ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದೊಡ್ಡ ಹೊಟ್ಟೆ ಇರಬಾರದು, ತೆಳ್ಳಗೆ, ಸಪೂರವಾಗಿರ್ಬೇಕು. ಎಲ್ಲ ತರಹದ ಡ್ರೆಸ್’ಗಳು ಫಿಟ್ ಆಗ್ಬೇಕು, ನಾನು ತುಂಬಾ ಯಂಗ್ ಆಗಿ ಕಾಣಬೇಕು, ಇಷ್ಟು ವಯಸ್ಸಾಗಿದೆ ಅಂತಂದ್ರೆ ನಂಬೋದಕ್ಕೆ ಆಗ್ತಾ ಇಲ್ಲ ಅಂತ ನೋಡಿದೋರು ಒಂದಿಷ್ಟು ಹೊಗಳಿಕೆಯ ಮಾತುಗಳನ್ನಾಡಬೇಕು ಅನ್ನೋ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಅದಕ್ಕಾಗಿ ಹಗಲು ರಾತ್ರಿ ನಾನಾ ಕಸರತ್ತೆಲ್ಲ ಮಾಡೋದು ಇರುತ್ತೆ. ಮೇಲ್ನೋಟಕ್ಕೆ ಇಷ್ಟೆಲ್ಲಾ ಮಾಡ್ತೀವಿ ಅಥವಾ ಯೋಚಿಸ್ತೀವಿ ಅಂತ ಎಲ್ಲರೂ ಇದನ್ನು ಒಪ್ಪಿಕೊಳ್ಳದೆ ಇದ್ರು ಕೂಡ, ಹೀಗೆಲ್ಲ ಮಾಡೋದಂತೂ ಸತ್ಯ ಏನಂತೀರಾ? ನನಗೆ ಚಿಕ್ಕ ವಯಸ್ಸಿನಿಂದ ಯಾವಾಗ್ಲೂ ತಿನ್ನೋದು ಅಂತಂದ್ರೆ ಅದ್ರಲ್ಲೂ ಸ್ವೀಟ್ ಅಂದ್ರೆ ಪಂಚಪ್ರಾಣ, ಅಕ್ಕ ಪಕ್ಕ ಯಾರ ಮನೇಲಿ ಸಮಾರಂಭ ಇದ್ರು ನಯನಂಗೆ ಪಾಯಸ ಅಂದ್ರೆ ಇಷ್ಟ ಅಂತ ಆಗೆಲ್ಲ ನಮ್ಮ ಮನೆಗೆ ತಂದು ಕೊಡ್ತಾ ಇದ್ದದ್ದು ಕೂಡಾ ಇತ್ತು.
ಕುಟುಂಬದ ಯಾವುದೇ ಸಮಾರಂಭದಲ್ಲಿ ಊಟಕ್ಕೆ ಕೂತಾಗ ಬಡಿಸುವವರನ್ನು ಕರೆದು ಅವ್ಳಿಗೆ ಪಾಯಸ ಸ್ವಲ್ಪ ಜಾಸ್ತಿ ಹಾಕಿ ಹೋಳಿಗೆ ಲಾಡು ಎಕ್ಸ್ಟ್ರಾ ಹಾಕಿ ಅಂತಾ ಹೇಳೋದಲ್ದೆ, ಪಾಯಸದ ಹಂಡೆ ಅಂತಾ ಹೆಸರು ಬೇರೆ ಇಟ್ಟಿದ್ರು ನನಗೆ. ಇನ್ನು ಮನೇಲಿದ್ರೆ ಯಾವಾಗ್ಲೂ ಏನಾದ್ರು ತಿಂತಾ ಇರೋದು ನನ್ನ ಅಭ್ಯಾಸ. ಸ್ಕೂಲ್ ಕಾಲೇಜು ಡೇಸ್ ತನಕ ಸ್ಪೋರ್ಟ್ಸ್ ಅಲ್ಲಿ ಇದ್ದಿದ್ರಿಂದ, ಆಟ ಆಡೋದು ನನಗೆ ಪಂಚಪ್ರಾಣ ಆದ್ರಿಂದ ಅಂದಿನ ದಿನಗಳಲ್ಲಿ ತೂಕ ಕಂಟ್ರೋಲಲ್ಲಿ ಇರ್ತಾ ಇತ್ತು. ಯಾವಾಗ ಇದೆಲ್ಲ ಸ್ಟಾಪ್ ಆಯ್ತೋ ಅಲ್ಲಿಂದ ನಮ್ಮದು ಒಂಥರಾ ಕಣ್ಣಿಗೆ ಬೀಳುವ ಜರ್ನಿ ಆಗೋಯ್ತು, ಸಂಬಂಧಿಕರು ಫ್ರೆಂಡ್ಸ್ ಸಿಕ್ಕಾಗಲೆಲ್ಲ ಮೊದಲು ಮಾತಾಡೋ ವಿಷಯ, ಎಂತ ದಪ್ಪ ಆದ್ದ?? ಸ್ವಲ್ಪ ಸಪೂರ ಆಗು, ಈಗಲೇ ಇಷ್ಟಿದ್ರೆ ಮುಂದೆ ಕಷ್ಟ ಆಗುತ್ತೆ ಅಂತ, ಆ ಕ್ಷಣಕ್ಕೆ ಹೌದಾ, ಅಷ್ಟೊಂದು ದಪ್ಪ ಇದ್ದೇನಾ ಅಂತ ಅನಿಸಿದ್ರೂ, ಅದಕ್ಕೆಲ್ಲ ಜಾಸ್ತಿ ತಲೆ ಕೆಡಿಸ್ಕೊತಾನೆ ಇರ್ಲಿಲ್ಲ. ಈ ತರ ಕೇಳೋದು ಕೆಲವೊಮ್ಮೆ ಕಾಳಜಿ ಆದ್ರೆ ಮತ್ತೆ ಕೆಲವೊಮ್ಮೆ ಲೋಕಾರೂಢಿ ಆಗಿರುತ್ತೆ.
