ ಹೇಳುತ್ತದೆ: ಕಥೆಯಲ್ಲಿನ, ಕಣ್ಣು ಕಟ್ಟಿದ ಮನುಷ್ಯನಂತೆ ಆಚಾರ್ಯರ ಉಪದೇಶದಿಂದ ನಾವು ನಮ್ಮ ಮನೆಗೆ ಹಿಂದಿರುಗುವ ದಾರಿಯನ್ನು ಕಾಣುತ್ತೇವೆ; ಅಂದರೆ ನಾವು ಎಲ್ಲಿಂದ ಹೊರಟೆವೋ ಆ ಪರಮಾತ್ಮನಲ್ಲಿಗೇ ಹಿಂದಿರುಗಿ ಸೇರುತ್ತೇವೆ.
‘‘ಜಗದ್ಗುರು’’ ಎಂದೇ ಖ್ಯಾತರಾದ ಶಂಕರ ಭಗವತ್ಪಾದರು ಗುರುವಿನ ಪ್ರಾಮುಖ್ಯದ ಬಗೆಗೆ ಮತ್ತೆ ಮತ್ತೆ ಹೇಳುತ್ತಾರೆ. ಅವರು ಕೇಳುತ್ತಾರೆ. ‘‘ಒಬ್ಬ ಮನುಷ್ಯನು ಅನೇಕ ರೀತಿಯಿಂದ ಗಣ್ಯನಾದರೆ ತಾನೆ ಏನು?’’ ತನ್ನ ಗುರುವಿನ ಪಾದಕಮಲಗಳಲ್ಲಿ ಅವನ ಮನಸ್ಸು ನೆಲೆನಿಲ್ಲದ ಮೇಲೆ ಅದರಿಂದೇನು ಪ್ರಯೋಜನ? ಶಂಕರರು ‘‘ತತಃ ಕಿಮ್?’’ (ಅದರಿಂದೇನು ಪ್ರಯೋಜನ?) ಎಂದು ನಾಲ್ಕು ಬಾರಿ ಪುನರಾವರ್ತಿಸುತ್ತಾರೆ: ‘‘ತತಃ ಕಿಮ್?’’, ‘‘ತತಃ ಕಿಮ್?’’, ತತಃ ಕಿಮ್?’’, ‘‘ತತಃ ಕಿಮ್?’’ ವಾಸ್ತವವಾಗಿ ಗುರುಸ್ತವನದಲ್ಲಿ (ಎಂಟು ಚರಣಗಳಲ್ಲಿರುವ ಅದನ್ನು ಗುರ್ವಷ್ಟಕಮ್ ಎಂದು ಕರೆದಿದ್ದಾರೆ) ಪ್ರತಿ ಚರಣದ ಕೊನೆಯಲ್ಲಿ ಈ ಪ್ರಶ್ನೆಯನ್ನು ನಾಲ್ಕು ಬಾರಿ ಕೇಳುತ್ತಾರೆ… ಅಂದರೆ ಒಟ್ಟಿಗೆ 32 ಬಾರಿ.
