ಮಡಿಕೇರಿ: ನಿಜಕ್ಕೂ ಶತ್ರುಗಳಿಗೂ ಇಂತಹ ಪರಿಸ್ಥಿತಿ ಬರಬಾರದು… 9 ತಿಂಗಳು ಹೆತ್ತು, ಹೊತ್ತು ಸಾಕಿದ ತಾಯಿ ಕಣ್ಣೆದುರಿಗೇ ಕೊಚ್ಚಿ ಹೋಗುತ್ತಿದ್ದರೂ, ಏನಾ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದ ಮಗ, ಕಾಪಾಡುವಂತೆ ಅಂಗಲಾಚುತ್ತಿದ್ದರೂ ಯಾರೂ ಏನೂ ಮಾಡಲಾಗದ ಸ್ಥಿತಿ ಅಲ್ಲಿತ್ತು… ಇದು ನಿಜಕ್ಕೂ ಘೋರ…
ಕೊಡಗಿನಲ್ಲಿ ಉಂಟಾಗಿರುವ ಭೀಕರ ಪ್ರವಾಹದಲ್ಲಿ ಹೆಬ್ಬಟ್ಟಗೇರಿ ಎಂಬಲ್ಲಿನ ಮಿಟ್ಟು ಗಣಪತಿ ಎನ್ನುವವರ ದುರಂತ ಕತೆಯೇ ಈ ಸುದ್ದಿ..
ಇಲ್ಲಿನ ಮಿಟ್ಟು ಗಣಪತಿ ಎನ್ನುವವರು ಕಳೆದ ಆರು ತಿಂಗಳ ಹಿಂದೆಯಷ್ಟೇ ಹೊಸ ಮನೆ ನಿರ್ಮಿಸಿಕೊಂಡು ತಮ್ಮ ಪುಟ್ಟ ಸಂಸಾದೊಂದಿಗೆ ಬದುಕಬೇಕು ಎಂದು ಕನಸು ಕಂಡಿದ್ದರು. ಆದರೆ, ಆ ವಿಧಿ ಅವರ ಜೀವನದಲ್ಲಿ ಬೇರೆಯದೇ ಆಟವಾಡಿತ್ತು.
ಆ.15ರಂದು ಮುಂಜಾನೆ ಗಣಪತಿ ಉಪಹಾರ ಸೇವನೆ ಮಾಡುತ್ತಿದ್ದ ವೇಳೆ ದಾರಿಹೋಕರೊಬ್ಬರು ಮಡಿಕೇರಿ ದಾರಿಯನ್ನು ಕೇಳಿದ್ದಾರೆ. ದಾರಿಹೋಕರೊಂದಿಗೆ ಮಾತನಾಡುವ ವೇಳೆ ಅನತಿ ದೂರದಲ್ಲೇ ಬೃಹತ್ ಮರವೊಂದು ಬಿದ್ದು, ಭಾರೀ ಶಬ್ದ ಬಂದಿದೆ. ಮಾತ್ರವಲ್ಲ, ಭಾರೀ ಭೂಕುಸಿತ ಉಂಟಾಗಿ ಗಣಪತಿ ಅವರ ಮನೆ ಅದರಲ್ಲಿ ಸಿಲುಕಿತು.
ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಮುಂದೆ ಹೋಗುವ ಸ್ಥಿತಿಯಲ್ಲಿ ಇರಲಿಲ್ಲ. ಗಣಪತಿ ಅವರ ತಾಯಿ ಮಿನ್ನಂಡ ಉಮ್ಮವ್ವ ಸಿಲುಕಿ ಸಹಾಯಕ್ಕಾಗ ಅಂಗಲಾಚುತ್ತಿದ್ದರು. ಜನ್ಮ ನೀಡಿದ ತಾಯಿ ಕಣ್ಣ ಮುಂದೆ ಅಪಾಯಕ್ಕೆ ಸಿಲುಕಿದ್ದರೂ ಸಹ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಗಣಪತಿ ಇದ್ದರು. ನೋಡ ನೋಡುತ್ತಿದ್ದಂತೆಯೇ ಅವರ ಕಣ್ಣಮುಂದೆಯೇ ಮತ್ತಷ್ಟು ಭೂಕುಸಿತ ಉಂಟಾಗಿ ಅವರ ತಾಯಿ ಕೊಚ್ಚಿ ಹೋಗಿದ್ದಾರೆ.
ನಿಜಕ್ಕೂ ಶತ್ರುಗಳಿಗೂ ಸಹ ಇಂತಹ ಘೋರ ಸ್ಥಿತಿ ಬರಬಾರದು ವಿಧಿಯೇ!
Discussion about this post