ಕಲ್ಪ ಮೀಡಿಯಾ ಹೌಸ್ | ಬೇಲೂರು |
ಐತಿಹಾಸಿಕ ಬೇಲೂರು ಪಟ್ಟಣದಲ್ಲಿ ಸೆ. 26 ರಿಂದ ಅ. 5ರವರೆಗೆ 10 ದಿನಗಳ ಕಾಲ ನಡೆಯಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಹೊಸ ಇತಿಹಾಸ ನಿರ್ಮಾಣಮಾಡಲು ಅಣಿಯಾಗಿದೆ ಎಂದು ರಂಭಾಪುರಿ ಮಹಾಸಂಸ್ಥಾನದ ಶ್ರೀ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಸಮ್ಮೇಳನದ ಅಂಗವಾಗಿ ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ತಾಲೂಕಿನಲ್ಲಿ ಅನೇಕ ಧಾರ್ಮಿಕ ಸಭೆ, ಸಮಾರಂಭ, ಸಮ್ಮೇಳನ ನಡೆದಿವೆ. ಆದರೆ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯಲಿದೆ. ಈ ಹಿಂದೆ ಹಳೇಬೀಡಿನಲ್ಲೂ ನಮ್ಮ ಪೀಠದ ಸಮ್ಮೇಳನ ಆಗಿತ್ತು ಎಂದವರು ವಿವರಿಸಿದರು.
ಇತಿಹಾಸ ಮತ್ತು ಪರಂಪರೆ ಇರುವ ಬೇಲೂರಿನಲ್ಲಿ ಧರ್ಮ ಸಮ್ಮೇಳನ ನಡೆಯುತ್ತಿರುವುದಕ್ಕೆ ಇಲ್ಲಿನ ಭಕ್ತರ ನಿಷ್ಠೆ ಕಾರಣವಾಗಿದೆ. ರಂಭಾಪುರಿ ಪೀಠದ ಪರಂಪರೆ ಮತ್ತು ಮಹತ್ವ ಎಲ್ಲರಿಗೂ ತಿಳಿದಿದೆ. ಪೀಠಕ್ಕೆ ಮೈಸೂರು ಒಡೆಯರು ರಾಜ ಮರ್ಯಾದೆ ನೀಡಿದ್ದರು. ಅದರಂತೆ ಪೀಠವು ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ರಾಜ್ಯದ ವಿವಿಧ ಪ್ರಾಂತ್ಯಗಳಲ್ಲಿ ಆಯೋಜಿಸುತ್ತದೆ. ಈ ಬಾರಿ ಅವಕಾಶ ಬೇಲೂರಿಗೆ ಲಭಿಸಿದೆ ಎಂದು ಜಗದ್ಗುರುಗಳು ನುಡಿದರು.
ನಿರಂತರ ಜಾಗೃತಿ ಕಾರ್ಯ
ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಪೀಠದಲ್ಲಿ ನಿರಂತರವಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಪ್ರಗತಿಪರ ಚಟುವಟಿಕೆಗಳು ನಡೆಯುತ್ತಿವೆ. ಸಮಾಜಕ್ಕೆ ಯಾವ ಕಾಲಘಟ್ಟಕ್ಕೆ ಏನೇನು ಬೇಕೋ ಅದನ್ನು ನೀಡುವ ಮಹತ್ತರ ಕಾರ್ಯ ನಡೆಯುತ್ತಿದೆ ಎಂದು ಮಹಾಸ್ವಾಮೀಜಿ ತಿಳಿಸಿದರು.
ಸಮಾಜದಲ್ಲಿ ಇಂದು ಧರ್ಮ, ಜಾತಿ, ಸಮುದಾಯಗಳ ನಡುವೆ ಬಿರುಕು ಹೆಚ್ಚಾಗಿದೆ. ಒಟ್ಟಾರೆ ಸಮಾಜದ ಸ್ಥಿತಿ ಅತಂತ್ರವಾಗಿದೆ. ವಿವಿಧ ರೀತಿಯ ಮನಸ್ಸುಗಳನ್ನು ಧರ್ಮ ಮತ್ತು ಭಕ್ತಿಯಲ್ಲಿ ಒಂದುಮಾಡುವಲ್ಲಿ ಈ ಬಾರಿಯ ಸಮ್ಮೇಳನ ಹೆಚ್ಚಿನ ಒತ್ತು ನೀಡಲಿದೆ. ನುರಿತ ಕಲಾವಿದರು ಮತ್ತು ತಜ್ಞರಿಂದ ಸಂಗೀತ, ಸಾಹಿತ್ಯ ಮತ್ತು ವಿಚಾರ ಪ್ರಬೋಧವಾದ ಗೋಷ್ಠಿಗಳು, ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ನಾಡಿನ, ಹೊರ ನಾಡಿನ ಸಾವಿರಾರು ಭಕ್ತರು 10 ದಿನಗಳ ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದೇ ನಮ್ಮ ಸಂದೇಶ.
| ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು

ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಕೇವಲ ಜಿಲ್ಲೆಗೆ ಸೀಮಿತವಲ್ಲ. ವಿವಿಧ ರಾಜ್ಯದ ಭಕ್ತರೂ ಬರಲಿದ್ದಾರೆ. ಸ್ಥಳೀಯ ಮುಖಂಡರು ಸಮ್ಮೇಳನದ ಯಶಸ್ಸಿಗೆ ಈಗಾಗಲೇ ಸಕಲ ಸಿದ್ಧತೆ ನಡೆಸಿದ್ದಾರೆ ಎಂದರು.
ಸಭೆಯಲ್ಲಿ ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷ ಸ್ವಾಮೀಜಿ, ಕಾರ್ಜುವಳ್ಳಿ ಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಬೇರಗುಂಡ ಮಠದ ಶ್ರೀ ರೇಣುಕಾ ಮಹಾಂತ ಸ್ವಾಮೀಜಿ, ಹೀರೆಮಠದ ಶ್ರೀ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ, ಶಾಸಕ ಕೆ.ಎಸ್.ಲಿಂಗೇಶ್, ಸಮ್ಮೇಳನದ ಕಾರ್ಯಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ರವಿಕುಮಾರ್, ಮುಖಂಡರಾದ ರಾಜಶೇಖರ, ನಾಗೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮುಖಂಡರಾದ ಐಸಾಮಿಗೌಡ, ದೊಡ್ಡವೀರೇಗೌಡ, ಬಿ.ಕೆ. ಚಂದ್ರಕಲಾ, ನಟರಾಜ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post