ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಭಾರತ ಬಿಟ್ಟು ಬ್ರಿಟಿಷರು ತೊಲಗಿ 75 ವರ್ಷ ಕಳೆದರೂ ಇಂದಿಗೂ ಲಿಸ್ಟ್, ಐಟಂ ಎಂಬ ಪದಗಳೇ ಇಂದು ರಾರಾಜಿಸುತ್ತಿವೆ. ಊಟದಲ್ಲಿ ವೈವಿಧ್ಯತೆ ಹೇಗೆ ಮುಖ್ಯವೋ ಐಟಂ ಎಂಬ ಬದಲು ವೈವಿಧ್ಯತೆಯನ್ನು ಬಿಂಬಿಸುವ ‘ಬಗೆ’ ಎನ್ನುವ ಸರಳ ಸುಂದರ ಪದ ಬಳಸೋಣ -ರಾಘವೇಶ್ವರ ಶ್ರೀ
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ, ಭಾಷಾ ಶುದ್ಧೀಕರಣ ಎಲ್ಲರ ಆದ್ಯತೆಯಾಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ಆಶಿಸಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 35ನೇ ದಿನವಾದ ಬುಧವಾರ ಹೊನ್ನಾವರ ಮಂಡಲದ ಹೊಸಾಕುಳಿ, ಕರ್ಕಿ, ಕಡ್ಲೆ, ಹೊನ್ನಾವರ ಮತ್ತು ಮುಗ್ವಾ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.
ಹಿಂದಿಯಲ್ಲಿ ಕೂಡಾ ಮೊಘಲರ ಆಳ್ವಿಕೆ ಕಾಲದಲ್ಲಿ ಪರ್ಶಿಯನ್ ಪದಗಳು ಸೇರಿಕೊಂಡಿದೆ. ಇದು ಎಲ್ಲ ಭಾರತೀಯ ಭಾಷೆಗಳ ಸ್ಥಿತಿ. ಆದ್ದರಿಂದ ದಾಸ್ಯಕ್ಕೆ ಜೋತುಬೀಳದೇ ಭಾಷೆ ಶುದ್ಧವಾಗಿಟ್ಟುಕೊಳ್ಳುವ ದೃಢಸಂಕಲ್ಪ ತೊಡೋಣ ಎಂದು ಕರೆ ನೀಡಿದರು.
ಬ್ರಿಟನ್‍ಗೆ ತೀರಾ ಸನಿಹದಲ್ಲಿರುವ ಫ್ರಾನ್ಸ್‍ನಲ್ಲೂ ಇಂಗ್ಲಿಷ್ ಬಳಕೆ ಸೀಮಿತ. ಅಲ್ಲಿ ಶುದ್ಧ ಫ್ರೆಂಚ್ ಭಾಷೆಯನ್ನೇ ಬಳಸಲಾಗುತ್ತದೆ. ಇಲ್ಲಿ ಫ್ರೆಂಚ್‍ಗೆ ಯಾವುದೇ ಪದ ಸೇರಿಸಬೇಕಾದರೆ, ಅದಕ್ಕೆ ಪದಮಂಡಲದ ಅನುಮೋದನೆ ಬೇಕು. ಆದರೆ ನಮ್ಮ ಭಾಷೆ ಮಾತ್ರ ಬೇಲಿ ಇಲ್ಲದ ತೋಟದಂತಾಗವೆ. ಆದ್ದರಿಂದಲೇ ಕನ್ನಡದಲ್ಲಿ ಇಂಗ್ಲಿಷ್, ಪರ್ಶಿಯನ್, ಫೋರ್ಚ್‍ಗೀಸ್, ಉರ್ದು ಪದಗಳು ಹೇರಳವಾಗಿ ಸೇರಿಕೊಂಡಿವೆ. ಮನೆಗೆ ಬಾಗಿಲು ಹೇಗೆ ಅಗತ್ಯವೋ ಭಾಷೆ ಭದ್ರವಾಗಿರಬೇಕಾದರೆ ನಾಲಿಗೆಗೂ ಬಾಗಿಲು ಬೇಕು ಎಂದು ಮಾರ್ಮಿಕವಾಗಿ ನುಡಿದರು.
