ಕಲ್ಪ ಮೀಡಿಯಾ ಹೌಸ್ | ಹಾವೇರಿ |
ವಕ್ಫ್ ಮಂಡಳಿ #Wakf Board ಒತ್ತುವರಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಇಂದು ಪ್ರತಿಭಟನೆ ನಡೆಸಿದ್ದು, ಹಾವೇರಿ, ಕಲಬುರಗಿಯಲ್ಲಿ ವಕ್ಫ್ ಬೋರ್ಡ್ ಅತಿಕ್ರಮಣ ವಿರೋಧಿಸಿ ರೈತರು, ಬಿಜೆಪಿ #BJP ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ಬಿಜೆಪಿಯ ಹೋರಾಟಕ್ಕೆ ನಾಡಿನ ಜನಸಾಮಾನ್ಯರು ಕೈ ಜೋಡಿಸುವ ಮೂಲಕ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಿ, ವಕ್ಫ್‌ಗೆ ಕಡಿವಾಣ ಹಾಕಿಸಬೇಕಿದೆ ಎಂದು ಬಿಜೆಪಿ ಕರೆ ನೀಡಿದೆ.
ವಕ್ಫ್ ಬೋರ್ಡ್ ನೋಟಿಸ್ ಖಂಡಿಸಿ ನೇಗಿಲ ಯೋಗಿ ಸ್ವಾಭಿಮಾನಿ ವೇದಿಕೆ ವತಿಯಿಂದ ವಕ್ಫ್ ಹಠಾವೊ, ಅನ್ನದಾತ ಬಚಾವೊ ಎನ್ನುವ ಬೃಹತ್ ಪ್ರತಿಭಟನಾ ಮೆರವಣಿಗೆ ಇಂದು ಹಾವೇರಿಯಲ್ಲಿ ನಡೆಯಿತು. ನೂರಾರು ಮಠಾಧೀಶರು, ರೈತ ಮುಖಂಡರು, ರೈತರು, ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಖಾನ್, ವಕ್ಫ್ ಬೋರ್ಡ್ ವಿರುದ್ಧ ಘೋಷಣೆಗಳು ಕೂಗಿ ಆಕ್ರೋಶ ಹೊರಹಾಕಿದರು. ಪ್ರಮುಖ ಮಠಗಳ ಮಠಾಧೀಶರು ಈ ಪ್ರತಿಭಟನೆಗೆ ಸಾಥ್ ನೀಡಿದರು.
ಬಿಜೆಪಿ ಕಾರ್ಯಕರ್ತರು ವಶಕ್ಕೆ
ರಾಜ್ಯ ಸರ್ಕಾರ ವಕ್ಫ್ ಮಂಡಳಿ ಮೂಲಕ ರೈತರ ಆಸ್ತಿ ಕಬಳಿಸುತ್ತಿದೆ ಎಂದು ಆರೋಪಿಸಿ ಹಾವೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ನಮ್ಮ ಭೂಮಿ ನಮ್ಮ ಹಕ್ಕು ಘೋಷವಾಕ್ಯದಡಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು. ರೈತರು ಹಾಗೂ ಇತರರ ಆಸ್ತಿಯ ಪಹಣಿಯಲ್ಲಿ ದಾಖಲಿಸಿರುವ ವಕ್ಫ್ ಹೆಸರನ್ನು ಕೂಡಲೇ ತೆಗೆಯಬೇಕು ಎಂದು ಪಟ್ಟು ಹಿಡಿದರು.
Also read: ಭದ್ರತಾ ಪಡೆಗಳಿಂದ ಎನ್’ಕೌಂಟರ್ | ಹತ್ತು ನಕ್ಸಲರು ಉಡೀಸ್
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರೈತರ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಇಂದು ಕಲಬುರಗಿಯಲ್ಲಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ನಾವು ಸಚಿವ ಜಮೀರ್ ಅಹಮದ್ ಖಾನ್ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ವಕ್ಫ್ ಬೋರ್ಡ್ ಅನ್ನು ಸರ್ಕಾರಿ ದಾಖಲೆಗಳಿಂದ ತೆಗೆದುಹಾಕಬೇಕು. ಇದನ್ನು ಆಗ್ರಹಿಸಿ ನಮ್ಮ ಬಿಜೆಪಿ ನಾಯಕರು ನವೆಂಬರ್ 21, 22, 23ರಂದು ಮೂರು ದಿನಗಳ ಕಾಲ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಜಮೀನನ್ನೆಲ್ಲ ವಕ್ಫ್ ಬೋರ್ಡ್ ವಶಪಡಿಸಿಕೊಳ್ಳುತ್ತಿರುವ ಕಾರಣಕ್ಕೆ ಅದನ್ನು ಸರ್ಕಾರಿ ದಾಖಲೆಗಳಿಂದಲೇ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ಕುತಂತ್ರದ ಬೆಂಬಲದಿಂದ ದಿನೇ ದಿನೆ ಹದ್ದು ಮೀರುತ್ತಿರುವ ವಕ್ಫ್ ಬೋರ್ಡ್ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಇಂದು ಮತ್ತು ನಾಳೆ ರಾಜ್ಯಾದ್ಯಂತ ಬಿಜೆಪಿಯ ನಾಯಕರು, ಕಾರ್ಯಕರ್ತರು, ರೈತರು, ದಲಿತರು, ಆಸ್ತಿಪಾಸ್ತಿ ಕಳೆದುಕೊಂಡವರು ಒಟ್ಟಾಗಿ ಲೂಟಿಕೋರ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಲಾಗುತ್ತಿದೆ ಎಂದು ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post