ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊರನಾಡು: ಮಲೆನಾಡಿನ ಮಡಿಲಿನ ಹೊರನಾಡು ಶ್ರೀಕ್ಷೇತ್ರದಲ್ಲಿ ನೆಲೆನಿಂತ ಭಕ್ತರನ್ನು ಅನುಗ್ರಹಿಸುತ್ತಿರುವ ತಾಯಿ ಶ್ರೀ ಅನ್ನಪೂರ್ಣೇಶ್ವರಿಯ ರಥೋತ್ಸವ ವೈಭವ ಫೆ.24ರಿಂದ 27ರವರೆಗೂ ನಡೆಯಲಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗೆ ಮಾಹಿತಿ ನೀಡಿರುವ ದೇವಾಲಯದ ಧರ್ಮದರ್ಶಿಗಳಾದ ಶ್ರೀ ಭೀಮೇಶ್ವರ ಜೋಷಿಯವರು, ಒಟ್ಟು ಐದು ದಿನಗಳ ಕಾಲ ರಥೋತ್ಸವದ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಪ್ರಮುಖವಾಗಿ 24ರಿಂದ 27ರವರೆಗೂ ವಿಶೇಷವಾಗಿದೆ ಎಂದರು.
ತದಿಗೆ ದಿನ ಅಂದರೆ 26ರಂದು ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ತಾಯಿಯ ಬ್ರಹ್ಮರಥೋತ್ಸವ ನಡೆಯಲಿದ್ದು, ರಾತ್ರಿ ಮಹಾ ರಥೋತ್ಸವ ಜರುಗಲಿದೆ. ಮರುದಿನ ಅಂದರೆ 27ರಂದು ಗಣಪತಿ ಪೂಜೆ, ಅವಭೃತ, ಓಕುಳಿ ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ದತೆ ನಡೆದಿದೆ ಎಂದರು.
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಹಾಗೂ ಭಕ್ತರ ನಡುವಿನದ್ದು ತಾಯಿ-ಮಕ್ಕಳ ಅವಿನಾಭಾವ ಸಂಬಂಧ. ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂದರ್ಭ ರಥೋತ್ಸವ ಎಂದು ಹೇಳುವ ಮೂಲಕ ಶ್ರೀ ತಾಯಿಯ ವಿಶೇಷತೆಯನ್ನು ವಿವರಿಸಿದರು.
ಸಾಮಾನ್ಯ ದಿನಗಳಲ್ಲಿ ಭಕ್ತರು ಗರ್ಭಗುಡಿಯ ಬಳಿ ತೆರಳಿ ತಾಯಿಯ ದರ್ಶನ ಪಡೆಯುತ್ತಾರೆ. ತಾಯಿಯೂ ಸಹ ಅಲ್ಲಿಂದಲೇ ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ. ಆದರೆ, ರಥೋತ್ಸವದಲ್ಲಿ ಮಾತ್ರ ತಾಯಿಯೇ ಭಕ್ತರ ಬಳಿ ಬಂದು ಅನುಗ್ರಹಿಸುವ ವಿಶೇಷವಾಗಿದೆ ಎಂದರು.
ಇಂತಹ ಒಂದು ಸಂದರ್ಭವನ್ನು ಕಣ್ತುಂಬಿಕೊಳ್ಳಲು ಹಾಗೂ ತಾಯಿಯ ಅನುಗ್ರಹಕ್ಕೆ ಪಾತ್ರರಾಗಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದವರು ವಿನಂತಿಸಿದ್ದಾರೆ.
(ವರದಿ: ಡಾ.ಎನ್. ಸುಧೀಂದ್ರ)
Get in Touch With Us info@kalpa.news Whatsapp: 9481252093
Discussion about this post