ಸಾಮಾನ್ಯವಾಗಿ ಸಪೂರ ಇದ್ದವರು ಸಿಕ್ಕಿದಾಗ ಇದೆಂತ ಇಷ್ಟು ಹಾಳಾದ್ದ್ ಪತ್ತಿ(ಊಟ) ತಿಂತಾನೆ ಇಲ್ವಾ ಅಂದ್ರೆ, ಟೆನ್ಷನ್ ಅಲ್ಲಿ ಎಷ್ಟು ಸಪೂರ ಆದದ್ದು ಮರ್ರೆ ಅವಳು /ಅವನು ಅಂತ ಹಿಂದೆ ಚರ್ಚೆ ಮಾಡುವಂತದ್ದು ಮಾಮೂಲು, ಇನ್ನು ಹೊಸದಾಗಿ ಮಾಡುವೆ ಆದ ಹುಡುಗ ಸಪೂರ ಆದ್ರೆ ಅವನ ಹೆಂಡತಿ ಅಡುಗೆ ಸರಿ ಮಾಡಲ್ಲ ಅನ್ನೋದಂತೂ ಸರ್ವೇ ಸಾಮಾನ್ಯ. ಇದನ್ನೆಲ್ಲಾ ಸೀರಿಯಸ್ ಆಗಿ ಮನಸಿಗೆ ತಗೊಂಡು ಯೋಚನೆ ಮಾಡೋರಿಗೆ ಬೇಜಾರಾದ್ರೆ ಅಥವಾ ಕೋಪ ತರಿಸಿದ್ರೆ ಹಗುರಾಗಿ ತೆಗೆದುಕೊಳ್ಳುವವರಿಗೆ ಏನು ಅನಿಸೋದೇ ಇಲ್ಲ. ಕೆಲವೊಮ್ಮೆ ಇದು ಕೋಪ ತರಿಸಿದಾಗ ನನ್ನ ದೇಹ ನಾನೇ ತಾನೇ ಹೊರೋದು ನಿಮಗ್ಯಾಕೆ ಅದೆಲ್ಲ ಅಂತ ಮುಖಕ್ಕೆ ಹೊಡೆದಂತೆ ಮಾತಾಡೋದು ಕೂಡ ಇರುತ್ತೆ. ಕೆಲವರಿಗಂತೂ ಈ ರೀತಿ ಹೇಳೋದು ಒಂದು ರೀತಿಯ ಅಭ್ಯಾಸ ಆಗಿಬಿಟ್ಟಿರೋದ್ರಿಂದ ಅದನ್ನೆಲ್ಲ ನಿಲ್ಲಿಸಲು ಆಗೋದಿಲ್ಲ.
ಎಷ್ಟೋ ಸಲ ದಪ್ಪ ಇರೋದೇ ಒಂದು ಅಪರಾಧ ಅನ್ನುವಂತೆ ಜನ ಮಾತಾಡುವಾಗ ಅದನ್ನು ಸಹಿಸೋದಕ್ಕೆ ಆಗದೆ ಕೆಲವರು ಸಭೆ ಸಮಾರಂಭಗಳಿಂದ ದೂರ ಇರೋದು ಕೂಡ ಇರುತ್ತೆ. ಆದರೆ ವ್ಯಕ್ತಿತ್ವಕ್ಕೆ ಬೆಲೆಯೇ ಹೊರತು ದೇಹದ ಆಕಾರಕ್ಕಲ್ಲ ಅನ್ನುವ ಸತ್ಯ ಅರ್ಥ ಮಾಡಿಕೊಂಡ ವ್ಯಕ್ತಿ ಎಂದೂ ಕೂಡ ಆಕಾರ, ಸೌಂದರ್ಯಕ್ಕೆ ತಲೆಕೆಡಿಸಿಕೊಳ್ಳಲಾರ. ಇಷ್ಟಕ್ಕೂ ಅರ್ಥ ಆಗದ ಸಂಗತಿ ಏನು ಅಂದ್ರೆ ಯಾರ್ ಹೇಳಿದ್ದು ದಪ್ಪ ಇರ್ಬಾರ್ದು ಸಪೂರ ಇರ್ಬೇಕು ಅಥವಾ ಅದೇ ಬಣ್ಣ ಇದೇ ಬಣ್ಣ ಚಂದ ಅಥವಾ ಅದೇ ಸೌಂದರ್ಯ ಅಂತ ಈ ಮಾನದಂಡವೆಲ್ಲ ವ್ಯಕ್ತಿತ್ವ ಇಲ್ಲದವರಿಗೆ ಆತ್ಮವಿಶ್ವಾಸ ಇಲ್ಲದವರಿಗೆ ಮಾತ್ರ ಅನ್ನೋದು ಕೆಲವು ಉದಾಹರಣೆಗಳಿಂದಲೂ ಸಾಬೀತಾಗಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ಹೇಳೋದಾದರೆ ಅತಿ ತೂಕ ಖಂಡಿತಾ ಒಳ್ಳೇದಲ್ಲ, ಅದಕ್ಕಾಗಿ ಸ್ವಲ್ಪ ಮಟ್ಟಿಗಿನ ಹೋರಾಟ ಖಂಡಿತಾ ಅನಿವಾರ್ಯ ಕೂಡ. ಈ ವಿಷಯದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಒಂದಿಷ್ಟು ಒಳ್ಳೆ ಅಭ್ಯಾಸಗಳನ್ನು ಖಂಡಿತ ರೂಪಿಸಿಕೊಳ್ಳಬೇಕಾಗುತ್ತದೆ.
