ಶಿಕಾರಿಪುರ: ಹೋಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ವತಿಯಿಂದ ನಡೆದ ಕಾಮದಹನ ಹಾಗೂ ಬಣ್ಣ ಎರೆಚುವ ಹೋಳಿ ಅತ್ಯಂತ ಸಂಭ್ರಮ ಸಡಗರದಿಂದ ಗುರುವಾರ ನಡೆಯಿತು.
ಬೆಳಿಗ್ಗೆ 7 ರಿಂದ ಪಟ್ಟಣದ ವಿವಿಧ ಭಾಗದಲ್ಲಿ ಆರಂಭವಾದ ಬಣ್ಣ ಎರಚುವ ಒಕುಳಿಯಲ್ಲಿ ಬಾಲಕ ಬಾಲಕಿಯರಿಂದ ಯುವಕರು ಹಿರಿಯರು ವಯಸ್ಸಿನ ಬೇಧವಿಲ್ಲದೆ ಪರಸ್ಪರ ಬಣ್ಣವನ್ನು ಸಂಪ್ರದಾಯ ನಶಿಸದಂತೆ ಸಂಭ್ರಮದಿಂದ ಎರಚುವ ಮೂಲಕ ಒಕುಳಿಯಲ್ಲಿ ಪಾಲ್ಗೊಂಡು ಯಶಸ್ಸಿಗೆ ಕಾರಣಕರ್ತರಾದರು.
ಬೆಳಿಗ್ಗೆ ಪಟ್ಟಣದ ವಿವಿಧ ಸ್ಥಳಗಳಲ್ಲಿ ಓಕುಳಿಯಲ್ಲಿ ಮಿಂದೆದ್ದ ಯುವಕರು ನಂತರದಲ್ಲಿ ಮದ್ಯಬಾಗದಲ್ಲಿರುವ ದಿ.ನರಸಪ್ಪ ಸ್ಮಾರಕ ಬಯಲುರಂಗಮಂದಿರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡರು. ಹಿಂದೂ ಪರ ಸಂಘಟನೆಗಳ ಮುಖಂಡರು ಸಿದ್ದಗೊಳಿಸಿದ್ದ ರಂಗಮಂದಿರದಲ್ಲಿ ಡಿಜೆ ಶಬ್ದಕ್ಕೆ ಲಯಬದ್ದವಾಗಿ ನೃತ್ಯದ ಮೂಲಕ ಗಮನ ಸೆಳೆದರು. ಮಡಿಕೆ ಒಡೆಯುವ ಸ್ಪರ್ದೆಯಲ್ಲಿ ಹಲವು ಯುವಕರು ತಾಮುಂದು ನಾಮುಂದು ಎಂದು ಬೆನ್ನ ಮೇಲೆ ಪರಸ್ಪರ ಹತ್ತಿ ಬಿದ್ದು ಕೆಸರಲ್ಲಿ ಹೊರಳಾಡುತ್ತಾ ಹಬ್ಬದ ಮೆರಗನ್ನು ಇಮ್ಮಡಿಗೊಳಿಸಿದರು. ನೃತ್ಯದಲ್ಲಿ ತಲ್ಲೀನರಾದವರ ಅರಿವಿಗೆ ಬಾರದಂತೆ ಹಿಂದಿನಿಂದ ತಲೆಗೆ ಮೊಟ್ಟೆಯನ್ನು ಹೊಡೆಯುತ್ತಾ ವಿಕೃತ ಆನಂದ ಪಡೆಯುತ್ತಿದ್ದ ಗಂಪು ಒಂದೆಡೆಯಾದರೆ, ವಿಚಿತ್ರ ಬಣ್ಣವನ್ನು ಮುಖಕ್ಕೆ ಹಚ್ಚಿಕೊಂಡ ಯುವಕರು, ಕೆಸರಿನಲ್ಲಿ ಬಿದ್ದು ಹೊರಳಾಡುತ್ತಿದ್ದ ಯುವಕರು ಮತ್ತೊಂದೆಡೆ, ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದ ಯುವಕರಿಂದ ರಂಗಮಂದಿರ ತುಂಬಿ ತುಳುಕುತ್ತಿತ್ತು. ಸಮೀಪದಲ್ಲಿ ವೀಕ್ಷಿಸುತ್ತಿದ್ದ ಹಲವರು ಪ್ರೇರಣೆಗೊಂಡು ಒಕುಳಿಯ ಸಂಭ್ರಮದಲ್ಲಿ ಪಾಲ್ಗೊಂಡು ಆನಂದಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತಗೊಂಡಿದ್ದು ಹಬ್ಬದ ಸಂಭ್ರಮಕ್ಕೆ ಧಕ್ಕೆಯಾಗಲಿಲ್ಲ. ರಥಬೀದಿಯ ಕಾಶಿ ವಿಶ್ವೇಶ್ವರ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಕಾಮನ ಪ್ರತಿಕೃತಿಯನ್ನು ಗುರುವಾರ ಬೆಳಗಿನ ಜಾವ ಸಂಪ್ರದಾಯಬದ್ದವಾಗಿ ದಹಿಸಲಾಯಿತು.
ಅರಿಶಿಣ, ಸುಣ್ಣ, ಕೆಲ ಮರದ ತೊಗಟೆ, ಗಿಡಮೂಲಿಕೆಯಿಂದ ತಯಾರಿಸಲಾದ ಒಕುಳಿಯನ್ನು ವರ್ಷದಲ್ಲಿ ಒಮ್ಮೆ ಎರಚಿಕೊಂಡಲ್ಲಿ ದೇಹದಲ್ಲಿನ ಚರ್ಮಕ್ಕೆ ರಕ್ಷಣೆ ನೀಡಲಿದೆ ಎಂಬ ವೈಜ್ಞಾನಿಕ ಹಿನ್ನಲೆ ಒಕುಳಿ ಹಬ್ಬಕ್ಕಿದ್ದು, ಇದೀಗ ರಾಸಾಯನಿಕ ಮಿಶ್ರಿತ ಬಣ್ಣ ಎರಚಿಕೊಂಡು ಚರ್ಮಕ್ಕೆ ಮಾರಕವಾಗಲಿದೆ.ಮೂಲ ಸಂಪ್ರದಾಯ ನಶಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ವಿ.ಹಿಂ.ಪ ಉಪಾಧ್ಯಕ್ಷ ಪ್ರಕಾಶ್ ಜಿನ್ನು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಯ ಮುಖಂಡ ಎನ್. ಮಂಜುನಾಥ್(ರಾಜಲಕ್ಷ್ಮಿ), ಶ್ರೀಧರ ನಾಡಿಗ್ ಸಂಡ, ಗಿರೀಶ್ ಧಾರವಾಡದ, ಮಲ್ಲಿಕಾರ್ಜುನ ಕಾನೂರು, ಭವರ್‌ಸಿಂಗ್ ಮೀಸೆ, ಸಿದ್ದಲಿಂಗಪ್ಪ ನಿಂಬೆಗೊಂದಿ, ರಾಜಶೇಖರ ಗಿರ್ಜಿ, ಪ್ರವೀಣ ಬೆಣ್ಣೆ, ಮಂಜುನಾಥ್ ಮತ್ತಿತರರು ಹಾಜರಿದ್ದರು.
(ವರದಿ: ರಾಜಾರಾವ್ ಜಾಧವ್)
Discussion about this post