ಕಲ್ಪ ಮೀಡಿಯಾ ಹೌಸ್
ಹಾಸನ: ಯಾರಿಗೆ ಸಿಎಂ ಕುರ್ಚಿ ಎಂಬ ವಿಚಾರದಲ್ಲೇ ಆಂತರಿಕ ಜಗಳದಲ್ಲಿ ತಲ್ಲೀನವಾಗಿರುವ ಕಾಂಗ್ರೆಸ್ ಪಕ್ಷ ಮುಂದಿನ 20 ವರ್ಷಗಳ ವರೆಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಭವಿಷ್ಯ ನುಡಿದಿದ್ದಾರೆ .
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು ಪಕ್ಷದಲ್ಲಿ ಸಮನ್ವಯತೆ ಇಲ್ಲ, ಪಕ್ಷದ ರೈಲು ಇನ್ನೂ ಟ್ರ್ಯಾಕ್ ಗೆ ಇಳಿದಿಲ್ಲ… ಕೇಂದ್ರದಲ್ಲೂ ಸಹ ಸಮರ್ಥ ವಿರೋಧ ಪಕ್ಷದ ನಾಯಕರು ಇಲ್ಲದೆ ತಬ್ಬಿಬ್ಬಾಗಿದೆ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ನಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಜಾತಿ ರಾಜಕೀಯದಲ್ಲಿ ತೊಡಗಿರುವ ಪಕ್ಷದಲ್ಲಿ ಸಂವಿಧಾನ ಬದಲಾವಣೆ ಮೂಲಕ ಜಾತಿಗೊಂದರಂತೆ ಸಿಎಂ ಕುರ್ಚಿಯನ್ನು ಸೃಷ್ಟಿ ಮಾಡಬೇಕು ಅಷ್ಟೇ… ಅದು ಸಹ ಕಷ್ಟ ಸಾಧ್ಯ ಆದ್ದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸುಳ್ಳು ಎಂದು ಹೇಳಿದರು.ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿದ್ದಾರೆ …ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರ ಜಗಳವನ್ನು ಪ್ರೇಕ್ಷಕರಾಗಿ ನೋಡುತ್ತಿದ್ದೆವೆ. ನಮ್ಮ ಬಿಜೆಪಿ ಸರ್ಕಾರದಿಂದ ಕೇವಲ ಅಭಿವೃದ್ಧಿಯ ಮಂತ್ರ ಜಪ ಮಾಡಲಾಗುತ್ತಿದ್ದು ಕೊರೋನಾ ಹತೋಟಿ, ಲಸಿಕೆ ಕಾರ್ಯಕ್ರಮ ಯಶಸ್ಸಿಗೆ ಹಾಗೂ ಜನರ ಆರ್ಥಿಕ ಸುಧಾರಣೆಗೆ ಕೆಲಸ ಮಾಡುತ್ತಿದ್ದೇವೆ ಎಂದರು .
ಎರಡು ವರ್ಷ ಬಿಎಸ್ ವೈ ಸಿಎಂ
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿರುವ ಯಡಿಯೂರಪ್ಪ ಅವರು ಮುಂದಿನ ಮೂರನೇ ಅಲೆಯನ್ನು ಸಹ ಅವರ ನೇತೃತ್ವದಲ್ಲಿಯೇ ನಿರ್ವಹಣೆ ಮಾಡಲಾಗುವುದು ಹಾಗೂ 2 ವರ್ಷದವರೆಗೆ ಸಿಎಂ ಬದಲಾವಣೆ ಪ್ರಶ್ನೆ ಇಲ್ಲ ಎಂದು ಪುನರುಚ್ಚರಿಸಿದರು.ಮುಂದಿನ ಡಿಸೆಂಬರ್ ಒಳಗೆ ರಾಜ್ಯದ ಎಲ್ಲಾ ಜನರಿಗೆ 2 ಡೋಸ್ ಲಸಿಕೆ ಹಾಕಲು ತಯಾರಿ ಮಾಡುತ್ತಿದ್ದೇವೆ. ಕೊರೋನಾ ಮೂರನೇ ಅಲೆ ತಡೆಗಟ್ಟಲು ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಲು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದು ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊರೋನ ಹಾವಳಿ ಹೆಚ್ಚಿದ್ದ ಸಂದರ್ಭದಲ್ಲಿಯೂ ಸಹ ಮನೆಯಲ್ಲಿ ಕೂರದೆ ಹೊರಬಂದು ಜನರ ಸಂಕಷ್ಟವನ್ನು ಆಲಿಸಿದ್ದಾರೆ ಆದರೆ ನೆರೆ ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ಯಡಿಯೂರಪ್ಪ ಅವರ ರೀತಿ ಕಾರ್ಯನಿರ್ವಹಿಸಿಲ್ಲ ಎಂದು ಟೀಕಿಸಿದ ಅವರು ಯಡಿಯೂರಪ್ಪ ಅವರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜುಲೈ 5 ಬಳಿಕೆ ಲಾಕ್ ಡೌನ್ ಇನ್ನಷ್ಟು ಸಡಿಲ
ರಾಜ್ಯದಲ್ಲಿ ಜುಲೈ 5 ರಿಂದ ಇನ್ನಷ್ಟು ಲಾಕ್ಡೌನ್ ಸಡಿಲ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಜನರು ವ್ಯಾಪಾರ-ವಹಿವಾಟು ಇಲ್ಲದೆ ಸಂಕಷ್ಟದಲ್ಲಿರುವ ಕಾರಣ ಜುಲೈ ಐದರ ಮುಂಚಿತವಾಗಿಯೇ ಲಾಕ್ಡೌನ್ ಸಡಿಲಿಸುವ ಬಗ್ಗೆ ಮುನ್ಸೂಚನೆ ನೀಡಿದರು.
