ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಹತ್ವದ ಬೆಳವಣಿಗೆಯಲ್ಲಿ ಭಾರತ ಸರ್ಕಾರ ಪೌರತ್ವ(ತಿದ್ದುಪಡಿ) ಕಾಯ್ದೆ 2019 #CitizenshipAmendmentAct2019 ಅಧಿಸೂಚನೆ ಹೊರಡಿಸಿದ್ದು, ಅರ್ಹರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಸರ್ಕಾರ ವಿವರವಾದ ಮಾರ್ಗಸೂಚಿ ಹಾಗೂ ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಸಿಎಎ #CAA ಅಡಿಯಲ್ಲಿ ಭಾರತದ ಪೌರತ್ವಕ್ಕಾಗಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ #Pakistan ಭಾರತಕ್ಕೆ ಬರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಅಥವಾ ಕ್ರಿಶ್ಚಿಯನ್ನರು ಭಾರತೀಯ ಪೌರತ್ವಕ್ಕಾಗಿ #IndianCitizenship ಅರ್ಜಿ ಸಲ್ಲಿಸಬಹುದು.
ಮೇಲೆ ಉಲ್ಲೇಖಿಸಲಾದ ಮೂರು ದೇಶಗಳಲ್ಲಿ ದೌರ್ಜನಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಮುಸ್ಲಿಮೇತರರು #Muslim ಆಗಿದ್ದು, 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತಕ್ಕೆ ಬಂದಿರಬೇಕು.
ಪೌರತ್ವ ಬಯಸಿ ಅರ್ಜಿ ಸಲ್ಲಿಸುವುದಕ್ಕೆ ಆನ್’ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ, ಕೇಂದ್ರ ಗೃಹ ಇಲಾಖೆ #MinistryOfHomeAffairs ಸಿಎಎ ವೆಬ್’ಸೈಟನ್ನು ಅಧಿಕೃತವಾಗಿ ಆರಂಭಿಸಿದ್ದು, ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ.
ಅರ್ಜಿದಾರರು https://indiancitizenshiponline.nic.in ವೆಬ್’ಸೈಟ್’ನಲ್ಲಿ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ಆನ್’ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಮತ್ತು 50 ರೂ. ಶುಲ್ಕ ಪಾವತಿಸಬೇಕು.
ಪೌರತ್ವದ ಪ್ರಕ್ರಿಯೆ ಹೇಗಿರುತ್ತದೆ?
ಅರ್ಜಿದಾರರು ಪೌರತ್ವವನ್ನು ಬಯಸುತ್ತಿರುವ ವರ್ಗವನ್ನು ಆಧರಿಸಿ ಹೆಚ್ಚುವರಿ ದಾಖಲೆಗಳು ಬೇಕಾಗಬೇಕಾಗುತ್ತದೆ. ಸೂಚಿಸಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಪೌರತ್ವ ನೀಡುವ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅರ್ಜಿಗಳನ್ನು ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಸಮಿತಿಗಳು ಪರಿಶೀಲಿಸುತ್ತವೆ.
ಅರ್ಜಿದಾರರು ಮೂಲ ದಾಖಲೆಗಳೊಂದಿಗೆ ವೈಯಕ್ತಿಕ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ.
ಅನುಮೋದಿತ ಅರ್ಜಿದಾರರು ನೋಂದಣಿಯ ಡಿಜಿಟಲ್ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ. ಆದರೂ ಭೌತಿಕ ಪ್ರತಿಗಳನ್ನು ವಿನಂತಿಸಬಹುದು. ಅರ್ಜಿದಾರರು ಮೊದಲು ಭಾರತಕ್ಕೆ ಪ್ರವೇಶಿಸಿದ ದಿನಾಂಕದಿಂದ ಪೌರತ್ವವು ಜಾರಿಗೆ ಬರುತ್ತದೆ.
ಅರ್ಜಿ ಸಲ್ಲಿಸಲು ಈ ದಾಖಲೆಗಳು ಅಗತ್ಯ
- ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ಥಾನದಿಂದ ಧಾರ್ಮಿಕ ಗುರುತು ಮತ್ತು ರಾಷ್ಟ್ರೀಯತೆಯ ಪುರಾವೆ
- 2014ರ ಡಿಸೆಂಬರ್ 31ಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಪುರಾವೆಗಳು
- ನ್ಯಾಯಾಂಗ ಅಥವಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿದಾರರ ರಾಷ್ಟ್ರೀಯತೆ ಮತ್ತು ಧರ್ಮವನ್ನು ಘೋಷಿಸುವ ಪ್ರಮಾಣ ಪತ್ರ
- ಆ ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳು ನೀಡುವ ಶಾಲಾ ಪ್ರಮಾಣಪತ್ರ, ಭೂ ದಾಖಲೆ, ಪರವಾನಗಿಗಳು
- ವೀಸಾ, ವಲಸೆ ಸ್ಟಾಂಪ್, ನೋಂದಣಿ ಪ್ರಮಾಣಪತ್ರಗಳು, ಪಡಿತರ ಚೀಟಿ
- ಪಾಸ್ ಪೋರ್ಟ್, ಜನನ ಪ್ರಮಾಣಪತ್ರ, ಸರ್ಕಾರಿ ಗುರುತಿನ ಚೀಟಿಗಳು
- ಭಾರತ ಸರ್ಕಾರದಿಂದ ಪಡೆದ ಐಡಿಗಳು, ಉದ್ಯೋಗ ದಾಖಲೆಗಳು
- ಭಾರತ ಸರ್ಕಾರದ ಯುಟಿಲಿಟಿ ಬಿಲ್’ಗಳು, ಶಾಲಾ ಪ್ರಮಾಣಪತ್ರಗಳು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post