ಶ್ರಾವಣ ಶುಕ್ಲ ತೃತೀಯವು ಮಧು ಶ್ರಾವಣಿಕಾ, ಭಾದ್ರಪದ ಕೃಷ್ಣ ತೃತೀಯವು ಕಜ್ಜಲೀ ಮತ್ತು ಭಾದ್ರಪದ ಶುಕ್ಲ ತೃತೀಯವು ಹರಿತಾಲಿಕಾ(ಗೌರೀ ತೃತೀಯ, ಗೌರೀ ಹಬ್ಬ)ವೃತಾಚರಣೆಯ ಪರ್ವ ಕಾಲ.
ಫಲ: ಗೌರೀ ವೃತ(ಹಬ್ಬ) ಆಚರಿಸುವುದರಿಂದ ವೈಧವ್ಯ ದೋಷ ನಿವಾರಣೆ ಅಂದರೆ ದೀರ್ಘ ಸುಮಂಗಲಿತ್ವ ಪ್ರಾಪ್ತವಾಗುತ್ತದೆ. ಇಲ್ಲಿ ಒಂದು ಸ್ಪಷ್ಟ ವಿಚಾರ ನಿಮಗೆ ತಿಳಿಸಬೇಕಾಗುತ್ತದೆ. ಯಾವುದೇ ವೃತವನ್ನು ಅದರದ್ದೇ ಆದಂತಹ ಪರ್ವಕಾಲದಲ್ಲೇ ಆಚರಿಸಬೇಕು. ಅದೇನಾದರೂ ವ್ಯತ್ಯಾಸ ಆದರೆ ಇದರ ಫಲ ದುಷ್ಫಲವಾಗಿ ಸಿಗುತ್ತದೆ.
ಗೌರೀ ಹಬ್ಬದ ವಿಚಾರಕ್ಕೆ ಬರೋಣ. ದ್ವಿತೀಯ ಸಂಯುಕ್ತ ಗೌರೀ ವೃತವು ಶ್ರೇಯಸ್ಕರವಲ್ಲ. ಚೌತಿ ಸಂಯುಕ್ತ ತೃತೀಯವು ಬಹಳ ಮಹತ್ವ ಪಡೆದಿದೆ. ಇದರಲ್ಲಿ ಗಣ ಎಂದರೆ ಚತುರ್ಥಿಯುಕ್ತ ತೃತೀಯಕ್ಕೆ ಬಹಳ ಪ್ರಾಶಸ್ತ್ಯ ಇದೆ. ಸ್ತ್ರೀಯರಿಗೆ ವೈಧವ್ಯ ಬಾರದಂತೆ ತಡೆಯುವ ಸಾಮರ್ಥ್ಯ ಈ ಚತುರ್ಥಿ ಯುಕ್ತ ತೃತೀಯಕ್ಕಿದೆ. ಯಾವ ಸ್ತ್ರೀಯು ಹಠದಿಂದಲೋ, ಅಜ್ಞಾನದಿಂದಲೋ ದ್ವಿತೀಯ ಶೇಷ ಯುಕ್ತ ತೃತೀಯದ ವೃತಾಚರಣೆ ಮಾಡುವಳೋ ಅವಳು ಅಪಾಯವನ್ನು ಅನುಭವಿಸಬೇಕಾಗುತ್ತದೆ ಎಂದು ನಿರ್ಣಯ ಸಿಂಧೂ ಗ್ರಂಥದಲ್ಲಿ ಉಲ್ಲೇಖ ಇದೆ. ವೃತಗಳನ್ನು ಆಚರಿಸದೆ ಇರುವ ದೋಷಕ್ಕಿಂತ, ಅಕಾಲಗಳಲ್ಲಿ ಆಚರಿಸುವ ವೃತಗಳ ದೋಷ ಹೆಚ್ಚು ಇರುತ್ತದೆ.
