ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂಬುದು ಸೇರಿದಂತೆ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಹಲವು ಸಂಘಟನೆಗಳ ವತಿಯಿಂದ ಬಾರಂದೂರು ಬಳಿಯ ಬೈಪಾಸ್ ಹೆದ್ದಾರಿಯಲ್ಲಿ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಲಾಯಿತು.
ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಭದ್ರಾವತಿ ಬಾರಂದೂರು ಬಳಿಯ ಬೈಪಾಸ್ ಹೆದ್ದಾರಿಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಗಂಟೆಗೂ ಹೆಚ್ಚು ರಸ್ತೆ ತಡೆ ನಡೆಸಲಾಯಿತು.
ಪ್ರಗತಿಪರ ಒಕ್ಕೂಟದ ಅಧ್ಯಕ್ಷ ಡಿ.ಸಿ. ಮಾಯಣ್ಣ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ಮಾರಕವಾದ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಇದನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲಕ್ಷಾಂತರ ರೈತರು ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿರುವುದು ಖಂಡನೀಯ. ರೈತರು ಹಾಗೂ ದೇಶಕ್ಕೆ ಮಾರಕವಾಗಿರುವ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ತತಕ್ಷಣವೇ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಈ ವೇಳೆ ಮಾತನಾಡಿದ ಎಎಪಿ ಜಿಲ್ಲಾಧ್ಯಕ್ಷ ರವಿಕುಮಾರ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ಮೂಲಕ ರೈತರಿಗೆ ಮರಣ ಶಾಸನ ಬರೆಯಲು ಹೊರಟಿದೆ. ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಸರ್ಕಾರದ ನೀತಿಗಳನ್ನು ಜಾರಿಗೊಳಿಸುತ್ತಿದ್ದು, ರೈತರು, ಬಡವರ ಹಾಗೂ ಶೋಷಿತರಿಗೆ ಇವುಗಳು ಮಾರಕವಾಗಿದೆ ಎಂದು ಕಿಡಿ ಕಾರಿದರು.
ರೈತ ಸಂಘ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕ, ಎಸ್’ಡಿಪಿಐ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ರಸ್ತೆ ತಡೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖರಾದ ಸುರೇಶ್, ಜಿ. ರಾಜು, ಎಸ್.ಕೆ ಸುಧೀಂದ್ರ, ಜೆಬಿಟಿ ಬಾಬು, ಮುಸ್ವೀರ್ ಬಾಷಾ, ರೈತ ಮುಖಂಡರಾದ ರಾಮಚಂದ್ರಪ್ಪ, ಬೆನಕಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್. ಕುಮಾರ್, ಎಂಪಿಎಂಸಿ ಅಧ್ಯಕ್ಷ ರಮೇಶ್ ಗೌಡ, ರೈತರ ಸಂಘದ ಪಂಚಾಕ್ಷರಪ್ಪ, ಕನ್ನಡಪರ ಸಂಘಟನೆಗಳ ಪ್ರಮುಖರಾದ ಜ್ಯೋತಿ ಸೋಮಶೇಖರ್, ಶಾರದ, ಪರಮೇಶ್, ಮುರುಳಿ, ರೂಪನಾರಾಯಣ, ಆಮ್ ಆದ್ಮಿ ಪಾರ್ಟಿ ಪ್ರಮುಖರಾದ ಪರಮೇಶ್ವರಚಾರ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ರೈತರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಹೆದ್ದಾರಿ ತಡೆ, ಪೊಲೀಸರಿಂದ ಬದಲಿ ಮಾರ್ಗ ವ್ಯವಸ್ಥೆ
ಗಂಟೆಗೂ ಹೆಚ್ಚು ಕಾಲ ಬೈಪಾಸ್ ಬಳಿ ಹೆದ್ದಾರಿ ತಡೆ ನಡೆಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಿದ್ದ ಭದ್ರಾವತಿ ಪೊಲೀಸರು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಿದ್ದರು.
ಮಾರುತಿ ನಗರದ ಬಳಿ ಬ್ಯಾರಿಕೇಡ್ ಹಾಕಿ, ಈ ಮಾರ್ಗದ ಮೂಲಕ ಬಾರಂದೂರು ಬಳಿಯಲ್ಲಿ ಸಂಪರ್ಕಿಸುವಂತೆ ಗ್ರಾಮೀಣ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು.
ಇನ್ನು, ಬೈಪಾಸ್ ಸೇತುವೆ ಬಳಿಯಲ್ಲಿ ಬ್ಯಾರಿಕೇಡ್ ಅಳವಡಿಸಿ, ಬಲ ಭಾಗದ ಗ್ರಾಮೀಣ ರಸ್ತೆ ಮೂಲಕ ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು.
ಭಾರೀ ವಾಹನಗಳು ಸೇರಿದಂತೆ ಎಲ್ಲ ಬಹಳಷ್ಟು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಆದರೆ, ಈ ರಸ್ತೆ ಕಿರಿದಾದ ಕಚ್ಚಾ ರಸ್ತೆಯಾದ ಕಾರಣ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುವಂತಾಯಿತು.

ರಸ್ತೆ ತಡೆ ಮಾಹಿತಿ ಇಲ್ಲದೇ ಈ ಭಾಗದಲ್ಲಿ ಆಗಮಿಸುತ್ತಿದ್ದ ವಾಹನ ಸವಾರರನ್ನು ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸವಾಗಿತ್ತು.
ರಸ್ತೆ ತಡೆಯಿದ್ದ ಹಿನ್ನೆಲೆಯಲ್ಲಿ ಭದ್ರಾವತಿ ಪೊಲೀಸರು ನಿಗದಿತ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ, ಬದಲಿ ಮಾರ್ಗ ಸೂಚಿಸಿದ್ದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಭಾರೀ ಪ್ರಮಾಣ ಟ್ರಾಫಿಕ್ ಜಾಮ್ ಆಗುವುದು ತಪ್ಪಿದೆ.

ಲಕ್ಕವಳ್ಳಿ ಮೂಲಕವೂ ವಾಹನ ಸಂಚಾರ
ಇನ್ನು, ಬಾರಂದೂರು ಬಳಿಯಲ್ಲಿ ರಸ್ತೆ ತಡೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ತರೀಕೆರೆ ಮೂಲಕ ಶಿವಮೊಗ್ಗ ಹಾಗೂ ಭದ್ರಾವತಿ ತೆರಳುವ ಕೆಎಸ್’ಆರ್’ಟಿಸಿ ಬಸ್ ಸೇರಿದಂತೆ ಬಹಳಷ್ಟು ಸಂಖ್ಯೆಯ ಭಾರೀ ವಾಹನಗಳು ಲಕ್ಕವಳ್ಳಿ ಮೂಲಕ ಸಂಚರಿಸಿದವು. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲೂ ಸಹ ವಾಹನ ದಟ್ಟಣೆ ಅಧಿಕವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