ಕೊನೆಯದಾಗಿ, ಅವರ ಬಾಳಕೋಟಲೆಯನ್ನು ಕಿತ್ತೊಗೆಯುವ ಮುನ್ನ ಶಂಕರರು ಉಪದೇಶಪಂಚಕಮ್ ಶ್ಲೋಕದ ಮೂಲಕ ತಮ್ಮ ಉಪದೇಶವನ್ನು ಶ್ರುತಪಡಿಸುತ್ತಾರೆ:
ಸದ್ವಿದ್ವಾನ್ ಉಪಸೃಪ್ಯತಾಮ್ ಪ್ರತಿದಿನಂ ತತ್ಪಾದುಕಾ ಸೇವ್ಯತಾಮ್
ಬ್ರಹ್ಮೈಕಾಕ್ಷರಮರ್ಥ್ಯತಾಮ್ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್
ಅದರ ಅರ್ಥ ಹೀಗಿದೆ: ‘‘ನಿನ್ನ ಆಚಾರ್ಯನಾಗಿ ಒಬ್ಬ ಸಾತ್ತ್ವಿಕವಾದ ವಿದ್ವಾಂಸನನ್ನು ಆರಿಸಿಕೋ. ಆತನ ಪದತಲದಲ್ಲಿ ನಿತ್ಯ ಉಪಾಸಿಸು. ಪ್ರಣವಮಂತ್ರ (ಓಂಕಾರ)ದ ಬಗೆಗೂ ಉಪನಿಷತ್ತಿನ ಮಹಾವಾಕ್ಯಗಳ ಬಗೆಗೂ ಅವನಿಂದ ಉಪದೇಶ ಹೊಂದು’’. ಗುರುಪಾದಗಳಿಗೆ (ಗುರುವಿನ ಪಾದಕಮಲಗಳಿಗೆ) ಪೂಜೆ ಮಾಡುವ ಬಗೆಗಿನ ಈ ಆದೇಶಕ್ಕೆ ಅನುಗುಣವಾಗಿ, ಇಂದಿಗೂ ನಿತ್ಯವೂ ಕಾಂಚಿಮಠದಲ್ಲಿ ಶಂಕರ ಭಗವತ್ಪಾದರ ಪಾದಕಮಲಗಳಿಗೆ ಪೂಜೆಯು ತಪ್ಪದೆ ನಡೆಯುತ್ತಿದೆ.
ತನ್ನ ಶಿಷ್ಯನಿಗೆ ಸಂನ್ಯಾಸ ದೀಕ್ಷೆ ಕೊಡುವ ಸಂನ್ಯಾಸ ಗುರುವಿನ ಬಗೆಗಿನ ಆದೇಶ ಇದು. ಸಂನ್ಯಾಸಾಶ್ರಮದಲ್ಲಿ, ಗೃಹಸ್ಥಾಶ್ರಮಿಯಾದ ಒಬ್ಬ ಗುರುವನ್ನು ಆಶ್ರಯಿಸಿ ವೇದಗಳನ್ನೂ ಶಾಸ್ತ್ರವು ವಿಧಿಸಿದ ಕರ್ತವ್ಯಗಳನ್ನೂ ಅವನಿಂದ ಕಲಿಯಬೇಕು. ಅನುಕ್ರಮವಾಗಿ ಕೊನೆಯ ಆಶ್ರಯವಾದ ಸಂನ್ಯಾಸಕ್ಕೆ ಕಾಲಿಡಬೇಕು. ಅದು ಶಂಕರರ ಉಪದೇಶವಾಗಿದೆ.
ಮೊದಲು, ವೈದಿಕ ಕರ್ಮವು ಏಕಿರಬೇಕು ಎಂಬುದನ್ನು ಪರಿಗಣಿಸೋಣ. ಗುರುವಿನಿಂದ ಹೊಮ್ಮಿದ ಪ್ರಣವ ಮತ್ತು ಮಹಾವಾಕ್ಯದ ಸಂದೇಶವು ಒಬ್ಬನನ್ನು ಮಾನವನ ಅತ್ಯಂತಿಕ ಗುರಿಯಾದ ಮೋಕ್ಷದೆಡೆಗೆ ಮುನ್ನೆಡಸಬೇಕು. ಅದಕ್ಕಾಗಿ ಮನಸ್ಸನ್ನು ನಿಗ್ರಹಿಸಬೇಕು. ಶಾಂತಸ್ಥಿತಿಯಲ್ಲಿಡಬೇಕು. ಮನಸ್ಸನ್ನು ತನ್ನೊಳಗೆ ಪೂರ್ಣವಾಗಿ ಏಕಾಗ್ರಗೊಳಿಸದೆ ಗುರುವಿನ ಮಾತನ್ನು ಶ್ರವಣ ಮಾಡುವುದರಿಂದ ಪ್ರಯೋಜನವಿಲ್ಲ. ಚೆನ್ನಾಗಿ ಉತ್ತ ಹೊಲದಲ್ಲಿ ಬಿತ್ತಿದ ಬೀಜವು ಮೊಳಕೆಯೊಡೆಯುತ್ತದೆ. ನಾವು ಧಾರ್ಮಿಕವಾದ ಮತ್ತು ತತ್ತ್ವಜ್ಞಾನದ ಅಸಂಖ್ಯಾತ ಪ್ರವಚನಗಳನ್ನು ಕೇಳುತ್ತೇವೆ, ಗೀತೆಯನ್ನೂ ಇತರ ಧರ್ಮಗ್ರಂಥಗಳನ್ನೂ ಪಠಿಸುತ್ತೇವೆ. ಆದರೂ ಏಕೆ ನಮಗೆ ದುಃಖದ ಅನುಭವವಾಗುತ್ತದೆ? ನಾವೇಕೆ ಜ್ಞಾನದೀಪ್ತರಾಗುವುದಿಲ್ಲ? ಏಕೆಂದರೆ ನಮ್ಮ ಚಿತ್ತ ಅಥವಾ ಪ್ರಜ್ಞೆಯನ್ನು ಶುದ್ಧಗೊಳಿಸಿಕೊಳ್ಳದೆ ಧಾರ್ಮಿಕ ಪ್ರವಚನಗಳನ್ನು ಕೇಳುತ್ತೇವೆ, ಧರ್ಮಗ್ರಂಥಗಳನ್ನು ಪಠಿಸುತ್ತೇವೆ. ಹಾಗಾಗಿ ಶಾಶ್ವತವಾದ ಫಲ ಅದರಿಂದ ದೊರಕುವುದಿಲ್ಲ.