ಈ ವರ್ಷ ಸೆಪ್ಟೆಂಬರ್ ಒಂದನೆಯ ತಾರೀಕಿನಂದು ಉದಯ ಕಾಲಕ್ಕೆ ಬಿದಿಗೆ(ದ್ವಿತೀಯ) ಇದ್ದು ನಂತರ ತೃತೀಯ ಬರುತ್ತದೆ. ಈ 1 ನೆಯ ತಾರೀಕಿನಂದು ಉದಯಾತ್ ಸುಮಾರು ಏಳು ಗಂಟೆಯ ವರೆಗೆ ಬಿದಿಗೆ ಇದ್ದು ನಂತರ ತದಿಗೆ ಆಗುತ್ತದೆ. ಇದು ದ್ವಿತೀಯ ಯುಕ್ತ ತದಿಗೆ( ತೃತೀಯ) ಆಗಿರುವುದರಿಂದ, ಈ ದಿನ ತೃತೀಯ ಆಚರಣೆಯು ನಿಷಿದ್ಧವಾಗುತ್ತದೆ. ಮರುದಿನ ಅಂದರೆ ಎರಡನೆಯ ತಾರೀಕು ಬೆಳಗಿನ ಜಾವ ಸುಮಾರು ಮೂರು ಘಂಟೆಯವರೆಗೆ ತೃತೀಯವಿದ್ದು ನಂತರ ಚೌತಿ ಬರುತ್ತದೆ. ಇದು ತೃತೀಯ ಯುಕ್ತ ಚೌತಿಯಾಗಿ ತೃತೀಯದ ಆಚರಣೆಗೂ, ಚೌತಿಯ ಆಚರಣೆಗೂ ಯೋಗ್ಯ ದಿನವಾಗುತ್ತದೆ.
2 ನೆಯ ತಾರೀಕು ಬ್ರಾಹ್ಮೀ ಮುಹೂರ್ತದಲ್ಲಿ ಕಲಶ ಸ್ಥಾಪನೆ ಮಾಡಿ( ಮೂರ್ತಿ ಆಚರಣೆಗೂ) ಗೌರಿಯ ವೃತಾಚರಣೆ ಶುರು ಮಾಡಬೇಕು. ಸಾಯಂಕಾಲ ವಿಸರ್ಜನೆ ಮಾಡಬಹುದು. ಇದೇ ದಿನ ಸೂರ್ಯೋದಯದ ನಂತರ ಚೌತಿ ಆಚರಣೆ ಇದ್ದಲ್ಲಿ ಅದನ್ನೂ ಆಚರಿಸಬಹುದು.
ಹರಿತಾಲಿಕಾ ಎಂದರೇನು?
ಹರಿತಾಲಿಕಾ ಎಂದರೆ ಎರಡು ಅರ್ಥವಿದೆ. ಮೊದಲನೆಯದು ಭಾದ್ರಪದ ಮಾಸದ ಶುಕ್ಲ ಚತುರ್ಥಿ ಎಂದು. ಎರಡನೆಯದು ಗರಿಕೆ ಹುಲ್ಲು ಎಂದರ್ಥ.
ಗರಿಕೆ ಹುಲ್ಲು ಎಂದಿಗೂ ನಾಶವಿಲ್ಲದ್ದಾಗಿದ್ದು, ಇದು ಅಕ್ಷಯವಾಗುತ್ತದೆ. ಅತ್ಯಂತ ಪ್ರಮುಖವಾಗಿ, ಇದು ಆಯುಕಾರಕವಾಗಿದೆ. ಹೀಗಾಗಿ, ಇನ್ನೊಂದು ಪ್ರಮುಖ ಅರ್ಥದಂತೆ ಭಾದ್ರಪದ ಮಾಸದ ಶುಕ್ಲದ ದಿನ ಗಣೇಶ ಚತುರ್ಥಿಯನ್ನು ಆಚರಿಸುವ ಸಂಪ್ರದಾಯ ನಡೆದುಬಂದಿದೆ. ವೃತಾಚರಣೆಯಲ್ಲಿ ಗರಿಕೆ ಹುಲ್ಲಿನ ಮೂಲಕ ಪ್ರದಾನವಾಗಿ ಪೂಜೆ ಮಾಡಿ, ಅದನ್ನು ನಾವು ಸೇವನೆ ಮಾಡುತ್ತೇವೆ. ಇದು ಆಯಸ್ಸು ವೃದ್ಧಿಗೆ ಸಹಕಾರಿಯಾಗುತ್ತದೆ.
ಇದರೊಂದಿಗೆ ತೃತೀಯವೂ ಸಹ ಅದೇ ದಿನ ದಿನ ಬಂದಿರುವುದರಿಂದ ವೃತಾಚರಣೆ ಮಾಡಿದರೆ ಅತ್ಯಂತ ಅದೃಷ್ಠದಾಯಕ ಹಾಗೂ ಸಕಲಪ್ರದ ಪ್ರಾಪ್ತಿಯಾಗುತ್ತದೆ.
Discussion about this post