ನನಗೆ ಕೆಲವೊಮ್ಮೆ, ಕನ್ನಡಿ ಮುಂದೆ ನಿಂತಾಗ, ಕೆಲವು ಡ್ರೆಸ್ ಫಿಟ್ ಆಗದೆ ಇದ್ದಾಗ, ಇದ್ದಕ್ಕಿದ್ದ ಹಾಗೆ ಫೀಲ್ ಆಗುತ್ತೆ, ಈ ಸಲ ತೂಕ ಸ್ವಲ್ಪ ಕಮ್ಮಿ ಮಾಡ್ಕೋಬೇಕು ಅಂತ ತಲೇಲಿ ಬಂದು ಬಿಡುತ್ತೆ. ಅದು ಸ್ವಲ್ಪ ಹೊತ್ತು ಅಷ್ಟೇ, ಸತ್ಯ ಹೇಳ್ತೀನಿ, ಅದೇ ಟೈಮ್ ಅಲ್ಲಿ, ವಾಕಿಂಗ್, ಜಿಮ್, ಏರೋಬಿಕ್ಸ್ ಯೋಗ, ಎಲ್ಲದರ ಬಗ್ಗೆ ಒಮ್ಮೆಲೇ ಯೋಚ್ನೆ ಮಾಡ್ತೀನಿ, ಒಂದು ವಾರ ಉತ್ಸಾಹದಿಂದ ಯಾವುದಾದ್ರೂ ಒಂದನ್ನು ಎಕ್ಸಿಕ್ಯೂಟ್ ಕೂಡ ಮಾಡ್ತೇನೆ. ಯೋಗ ಶಿಬಿರಗಳಾದಾಗ ಕೆಲವೊಮ್ಮೆ ಒಂದು ವಾರ, ಹತ್ತು ದಿನ ಅಟೆಂಡ್ ಆಗಿ ಬರ್ತಾ ಇದ್ದೆ. ಮಧ್ಯ ಮಧ್ಯ ಅಪರೂಪಕ್ಕೆ ಯಾರಾದರೂ, ನೀನ್ ಸ್ವಲ್ಪ ಸ್ಲಿಮ್ ಆಗಿದೀಯ ನಯನಾ ಅಂತ ಅಂದಾಗ ಸಹಜವಾಗೇ ಖುಷಿ ಆಗ್ತಿತ್ತು. ನನ್ನ ಗಂಡನ ಹತ್ರ ಹೌದಾ?? ಅಂತ ಕೇಳಿದಾಗಲೆಲ್ಲ ನಂಗೆ ತಮಾಷೆ ಮಾಡ್ತಾರೆ, 2 ದಿನ, ಒಂದು ವಾರದ ವರ್ಕೌಟ್’ನಲ್ಲಿ ಅದು ಹೇಗೆ ಮಾರಾಯ್ತಿ ಅಷ್ಟು ಸಪೂರ ಆಗೋದು ಅಂತ. ಹಾಗೆ ನನ್ನ ಆಫೀಸ್, ಇವೆಂಟ್ಸ್, ನನ್ನ ಮಗ, ಕೆಲವು ಓಡಾಟಗಳ ನಡುವೆ ಒಮ್ಮೊಮ್ಮೆ ಅದೆಲ್ಲ ಮಿಸ್ ಆಗಿ ಬಿಡೋದು, ಮತ್ತೆ ನೆನಪಾಗೋದೇ ಯಾರಾದ್ರೂ ಹೇಳಿದಾಗ ಮಾತ್ರ. ಅದು ಬೆಳಿಗ್ಗೆ ಏಳು ಘಂಟೆಗೆ ಆಫೀಸ್’ಗೆ ಹೋಗುವ ತರಾತುರಿಯಲ್ಲಿ, ಬೇರೆ ಜವಾಬ್ದಾರಿಗಳ ನಡುವೆ ಬೆಳಿಗ್ಗೆ ಟೈಮ್ ಕೊಡೋಕೆ ಆಗ್ತಾ ಇರ್ಲಿಲ್ಲ, ಇನ್ನು ಸಂಜೆ ಬೇರೆ ಬೇರೆ ನೆಪ ಹೀಗೆ ನೆಪ ಹೇಳ್ತಾ ಸಮಯ ಹೋಗ್ತಾ ಇತ್ತು. ಇಲ್ಲಿ ವರ್ಕೌಟ್ ಬರೀ ತೂಕ ಕಮ್ಮಿ ಮಾಡ್ಕೊಳ್ಳೋಕೆ ಅಷ್ಟೇ ಅಲ್ಲ ಫಿಟ್ ಆಗಿ ಇರೋದಕ್ಕೂ ಬೇಕು ಅನ್ನೋ ಯೋಚನೆ ಯಾವಾಗ್ಲೂ ಕಾಡ್ತಾ ಇತ್ತು.