ಪಾಶ್ಚಾತ್ಯ ಪ್ರಭಾವದಿಂದ ರುಚಿಕರ ಹಾಗೂ ಆರೋಗ್ಯಕರ ತಿಂಡಿ ತಿನಸುಗಳು ಮರೆತುಹೋಗಿವೆ. ಅಂತೆಯೇ ಭಾಷೆ ಕೂಡಾ ಕಲಬೆರಕೆಯಾಗಿದೆ. ಸರಿಯಾಗಿ ಕನ್ನಡ ಮಾತನಾಡಲು ಅಗದ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಭಾಷೆಯಲ್ಲೂ ಪರಕೀಯಯತೆ ನುಸುಳಿರುವುದು ಆತ್ಮಾಭಿಮಾನದ ಕೊರತೆಯನ್ನು ಸೂಚಿಸುತ್ತದೆ. ಇದು ಮರ್ಯಾದೆಗೇಡು. ಜಪಾನ್, ರಷ್ಯಾ, ಜರ್ಮನಿಯಂಥ ಮುಂದುವರಿದ ದೇಶಗಳನ್ನು ನೋಡಿದರೂ ಸ್ವಭಾಷೆ ಬಗ್ಗೆ ಅಭಿಮಾನವಿದೆ. ಆದರೆ ನಮ್ಮಲ್ಲಿ ಸ್ವಭಾಷೆ ಬಗ್ಗೆ ತಾತ್ಸಾರ ಸಲ್ಲದು ಎಂದು ಹೇಳಿದರು.
ದಿನಕ್ಕೊಂದು ಆಂಗ್ಲ ಪದ ತ್ಯಜಿಸುವ ಅಭಿಯಾನದಲ್ಲಿ ಲಿಸ್ಟ್ ಪದದ ಬದಲಾಗಿ ಕನ್ನಡದ ಯಾದಿ, ಪಟ್ಟಿ, ಅನುಕ್ರಮಣಿಕೆ, ಸೂಚಿ, ಕೋಷ್ಟಕ ಪದಗಳ ಬಳಕೆಯನ್ನು ಚಾಲ್ತಿಗೆ ತರುವಂತೆ ಕರೆ ನೀಡಿದರು.
ಭಾರತ ಬಿಟ್ಟು ಬ್ರಿಟಿಷರು ತೊಲಗಿ 75 ವರ್ಷ ಕಳೆದರೂ ಇಂದಿಗೂ ಲಿಸ್ಟ್, ಐಟಂ ಎಂಬ ಪದಗಳೇ ಇಂದು ರಾರಾಜಿಸುತ್ತಿವೆ. ಊಟದಲ್ಲಿ ವೈವಿಧ್ಯತೆ ಹೇಗೆ ಮುಖ್ಯವೋ ಐಟಂ ಎಂಬ ಬದಲು ವೈವಿಧ್ಯತೆಯನ್ನು ಬಿಂಬಿಸುವ ‘ಬಗೆ’ ಎನ್ನುವ ಸರಳ ಸುಂದರ ಪದ ಬಳಸೋಣ ಎಂದರು. ಭೋಜನದಲ್ಲಿ ಉಪ್ಪು, ಖಾರ, ಹುಳಿ, ಸಿಹಿ, ಕಹಿ, ಒಗರು ಹೀಗೆ ಗೃಹಸ್ಥರಿಗೆ ಷಡ್ರಸೋಪೇತ ಖಾದ್ಯಗಳ ವೈವಿಧ್ಯಗಳು ಬೇಕು. ಆದ್ದರಿಂದ ಐಟಂ ಎಂಬ ಬದಲು ಬಗೆ ಎಂಬ ಪದ ಬಳಸಿದರೆ ಇದು ವೈವಿಧ್ಯವನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಿದರು.
