ಸುಮಾರು 4 ದಶಕಗಳ ಕಾಲ ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಅಖಂಡ ಸಾಮ್ರಾಟನಂತೆ ವಿಜೃಂಭಿಸಿದ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಕಲ್ಪ ನ್ಯೂಸ್ ಪರವಾಗಿ ಅವರಿಗೆ ಜನ್ಮದಿನದ ಶುಭಾಶಯಗಳು.
ಈ ಹಿನ್ನೆಲೆಯಲ್ಲಿ ಹಂಸಲೇಖ ಕುರಿತಾಗಿ ಕಿರು ಮಾಹಿತಿ:
1951ರ ಜೂನ್ 23ರಂದು ಜನಿಸಿದ ಹಂಸಲೇಖರ ಮೂಲ ಹೆಸರು ಗಂಗರಾಜು. 1973 ರಲ್ಲಿ ತ್ರಿವೇಣಿ ಚಿತ್ರದ ನೀನಾ ಭಗವಂತ ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಇವರು ಇದುವರೆಗೆ ಮುನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ, ಸಾಹಿತ್ಯ ಒದಗಿಸಿದ್ದಾರೆ.
ಪ್ರಮುಖವಾಗಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿರುವುದು ವಿಶೇಷ.
ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗಳ ಮಹಾಪೂರವೇ ಹರಿದುಬಂದಿದೆ. ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯಪ್ರಶಸ್ತಿ, ಅತ್ಯುತ್ತಮ ಸಾಹಿತ್ಯ – ರಾಜ್ಯಪ್ರಶಸ್ತಿ, ಫಿಲಂ ಫೇರ್ ಪ್ರಶಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಅರಸಿಬಂದಿವೆ.
ಅತ್ಯಂತ ಪ್ರಮುಖವಾಗಿ ಹಂಸಲೇಖ ಸಂಗೀತ ನೀಡಿರುವ ಶಾಂತಿ ಚಿತ್ರ ಒಂದೇ ಪಾತ್ರವಿರುವ ಸಿನಿಮಾವೆಂದು ಗಿನ್ನೆಸ್ ದಾಖಲೆ ನಿರ್ಮಿಸಿದೆ. ಬರಗೂರು ರಾಮಚಂದ್ರಪ್ಪ ಈ ಚಿತ್ರವನ್ನು ನಿರ್ದೇಶಿಸಿದ್ದರು.
ನಾದಬ್ರಹ್ಮನ ಕನಸಿನ ಕೂಸು
ಹಂಸಲೇಖ ಅವರ ವಿಶ್ವರಂಗಭೂಮಿ ಎಂಬ ಪರಿಕಲ್ಪನೆ ಎಂಬ ಕನಸನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಚನ್ನಪಟ್ಟಣದ ಬಳಿ ನರಸಿಂಹ ಸ್ವಾಮಿ ದೇವರ ಗುಡ್ಡದ ತಪ್ಪಲಲ್ಲಿ ವಸತಿ ಮತ್ತು ವಿದ್ಯಾಲಯ ನಿರ್ಮಾಣ ಸಾಗಿದೆ. ಇನ್ನು ಎರಡು ವರ್ಷದಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ಕಲೆ-ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವ ಕನಸಿದೆ.
ಆ ವಿದ್ಯಾರ್ಥಿಗಳು ಸೃಷ್ಟಿಸಲಿರುವ ಬೃಹತ್ ದೇಸಿ ಸೊಗಡಿನ ನೃತ್ಯ ರೂಪಕಗಳು ಅಲ್ಲಿ ಪ್ರದರ್ಶಿಸಲ್ಪಡುತ್ತವೆ. ಮೈಸೂರನ್ನು ನೋಡ ಬಯಸುವ ಪ್ರವಾಸಿಗರಿಗೆ ನಡುವಿನಲ್ಲಿಯೇ ಒಂದು ಸಾಂಸ್ಕೃತಿಕ ಲೋಕದ ದರ್ಶನವನ್ನು ಹಂಸಲೇಖರವರ ವಿಶ್ವರಂಗಭೂಮಿ ನೀಡಲಿದೆ.
Discussion about this post