ಈ ನಡುವೆ ನಮ್ಮ ರೆಡ್ ಎಫ್’ಎಂ ಅಲ್ಲಿ ನನ್ನ ಶೋ ಅಲ್ಲಿ ಫಿಟ್ ಮಂಗಳೂರು ಅಭಿಯಾನ ಎಷ್ಟೇ ಬ್ಯುಸಿ ಇದ್ರು ಫಿಟ್ ಆಗಿರಿ ಸ್ಪೆಷಲ್ ಕಾರ್ಯಕ್ರಮದಲ್ಲಿ ಯೋಗ, ಜಿಮ್, ಸ್ಪೋರ್ಟ್ಸ್ ಟ್ರೆಕ್ಕಿಂಗ್, ಇದರ ಬಗ್ಗೆ ಎಲ್ಲ ಮಾತುಕತೆ ನಡಿತಾ ಇತ್ತು. ನಂತರ ಇತ್ತೀಚೆಗೆ ಒಂದು ನಾಲ್ಕು ತಿಂಗಳ ಹಿಂದೆ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ಯೋಗ ಶಿಬಿರಕ್ಕೆ ಹೋಗಿ ಬಂದ್ಮೇಲೆ ಪ್ರತಿ ದಿನ ಸಂಜೆ ಖಾಲಿ ಹೊಟ್ಟೆಯಲ್ಲಿ ಯೋಗ, ಸೂರ್ಯ ನಮಸ್ಕಾರ, ಜೊತೆಯಲ್ಲಿ ಕೆಲವು ತೂಕ ಕಮ್ಮಿ ಮಾಡುವ ವ್ಯಾಯಾಮಗಳನ್ನು ಮಾಡೋದಕ್ಕೆ ಶುರು ಮಾಡಿದೆ. ಅಲ್ಪ ಸ್ವಲ್ಪ ತೂಕ ಕಮ್ಮಿ ಆಗೋದರ ಜೊತೆ, ಸ್ವಲ್ಪ ಖುಷಿ ಕೂಡ ಆಯ್ತು. ಅದರ ನಡುವೆ ವಿವಿಧ ಯೋಗಾಸನಗಳ ಬಗ್ಗೆ ರಿಸರ್ಚ್ ಮಾಡೋದು, ದೇಹದ ಪ್ರತೀ ಭಾಗದ ಕೊಬ್ಬು ಕರಗಿಸೋದು ಹೇಗೆ, ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ ಸಂಗ್ರಹಿಸೋದು ನನ್ನ ಹ್ಯಾಬಿಟ್ ಆಗೋಯ್ತು, ಹಾಗೆ ನನ್ನ ಷೋನಲ್ಲಿ ಇದ್ದ ಹೆಲ್ತ್ ಸೆಗ್ಮೆಂಟ್ ಅಲ್ಲಿ ಆ ವಿಷಯಗಳ ಬಗ್ಗೆ ಮಾತಾಡ್ತಾ ಇದ್ದೆ. ಆಗ ನನಗೆ ಗೊತ್ತಾದ ಒಂದಿಷ್ಟು ವಿಚಾರಗಳನ್ನು ಹಾಗೆ ಯೋಗ ತರಗತಿಗಳಲ್ಲಿ ತಿಳಿದುಕೊಂಡ ಒಂದಿಷ್ಟು ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ತಾ ಇದ್ದೀನಿ. ತೂಕ ಇಳಿಸೋದಕ್ಕೆ ಬೇರೆ ಬೇರೆ ಯತ್ನಗಳನ್ನು ಮಾಡ್ತಾ ಇರೋರಿಗೆ ಸ್ವಲ್ಪ ಮಟ್ಟಿಗೆ ಸಹಾಯ ಆದರೂ ಆಗ್ಬಹುದು. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ಅರ್ಧ ಲೀಟರ್ ನೀರು ನಿಮ್ಮ ಹೊಟ್ಟೆ ಸೇರ್ತಾ ಇದ್ರೆ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲ, ಕೊಬ್ಬು ಕರಗಲು, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕಲು ಕೂಡ ಇದು ನೆರವಾಗುತ್ತೆ.
ರಾತ್ರಿ ಜೀರಿಗೆಯನ್ನು ನೆನೆಸಿಟ್ಟು ಬೆಳಿಗ್ಗೆ ಅದನ್ನು ಕುದಿಸಿ ಆರಿಸಿ ಕುಡಿಯೋದು, ಹಾಗೆ ರಾತ್ರಿ ನೆನೆಸಿಟ್ಟ ಮೆಂತ್ಯೆ ನೀರನ್ನು ಸಹ ಕುಡಿಯಬಹುದು.
