ಯಾವುದೋ ಮಹಾತ್ಮರುಗಳ ಬಗ್ಗೆ ವಿವಿಧ ರೂಪಗಳಲ್ಲಿ ಸಂಶೋಧನಕಾರರು ಸಂಶೋಧನೆ ಮಾಡುತ್ತಾರೆ. ಯಾಕೆ ಗೊತ್ತಾ? ಅವರು ದೇಹ ಸ್ಥಿತಿ, ದೇಹ ರಚನೆ, ಗುಣಗಳ ಅವಲೋಕನಗಳ ಅಧ್ಯಯನಕಾರರಾಗಿರುತ್ತಾರೆ. ಇಷ್ಟೊಂದು ಜಾತಕ ಗ್ರಂಥಗಳನ್ನು ಋಷಿಗಳು ಸಂಶೋಧನೆಯ ಫಲದಲ್ಲೇ ಬರೆದದ್ದಲ್ಲದೆ, ಅವರನ್ನು ಸಂತೋಷಪಡಿಸುವುದಕ್ಕಲ್ಲ. ಕೇವಲ ಸಂಶೋಧನೆ.
ಒಬ್ಬ ತಜ್ಞ ವೈದ್ಯ ಎಂತಹ ರೋಗಿ ಸತ್ತರೂ ದುಃಖಿಸುವುದಿಲ್ಲ. ಬದಲಾಗಿ ಸಾವಿನ ಕಾರಣ ತಿಳಿಯಲು ಪ್ರಯತ್ನಿಸುತ್ತಾನೆ. ಅದೇ ರೀತಿ ನಾನು ಮೋದಿಯವರನ್ನು ಸಂತುಷ್ಟಿಗೊಳಿಸಲೋ ಅಥವಾ ಮೋದಿಯವರ ಅಭಿಮಾನಿಗಳಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುವುದಕ್ಕೋ ಈ ಲೇಖನ ಬರೆಯುತ್ತಿಲ್ಲ ಮತ್ತು ಬರೆಯಲೂಬಾರದು. ಆದರೆ ಗುಣ ದೋಷಗಳನ್ನು ತಿಳಿಸಿದಾಗ ಪ್ರಜೆಗಳೂ ಅದನ್ನು ಮೋದಿಯವರಲ್ಲಿ ಕಂಡುಕೊಂಡು, ಅವರನ್ನು ಬೆಂಬಲಿಸಿದ್ದಕ್ಕೆ ಸಾರ್ಥಕ ಎಂಬುದನ್ನು ತಿಳಿದುಕೊಳ್ಳುತ್ತಾರೆ.
ಮೋದಿಯವರ ಜಾತಕದಲ್ಲಿ ಒಂದು ಅದ್ಬುತ ವಿಚಾರವಿದೆ. ಈವರೆಗೆ ಅವತಾರ ಸಮಾಪ್ತಿಗೊಳಿಸಿದಂತಹ ಮಹಾತ್ಮರಾದ, ದೈವತ್ವವನ್ನು ಪಡೆದ ರಾಮಕೃಷ್ಣಾದಿ ಮಹಾಮಹಿಮರ ಜಾತಕವನ್ನು ನೋಡಿದ್ದೇನೆ. ಆ ಜಾತಕ ಸ್ವರೂಪಕ್ಕೂ, ಪ್ರಚಲಿತದಲ್ಲಿ ಅವರೆಲ್ಲಾ ಪೂಜಿಸಲ್ಪಡುವುದಕ್ಕೂ ಸಾಮ್ಯತೆ ಇರುವುದರಿಂದ, ಗ್ರಹಸ್ಥಿತಿಯ ಆಧಾರದಲ್ಲಿ ವ್ಯಕ್ತಿಯನ್ನು ತಿಳಿದುಕೊಳ್ಳಬಹುದು ಎಂಬ ಧೈರ್ಯ ಬಂತು (confidence).