ನವರಾತ್ರಿ ನಮಸ್ಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಲೋಕಾರ್ಪಣೆ ಮಾಡಿದ ಶ್ರೀಗಳು, ಸುಮಾರು 15 ದಿನಗಳ ಭವ್ಯ ಕಾರ್ಯಕ್ರಮ ನವರಾತ್ರ ನಮಸ್ಯ ಹೆಸರಿನಲ್ಲಿ ಸಾಗರದಲ್ಲಿ ನಡೆಯುತ್ತಿದೆ. ಇಡೀ ಸಾಗರ ಪ್ರಾಂತ್ಯದಲ್ಲಿ ಈ ಕಾರ್ಯಕ್ರಮ ಸಂಚಲನ ಮೂಡಿದೆ. ಮಾತೃಸಂಘಟನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ಪ್ರಾಂತ್ಯಕ್ಕೆ ಶಕ್ತಿಸ್ವರೂಪಿಣಿಯಾದ ರಾಜರಾಜೇಶ್ವರಿ ಚೈತನ್ಯ ತುಂಬಲಿ ಎಂದು ಆಶಿಸಿದರು.
ಸಂಘಟನೆಯ ಮೂಲಕ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಸಾಕಷ್ಟು ಪ್ರಯೋಜನಗಳಾಗಿವೆ. ಶ್ರೀಮಠದ ಶಿಷ್ಯರು ಇಂದು ದೊಡ್ಡ ಸಮಷ್ಟಿಯಾಗಿದ್ದೀರಿ. ಮಳೆ ಬಿಂದುಗಳು ಭೂಮಿಯಲ್ಲಿ ಒಂದಾಗುವಂತೆ ಮಠದಲ್ಲಿ ಶಿಷ್ಯರು ಒಗ್ಗೂಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಹೆಚ್ಚು ಹೆಚ್ಚು ಸೇವೆಯನ್ನು ಒಳ್ಳೆಯ ರೀತಿಯಿಂದ ಮಾಡುವಂತಾಗಲಿ; ಹಿಂದೆ ಇದ್ದ ಪದಾಧಿಕಾರಿಗಳು ಹೊಸ ಕಾರ್ಯಕ್ಕೆ ಅಣಿಯಾಗಬೇಕು ಎಂದು ಆಶಿಸಿದರು.
ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಧರ್ಮಭಾರತಿ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ಸಾಗರ ಮಂಡಲ ಅಧ್ಯಕ್ಷ ಮುರಳಿ ಗೀಜಗಾರ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನಕುಮಾರ್, ಹೊನ್ನಾವರ ಮಂಡಲದ ನಿಕಟಪೂರ್ವ ಅಧ್ಯಕ್ಷ ಆರ್.ಜಿ.ಹೆಗಡೆ, ನೂತನ ಅಧ್ಯಕ್ಷ ಪರಮೇಶ್ವರ ನಾರಾಯಣ ಭಟ್, ಕಾರ್ಯದರ್ಶಿ ಕೃಷ್ಣ ಲಕ್ಷ್ಮೀನಾರಾಯಣ ಹೆಗಡೆ ಚಿಟ್ಟಾಣಿ, ಎಂಜಿನಿಯರ್ ವಿಷ್ಣು ಮತ್ತಿತರರು ಉಪಸ್ಥಿತರಿದ್ದರು. ಇಡೀ ವಿವಿವಿ ಕ್ಯಾಂಪಸ್‍ನಲ್ಲಿ ಸೌರದೀಪ ಬೆಳಗುವ ಅಶೋಕಲೋಕ ಪ್ರಾಂಗಣದೀಪ ಯೋಜನೆಗೆ ಚಾಲನೆ ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post