ಸೊರಬ: ತಾಲೂಕು ಯಲಸಿ, ಹಳೆಸೊರಬ, ಕಕ್ಕರಸಿ ಗ್ರಾಮಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.
ಬಿಸಿಲಿನ ತೀವ್ರತೆ, ಗಾಳಿಯ ರಭಸದಿಂದಾಗಿ ಬೆಂಕಿ ನಂದಿಸುವಲ್ಲಿ ಗ್ರಾಮಸ್ಥರು, ಅಗ್ನಿಶಾಮಕ ದಳದವರು, ಅರಣ್ಯ ಇಲಾಖೆಯವರು ಹರಸಾಹಸಪಟ್ಟಿದ್ದು, ಮನೆ, ಆಸ್ತಿಪಾಸ್ತಿಗೆ ಹೆಚ್ಚಿನ ಹಾನಿಯಾಗಿಲ್ಲ. ಆದರೆ, ಅರಣ್ಯಕ್ಕೆ ಹಾನಿಯಾಗಿದೆ.
ಕೆಲವರ ಬಾಳೆ, ಮೇಯುವ ಹುಲ್ಲು, ತೆಂಗಿನಮರ, ನೀಲಗಿರಿ ಮರಗಳಿಗೆ ತುಸು ಹಾನಿಯುಂಟಾಗಿದೆ. ನವಿಲು, ಕಾಡುಕೋಳಿ, ಉರಗಗಳು, ಮೊಲಗಳು ದಿಕ್ಕೆಟ್ಟು ಓಡಿದರೆ, ಅವುಗಳ ಮೊಟ್ಟೆ, ಮರಿಗಳು ಬೆಂಕಿಗೆ ಆಹುತಿಯಾಗಿವೆ. ಶ್ರೀಗಂಧ, ಹೊನ್ನೆ, ಬಗಿನೆ, ಹಲಸು, ಮಾವಿನಂತಹ ಬೆಲೆ ಬಾಳುವ ಮರಗಳು ಸುಟ್ಟಿವೆ.
ಪ್ರತಿವರ್ಷ ಸೊರಬ ತಾಲೂಕಿನಲ್ಲಿ ಬೆಂಕಿ ಅವಘಡಗಳು ಕಾಣಿಸಿಕೊಳ್ಳುತ್ತಿದ್ದು, ಹೆಚ್ಚಾಗಿ ಬಗರ್‌ಹುಕುಂ ಹಾವಳಿಯದ್ದು, ಇನ್ನು ಕೆಲವು ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಬೀಡಿ, ಸಿಗರೇಟ್, ಕಿಡಿಗೇಡಿತನದಿಂದಾಗಿ ಬೆಂಕಿ ಅನಾಹುತಗಳು ಸಂಭವಿಸುತ್ತಿವೆ.
ಇಡೀ ತಾಲೂಕಿಗೆ ಒಂದೆರೆಡು ಅಗ್ನಿಶಾಮಕ ಯಂತ್ರಗಳು ಮಾತ್ರವಿದೆ. ಸಿಬ್ಬಂದಿಯ ಕೊರತೆಯೂ ಇದೆ. ಅರಣ್ಯ ಇಲಾಖೆ ಪೂರ್ವಭಾವಿ ಫೈರ್ ಲೈನ್ ಮಾಡುತ್ತಿದೆಯಾದರೂ ಕಾಡಂಚಿನ ಜಮೀನಿನವರು ಹಾಕುವ ಬೆಂಕಿ ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ. ಇನ್ನೊಂದೆಡೆ ಒತ್ತೂವರಿ ದುಷ್ಕೃತ್ಯ ಮುಂದುವರೆಯುತ್ತಿದ್ದು, ಒತ್ತೂವರಿಗೆ ಬೆಂಕಿಯಂತಹ ಸುಲಭ ವಿಧಾನ ಬಳಸುತ್ತಿರುವುದರಿಂದ ಸಮೃದ್ಧ ಅರಣ್ಯ ಬಲಿಯಾಗುತ್ತಿದೆ. ಅರಣ್ಯ ಇಲಾಖೆ ಎಚ್ಚರಿಕೆಗೆ ಒತ್ತೂವರಿದಾರರು ಯಾವುದೇ ರೀತಿ ಸ್ಪಂದಿಸದ ಕಾರಣ ಅರಣ್ಯ ಇಲಾಖೆಗೆ ಅರಣ್ಯ ಉಳಿಸಿಕೊಳ್ಳುವುದೇ ಸವಾಲಾಗಿದೆ. ಈ ಒತ್ತೂವರಿಗೆ ರಾಜಕೀಯದ ಬೆಂಬಲವಿದ್ದು, ಅರಣ್ಯ ಇಲಾಖೆಯ ಯಾವುದೇ ಕಾನೂನು ಕ್ರಮಗಳು ಜಾರಿಯಾಗುತ್ತಿಲ್ಲ.
ತುರ್ತು ಹೋಬಳಿಗೊಂದರಂತಾದರೂ ಅಗ್ನಿಶಾಮಕ ಯಂತ್ರಗಳಾಗಬೇಕು. ಬಗರ್‌ಹುಕುಂ ಅಥವಾ ಕಿಡಿಗೇಡಿತನದಿಂದ ಆಗುವ ಅನಾಹುತಗಳನ್ನು ತನಿಖೆಗೊಳಪಡಿಸಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರು ಕೂಡ ದುರಾಸೆಗೆ ಇಂತಹ ದುಷ್ಕೃತ್ಯ ಮಾಡಬಾರದು. ಮೇಲಿಂದ ಮೇಲೆ ಈ ರೀತಿ ಬೆಂಕಿ ಅನಾಹುತಗಳು ಏರ್ಪಟ್ಟರೆ ವರ್ಷವಿಡಿ ಅವಶ್ಯವಿರುವ ಹೊಟ್ಟೆಯ ಕೂಳು ಕೂಡ ತುಟ್ಟಿಯಾಗುತ್ತದೆ. ಬೆಂಕಿ ಸಂಭವಿಸಿದಲ್ಲಿ ಕೇವಲ ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ತಿಳಿಸಿ ಕೈಚೆಲ್ಲುವುದಲ್ಲ, ಅವರೊಂದಿಗೆ ಪೂರ್ಣ ಸಹಕಾರ ನೀಡಬೇಕು. ಆದಷ್ಟು ಮನೆ, ಜಮೀನು ಸುತ್ತಮುತ್ತ ಬೆಂಕಿ ತಗುಲದಂತೆ ಎಚ್ಚರವಹಿಸಬೇಕು ಎಂದು ಈ ಸಂದರ್ಭದಲ್ಲಿ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್ ಮತ್ತು ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಕೋರಿದ್ದಾರೆ.
(ವರದಿ: ಮಧುರಾಮ್, ಸೊರಬ)
Discussion about this post