ಮೋದಿಯವರ ಜಾತಕದಲ್ಲಿ ಒಂದೇ ಒಂದು ಗ್ರಹನೂ ದುಸ್ಥಾನದಲ್ಲಿ ಇಲ್ಲ. ಮೊದಲಾಗಿ ವೃಶ್ಚಿಕ ಲಗ್ನದಲ್ಲೇ ಸುಸ್ಥಿತಿಯಲ್ಲಿ ಕುಜ-ಚಂದ್ರ. ಎರಡನೆಯದಾಗಿ ಗುರು ಸುಸ್ಥಾನ. ರಾಹು ಕೇತುಗಳು ಸುಸ್ಥಾನ. ರವಿ ಬುಧರು ಸುಸ್ಥಾನ. ಶುಕ್ರ ಶನಿಗಳು ದಶಮದಲ್ಲಿ ಸುಸ್ಥಾನ. ಲಗ್ನಕ್ಕೆ ಲಗ್ನಾಧಿಪನೇ ಮಹಾಯೋಗದಲ್ಲಿ ಸುಸ್ಥಾನ. ಕರ್ಮಾಧಿಪತಿ ಲಾಭಾಧಿಪತಿಯೊಂದಿಗೆ, ಲಾಭಾಧಿಪತಿ ಲಾಭದಲ್ಲಿ ಸುಸ್ಥಾನ. ಇದೆಲ್ಲ ಏನು ಸೂಚಿಸುತ್ತದೆ ಎಂದರೆ ಇವರ ಆಸಕ್ತಿಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಇಚ್ಛಾ ಶಕ್ತಿಯನ್ನು ತೋರಿಸುತ್ತದೆ.
ಅಷ್ಟಮೀ ವೃತದಲ್ಲಿದ್ದ ವಸುದೇವ ದೇವಕಿಯರಿಗೆ ಅಷ್ಟಮೀ ತಿಥಿಯಲ್ಲೇ ಲೋಕೋದ್ಧಾರಕ ಕೃಷ್ಣನ ಜನನ. ನವಮೀ ವೃತದಲ್ಲಿದ್ದ ದಶರಥ ದಂಪತಿಗಳಿಗೆ ನವಮಿಯಂದೇ ಶ್ರೀರಾಮನ ಜನನ. ಮೋದಿಯವರ ತಾಯಿಯವರು ಪ್ರತೀ ನವರಾತ್ರಿ ವ್ರತ ಮಾಡಿದುದರ ಫಲದಲ್ಲಿ ಅದೇ ನವರಾತ್ರಿ ಉಪವಾಸದ ಮೂಲಕ ವ್ರತಾಚರಣೆ ಮಾಡುವ ನರೇಂದ್ರ ಮೋದಿಯವರ ಜನನ. ಹುಡುಕಿದರೆ ಇನ್ನಷ್ಟು ಮಹಾತ್ಮರ ಜನ್ಮ ವೃತ್ತಾಂತಗಳು ಸಿಗಬಹುದು. ಹಾಗಾಗಿ ಇಲ್ಲಿ ಮುಖ್ಯವಾಗಿ ಹೇಳಬೇಕೆಂದರೆ ಕರ್ಮನಿಷ್ಟೆ ಇದ್ದಾಗ ಮಹಾಪುರುಷರ ಜನನವೂ, ಅವರೂ ನಿಷ್ಟಾವಂತರಾಗಿ ದೇಶಕ್ಕೆ ಅನರ್ಘ್ಯ ರತ್ನವೂ ಆಗುತ್ತಾರೆ ಎಂಬುದು ಸತ್ಯ.
ಪ್ರಸ್ತುತ ಮೋದಿಯವರ ಜಾತಕವು ನಮ್ಮ ಸಂಶೋಧನೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಇನ್ನೂ ಒಂದು ವಿಶೇಷ ಎಂದರೆ, ನಿಶ್ಚಿತವಾಗಿ ಮೋದಿಯವರು ಮುಂದೆ ಅಂದರೆ ಅವರ ಅವತಾರ ಮುಗಿದ ನಂತರ ದೈವತ್ವ ಪಡೆಯುವುದು ಖಚಿತ ಎಂದು ಹೇಳಬಹುದು.
ಯಾರೋ ಬುದ್ಧಿ ಹೀನರು, ಪಾಪಿಗಳು ನಿಂದನೆ ಮಾಡಿ ನಮ್ಮ ನಂಬಿಕೆಗೆ ಭಂಗ ತರಬಹುದು. ಆದರೆ ನಾವು ಅವರನ್ನೆಲ್ಲ ಕಸದ ಸಮಾನವಾಗಿ ಸ್ವಚ್ಛ ಮಾಡಿಕೊಂಡು ಮುಂದೆ ಸಾಗಿದರೆ, ಅವರು ಯೋಜನಗಟ್ಟಳೆ ಹಿಂದೆಯೇ ಉಳಿಯುತ್ತಾರೆ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post