ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ #Soraba ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ಜ.21ರಂದು ಕಾನಕೇರಿಮಠದ ಗುರುನಿವಾಸ ಆವರಣದಲ್ಲಿ ಹಿಂದೂ ಸಂಗಮ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. #BharatMata ಭಾರತ ಮಾತೆಗೆ ಪೂಜೆ ಸಲ್ಲಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಶೀರ್ವಚನ ನೀಡಿದ ಶ್ರೀ ಷ.ಬ್ರ. ಘನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ದೇಶಾದ್ಯಂತ ಹಿಂದೂ ಸಮಾಜ ಜಾಗೃತಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ನಾವು ನಮ್ಮ ನಡೆ, ನುಡಿ ಹಾಗೂ ಆಚರಣೆಯಲ್ಲಿ ಹಿಂದುತ್ವವನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ಹಿಂದೂ ಸಂಪೂರ್ಣ ಜಾಗೃತನಾದಾಗ ಮಾತ್ರ ಹಿಂದುತ್ವದ ಅಸ್ತಿತ್ವ ಇನ್ನಷ್ಟು ಸದೃಢವಾಗುತ್ತದೆ. ಧಾರ್ಮಿಕ ಕೇಂದ್ರಗಳಲ್ಲಿ ವಸ್ತ್ರಸಂಹಿತೆ #DressCode ಅಗತ್ಯವಾಗಿದ್ದು, ಯುವಪೀಳಿಗೆಗೆ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಕಲಿಸುವ ಕಾರ್ಯ ಮನೆಯಿಂದಲೇ ಆರಂಭವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ರಾಜ್ಯ ದೇವಸ್ಥಾನ ಸಂವರ್ಧನಾ ಸಮಿತಿ ರಾಜ್ಯ ಸಂಚಾಲಕ ಮನೋಹರ ಮಠದ, ಸಜ್ಜನರ ನಿಷ್ಕ್ರಿಯತೆಯಿಂದ ದುರ್ಜನರು ಸಕ್ರಿಯರಾಗುತ್ತಿರುವುದು ಆತಂಕಕಾರಿ ಸಂಗತಿ. ಅನೇಕ ದೇಶಭಕ್ತರು ಹಾಗೂ ಕ್ರಾಂತಿಕಾರರ ತ್ಯಾಗ–ಬಲಿದಾನದಿಂದಲೇ ನಮ್ಮ ಅಸ್ತಿತ್ವ ಉಳಿದಿದೆ. ಹಿಂದೂ ಧರ್ಮ ಜಗತ್ತಿನ ಕಲ್ಯಾಣವನ್ನು ಬಯಸುವ ಧರ್ಮವಾಗಿದೆ. ಆತ್ಮಜ್ಯೋತಿ ಜಾಗೃತವಾಗಬೇಕು. ನಮ್ಮ ಸನಾತನ ಧರ್ಮ ಹಾಗೂ ಸಂಸ್ಕೃತಿಯನ್ನು ನಾವು ಕಳೆದುಕೊಳ್ಳುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಒಳ್ಳೆಯವರು–ಕೆಟ್ಟವರು ಯಾರು ಇದ್ದರೂ ‘ನಾವೆಲ್ಲಾ ಹಿಂದೂಗಳು’ ಎಂಬ ಭಾವನೆ ನಮ್ಮಲ್ಲಿ ಗಟ್ಟಿಯಾಗಬೇಕು. ನಾಶವಾಗುತ್ತಿರುವ ಹಿಂದೂ ಧರ್ಮವನ್ನು ಉಳಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಹಿಂದೂ ಸಂಗಮವಾದರೆ ಜಗತ್ತಿನ ಉದ್ಧಾರ ಸಾಧ್ಯ ಎಂದು ಹೇಳಿದರು.
ಇದಕ್ಕೂ ಮುನ್ನ ಹಿರೇಶಕುನ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಡೊಳ್ಳುಕುಣಿತದಮೂಲಕ ಆರಂಭಗೊಂಡ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಾಲೂಕಿನ ಆರಾಧ್ಯ ದೈವ ಶ್ರೀ ರಂಗನಾಥ ದೇವಾಲಯದ ಆವರಣ ತಲುಪಿತು. ಬಳಿಕ ಕಾನಕೇರಿಮಠದ ಆವರಣಕ್ಕೆ ಆಗಮಿಸುವ ಮೂಲಕ ಶೋಭಾಯಾತ್ರೆ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ಶಾಲಾ ಮಕ್ಕಳು ವೀರರು, ಸಾಧು–ಸಂತರು, ರಾಷ್ಟ್ರಭಕ್ತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಗಮನ ಸೆಳೆದರು. ನೂರಕ್ಕೂ ಅಧಿಕ ಮಂದಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಕೇಸರಿ ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಜೈಕಾರ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಪ್ಪಗೌಡ ಹಿರೇಕಸವಿ ವಹಿಸಿದ್ದರು.
ಈ ಸಂಧರ್ಭದಲ್ಲಿ ಡಾ. ಜ್ಞಾನೇಶ್, ನಾಗರಾಜ ಗುತ್ತಿ, ಸುಧಾಕರ್ ಭಾವೆ, ವಿಜೇಂದ್ರ ಗೌಡ್ರು, ಶಂಕರ್ ಶೆಟ್, ದೇವೇಂದ್ರಪ್ಪ ಚನ್ನಾಪುರ, ಪಾಣಿ ರಾಜಪ್ಪ, ಅರುಣ್ ಕುಮಾರ್ ಪುಟ್ಟನಹಳ್ಳಿ, ಬೆನಕೇಶಪ್ಪ, ಗುರುಮೂರ್ತಿ ಗುಡಿಗಾರ, ಮಧುರಾಯ ಜಿ. ಶೆಟ್, ಸಿ.ಪಿ. ಈರೇಶ ಗೌಡ, ಮೋಹನ್ ಹಿರೇಶಕುನ ಸೇರಿದಂತೆ ವಿವಿಧ ಸಾರ್ವಜನಿಕ ಸಂಘ–ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಹಿಂದೂಪರ ಸಂಘಟನೆಗಳ ಪ್ರತಿನಿಧಿಗಳು, ಸಾಮಾಜಿಕ ಚಿಂತಕರು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