ನಂತರ ಅರ್ಧ ಅಥವಾ ಒಂದು ಘಂಟೆ ನಂತರ ನೀವು ಸೇವಿಸೋ ತಿಂಡಿ ಅಥವಾ ಯಾವುದೇ ಆಹಾರ ಇರಬಹುದು ಅದನ್ನು ತಿನ್ನುವಾಗ ನಮ್ಮ ಹಿರಿಯರು ಹೇಳ್ತಾ ಇದ್ದಂತೆ ಚೆನ್ನಾಗಿ ಜಗಿದು ತಿನ್ನಬೇಕು.
ಬಾಯಿ ಮುಚ್ಚಿಕೊಂಡೇ ಜಗಿಯುವ ಅಭ್ಯಾಸ ಕಡ್ಡಾಯವಾಗಿ ಮಾಡಿಕೊಳ್ಳಬೇಕಂತೆ ನೋಡಿ. ಆಗ ಉತ್ಪತ್ತಿಯಾಗುವ ಜೀರ್ಣ ರಸ ನಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಊಟ ಅಥವಾ ಏನಾದರೂ ತಿನ್ನುವಾಗ ಬಾಯಿ ಮುಚ್ಚಿ ಮಾತಾಡದೆ, ಟಿವಿ ನೋಡದೆ, ಮೊಬೈಲ್ ಲ್ಯಾಪ್ ಟಾಪ್ ನೋಡದೆ ಕೇವಲ ತಿನ್ನುವ ಆಹಾರದ ಮೇಲೆ ಗಮನ ಇದ್ದರೆ ಜೀರ್ಣ ರಸದೊಂದಿಗೆ ಅಗಿದು ತಿನ್ನುವ ಆಹಾರ ಹೊಟ್ಟೆ ಸೇರಿ ಉತ್ತಮ ರೀತಿಯಲ್ಲಿ ಜೀರ್ಣ ಆಗೋದ್ರಿಂದ ಅಜೀರ್ಣದಿಂದ ಆಗುವ ಅದೆಷ್ಟೋ ಸಮಸ್ಯೆಗಳು ನಮ್ಮನ್ನು ಕಾಡೋದಿಲ್ಲ. ಅಗಿಯೊದ್ರಿಂದ, ಹಲ್ಲುಗಳಿಗೂ ಕೂಡ ವ್ಯಾಯಾಮ ಸಿಕ್ಕಿದಂತಾಗುತ್ತದೆ.
ಅಷ್ಟೇ ಅಲ್ಲದೆ ಅಗಿಯುವ ಪ್ರಕ್ರಿಯೆಯ ನಡುವೆ ನಮ್ಮ ಬ್ರೈನ್’ಗೆ ಸಿಗ್ನಲ್ ಸರಿಯಾಗಿ ಸಿಕ್ಕಿ ಹೊಟ್ಟೆ ತುಂಬಿದ ಕೂಡಲೇ ವಾಪಸ್ ಸಿಗ್ನಲ್ ಸಿಗೋದ್ರಿಂದ, ಅವಶ್ಯಕತೆಗಿಂತ ಹೆಚ್ಚು ತಿನ್ನೋದು ತಪ್ಪುತ್ತದೆ. ಇಲ್ಲದಿದ್ದದ್ರೆ ಮತ್ತು ಬೇಕು, ಹೆಚ್ಚು ತಿನ್ನಬೇಕು ಅನಿಸಿ, ಓವರ್ ಈಟಿಂಗ್ ಶುರು ಆಗಿ, ಕೊಬ್ಬಿನ ಸಂಗ್ರಹ ಜಾಸ್ತಿ ಆಗಬಹುದು. ಪ್ರತೀ ಸಲ ತಿನ್ನುವಾಗಲು ಮರೆಯದೆ ಇದನ್ನು ಪಾಲಿಸಬೇಕು.
ಹಾಗೆ ಯಾವುದೇ ಕಾರಣಕ್ಕೆ ನಿಂತು ಊಟ ಮಾಡಲೇಬಾರದು. ಕೂತು ಕಲ್ಲುಗಳನ್ನು ಮಡಚಿ ಮಾಡುವ ಊಟ ನಮ್ಮ ದೇಹದ ರಚನೆಯನ್ನು ಜೀರ್ಣಕ್ರಿಯೆಗೆ ಸಹಾಯ ಮಾಡುವಂತೆ ಮಾಡೋದ್ರಿಂದ ಇದನ್ನು ಮರೆಯದೇ ಪಾಲಿಸಿ.
ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಆದ್ಮೇಲೆ ಹತ್ತು ನಿಮಿಷ ಅಥವಾ ಅದಕ್ಕಿಂತ ಜಾಸ್ತಿ ಹೊತ್ತು ಮಾಡುವ ವಜ್ರಾಸನ ನಿಮಗೆ ಬಹಳ ಸಹಾಯಕಾರಿಯಾಗಬಹುದು. ನಮ್ಮ ಕಾಲಿನ ಮೇಲೆ ನಾವು ಕೂರುವ ಆಸನ, ದೇಹವನ್ನು ವಜ್ರದಂತೆ ಮಾಡೋದರ ಜೊತೆಗೆ, ಕಾಲುಗಳ ಭಾಗಕ್ಕೆ ಹರಿಯುವ ರಕ್ತವನ್ನು ನಿಯಂತ್ರಿಸಿ, ಹೊಟ್ಟೆಯ ಭಾಗಕ್ಕೆ ಕಳಿಸೋದ್ರಿಂದ, ಜೀರ್ಣಕ್ರಿಯೆ ಬೇಗನೆ ಆಗುವಂತೆ ಮಾಡುತ್ತದೆ. ಇದರಿಂದ ಜೀರ್ಣ ಆಗದೆ, ಉಳಿದು ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುವ ಆಹಾರಕ್ಕೆ ಮುಕ್ತಿ ಸಿಕ್ಕ ಹಾಗಾಗುತ್ತದೆ. ನೀವು ವಜ್ರಾಸನ ಶುರು ಮಾಡಿದಾಗ ಸಾಮಾನ್ಯವಾಗಿ ಆರಂಭದಲ್ಲಿ ಕಾಲು ನೋವು ಬರುವುದು ಸಹಜ, ಹಾಗಂತ ಅಲ್ಲಿಗೆ ನಿಲ್ಲಿಸದೆ, ತಲೆದಿಂಬಿನ ಸಹಾಯದಿಂದ ಪ್ರತಿದಿನ ಅವಧಿ ಹೆಚ್ಚಿಸ್ತಾ ಹೋದ್ರೆ ಮತ್ತೆ ಸ್ವಲ್ಪ ದಿನಗಳಲ್ಲಿ ಅಭ್ಯಾಸ ಆಗ್ಬಿಡುತ್ತೆ. ಈ ಆಸನದ ವಿಶೇಷತೆ ಅಂದ್ರೆ ಹೊಟ್ಟೆ ತುಂಬಿದ ಮೇಲೆ ಮಾಡುವ ಏಕೈಕ ಯೋಗಾಸನ ಇದು. ಜಪಾನೀಯರು ತಿಂಡಿ, ಊಟ ಮಾಡುವ ಸಮಯ ಇದನ್ನು ತಪ್ಪದೆ ಪಾಲಿಸುತ್ತಾರಂತೆ ನೋಡಿ. ಇದ್ರಿಂದ ಹೊಟ್ಟೆ ಸಹ ದೊಡ್ಡದಾಗೋದಿಲ್ಲ. ದಿನಕ್ಕೆ ಒಂದು ಹತ್ತರಿಂದ ಇಪ್ಪತ್ತು ನಿಮಿಷ ಅಯ್ಯೋ ಇವತ್ತು ಊಟ ಜಾಸ್ತಿ ಆಯ್ತು ಜೀರ್ಣ ಮಾಡೋದು ಹೇಗೆ ಅನ್ನೋ ಯೋಚ್ನೆ ಬಂದ್ರೆ ಈ ಆಸನ ಮಾಡಿದ್ರೆ ಆಯ್ತು.
ಇನ್ನು ಊಟದಲ್ಲಿ ಅನ್ನದ ಪ್ರಮಾಣವನ್ನು ತಗ್ಗಿಸಿ ಅದರ ಜಾಗದಲ್ಲಿ ರಾಗಿ, ಚಪಾತಿ, ಮೊಳಕೆ ಕಾಳುಗಳು, ತರಕಾರಿ ಅಥವಾ ಹಣ್ಣು, ಡ್ರೈಫ್ರೂಟ್ಸ್’ಗಳನ್ನು ಜಾಸ್ತಿ ಮಾಡುವುದು ಉತ್ತಮ. ಡಯಟ್ ಮಾಡೋರು ಆಹಾರವನ್ನು ರಿಪ್ಲೇಸ್ ಮಾಡಬಹುದು. ಆದರೆ ಸೇವಿಸೋ ಆಹಾರದ ಪ್ರಮಾಣ ಕಮ್ಮಿ ಮಾಡೋದಕ್ಕೆ ಹೋದರೆ, ದೇಹದಲ್ಲಿ ಏರುಪೇರಾಗಿ ಮೊದಲಿಗಿಂತ ಜಾಸ್ತಿ ತಿನ್ನುವ ಹಾಗೆ ಆಗ್ಬಹುದು. ಹಾಗಾಗಿ ಊಟ ಬಿಟ್ಟು ತೂಕ ಕಮ್ಮಿ ಮಾಡೋ ಯೋಚನೆ ಮಾಡೋರು ಇನ್ನೂ ತೂಕ ಜಾಸ್ತಿ ಮಾಡ್ಕೊಳ್ಳೋದರ ಜೊತೆಗೆ ಗ್ಯಾಸ್ಟ್ರಿಕ್ ಮತ್ತು ನಿಶ್ಯಕ್ತಿ, ರೋಗ ನಿರೋಧಕ ಶಕ್ತಿ ಕಮ್ಮಿ ಆಗಿ ಬೇರೆ ಬೇರೆ ಸಮಸ್ಯೆಗಳು ಸೃಷ್ಟಿ ಆಗಬಹುದು.