‘‘ಮತ್ತೆ ಮತ್ತೆ ವೈದಿಕ ಕರ್ಮಗಳನ್ನು ಮಾಡಿ
ಈಶ್ವರನಿಗೆ ಶರಣಾಗಿ,
ಪ್ರತಿಫಲದ ಚಿಂತೆಯನ್ನು ಬಿಡಿ,
ಭಗವದಾರಾಧನೆಯೆಂದು ತಿಳಿದು ಮಾಡಿ’’
ಆಚಾರ್ಯರು ತಮ್ಮ ಉಪದೇಶದ ಪ್ರಾರಂಭದಲ್ಲಿಯೇ ಹೇಳುವ ಮಾತು ಇದು. ಚಿತ್ತಶುದ್ಧಿಯನ್ನೂ ಮನಃಶಾಂತಿಯನ್ನೂ ಸಾಧಿಸುವ ಮಾರ್ಗವನ್ನು ತೋರಿಸಲೆಂದು ಅವರು ಹಾಗೆ ಹೇಳಿದ್ದಾರೆ. ವೈದಿಕ ಕರ್ಮಗಳಿಂದ ಮನಸ್ಸನ್ನು ಉಳಬೇಕು. ಅದು ಪ್ರಪ್ರಥಮವಾಗಿ ಆಗಬೇಕು. ಉತ್ತ ಮೇಲೆ ಮನಸ್ಸಿಗೆ ನೀರು ಹಾಯಿಸಬೇಡವೆ? ಆ ಕೆಲಸವೇ ಭಕ್ತಿ. ಭಕ್ತಿಯೇ ಹೃದಯಕ್ಕೆ ನೀರೆರೆಯುವಂಥದು. ಈಶ್ವರನಲ್ಲಿಯೂ ಆಚಾರ್ಯನಲ್ಲಿಯೂ ಭಕ್ತಿ ಇರಲೇಬೇಕು. ಗುರುಭಕ್ತಿ ಇದ್ದರೆ ಮಹಾತ್ಮರ ಮುಂದೆ ಏನನ್ನಾದರೂ ಓದಿದಾಗ, ಅಥವಾ ಅವರ ಮಾತನ್ನು ಕೇಳಿದಾಗ, ನಮ್ಮ ಮನಸ್ಸಿನ ಮೇಲೆ ಪ್ರಭಾವವಾಗುತ್ತದೆ. ಏಕೆಂದರೆ ಅವರ ಸನ್ನಿಧಿಯಲ್ಲಿ ನಮ್ಮ ಮನಸ್ಸು ಸಮಾಧಾನಗೊಳ್ಳುತ್ತದೆ. ಸ್ನೇಹಕೂಟಗಳಲ್ಲಿಯೋ ಗ್ರಂಥಾಲಯದಲ್ಲಿಯೋ ಅದು ಹಾಗಾಗುವುದಿಲ್ಲ. ಅಲ್ಲಿ ಓದಿದ್ದಾಗಲಿ ಕೇಳಿದ್ದಾಗಲಿ ಭದ್ರವಾಗಿ ಉಳಿಯುವುದೂ ಇಲ್ಲ. ಗುರುಭಕ್ತಿಯಿಂದ ಮನಸ್ಸು ಆರ್ದ್ರವಾದರೆ ತತ್‌ಕ್ಷಣದ ಫಲ ದೊರೆಯುತ್ತದೆ. ಆದ್ದರಿಂದಲೇ ನಾವು ಮಹಾತ್ಮರಿಂದ ಹಿತಬೋಧೆಯನ್ನೂ ಸ್ಫೂರ್ತಿಯನ್ನೂ ಹೊಂದಬೇಕು ಮತ್ತು ಗುರುವಿನಿಂದ ಕಲಿಯಬೇಕು. ನಾವು ಅಷ್ಟೊಂದು ಓದುತ್ತೇವೆ. ಆದರೂ ನಮ್ಮ ಅಜ್ಞಾನವು ತೊಲಗುವುದಿಲ್ಲ. ನಮ್ಮ ಅಜ್ಞಾನದ ತೆರೆ ಎಲ್ಲಿ ಸರಿಯುವುದೋ ಜ್ಞಾನವು ಉದಿಸುವುದೋ ಅಂಥ ಎಡೆಗೆ ನಾವು ಹೋಗಬೇಕು. ಅದೆಂದರೆ ಆಚಾರ್ಯರು ಇರುವ ಜಾಗವೇ ಆಗಿದೆ.
ಬ್ರಹ್ಮಚರ್ಯಾಶ್ರಮದಲ್ಲಿ ಗುರುವಿನಿಂದ ವೇದಾಧ್ಯಯನ ಮಾಡಬೇಕು. ಅದರಿಂದ ನಮ್ಮ ಚಿತ್ತಶುದ್ಧಿ ಸಿದ್ಧಿಸುತ್ತದೆ. ಗೃಹಸ್ಥಾಶ್ರಮದಲ್ಲಿ ವೇದವಿಹಿತ ಕರ್ಮಗಳನ್ನು ಮಾಡಿ ಮನಸ್ಸಿನ ಕಲ್ಮಷಗಳನ್ನೆಲ್ಲ ಹೋಗಲಾಡಿಸಿಕೊಳ್ಳಬೇಕು. ಇದಾದ ಮೇಲೆ ಸಂನ್ಯಾಸಿಯಾಗಿರುವ ಗುರುವೊಬ್ಬನಿಂದ ಮಹಾವಾಕ್ಯಗಳನ್ನು ಕಲಿಯಬೇಕು. ಹೀಗೆ ಕಲಿತದ್ದು ಮೊಳೆತು ಬೆಳೆಯುತ್ತದೆ. ಬೇರೆ ಮಾತುಗಳಲ್ಲಿ ಹೇಳಬೇಕಾದರೆ ಜೀವವು ಬ್ರಹ್ಮನೊಡನೆ ಒಂದಾಗುತ್ತದೆ. ಈ ಗುರಿಯನ್ನು ತಲುಪುವ ಮಾರ್ಗವನ್ನು ತಿಳಿಯಲು, ನಮ್ಮ ಸಾಧನಾಮಾರ್ಗದ ಪ್ರಾರಂಭದಲ್ಲಿಯೂ ಮುಕ್ತಾಯದ ಹಂತದಲ್ಲಿಯೂ ನಮಗೊಬ್ಬ ಗುರು ಬೇಕು. ಈ ಕಾರಣದಿಂದಾಗಿಯೇ ಗುರುಭಕ್ತಿಯನ್ನು ಜಗತ್ತಿನಾದ್ಯಂತ ಕೊಂಡಾಡಲಾಗಿದೆ.
ವಿ.ಸೂ: ಇದೇ ಲೇಖಕರ ಸದ್ಯದಲ್ಲೇ ಪ್ರಕಟಗೊಳ್ಳುವ ವಂದೇ ಗುರು ಪರಂಪರಾಮ್ ಹೊತ್ತಿಗೆಯಿಂದ ಆಯ್ದ ಲೇಖನ.
Get In Touch With Us info@kalpa.news Whatsapp: 9481252093
Discussion about this post