ಹೊಸಪೇಟೆ: ಜಂಬುನಾಥ್ ರಸ್ತೆಯಲ್ಲಿ ಸ್ಥಾಪಿಸಲಾದ ಶ್ರೀಕೃಷ್ಣ ಮಠದ ಪ್ರಥಮ ವಾರ್ಷಿಕೋತ್ಸವ ನಿನ್ನೆ ಜರುಗಿದ್ದು, ಯತಿಕುಲ ಚಕ್ರವರ್ತಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರು ಹಾಗೂ ಪರಮಪೂಜ್ಯ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆ ಪ್ರತಿಷ್ಠಾ ಹೋಮ ಮತ್ತು ತತ್ವ ಹೋಮ ಕಲಶಾಭಿಷೇಕ, ಲಕ್ಷ ತುಳಸಿ ಅರ್ಚನೆ ಜರುಗಿದವು. ಪರಮ ಪೂಜ್ಯ ಶ್ರೀಪಾದರ ಸಂಸ್ಥಾನ ಪೂಜೆ ಅಭಿಷೇಕ ಸಮಸ್ತ ಭಕ್ತ ವೃಂದಕ್ಕೆ ಸಾಮೂಹಿಕ ತೀರ್ಥ ಪ್ರಸಾದ ಮತ್ತು ಫಲಮಂತ್ರಾಕ್ಷತೆ ಅನುಗ್ರಹ ಕಾರ್ಯಕ್ರಮಗಳು ಜರುಗಿದವು.
ಶ್ರೀ ವಿಷ್ಣು ಸೇವಾ ಸಮಿತಿ ವತಿಯಿಂದ ಲೋಕಕಲ್ಯಾಣಕ್ಕಾಗಿ ಸಾಮೂಹಿಕ ಸಹಸ್ರಕಂಠ ಶ್ರೀವಿಷ್ಣು ಸಹಸ್ರಮಾನದ ಪಾರಾಯಣ ನಡೆಯಿತು. ಸಂಜೆ ರಂಗ ಪೂಜೆ, ಪಲ್ಲಕ್ಕಿ ಉತ್ಸವ ಮತ್ತು ನಾಡಿನ ಹೆಸರಾಂತ ಗಾಯಕರಾದ ಕೀರ್ತನ ಸಾಮ್ರಾಟ್ ಮೈಸೂರು ರಾಮಚಂದ್ರಾಚಾರ್ ಮತ್ತು ತಂಡದಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
ಹೊಸಪೇಟೆ ಮತ್ತು ಸುತ್ತಮುತ್ತಲಿನ ಬ್ರಾಹ್ಮಣ ಸಮುದಾಯ ಮತ್ತು ಶ್ರೀ ಕೃಷ್ಣ ಭಕ್ತ ಮಂಡಳಿ, ಆರ್ಯ ವೈಶ್ಯ ಸಮಾಜದ ಸಮೂಹ ಶ್ರೀ ವಿಷ್ಣು ಸೇವಾ ಸಮಿತಿ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಿದರು.
(ವರದಿ: ಮುರಳೀಧರ್ ನಾಡಿಗೇರ್)
Discussion about this post