ಇನ್ನು ಅಡುಗೆ ಮನೆಯಿಂದ ಸಕ್ಕರೆಯನ್ನು ಓಡಿಸಿ ಆ ಜಾಗದಲ್ಲಿ ಬೆಲ್ಲವನ್ನು ತಂದಿಡೋದು, ಪ್ರತಿ ದಿನ ಚಾ ಕುಡಿಯುವವರು ಕೂಡ ಸಕ್ಕರೆ ಬದಲು ಬೆಲ್ಲ ಟ್ರೈ ಮಾಡಿ ನೋಡಬಹುದು, ಸಕ್ಕರೆ ಹಾಕಿ ಮಾಡೋ ತಿಂಡಿಗಳಿಂದ ದೂರ ಇರೋದು, ಜಂಕ್ ಫುಡ್ ಹಾಗೆ ಹೊರಗಡೆ ತಿನ್ನುವ ಅಭ್ಯಾಸವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಕೂಡ ಕಮ್ಮಿ ಮಾಡ್ಲೇಬೇಕು. ಇನ್ನು ಕೆಲ ವಸ್ತುಗಳಲ್ಲಿ ಅಪಾರ ಪ್ರಮಾಣದ ಸಕ್ಕರೆ ಅಡಗಿರೋದು ಗೊತ್ತೇ ಆಗಲ್ಲ. ಉದಾಹರಣೆಗೆ ಬ್ರೆಡ್, ಕೆಲವು ಸಾಫ್ಟ್ ಡ್ರಿಂಕ್ಸ್’ಗಳು, ನಾವು ಮನೆಯಿಂದ ಹೊರಗಡೆ ಕುಡಿಯುವ ಹಣ್ಣಿನ ಜ್ಯೂಸುಗಳು, ಇದೆಲ್ಲದರ ಬಗ್ಗೆ ಖಂಡಿತಾ ಗಮನ ಇರ್ಬೇಕು.
ಇನ್ನು ನೀರಿನ ಬಗ್ಗೆ ಹೇಳೋದಾದ್ರೆ ಒಂದಿಷ್ಟು ವಿಚಾರವನ್ನು ನಮ್ಮ ಹ್ಯಾಬಿಟ್ ಮಾಡ್ಕೋಬೇಕು. ದಿನಕ್ಕೆ ಕಡಿಮೆ ಅಂದ್ರು ಮೂರುವರೆ ಲೀಟರ್ ನೀರು ಕುಡಿಯೋ ಅಭ್ಯಾಸ, ಹಾಗೆ ಪ್ರತೀ ಸಲ ಕುಳಿತುಕೊಂಡೇ ನೀರು ಕುಡಿಯೋದು, ಅದು ಕೂಡ ಬಾಯಿ ಮುಚ್ಚಿಕೊಂಡು ಜೀರ್ಣ ರಸದೊಂದಿಗೆ ಸ್ವಲ್ಪ ಸ್ವಲ್ಪವೇ ಕುಡಿಯೋ ಅಭ್ಯಾಸ ಮಾಡ್ಕೋಬೇಕು. ಉಗುರು ಬೆಚ್ಚಗಿನ ನೀರಾದ್ರೆ ಅದು ಕೂಡ ಉತ್ತಮ. ಇನ್ನು ನೀರನ್ನು ಪ್ಲಾಸ್ಟಿಕ್ ಬಾಟಲಿನಲ್ಲಿ ಕುಡಿಯೋ ಅಭ್ಯಾಸ ಇರೋರು ಅದನ್ನು ರಿಪ್ಲೇಸ್ ಮಾಡಬಲ್ಲ ಬೇರೆ ಬಾಟಲಿಗಳನ್ನು ಹುಡುಕಿಕೊಳ್ಳೋದು ಉತ್ತಮ ಮಾರ್ಗ.
ಇನ್ನು ಹೊಟ್ಟೆ ಚಿಕ್ಕದಾಗಬೇಕು ಅನ್ನೋರು ರಾತ್ರಿ ಎಂಟು ಘಂಟೆಯ ಒಳಗೆ ಊಟ ಮಾಡಿ ಮುಗಿಸೋದು. ಎಷ್ಟು ಕಡಿಮೆ ತಿಂದ್ರು ಒಳ್ಳೇದೇ, ಅದರಲ್ಲೂ ಮೀನು ಮಾಂಸಗಳಿಗಿಂತ ಸುಲಭವಾಗಿ ಜೀರ್ಣವಾಗಬಲ್ಲ ಆಹಾರಗಳನ್ನು ಸೇರಿಸದರೆ ಒಳ್ಳೇದು. ಒಟ್ಟಾರೆ ಮಲಗೋಕಿಂತ ಎರಡು ಘಂಟೆ ಮೊದಲು ನಮ್ಮ ಊಟ ಮುಗಿದಿರಲೇಬೇಕು.
