ಭರಮಸಾಗರ: ನಗರದ ವಿವಿಧ ಭಾಗಗಳಲ್ಲಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇಲ್ಲಿನ ದೊಡ್ಡಪೇಟೆ ಮಕ್ಕಳು ಕಾಮಣ್ಣನ ದಹನ ಮಾಡಿ ಸಂಭ್ರಮಿಸಿದರು.
ದುಷ್ಟ ಶಕ್ತಿ ನಿಗ್ರಹ ಹಾಗೂ ಶಿಷ್ಟಜನರ ಉದ್ದಾರ, ಗ್ರಾಮದಲ್ಲಿ ಮಳೆ ಬೆಳೆ ಸಮೃದ್ಧಿಗಾಗಿ ಹಲವು ವರ್ಷಗಳಿಂದ ತುರುವನೂರು ವಂಶದ ಮಕ್ಕಳು ಹಾಗೂ ದೊಡ್ಡ ಪೇಟೆ ಮಕ್ಕಳು ಈ ಕಾಮಣ್ಣ ದಹನ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ.
ಮನೆ ಮನೆಗೆ ಹೋಗಿ ದೇಣಿಗೆ ಸಂಗ್ರಹಿಸಿ ಕಟ್ಟಿಗೆ ಬೆರಣಿಯನ್ನು ಗ್ರಾಮದ ಮುಖ್ಯದ್ವಾರದ ಕುರುವಿನ ಕಲ್ಲಿನ ಬಳಿ ಒಟ್ಟುಗೂಡಿಸಿ ಆಳೆತ್ತರದ ಕಾಮಣ್ಣನ ಪ್ರತಿಕೃತಿ ನಿರ್ಮಿಸಿ ಪೂಜಿಸಿ ಬೆಂಕಿ ಹಚ್ಚಿದರು ಸಂಭ್ರಮಿಸಲಾಯಿತು.
ಕೆಟ್ಟದ್ದನ್ನು ಸುಟ್ಟು ಬಿಡುವುದು ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮ ಮಾಡುವುದು. ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.
ಬಣ್ಣದ ಓಕಳಿ, ಪರಿಸರ ಸ್ನೇಹಿ ಬಣ್ಣದಿಂದ ಹಬ್ಬವನ್ನು ಆಚರಣೆ ಮಾಡಿ ಸಿಹಿ ಹಂಚಿಕೆ ಮಾಡಿ ಸಂತಸ ಹಂಚಿ ಕೊಳ್ಳುವುದರ ಮೂಲಕ ಹಾಗೂ ಪರಿಸರ ಸ್ನೇಹಿ ಬಣ್ಣ ಬಣ್ಣದ ಹೂ ಗಿಡಗಳನ್ನು ಪರಿಸರ ಪ್ರೇಮಿಗಳಿಗೆ ನೀಡಿ ಪರಿಸರ ಪ್ರೇಮ ಹೆಚ್ಚಿಸುವುದರ ಮೂಲಕ ಹಬ್ಬವನ್ನು ಆಚರಣೆ ಮಾಡಲು ಮುಂದೆ ಬಂದಿರುವುದನ್ನು ಹೆಚ್ಚಾಗಿ ಪ್ರಶಂಸೆಗೆ ಕಾರಣವಾಯಿತು.
ಕೆಮಿಕಲ್ ಬಣ್ಣದಿಂದ ಚರ್ಮ ರೋಗಕ್ಕೆ ಕಾರಣವಾಗಬಹುದು ಎಂಬುದನ್ನು ಅರಿತು ಹಬ್ಬದಲ್ಲಿ ಸುರಕ್ಷತೆ ಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.
ಮಾಹಿತಿ: ಮುರಳೀಧರ್ ನಾಡಿಗೇರ್
Discussion about this post