ಕರ್ನಾಟಕ ಕಾಂಗ್ರೆಸ್ ನಲ್ಲಿ ಬಂಡಾಯ ಏಳುವ ಸ್ಥಿತಿ ನಿರ್ಮಾಣವಾಗಿದೆ ಹಲವಾರು ಕಾಂಗ್ರೆಸ್ಸಿಗರು ಚುನಾವಣೆ ಒಂದು ವರ್ಷ ಇದ್ದಹಾಗೆ ಬಿಜೆಪಿಗೆ ಬರಲಿದ್ದಾರೆ ಎಂದ ಅವರು ಕಾಂಗ್ರೆಸ್ ಪಕ್ಷದಿಂದ 15 ಮಂದಿಯನ್ನು ನಾವು ಕರೆದುಕೊಂಡು ಬಂದಿದ್ದೇವೆ ಈ ಮೂಲಕ ನಮ್ಮ ಶಕ್ತಿಪ್ರದರ್ಶನ ಮಾಡಿದ್ದು ಅವರು ಬಿಜೆಪಿಯಿಂದ ಎಷ್ಟುಮಂದಿ ಕರೆದುಕೊಂಡು ಹೋಗುತ್ತಾರೆ ಕಾದು ನೋಡುವ ಎಂದು ತಿರುಗೇಟು ನೀಡಿದರು.ರಮೇಶ್ ಜಾರಕಿಹೊಳಿ ಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ನಮ್ಮ ಸಹಮತವಿದೆ . ಸರ್ಕಾರ ರಚನೆಯಾಗಲು ರಮೇಶ್ ಜಾರಕಿಹೊಳಿ ಅವರ ಶ್ರಮ ಸಾಕಷ್ಟಿದೆ ಈಗ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸರಕಾರದ ಬಗ್ಗೆ ಸ್ವಪಕ್ಷದ ಎಚ್.ವಿಶ್ವನಾಥ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಪಕ್ಷದ ಬಗ್ಗೆ ಸರ್ಕಾರದ ಬಗ್ಗೆ ಮಾತನಾಡಬಾರದು ಎಂದು ರಾಜ್ಯಕ್ಕೆ ಭೇಟಿ ನೀಡಿದ ಉಸ್ತುವಾರಿ ಅರುಣ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.ಅಲ್ಲದೆ ಬಿಜೆಪಿ ವಿರುದ್ಧ ಮಾತನಾಡುವ ನಾಯಕರ ಬಗ್ಗೆ ವರದಿ ಕಳುಹಿಸಿಕೊಡಲು ಸಹ ಸೂಚನೆ ನೀಡಿದ್ದು ಆದ್ದರಿಂದ ಯತ್ನಾಳ್ – ಬೆಲ್ಲದ್ ಮಾತನಾಡುತ್ತಿಲ್ಲ ಎಂದರು.
ಸಿ.ಪಿ. ಯೋಗೇಶ್ವರ್ ಅವರು ಎಕ್ಸಾಮ್ ಬರೆದಿದ್ದು ರಿಸಲ್ಟ್ ಗಾಗಿ ಕಾಯುತ್ತಿದ್ದೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶೋಕ್ ನಾನು ಅವರ ಸ್ಟೇಟ್ಮೆಂಟ್ ನೋಡಿಲ್ಲ ಹೀಗಾಗಿ ಅದರ ಬಗ್ಗೆ ಏನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post