ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 192ಎ ಕಾಯ್ದೆಯ ವ್ಯಾಪ್ತಿಯಿಂದ ಮಲೆನಾಡು ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶವನ್ನು ಹೊರಗಿಡುವಂತೆ ಸಾಗರ ಹೊಸನಗರ ಶಾಸಕ ಹರತಾಳು ಹಾಲಪ್ಪ ವಿಧಾನ ಸಭೆಯಲ್ಲಿಂದು ಆಗ್ರಹಿಸಿದ್ದಾರೆ.
ನಿಯಮ 69ರಡಿ ಈ ವಿಷಯ ಪ್ರಸ್ತಾಪಿಸಿದ ಹಾಲಪ್ಪ, ಭೂ ಕಬಳಿಕೆ ನಿಷೇಧ ಕಾನೂನು ಅಡಿಯಲ್ಲಿ ಪಟ್ಟಣ, ನಗರದ ಸುತ್ತಮುತ್ತ ಪ್ರದೇಶ, ಗ್ರಾಮೀಣ ಪ್ರದೇಶವನ್ನು ಒಳಪಡಿಸಿರುವುದರಿಂದ ಮಲೆನಾಡು ರೈತರು ವಿಶೇಷವಾಗಿ ಗ್ರಾಮೀಣ ಪ್ರದೇಶದ ನೂರಾರು ರೈತರು ಬೆಂಗಳೂರಿನಲ್ಲಿರುವ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ದಿನ ಕಳೆದಂತೆ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದರು.
ಮಲೆನಾಡು ಪ್ರದೇಶವಾದ ಬಾರಂಗಿ ಸೇರಿದಂತೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರ ಮೇಲೆ 192ಎ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ. ಒಂದು ವಿದ್ಯುತ್ ಕಂಬವನ್ನು ಹಾಕುವುದು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ಪ್ರದೇಶವನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟು 30 ರಿಂದ 40 ವರ್ಷಗಳ ಕಾಲ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಜೀವನ ನಡೆಸಲು ಅವಕಾಶ ನೀಡಬೇಕೆಂದು ಹೇಳಿದರು.
ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಲೆನಾಡು ಪ್ರದೇಶದಲ್ಲಿ ಬಗರ್ ಹಕ್ಕುಂ ಸಾಗುವಳಿದಾರರು ಅನೇಕ ವರ್ಷಗಳಿಂದ ಒಂದೆಡೆ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಈ ಕಾಯ್ದೆಯ ನೆಪದಲ್ಲಿ ಅರಣ್ಯ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಈ ಕಾನೂನಿನ ವ್ಯಾಪ್ತಿಯಿಂದ ಮಲೆನಾಡು ಮತ್ತು ಗ್ರಾಮೀಣ ಪ್ರದೇಶದ ಜನರನ್ನು ಹೊರಗಿಡಬೇಕೆಂದು ಹೇಳಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್. ಅಶೋಕ್ ಮಲೆನಾಡು ಪ್ರದೇಶದಲ್ಲಿ 12 ರಿಂದ 15 ವರ್ಷಗಳ ಕಾಲ ವಾಸಮಾಡಿಕೊಂಡು ಬಂದಿರುವ ರೈತರ ಜಮೀನುಗಳನ್ನು ಸಕ್ರಮಗೊಳಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗುವುದು. ಅವಕಾಶ ಸಿಕ್ಕರೆ ಈ ಕಾಯ್ದೆಯಿಂದ ಗ್ರಾಮೀಣ ಪ್ರದೇಶವನ್ನು ಹೊರಗಿಡುವ ಕುರಿತು ತಿದ್ದುಪಡಿ ವಿದೇಯಕವನ್ನು ಈ ಅಧಿವೇಶನದಲ್ಲಿಯೇ ಮಂಡಿಸಲಾಗುವುದು ಎಂದು ತಿಳಿಸಿದರು.
ಇನ್ನು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ , ಕಂದಾಯ ಭೂಮಿ ಕಬಳಿಕೆ ಮತ್ತು ಅರಣ್ಯ ಭೂಮಿ ಒತ್ತುವರಿ, ಮುಳುಗಡೆ ಸಂತ್ರಸ್ತರ ಜಮೀನು ಮಂಜೂರಾತಿ ಕುರಿತು, ಗ್ರಾಮೀಣ ಭಾಗದಲ್ಲಿ ಭೂ ಕಬಳಿಕೆ ಕೇಸನ್ನು ಕೈಬಿಡುವ ಕುರಿತು, ಹತ್ತು ಹನ್ನೆರಡು ವರ್ಷ ಹೆಚ್ಚಿನದಾಗಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಅಕ್ರಮ ಸಕ್ರಮದಲ್ಲಿ ಸಕ್ರಮಗೊಳಿಸು ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮುಳುಗಡೆ ಸಂತ್ರಸ್ತರ ಜಮೀನು ಮಂಜೂರಾತಿ ಕುರಿತು, ಒಬ್ಬರು ಅಧಿಕಾರಿಯನ್ನು ನೇಮಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಂದಾಯ ಸಚಿವ ಆರ್ ಅಶೋಕ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ ಟಿ ರವಿ, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ವಿಧಾನ ಪರಿಷತ್ ಶಾಸಕ ಎಸ್ ರುದ್ರೇಗೌಡ, ಶಾಸಕ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ವಿಧಾನಪರಿಷತ್ ಶಾಸಕ ಆಯನೂರು ಮಂಜುನಾಥ್ ಅವರು ಉಪಸ್ಥಿತರಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post