ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ(ವಿಜಯನಗರ) |
ಸರಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಕ್ರಮವಹಿಸಬೇಕು. ನಿರ್ಲಕ್ಷ್ಯ ತೊರದೆ ಕೆಲಸ ಮಾಡಿದರೇ ಮಾತ್ರ ಸರ್ಕಾರಕ್ಕೆ ಕೀರ್ತಿ ಎಂದು ಸಂಸದರಾದ ವೈ.ದೇವೇಂದ್ರಪ್ಪ ಅವರು ಹೇಳಿದರು.
ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ತಿಳಿಸಲು ವ್ಯಾಪಕ ಪ್ರಚಾರ ಮಾಡಿ, ಈ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಂಡಾಗ ಅಭಿವೃದ್ಧಿ ಸಾಧ್ಯ ಎಂದು ಹೇಳಿದ ಸಂಸದ ವೈ.ದೇವೇಂದ್ರಪ್ಪ ಅವರು ನರೇಗಾ ಯೋಜನೆಯಡಿ ಗ್ರಾಪಂಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಹಾಗೂ ಇನ್ನೀತರ ಕಾಮಗಾರಿಗಳ ಸ್ಥಳಕ್ಕೆ ತಾಪಂ ಇಒಗಳು ಭೇಟಿನೀಡಿ ಪರಿಶೀಲಿಸಬೇಕು. ಕೇವಲ ಗ್ರಾಪಂ ಅಧಿಕಾರಿಗಳು ನೀಡಿರುವ ಮಾಹಿತಿಯನ್ನೇ ಕ್ರೋಢೀಕರಿಸಿ ನೀಡಬಾರದು ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಆದರ್ಶ ಗ್ರಾಪಂ ಯೋಜನೆ ಅಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಪರಿಶೀಲನೆಗೆ ಸಮಯ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಂಸದ ವೈ.ದೇವೇಂದ್ರಪ್ಪ ಅವರು ಸರಕಾರದ ಕಾರ್ಯಕ್ರಮಗಳ ಉದ್ಘಾಟನೆ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಕಡೆಗಣಿಸದಿರಿ;ಶಿಷ್ಟಚಾರದ ಪ್ರಕಾರ ಎಲ್ಲರನ್ನು ಅಹ್ವಾನಿಸಬೇಕು ಎಂದು ಅವರು ಹೇಳಿದರು.

ವಿಜಯನಗರ ಜಿಲ್ಲೆಯಲ್ಲಿ 15 ಕೆರೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ಅಲ್ಲಿ ಧ್ವಜಾರೋಹಣ ಮಾಡಲಾಗಿದೆ. ತೋಟಗಾರಿಕೆ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ 150 ಎಕರೆ ಪ್ರದೇಶದಲ್ಲಿ ಡ್ರ್ಯ್ರಾಗನ್‍ಫ್ರ್ಯೂಟ್ ಬೆಳೆಯಲಾಗಿದೆ. ಶಿವಪುರ ಗ್ರಾಮ ಪಂಚಾಯಿತಿಯ ಶಿವಪುರ ಗ್ರಾಮದಲ್ಲಿ ಕೇವಲ 36ಸಾವಿರ ವೆಚ್ಚದಲ್ಲಿ ಕೋಳಿ ಶೇಡ್ ನಿರ್ಮಾಣ ಮಾಡಲಾಗಿದೆ ಮತ್ತು ಇಟ್ಟಿಗೆ ತಯಾರಿಕೆಯಲ್ಲಿ ಜಿಲ್ಲೆಯು ರಾಜ್ಯಕ್ಕೆ 2ನೇ ಸ್ಥಾನ ಪಡೆದಿದೆ ಎಂದು ಜಿ.ಪಂ. ಸಿಇಒ ಹರ್ಷಲ್ ಬೋಯೇರ್ ನಾರಾಯಣರಾವ್ ಅವರು ಸಂಸದ ವೈ.ದೇವೇಂದ್ರ ಅವರಿಗೆ ತಿಳಿಸಿದರು.

Also read: ಮಾವಲಿ ಗ್ರಾಮದ ಶಾಲಾ ಆಡಳಿತ ಮಂಡಳಿಯಲ್ಲಿ ದಲಿತ ವಿರೋಧಿ ನೀತಿ: ದಸಂಸ ಆರೋಪ
ನಗರ ಪ್ರದೇಶದಲ್ಲಿ ಶೇ.100ರಷ್ಟು ಮನೆ-ಮನೆ ಕಸ ಸಂಗ್ರಹ: ಜಿಲ್ಲೆಯಲ್ಲಿರುವ ಎಲ್ಲ ನಗರ ಪ್ರದೇಶಗಳಲ್ಲಿ ಶೇ.100ರಷ್ಟು ಮನೆ-ಮನೆ ಕಸ ಸಂಗ್ರಹ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಿಳಿಸಿದರು.

ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿರುವ 237 ಗ್ರಾಪಂಗಳ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿಯೂ ಸ್ವಚ್ಛ ಭಾರತ ಮಿಶನ್(ಗ್ರಾಮೀಣ) ಅಡಿ ಘನ,ದ್ರವ ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಲಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕರು ವಿವರಿಸಿದರು.
ಜಲಜೀವನ ಮಿಶನ್ ಯೋಜನೆ ಅಡಿ ಬ್ಯಾಚ್-1ನಲ್ಲಿ 105 ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದ್ದು, 76 ಪೂರ್ಣಗೊಂಡಿದ್ದು, 29 ಪ್ರಗತಿಯಲ್ಲಿವೆ ಎಂದು ಜಲಜೀವನ ಮಿಶನ್ ಅಧಿಕಾರಿಗಳು ಸಭೆಗೆ ವಿವರಿಸಿದರು.

ಕಾಮಗಾರಿಗಳ ನಿಗದಿಪಡಿಸಿದ ಅವಧಿಗಿಂತ ತುಂಬಾ ವಿಳಂಬವಾಗಿದ್ದು, ಅತಿ ಜರೂರಾಗಿ ಬಾಕಿ ಇರುವ ಎಲ್ಲಾ ಇಲಾಖೆಗಳ ಕಾಮಗಾರಿಗಳನ್ನು ನಿಗದಿಪಡಿಸಿದ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಇಂದು ನಡೆದ ಸಭೆಗೆ ಗೈರು ಹಾಜರಾಜರಾದ ವಿವಿಧ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸಂಸದ ವೈ.ದೇವೇಂದ್ರಪ್ಪ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.










Discussion about this post