ಕಲ್ಪ ಮೀಡಿಯಾ ಹೌಸ್ | ಹಾಸನ/ಬೆಂಗಳೂರು |
ಜನರಿಗೆ ವಂಚಿಸುತ್ತಿರುವ ಫೇಕ್ ನ್ಯೂಸ್ ಆ್ಯಪ್’ಗಳನ್ನು ನಿಷೇಧಿಸುವುದು ಹಾಗೂ ನಿಯಮ ಮೀರುತ್ತಿರುವ ಲೋನ್ ಆ್ಯಪ್’ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಾಸನದ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ PM Narendra Modi ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಅಖಿಲ ಭಾರತ ಕಾಂಗ್ರೆಸ್ ಕಮಿಟಿ, ಮಾನವ ಹಕ್ಕು ಆಯೋಗದ ಹಾಸನ ಮಾಜಿ ಜಿಲ್ಲಾಧ್ಯಕ್ಷ ವರುಣ್ ಚಕ್ರವರ್ತಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚೀನಾ ಲೋನ್ ಆ್ಯಪ್’ಗಳು China Loan App ಮೊಬೈಲ್ ಆ್ಯಪ್’ಗಳ ಮೂಲಕ ಅಮಾಯಕರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಲೋನ್ ನೀಡುತ್ತಿವೆ. ಕೆಲವು ಲೋನ್ ಆ್ಯಪ್’ಗಳ ಕಿರುಕುಳಕ್ಕೆ ಹೆದರಿ ಹಲವಾರು ಜನರು ಆತ್ಮಹತ್ಯೆಗೆ ಮುಂದಾಗುತ್ತಿದ್ದು, ವಿದ್ಯಾರ್ಥಿಗಳಿಂದ ನಮ್ಮ ಕಾಂಗ್ರೆಸ್ ಕಚೇರಿಗೆ ದೂರುಗಳು ಬಂದಿವೆ ಎಂದಿದ್ದಾರೆ.
ಚೀನಾ ಲೋನ್ ಆ್ಯಪ್’ಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಹಾಗೂ ಆ್ಯಪ್’ಗಳ ಮಾರ್ಫಿಂಗ್ ಕಿರುಕುಳದಿಂದ ನಲುಗುತ್ತಿರುವ ಸಾರ್ವಜನಿಕರಿಗೆ ರಕ್ಷಣೆಯ ಅಭಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇಂತಹ ಲೋನ್ ಆ್ಯಪ್’ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿರುವ ಅವರು, ಈ ಲೋನ್ ಆ್ಯಪ್’ಗಳು ಸಾಲಗಾರರ ಮೊಬೈಲ್ ಸಂಖ್ಯೆ, ಆಧಾರ್ ಮತ್ತು ಪಾನ್ ಕಾರ್ಡ್ ವಿವರ ಆಧರಿಸಿ ಅವರ ವೈಯಕ್ತಿಕ ಮಾಹಿತಿ ಹಾಗೂ ಫೋಟೋಗಳನ್ನು ಕದ್ದು ಅಶ್ಲೀಲ ರೂಪಕ್ಕೆ ತಿರುಚಿ ಬ್ಲಾಕ್ ಮೇಲ್ ಮಾಡುವ ಜಾಲತಾಣಗಳ ವಿರುದ್ಧ ಹಾಗೂ ಸಾಲ ಮಂಜೂರು ಮಾಡುವಾಗ ಸಾಲದ ಅಪ್ಲಿಕೇಶನ್ ಕಂಪೆನಿಗಳು ಗ್ರಾಹಕರಿಗೆ ಗೊತ್ತಾಗದಂತೆ ಅವರ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಅನುಮಾನ ವ್ಯಕ್ತವಾಗಿದೆ ಎಂದಿದ್ದಾರೆ.
ಇಂತಹ ಆ್ಯಪ್’ಗಳಿಂದ ಅಮಾಯಕ ಗ್ರಾಹಕರು ಸಮಸ್ಯೆಗೆ ಸಿಲುಕುತ್ತಿದ್ದು, ಸಾಲ ತೀರಿಸಿದ ನಂತರವೂ ಕಂಪೆನಿಗಳು ಮಾರ್ಫಿಂಗ್ ಫೋಟೋ ಇಟ್ಟುಕೊಂಡು ಸಾಲಗಾರರನ್ನು ಬೆದರಿಸಿ ಸುಲಿಗೆ ಮಾಡುತ್ತಿವೆ ಎಂದು ದೂರುಗಳು ಬಂದಿವೆ ಎಂದಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗಿ ಪರಿಣಮಿಸಿರುವ ಇಂತಹ ಆ್ಯಪ್’ಗಳನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವರುಣ್ ಚಕ್ರವರ್ತಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post