ಅದು ಜೀರ್ಣ ಆಗೋದಕ್ಕೆ ನಾವು ಕೊಡುವ ಟೈಮ್ ಆಗಿರುತ್ತೆ, ಹಾಗೆ ಸೂರ್ಯೋದಯಕ್ಕಿಂತ ಮೊದಲು ಏಳೋ ಅಭ್ಯಾಸವನ್ನು ಮಿಸ್ ಮಾಡ್ಕೊಳ್ಳೋ ಹಾಗೆ ಇಲ್ಲ ನಮ್ಮ ದೇಹ ತೂಕ ನಮ್ಮ ನಿದ್ದೆಯ ಮೇಲೆ ಕೂಡ ಅವಲಂಬಿತವಾಗಿರುತ್ತದೆ ಅನ್ನೋದನ್ನ ನಾವು ಮರೀಬಾರ್ದು.
ಇದೆಲ್ಲದರ ಜೊತೆ ಯಾವುದಾದರೂ ಒಂದು ದೈಹಿಕ ಚಟುವಟಿಕೆ ವಾರದಲ್ಲಿ ಐದು ದಿನ ಆದರು ಇರ್ಬೇಕು. ಪ್ರತೀ ಸಲ ಅದು ಇಪ್ಪತ್ತು ನಿಮಿಷಕ್ಕಿಂತ ಜಾಸ್ತಿ ಇದ್ರೆ ಮಾತ್ರ ಅದರ ಬೆನಿಫಿಟ್ ಸಿಗುತ್ತೆ ಇಲ್ಲಾಂದ್ರೆ ಯಾವುದೇ ಪ್ರಯೋಜನ ಇಲ್ಲ ಅಂತೆ ನೋಡಿ ಆದ್ರೆ ಅದನ್ನು ಇಪ್ಪತ್ತು ನಿಮಿಷ ಬೆಳಿಗ್ಗೆ ಇಪ್ಪತ್ತು ನಿಮಿಷ ಸಂಜೆ ಅಂತ ಡಿವೈಡ್ ಮಾಡಿಕೊಂಡು ಮಾಡಿದ್ರು ಸಹ ಓಕೆ ಅಂತೇ ಆದ್ರೆ ಇಪ್ಪತ್ತು ನಿಮಿಷಕ್ಕಿಂತ ಕಡಿಮೆ ಮಾಡೋದ್ರಿಂದ ಪ್ರಯೋಜನ ಇಲ್ಲ ಅಂತೆ. ಯಾಕಂದ್ರೆ ನಮ್ಮ ಬ್ರೈನ್’ಗೆ ನಮ್ಮ ದೈಹಿಕ ಕಸರತ್ತು ರೀಚ್ ಆಗೋಕೆ ಬೇಕಾಗುವ ಸಮಯ ಒಟ್ಟು ಇಪ್ಪತ್ತು ನಿಮಿಷ ಅನ್ನೋದು ಅಧ್ಯಯನದಲ್ಲಿ ಸಾಬೀತಾದ ವಿಚಾರ.
ಹಿತ ಮಿತ ಆಹಾರ ಸೇವನೆ ನಮ್ಮ ದೇಹಕ್ಕೆ ಒಳ್ಳೇದು. ಅದನ್ನು ತೃಪ್ತಿಯಿಂದ ಇಷ್ಟಪಟ್ಟು ಅಳವಡಿಕೆ ಮಾಡಿಕೊಳ್ತಾ ಹೋದರೆ ನಮ್ಮ ದೇಹ ಅದಕ್ಕೆ ಒಗ್ಗಿಕೊಂಡ ಮೇಲೆ ಅಗತ್ಯಕ್ಕಿಂತ ಜಾಸ್ತಿ ಆಹಾರನ ಅದು ಕೇಳೋದೇ ಇಲ್ಲ. ಹಾಗೆ ಮೇಲೆ ಹೇಳಿದ ಕೆಲ ವಿಚಾರಗಳನ್ನು ಅಳವಡಿಸಿಕೊಂಡರೆ ಇಷ್ಟ ಪಡುವ ಆಹಾರಗಳನ್ನು ಖಂಡಿತ ಆಸ್ವಾದನೆ ಮಾಡಬಹುದು. ಟೈಮ್’ಗೆ ಸರಿಯಾಗಿ ಸಾತ್ವಿಕ ಆಹಾರವನ್ನು ತಿನ್ನೋ ಅಭ್ಯಾಸ ಮಾಡ್ಕೊಂಡ್ರೆ ತಂತಾನೇ ದೇಹದಲ್ಲಿ ಸಂಗ್ರಹವಾಗಿರುವ ಅನವಶ್ಯಕ ಕೊಬ್ಬು ಕರಗಲಾರಂಬಿಸಿ ಅತಿ ತೂಕದ ಸಮಸ್ಯೆ ಸ್ವಲ್ಪ ಮಟ್ಟಿಗಂತೂ ನಿವಾರಣೆಯಾಗುವುದರ ಜೊತೆಗೆ ಒಳ್ಳೆಯ ಆರೋಗ್ಯಕ್ಕೂ ನಿಮ್ಮ ಕಡೆಯಿಂದ ಒಂದಿಷ್ಟು ಕೊಡುಗೆ ಸಿಕ್ಕ ಹಾಗಾಗುತ್ತೆ. ಮನಸ್ಸಿದ್ದರೆ ಮಾರ್ಗ ಖಂಡಿತ…
Get in Touch With Us info@kalpa.news Whatsapp: 9481252093
Discussion about this post